ಯಕ್ಷ ಸಾಧಕರು 395

"ಯಕ್ಷ ವೈಷ್ಣವಿ"

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಇವರ ಹುಟ್ಟೂರು, ಪ್ರಸ್ತುತ  ಮಂಗಳೂರಿನ ಬಜಪೆಯಲ್ಲಿ ವಾಸ.
ವೃತ್ತಿಯಲ್ಲಿ ಇವರು ಸಮುದಾಯ ಆರೋಗ್ಯ ಕೇಂದ್ರ, ಮೂಡಬಿದ್ರೆಯಲ್ಲಿ ವೈದ್ಯಾಧಿಕಾರಿ ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ. ಶ್ರೀ ರಾಜೇಶ್ ಐ ಕಟೀಲು (ಗುರುಗಳು) ಹಾಗೂ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ (ಭಾಗವತಿಕೆ) ಇವರ ಯಕ್ಷಗಾನ ಗುರುಗಳು.

ಡಾ. ನರೇಶ್ ರಾವ್ ಬಜ್ಪೆ ಹಾಗೂ ಉಷಾ ಎನ್ ರಾವ್ ಇವರ ಮಗಳಾಗಿ 10.05.2002ರಂದು ಡಾ.ಬಿ ವೈಷ್ಣವಿ ರಾವ್ ಜನನ. ಬಿ ವೈಭವಿ ರಾವ್ (2nd year BAMS, SDM Udyavara) ಇವರ ತಂಗಿಯೂ ಯಕ್ಷಗಾನ ಕಲಾವಿದೆ.



ಬಾಲ್ಯದಲ್ಲಿ ಯಕ್ಷಗಾನವನ್ನೇ ನೋಡಿ ಯಕ್ಷಗಾನದ ಮೇಲಿನ ಒಲವು ಹೆಚ್ಚಾಯಿತು. ಬೇಸಿಗೆ ರಜೆಯಲ್ಲಿ ಬೆಳಿಗ್ಗೆ ಯಕ್ಷಗಾನ ಕ್ಯಾಸ್ಸೇಟ್ಟ್ ಗಳನ್ನು ಹಾಕಿದರೆ ಇಡೀ ದಿನ ಅದನ್ನೇ ನೋಡಿ ಬೇಸಿಗೆ ರಜೆಯನ್ನು ಕಳೆಯುತ್ತಿದ್ದೆ. ಮೇಳ ಹೊರಟ ಮೇಲೆ ಅಪ್ಪನೊಂದಿಗೆ ಎಲ್ಲ ಯಕ್ಷಗಾನ ಬಯಲಾಟಕ್ಕೆ ಹೋಗ್ತಿದ್ದೆ.
ನನ್ನ ಪಿಜ್ಜಿ ಹರಿಕಥಾ ವಿದುಷಿ, ಹಾಗಾಗಿ ಅಮ್ಮನಿಗೂ ಅವ್ರು ಹೇಳಿದ ಪುರಾಣ ಕಥೆಗಳನ್ನು ನನಗೆ ಹೇಳುವುದು, ಹೊಸ ಕಥೆಗಳನ್ನೂ ಓದುವುದು ಅಚ್ಚು ಮೆಚ್ಚು. ಇದೆಲ್ಲವು ನನ್ನನ್ನು ಯಕ್ಷಗಾನ ಕಲೆಯತ್ತ ಸೆಳೆಯಿತು ಎಂದು ಹೇಳುತ್ತಾರೆ ವೈಷ್ಣವಿ.

ನೆಚ್ಚಿನ ಪ್ರಸಂಗಗಳು:-
ಶ್ರೀ ದೇವೀಮಹಾತ್ಮೆ, ಶ್ರೀ ರಾಮ ನಿರ್ಯಾಣ, ಶ್ರೀ ರಾಮ ಪಟ್ಟಾಭಿಶೇಕ, ಉತ್ತರನ ಪೌರುಷ.
ನೆಚ್ಚಿನ ವೇಷಗಳು:-
ಶ್ರೀರಾಮ, ಕೃಷ್ಣ, ಚಿತ್ರಲೇಖೆ, ಕೌಶಿಕೆ, ಮಾಯಾ ಶೂರ್ಪನಖಿ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗ ತಿಳಿದ ಬಳಿಕ ಮೊದಲಿಗೆ ಆ ಪ್ರಸಂಗದ ನಡೆಯನ್ನು ನೋಡಿಕೊಳ್ಳುತ್ತೇನೆ. ಇಡೀ ಪ್ರಸಂಗವನ್ನು ನೋಡಿದ ಮೇಲೆ ನನ್ನ ಪಾತ್ರದ ಗುಣಸ್ವಭಾವ, ಪಾತ್ರಕ್ಕೆ ಬೇಕಾಗುವ ವಿಷಯಗಳನ್ನು ತಿಳಿದುಕೊಂಡು ಅದಕ್ಕೆ ಬೇಕಾಗುವ ಅರ್ಥ ಬರೆಯುತ್ತೇನೆ. ತಿಳಿಯದೇ ಇದ್ದ ವಿಷಯಗಳು ಇದ್ದರೆ ಭಾಗವತರಲ್ಲಿ ಅಥವಾ ಸಹ ಕಲಾವಿದರಲ್ಲಿ ಕೇಳಿ ತಿಳಿದುಕೊಳ್ಳುತ್ತೇನೆ. ನಾನು ಹೇಳುವ ಅರ್ಥ ಇನ್ನಷ್ಟು ಹೆಚ್ಚು ತೂಕದ್ದಾಗಿರಬೇಕು ಅನ್ನಿಸಿದಾಗ ಹಲವಾರು ತಾಳಮದ್ದಳೆಗಳನ್ನೂ ಕೇಳುತ್ತೇನೆ.

ನಿಮ್ಮ ವೇಷಕ್ಕೆ ಯಾರಾದರೂ ಮಾದರಿ ಕಲಾವಿದರು ಇದ್ದಾರ:-
ಹಿರಿಯ ಕಲಾವಿದರೆಲ್ಲರೂ ನಮಗೆ ಮಾರ್ಗದರ್ಶಿಗಳೇ.
ರಮೇಶ್ ಭಟ್ರ ಸ್ತ್ರೀವೇಷ, ಗೋವಿಂದಜ್ಜನ ಕಿರೀಟ ವೇಷ,
ಸುಣ್ಣಂಬಳ ವಿಶ್ವೇಶ್ವರ ಭಟ್ರು ಪದ್ಯವನ್ನು ಭಿನ್ನ ಭಿನ್ನವಾಗಿ ತುಂಡರಿಸಿ ಹತ್ತು ಹಲವು ಅರ್ಥವನ್ನು ಹೇಳುವ ರೀತಿ.
ಇದೆಲ್ಲವೂ ನಮಗೆ ಮಾದರಿಯೇ ಎಂದು ಹೇಳುತ್ತಾರೆ ವೈಷ್ಣವಿ.

ಪೌರಾಣಿಕ ಯಕ್ಷಗಾನದಲ್ಲಿ ನಿಮ್ಮ ಒಲವು:-
ನಾನು ಹೆಚ್ಚಾಗಿ ನೋಡಿದ್ದು ಪೌರಾಣಿಕ ಪ್ರಸಂಗಗಳೇ ಹಾಗಾಗಿ ಇದರಿಂದ ಸಾಕಷ್ಟು ಕಲಿತಿದ್ದೇನೆ, ಇದು ಕೇವಲ ೩ ಗಂಟೆಯ ಪ್ರದರ್ಶನಕ್ಕೆ ಸೀಮಿತ ಆಗಬಾರದು, ಅದರಲ್ಲಿ ಬರುವ ಪ್ರತಿ ಪಾತ್ರ/ ಸನ್ನಿವೇಶಗಳಿಂದ ದೊರಕುವ ಮೌಲ್ಯವನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು.
ರಂಗಸ್ಥಳದಲ್ಲಿ ಸತ್ಯ- ಅಸತ್ಯ, ಧರ್ಮ-ಅಧರ್ಮಗಳ ಬಗ್ಗೆ ಗಂಟೆಗಳ ಕಾಲ ಮಾತಾಡಿ, ನಿಜ ಜೀವನದಲ್ಲಿ ಅದರ ¼ ಭಾಗದಷ್ಟು ಪಾಲಿಸದಿದ್ದರೆ ನಾವು ಮಾಡುವ ಪ್ರದರ್ಶನಕ್ಕೆ ಅರ್ಥವಿಲ್ಲದಂತೆ ಆಗ್ತದೆ. ಪೌರಾಣಿಕ ಪ್ರಸಂಗಗಳ ಮೌಲ್ಯ-ತತ್ವಗಳನ್ನು ಜನರಿಗೆ ಸರಿಯಾಗಿ ತಿಳಿಸಿ ಕೊಡುವುದು ನಮ್ಮ ಹೊಣೆ. ನಮ್ಮ ಪ್ರದರ್ಶನ ನೋಡಿ ಒಬ್ಬ ಮನುಷ್ಯನ ಮನಸ್ಸು ಪರಿವರ್ತನೆ ಆದರೂ ಅದು ನಮ್ಮ ಗೆಲುವು.




ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಬಹಳಷ್ಟು ಯುವ ಜನರು ಯಕ್ಷಗಾನ ಕಲಿಯುವತ್ತ ಮನ ಮಾಡಿದ್ದಾರೆ‌.‌ ಇದು ಸಂತೋಷದ ವಿಷಯ, ಆದರೆ ಇದು ಕೇವಲ ತನ್ನ ವಾಟ್ಸಪ್ಪ್ ಸ್ಟೇಟಸ್ ಅಥವಾ ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಕಲಿಯುವ ವಿದ್ಯೆ ಆಗಬಾರದು. ೪ ತರಗತಿಗೆ ಹೋಗಿ ತನಗೆ ಅದೇ ಪಾತ್ರ ಬೇಕು ಇದೇ ಪಾತ್ರ ಬೇಕು ಅನ್ನುವ ಹಾಗೆ ಆಗಬಾರದು. ಕಲಿಯುವುದು ಅಂದ ಮೇಲೆ ಚೌಕಿಯ ಕೆಲಸಗಳು - ತೆರೆ ಹಿಡಿಯುವುದರಿಂದ, ಪೂರ್ವರಂಗ ಹೇಗೆ ಪ್ರತಿ ಒಂದನ್ನು ತಿಳಿದುಕೊಳ್ಳಬೇಕು. ಇಂದಿನ ಯಕ್ಷಗಾನಕ್ಕೆ ಸಾಕಷ್ಟು ಹೊಸತನಗಳು ಸೇರಿಕೊಂಡಾಗಿದೆ.
೧೦-೧೫ ವರ್ಷಗಳ ಹಿಂದಿನ ಪ್ರದರ್ಶನಕ್ಕೂ ಈಗ ನಡೆಯುತ್ತಿರುವ ಪ್ರದರ್ಶನಕ್ಕೂ ಬಹಳ ವ್ಯತ್ಯಾಸಗಳಿವೆ. ಈಗ ಜನರನ್ನು ಇದರತ್ತ ಆಕರ್ಷಿಸುವುದಕ್ಕೋ ಅಥವಾ ಜನರು ಇಂತಹುದ್ದನ್ನೇ ಅಪೇಕ್ಷಿಸುತ್ತಾರೆ ಅಂತ ಹೇಳಿ ಕಲಾವಿದರು ಬೇರೆ ಬೇರೆ ಕಲಾ-ಪ್ರಕಾರವನ್ನು ಯಕ್ಷಗಾನಕ್ಕೆ ಬಲವಂತವಾಗಿ ಸೇರಿಸುವುದು. ಇದರಿಂದ ಯಕ್ಷಗಾನ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವಂತೆ ಆಗ್ತಾ ಇದೆ.
ಹಿರಿಯ ಕಲಾವಿದರಲ್ಲಿ ಹಳೆಯ ಕ್ರಮಗಳನ್ನು ಕೇಳಿ ತಿಳಿದುಕೊಳ್ಳುವುದು, ರಂಗಕ್ಕೆ ಬರುವ ಮೊದಲು ಪಾತ್ರದ ಹಿನ್ನಲೆ, ಗುಣ-ಸ್ವಭಾವ ಅರಿತು ಪೂರ್ಣವಾಗಿ ರಂಗದಲ್ಲಿ ಆ ಪಾತ್ರಕ್ಕೆ ನ್ಯಾಯ ಒದಗಿಸುವುದು ಕಲಾವಿದರಾಗಿ ನಮ್ಮ ಕರ್ತವ್ಯ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನದ ಕಡೆಗೆ ಯುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ.
ಆದರೆ ಪೌರಾಣಿಕ ಪ್ರಸಂಗಗಳು, ಕರುಣ ಅಥವಾ ವೀರ ರಸಗಳಿಗಿಂತ ಪ್ರಸ್ತುತ ಪ್ರೇಕ್ಷಕರು ಅತಿಯಾದ ಹಾಸ್ಯ ಮತ್ತು ಅಬ್ಬರದ ನೃತ್ಯಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಕಲಾವಿದ ಮಾಡುವ ಪಾತ್ರದ ಅಭಿಮಾನಿ ಆಗಬೇಕೆ ಹೊರತು ಕಲಾವಿದನ ಅಭಿಮಾನಿ ಅಲ್ಲ.
ಇಂದಿನ ಪ್ರೇಕ್ಷಕರು ಯಕ್ಷಗಾನವನ್ನು ಕೇವಲ ಮನರಂಜನೆಯಾಗಿ ನೋಡದೆ, ಯಕ್ಷಗಾನದ ಮೂಲ ಚೌಕಟ್ಟನ್ನು ಮೀರಿ ಸಾಂಪ್ರದಾಯಿಕತೆಗೆ ಧಕ್ಕೆ ತರದಂತೆ ಕಲಾಸ್ವಾದನೆಯ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕು.

ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಯಕ್ಷಗಾನಕ್ಕೆ ಆ  ರೂಪವನ್ನು ನೀಡುವುದೇ ಅದರ ಆಹಾರ್ಯ. ಸಿನಿಮಾ ಅಥವಾ ನಾಟಕೀಯ ವೇಷಭೂಷಣವನ್ನು ಯಕ್ಷಗಾನಕ್ಕೆ ಬಳಸಬಾರದು. ಅತಿಯಾದ ಆಧುನಿಕತೆ ಇಂದ ಯಕ್ಷಗಾನದ ವೇಷದ ಚಂದಕ್ಕೆ ತೊಡಕು ಉಂಟಾಗಬಾರದು.
ಹಳೆಯ ಕ್ರಮದಲ್ಲೇ ಮುಖವರ್ಣಿಕೆಯನ್ನು ಮಾಡಬೇಕು.
ಆಯಾ ವೇಷಕ್ಕೆ ಇಂತದ್ದೇ ಮುಖವರ್ಣಿಕೆ ಅಂತ ಇರ್ತದೆ. ಅದನ್ನು ಎಲ್ಲಾ ಕಲಾವಿದರು ಪಾಲಿಸಬೇಕು.
ಆಹಾರ್ಯದಲ್ಲಿ ಹೊಸತನ ತರುವಾಗ ಕಲೆಯ ಮೂಲ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು.
ಹಗುರವಾದ ಮತ್ತು ದೀರ್ಘಕಾಲ ಬಾಳಿಕೆ ಬರುವ ಆಧುನಿಕ ವಸ್ತುಗಳನ್ನು ಬಳಸುವುದು ಸ್ವಾಗತಾರ್ಹ, ಆದರೆ ಯಕ್ಷಗಾನದ ಸಾಂಪ್ರದಾಯಿಕ ವೇಷ-ಭೂಷಣದಂತೆ ಇರಬೇಕು.


ವೃತ್ತಿಯಲ್ಲಿ ನೀವು ಡಾಕ್ಟರ್ ಹಾಗೂ ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ. ಎರಡನ್ನು ಯಾವ ರೀತಿಯಲ್ಲಿ ನೀವು ಬ್ಯಾಲೆನ್ಸ್ ಮಾಡಿಕೊಳ್ಳುತ್ತೀರಿ:-
ಯಕ್ಷಗಾನ ನೀಡಿದ ಶಿಸ್ತು ಮತ್ತು ಏಕಾಗ್ರತೆಯಿಂದಾಗಿಯೇ ನಾನು ಡಾಕ್ಟರ್ ಆಗ್ಲಿಕ್ಕೆ ಸಾಧ್ಯ ಆಯಿತು. ನನ್ನ ಆಸಕ್ತಿಗೆ ನನ್ನ ಅಪ್ಪ, ಅಮ್ಮ ಇವರು ಪ್ರೋತ್ಸಾಹ ನೀಡುತ್ತಾ ಇರುವವರು. ಕಾಲೇಜಿನ ಪರೀಕ್ಷೆ ಜೊತೆಗೆ ಯಕ್ಷಗಾನ ಇದ್ದಾಗಲೂ ಒಂದು ದಿನವೂ ಯಕ್ಷಗಾನಕ್ಕೆ ಹೋಗುವುದು ಬೇಡ ಅಂತ ಹೇಳಿದವರು ಅಲ್ಲ. ನನಗೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟವರು. ತಂಗಿ ಸಹ ಯಕ್ಷಗಾನ ಕಲಾವಿದೆ ಆದುದರಿಂದ ಒಪ್ಪಿಕೊಂಡ ಪ್ರದರ್ಶನಕ್ಕೆ ಹೋಗಲು ಆಗದೆ ಇದ್ದ ಅನಿವಾರ್ಯ ಸಂದರ್ಭ ಬಂದಾಗ ನನ್ನ ಪಾತ್ರಕ್ಕೆ ಅವಳನ್ನು ಕಳುಹಿಸುತ್ತಿದ್ದೆ, ಜೊತೆಗೆ ಪ್ರಸಂಗ ನಡೆ ಪದ್ಯ-ಅರ್ಥಗಳನ್ನು ಜೊತೆಗೆ ಕುಳಿತು ಮಾತನಾಡಿದಾಗ ಸಮಯ ಉಳಿಯುತ್ತಿತ್ತು. ಆದ್ದರಿಂದ ಇನ್ನೂ ಯಕ್ಷಗಾನ ಮಾಡ್ತಾ ಇದ್ದೇನೆ.

ಡಾಕ್ಟರ್ ಆಗಿ ನಾನು ರೋಗಿಯ ಆರೋಗ್ಯವನ್ನು ನೋಡಿಕೊಂಡರೆ, ಯಕ್ಷಗಾನ ನನ್ನ ಮನಸ್ಸಿನ ಆರೋಗ್ಯ ನೋಡಿಕೊಳ್ಳುವ ಕಲೆ.
15 ವರ್ಷದಿಂದ ಯಕ್ಷಗಾನ ಮಾಡ್ತಾ ಇದ್ದೇನೆ. ಹಾಗಾಗಿ ಟೈಮ್ ಮ್ಯಾನೇಜ್ಮೆಂಟ್ ಅನ್ನು ಮೊದಲೇ ಕಲಿತಿದ್ದೆ.
ಮಕ್ಕಳ ಮೇಳದ ವಿದ್ಯಾರ್ಥಿ ಆಗಿದ್ದಾಗ ಯಕ್ಷಗಾನ ಕ್ಲಾಸ್, ಯಕ್ಷಗಾನ ಪ್ರದರ್ಶನ, ಶಾಲೆಯ ಪರೀಕ್ಷೆ, ಸಂಗೀತ ಕ್ಲಾಸ್ ಹೀಗೆ ಅನೇಕವನ್ನು ಒಟ್ಟಿಗೆ ಮ್ಯಾನೇಜ್ ಮಾಡುವುದನ್ನು ಕಲಿತಿದ್ದೆ. ಹಾಗಾಗಿ ಎಂ.ಬಿ.ಬಿ.ಎಸ್ ಕಲಿಯುವಾಗಲು ನನಗೆ ಇದು ಕಷ್ಟ ಅಂತ ಅನಿಸ್ತಾ ಇರಲಿಲ್ಲ. ಯಕ್ಷಗಾನ ಉಂಟು ಅಂತ ಗೊತ್ತಾದಾಗ ಓದುವ ಸ್ಪೀಡ್ ಜಾಸ್ತಿ ಮಾಡ್ತಿದ್ದೆ, ಕಾಲೇಜಿನ ಪರೀಕ್ಷೆ ಜೊತೆಗೆ ಅದೇ ಸಮಯದಲ್ಲಿ ಯಕ್ಷಗಾನ ಇದ್ದರೆ ಮೊದಲೇ ಓದಿ ತಯಾರಾಗಿ ಇರ್ತಿದ್ದೆ. ನಾನು ಎಲ್ಲಾ ಮೇಳಗಳ ಅಥವಾ ದಿನನಿತ್ಯ ಪ್ರದರ್ಶನಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಹಾಗಾಗಿ, ವರ್ಷದಲ್ಲಿ ಕೆಲವು ಹವ್ಯಾಸಿ ತಂಡಗಳಲ್ಲಿ ಪ್ರದರ್ಶನ ನೀಡುವುದಕ್ಕಾಗಿ ಹೋಗುತ್ತೇನೆ.




ಮಹಿಳಾ ಯಕ್ಷಗಾನದಲ್ಲಿ ನೀವು ಕಂಡುಕೊಂಡ ಸಾಧಕ ಹಾಗೂ ಬಾಧಕಗಳು:-
ಅನೇಕ ಮಹಿಳಾ ಮೇಳಗಳನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದು. ಹಿಮ್ಮೇಳ ಮುಮ್ಮೇಳಗಳಲ್ಲಿ ಮಹಿಳೆಯರಿಗೂ ಸಮಾನವಾದ ಅವಕಾಶ ದೊರೆಯುತ್ತಿರುವುದು ಜೊತೆಗೆ ಇದಕ್ಕೆ ತಮ್ಮ ಮನೆಯಲ್ಲಿ ಒಳ್ಳೆಯ ಪ್ರೋತ್ಸಾಹ ಸಿಗುತ್ತಾ ಇರುವುದು ಸಂತೋಷದ ವಿಷಯ.
ಇದರಲ್ಲಿ ಮಹಿಳೆಯರಿಗೆ ಬರುವ ಬಾಧಕಗಳೆಂದರೆ ದೀರ್ಘಕಾಲದ ದೈಹಿಕ ಶ್ರಮ ಮತ್ತು ಅಬ್ಬರದ ಪಾತ್ರ ಮಾಡುವುದು ಮಹಿಳೆಯರಿಗೆ ದೈಹಿಕವಾಗಿ ದೊಡ್ಡ ಸವಾಲು.
ಪುಂಡು ವೇಷ ಮಾಡುವಾಗ ಹೆವಿ ವಾಯ್ಸ್ ಬೇಕಾಗುತ್ತದೆ. ಮಹಿಳೆಯರ ಧ್ವನಿ ಮೃದುವಾಗಿರುವುದರಿಂದ, ಇಂತಹ ಪಾತ್ರಗಳಲ್ಲಿ ಸಂಭಾಷಣೆ ನಡೆಸುವುದು ಕೆಲವೊಮ್ಮೆ ಕಷ್ಟವಾದೀತು. ಪ್ರೇಕ್ಷಕರಿಗೆ ಆ ಪಾತ್ರದ ಎಫೆಕ್ಟ್ ಕಡಿಮೆ ಆಯಿತು ಅಂತ ಅನಿಸಬಹುದು .

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನವನ್ನು ಇನ್ನಷ್ಟು ಅಧ್ಯಯನ ಮಾಡಬೇಕು. ಯಕ್ಷಗಾನದ ಮೇಲಿನ ನನ್ನ ಆಸಕ್ತಿಯನ್ನು ಮುಂದುವರಿಸಿಕೊಂಡು, ಯಕ್ಷಗಾನವನ್ನು ಕೇವಲ ಒಂದು ಹವ್ಯಾಸವಾಗಿ ನೋಡದೆ, ನನ್ನ ಜೀವನದ ಒಂದು ಭಾಗವಾಗಿ ಮುಂದುವರಿಸಿಕೊಂಡು ಹೋಗಬೇಕು ಎಂಬ ಆಸೆಯಿದೆ. ಮುಂದೆ ಇನ್ನಷ್ಟು ಹಿರಿಯ ಕಲಾವಿದರಿಂದ ಕಲಿತು, ಪಾತ್ರಗಳ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಂಡು, ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ನನ್ನ ಒಬ್ಬ ಕಲಾವಿದೆಯಾಗಿ ನನ್ನನ್ನು ನಾನು ಇನ್ನಷ್ಟು ಬೆಳೆಸಿಕೊಳ್ಳಬೇಕು. ವೈದ್ಯ ವೃತ್ತಿಯ ಜವಾಬ್ದಾರಿಗಳ ನಡುವೆಯೂ ಯಕ್ಷಗಾನಕ್ಕೆ ಸಾಧ್ಯವಾದಷ್ಟು ಸಮಯವನ್ನು ಮೀಸಲಿಟ್ಟು, ಈ ಕಲೆಯೊಂದಿಗೆ ನಿರಂತರವಾಗಿ ಸಾಗಬೇಕು.

ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು,
ಶ್ರೀ ಕೃಷ್ಣ ಮುಖ್ಯಪ್ರಾಣ ಯುವ ಹವ್ಯಾಸಿ ಯಕ್ಷಗಾನ ಬಳಗ ಉಡುಪಿ, ತಲಕಳ ಮೇಳ ಹಾಗೂ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ ತಲಕಳ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ.

ಜುಲೈ 29 2026 ಮುಂಬೈ ಅಲ್ಲಿ ನಡೆದ ಮಹಿಳಾ ಯಕ್ಷಗಾನದ ಸಂದರ್ಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಇವರಿಂದ ಸನ್ಮಾನ.
ವೀಣೆ ಬೀಸುವುದು, ಚಿತ್ರಕಲೆ, ಸಂಗೀತ, ಹರಿಕಥೆ ಇವರ ಹವ್ಯಾಸಗಳು.




ತಂದೆ, ತಾಯಿ, ತಂಗಿ ಬಿ ವೈಭವಿ ರಾವ್, ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎನ್ನುತ್ತಾರೆ ಡಾ.ಬಿ ವೈಷ್ಣವಿ ರಾವ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380