ಯಕ್ಷ ಸಾಧಕರು ೪೭
ಉಭಯತಿಟ್ಟಿನ ಭಾಗವತರು ಶ್ರೀಯುತ ಕೃಷ್ಣ ಪ್ರಪುಲ್ಲ.
ಮನೋರಂಜನೆಯ ಮೂಲಕ ಮನೋವಿಕಾಸಕ್ಕೆ ಕಾರಣವಾಗುವ ಒಂದು ಸಂಪೂರ್ಣ ಕಲೆ ನಮ್ಮ ಯಕ್ಷಗಾನ. ಇಂತಹ ಗಂಡು ಕಲೆಯಲ್ಲಿ ನಮಗೆ ಅನೇಕ ಕಲಾವಿದರು ಕಾಣಲು ಸಿಗುತ್ತಾರೆ. ಆದರೆ ತೆಂಕು ಹಾಗೂ ಬಡಗುತಿಟ್ಟು ಉಭಯತಿಟ್ಟಿನ ಭಾಗವತಿಕೆ ಮಾಡುವ ಒಬ್ಬ ಅಪರೂಪದ ಭಾಗವತರು ಶ್ರೀಯುತ ಕೃಷ್ಣ ಪ್ರಪುಲ್ಲ.
ಪುತ್ತೂರು ತಾಲೂಕು ಪಡನೂರ್ ಗ್ರಾಮದ ಶ್ರೀಮತಿ ಸ್ವರ್ಣಲತಾ ಹಾಗೂ ಗಣಪತಿ ಭಟ್ ಇವರ ಮಗನಾಗಿ 26.10.1981 ರಂದು ಇವರ ಜನನ. SSLC ಇವರ ವಿದ್ಯಾಭ್ಯಾಸ. ಮನೆಯಲ್ಲಿ ಯಕ್ಷಗಾನ ಪರಿಸರ ಹಾಗೂ ಶ್ರೀಯುತ ದಿ ಕಾಳಿಂಗ ನಾವಡರ ಭಾಗವತಿಕೆ ಇವರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಆಯಿತು.
ಮಾಂಬಾಡಿ ಸುಬ್ರಹ್ಮಣ್ಯ ಭಟ್, ನೆಲ್ಯಾಡಿ ಲಕ್ಷ್ಮೀನಾರಾಯಣ ಶೆಟ್ಟಿ, ಪದ್ಯಾಣ ಗಣಪತಿ ಭಟ್, ಬಡಗುತಿಟ್ಟು ಭಾಗವತಿಕೆಯನ್ನು ಕೆ.ಪಿ ಹೆಗಡೆಯವರಿಂದ ಕಲಿತು ಯಕ್ಷಗಾನದಲ್ಲಿ ಒಬ್ಬ ಪ್ರಬುದ್ಧ ಕಲಾವಿದರಾಗಿ ಹೊರಹೊಮ್ಮಿದರು. ಕಟೀಲು, ಮಂದಾರ್ತಿ, ಬಪ್ಪನಾಡು, ಎಡನೀರು, ಹೊಸನಗರ ಹಾಗೂ ಪ್ರಸ್ತುತ ಪಾವಂಜೆ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. 1998 ರಂದು ಕಟೀಲು 1ನೇ ಮೇಳಕ್ಕೆ ಸೇರ್ಪಡೆ. 22 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ತಿರುಗಾಟ ಮಾಡಿದ ಅನುಭವ ಶ್ರೀಯುತ ಕೃಷ್ಣ ಪ್ರಫುಲ್ಲ ಇವರಿಗೆ ಸಲ್ಲುತ್ತದೆ.
ಕರ್ಣಪರ್ವ, ಗಧಾಯುದ್ಧ, ಸತ್ಯ ಹರಿಶ್ಚಂದ್ರ, ನಳ ದಮಯಂತಿ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ನಾಟಿ, ಹಿಂದೊಳ, ಶುದ್ಧ ಸಾವೇರಿ ಹಾಗೂ ಸಾಮಾನ್ಯವಾಗಿ ಬಳಸಲ್ಪಡುವ ಎಲ್ಲಾ ರಾಗಗಳು ಇವರ ನೆಚ್ಚಿನ ರಾಗಗಳು.
ಪದ್ಯಾಣ ಶಂಕರನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪಿ.ಟಿ.ಜಯರಾಮ್ ಭಟ್, ಉಪಾಧ್ಯಾಯರು ,ದಿ. ಪ್ರಭಾಕರ್ ಗೋರೆ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು. ಪದ್ಯಾಣ, ಅಮ್ಮಣ್ಣಾಯರು, ಪುತ್ತಿಗೆ ಹಾಗೂ ತೆಂಕಬೈಲು ಶಾಸ್ತ್ರಿ ಇವರ ನೆಚ್ಚಿನ ಭಾಗವತರು.
ಯಕ್ಷಗಾನದಲ್ಲಿ ವೇಷ ಮಾಡುವ ಆಸಕ್ತಿ ಇದೆಯಾ ಎಂದು ಕೇಳಿದಾಗ; ಈಗ ಇಲ್ಲ. ಮೊದಲು ಶಾಲಾ ದಿನಗಳಲ್ಲಿ ಮೂರು ವರ್ಷ ದಿ.ಶೀನಪ್ಪ ಭಂಡಾರಿಯವರ ತಂಡದಲ್ಲಿ ವೇಷ ಮಾಡುತ್ತಿದ್ದೆ ಎಂದು ಇವರು ಹೇಳುತ್ತಾರೆ. ಹಳೆಯ ವಸ್ತುಗಳನ್ನು ಸಂಗ್ರಹ ಮಾಡುವುದು ಇವರ ಹವ್ಯಾಸಗಳು.
2018 ರಲ್ಲಿ ಯಕ್ಷ ಧ್ರುವ ಕಾಟಿಪಳ್ಳ ಲಯನ್ಸ್ ಕ್ಲಬ್ ವತಿಯಿಂದ, 2003ರಲ್ಲಿ ರಾಮಚಂದ್ರಾಪುರ ಮಠದಿಂದ, 2010ರಲ್ಲಿ ಪಾವಂಜೆ ಕ್ಷೇತ್ರದಿಂದ ಅಭಿನಂದನಾ ಪತ್ರ, 2014ರಲ್ಲಿ ಮೂಡಬಿದ್ರೆಯಲ್ಲಿ ಯುವ ಪುರಸ್ಕಾರ ಇವರಿಗೆ ಸಿಕ್ಕಿರುತ್ತದೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಬದಲಾವಣೆ ಜಗದ ನಿಯಮ. ಹಾಗಾಗಿ ಯಕ್ಷಗಾನದಲ್ಲಿಯೂ ಬದಲಾವಣೆ ಆಗುತ್ತಿದೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದಲ್ಲಿ ಅನೇಕ ಅನುಭವಿ ಪ್ರೇಕ್ಷಕರು ಇರುವುದು ತುಂಬಾನೇ ಸಂತೋಷದ ವಿಷಯ.
03.04.2009 ರಂದು ಪ್ರತಿಭಾ ಅವರನ್ನು ವಿವಾಹವಾದ ಶ್ರೀಯುತ ಕೃಷ್ಣ ಪ್ರಫುಲ್ಲ ಇಬ್ಬರು ಮಕ್ಕಳಾದ ವರ್ಷಿಣಿ ಲತಾ ಹಾಗೂ ವಸಿಷ್ಠ ರಾಮ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos by :- G.P.Bhat Photography
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment