ಯಕ್ಷ ಸಾಧಕರು ೩೯
ಯಕ್ಷಕುವರಿ ದಿಶಾ ಸಿ ಶೆಟ್ಟಿ ಕಟ್ಲ.
ಯಕ್ಷಗಾನವನ್ನು ಗಂಡುಕಲೆ ಎಂದು ಹೇಳುವ ಮಾತಿದೆ . ಈ ವಾಕ್ಯವು ತಪ್ಪು ಕಲ್ಪನೆಗೆ ಅವಕಾಶ ಮಾಡಿ ಕೊಟ್ಟಿದೆ. ಇಲ್ಲಿ ಗಂಡು ಎಂದರೆ 'ಬಲಿಷ್ಠ' ಎಂಬ ಅರ್ಥವೇ ಹೊರತು ಗಂಡಸರು ಮಾತ್ರ ನಿರ್ವಹಿಸಬೇಕಾದ ಕಲೆ ಎಂದು ಅರ್ಥೈಸಬಾರದು. ಪ್ರಾಕೃತಿಕವಾಗಿ, ಶಾರೀರಿಕವಾಗಿ ಹೆಣ್ಣಿಗಿಂತಲೂ ಗಂಡೇ ಬಲಿಷ್ಟನಾಗಿರುವ ಕಾರಣ "ಶ್ರೇಷ್ಠ " ಎಂಬ ಅರ್ಥದಲ್ಲಿ "ಗಂಡುಕಲೆ"ಯೇ ಹೊರತು, ಯಕ್ಷಗಾನ ಕೇವಲ ಗಂಡಸರ ಕಲೆ, ಹೆಣ್ಮಕ್ಕಳಿಗಲ್ಲಾ ಎಂಬ ಅರ್ಥದಲ್ಲಿ ಅಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಯಕ್ಷರಂಗಕ್ಕೆ ಹೆಣ್ಮಕ್ಕಳ ಪ್ರವೇಶ ಇತ್ತೀಚಿನ ಬೆಳವಣಿಗೆಯಲ್ಲ. ಎಷ್ಟೋ ವರ್ಷಗಳ ಹಿಂದೆಯೇ ಹೆಣ್ಣುಮಕ್ಕಳು ಯಕ್ಷಗಾನದ ಪಾತ್ರ ನಿರ್ವಹಿಸಿದ ದಾಖಲೆಯಿದೆ. ಯಕ್ಷಗಾನ, ನೃತ್ಯ, ಓದು, ಕ್ರೀಡೆ, ನಿರೂಪಣೆ, ಭಾಷಣ, ಸಮಾಜ ಸೇವೆ - ಹೀಗೆ ಹಲವಾರು ಕ್ಷೇತ್ರಗಳಲ್ಲೂ ಮಿಂಚುತ್ತಿರುವ ಪ್ರತಿಭೆ ಯಕ್ಷಕುವರಿ ದಿಶಾ ಸಿ ಶೆಟ್ಟಿ ಕಟ್ಲ.
14.03.1998ರಲ್ಲಿ ಚಂದ್ರಶೇಖರ - ಪ್ರಮದಾ ಶೆಟ್ಟಿ ದಂಪತಿಗಳ ಸುಪುತ್ರಿಯಾಗಿ ಸುರತ್ಕಲ್ ನಲ್ಲಿ ಜನಿಸಿದ ದಿಶಾ, ಬಾಲ್ಯದಿಂದಲೇ ತುಂಬಾ ಪ್ರತಿಭಾವಂತೆ ಎಂದು ಗುರುತಿಸಿಕೊಂಡವರು. MBA IN HR ಇವರ ವಿದ್ಯಾಭ್ಯಾಸ. ಇವರ ಕುಟುಂಬವೇ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಕಾರಣ ದಿಶಾಳಿಗೂ ಯಕ್ಷಗಾನದ ನಂಟು ಬಾಲ್ಯದಲ್ಲೇ ಅಂಟಿಕೊಂಡಿತು. ಇವರ ತಾಯಿ ಶ್ರೀಮತಿ ಪ್ರಮದಾ ಶೆಟ್ಟಿ ಹಾಗೂ ಚಿಕ್ಕಮ್ಮ ಶುಭದಾ ಶೆಟ್ಟಿಯವರು 30 ವರ್ಷಗಳ ಹಿಂದೆಯೇ ಯಕ್ಷಗಾನ ಗುರುಗಳಾದ ಗಣೇಶಪುರ ಗಿರೀಶ ನಾವಡರಿಂದ ಶಾಸ್ತ್ರೋಕ್ತವಾಗಿ ಯಕ್ಷಗಾನದ ಹೆಜ್ಜೆಗಾರಿಕೆ ಕಲಿತ ಹವ್ಯಾಸೀ ಕಲಾವಿದರು. ಪ್ರಮದಾ ಶೆಟ್ಟಿಯವರು ಪುಂಡು ಪಾತ್ರಗಳಲ್ಲಿ ಮಿಂಚಿದರೆ, ಶುಭದಾ ಶೆಟ್ಟಿಯವರು ಯಾವುದೇ ಪಾತ್ರಗಳನ್ನು ಯಾವುದೇ ಪಾತ್ರಗಳನ್ನು ನೀಡಿದರೂ ಸಮರ್ಥವಾಗಿ/ಅಚ್ಚುಕಟ್ಟಾಗಿ ನಿರ್ವಹಿಸಿದ ಅನುಭವಿಗಳು. ಒಮ್ಮೆ ತನ್ನ ತಾಯಿಯೊಂದಿಗೆ ಯಕ್ಷಗಾನ ಕಾರ್ಯಕ್ರಮ ವೀಕ್ಷಿಸಲು ಹೋಗಿದ್ದೇ ದಿಶಾಳಿಗೆ ಯಕ್ಷಗಾನದ ನಂಟು ಅಂಟಲು ಕಾರಣವಾಯಿತು. ತನ್ನ ತಾಯಿಯಾದ ಪ್ರಮದಾ ಶೆಟ್ಟಿಯವರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಾರಿಕೆ ಕಲಿತು, ನಂತರ ಯಕ್ಷಗಾನ ಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆಯವರಲ್ಲಿ ಶಿಷ್ಯೆಯಾಗಿ ಯಕ್ಷಗಾನದ ಸಂಪೂರ್ಣ ಪಟ್ಟುಗಳನ್ನು ಕರಗತ ಮಾಡಿಕೊಂಡರು. ಪ್ರಸ್ತುತ ಯಕ್ಷ ಗುರು ರಾಕೇಶ್ ರೈ ಅಡ್ಕ ಇವರ ಹತ್ತಿರ ಯಕ್ಷಗಾನವನ್ನು ಅಭ್ಯಾಸ ಮಾಡುತ್ತಿದ್ದಾರೆ.
ಅಭಿಮನ್ಯು, ಬಬ್ರುವಾಹನ, ಭಾರ್ಗವ, ಶ್ರೀಕೃಷ್ಣ, ಶ್ರೀರಾಮ, ಸುಧನ್ವ, ಲಕ್ಷ್ಮಣ, ವಿಷ್ಣು, ಕುಶ, ಅಶ್ವತ್ಥಾಮ, ಚಂಡ, ರುದ್ರಕೋಪ, ವೃಷಭಾಸುರ ಇವರು ಮಾಡಿರುವ ವೇಷಗಳು. ಅಭಿಮನ್ಯು ಕಾಳಗ ಹಾಗೂ ರಕ್ತರಾತ್ರಿ ಇವರ ನೆಚ್ಚಿನ ಪ್ರಸಂಗಗಳು. ಯಕ್ಷ ಯಾಮಿನಿ, ಸಿದ್ಧಿವಿನಾಯಕ ಮಹಿಳಾ ಯಕ್ಷಗಾನ ಮಂಡಳಿ ಇವರು ತಿರುಗಾಟ ಮಾಡಿರುವ ಮೇಳಗಳು ಹಾಗೂ ಹಲವು ಯಕ್ಷಗಾನ ಕಾರ್ಯಕ್ರಮಗಳಿಗೆ ಅತಿಥಿ ಕಲಾವಿದರಾಗಿ ಭಾಗವಹಿಸಿದ ಅನುಭವ ಇವರಿಗೆ ಇದೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ ಇವರು:-
ಯಕ್ಷಗಾನ ಕಾರ್ಯಕ್ರಮ ಸಂಘಟಿಸುವವರು ಮೊದಲೇ ನನಗೆ ಕೊಡುವ ವೇಷದ ಬಗ್ಗೆ ಹೇಳುತ್ತಾರೆ. ಹೇಳಿದ ವೇಷದ ಬಗ್ಗೆ ನಮ್ಮ ಮನೆಯಲ್ಲಿ ನನ್ನ ತಾಯಿ, ಚಿಕ್ಕಮ್ಮ ಅವರ ಹತ್ತಿರ ಪಾತ್ರದ ಬಗ್ಗೆ ಕೇಳುತ್ತೇನೆ. ನಂತರ ಇನ್ನೂ ವಿಷಯ ಬೇಕಾದಲ್ಲಿ ಗುರುಗಳ ಹತ್ತಿರ ಹೋಗಿ ಕೇಳುತ್ತೇನೆ ಹಾಗೂ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಇರುವ ಕಲಾವಿದರ ಹತ್ತಿರ ಪ್ರಸಂಗದ ಬಗ್ಗೆ ಕೇಳಿ ವಿಷಯ ತಿಳಿದುಕೊಳ್ಳುತ್ತೇನೆ ಎನ್ನುತ್ತಾರೆ.
ಕಲಾ ರತ್ನ, ಕಲಾ ಮಾಣಿಕ್ಯ, JCI ಕಲಾ ರತ್ನ ಹಾಗೂ ಅನೇಕ ಸಂಘ ಸಂಸ್ಥೆಗಳು ಇವರ ಸಾಮಾಜಿಕ ಕಳಕಳಿ ನೋಡಿ ಇವರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಡ್ಯಾನ್ಸ್, ಸಂಗೀತ ಹೇಳುವುದು, ಸಾಮಾಜಿಕ ಕೆಲಸ, ರಾಜಕೀಯ, ಅಭಿನಯ, ಕ್ರೀಡೆ ಇವರ ಹವ್ಯಾಸಗಳು.
ರಾಧಾವಿಲಾಸ ಯಕ್ಷಗಾನ ನೃತ್ಯ ರೂಪಕದಲ್ಲಿ ಪಟ್ಲ ಸತೀಶ್ ಶೆಟ್ಟಿ, ಸತ್ಯನಾರಾಯಣ ಪುಣಿಂಚಿತ್ತಾಯ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು ಮುಂತಾದ ಖ್ಯಾತನಾಮ ಭಾಗವತರ ಭಾಗವತಿಕೆಯಲ್ಲಿ ತನ್ನ ಅಕ್ಕ ಡಾ.ವರ್ಷಾ ಶೆಟ್ಟಿ, ಗುರುಗಳಾದ ರಕ್ಷಿತ್ ಶೆಟ್ಟಿಯವರ ರಾಧೆಗೆ ಸರಿಸಮಾನವಾಗಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿ ನೂರಾರು ಪ್ರದರ್ಶನ ನೀಡಿದ್ದಾರೆ. ರಾಧಾವಿಲಾಸವು ಮಾತುಗಾರಿಕೆಯಿಲ್ಲದೇ ಸುಮಾರು 1 ಗಂಟೆ ನಾಟ್ಯದಿಂದಲೇ ಸಾಗುವ ನೃತ್ಯರೂಪಕವಾಗಿದ್ದು, ಅಷ್ಟು ದೀರ್ಘ ಕಾಲವನ್ನು ನಾಟ್ಯದಿಂದಲೇ ತುಂಬಿಸುವ ಕ್ಷಮತೆಯನ್ನು ದಿಶಾ ಹೊಂದಿದ್ದಾರೆ ಎಂಬುದು ಉಲ್ಲೇಖನೀಯ .
ದಿಶಾ ನೇರ ನುಡಿಯ, ಕಟ್ಟುನಿಟ್ಟಿನ ಅಭಿಪ್ರಾಯ ಹೊಂದಿರುವುದಲ್ಲದೇ, ತನಗೆ ಸರಿ ಕಾಣದ್ದನ್ನು ಯಾವುದೇ ಮುಲಾಜಿಲ್ಲದೇ ಖಂಡಿಸುವ ವಿಶಿಷ್ಟ ಜಾಯಮಾನವುಳ್ಳವಳು. ಯಕ್ಷಗಾನದ ಪ್ರಾಥಮಿಕ ಅಂಗವಾದ ಪೂರ್ವರಂಗವನ್ನು ಸಂಪೂರ್ಣವಾಗಿ ಅಭ್ಯಸಿಸದೇ, ಕೇವಲ ಒಂದು ಕಾರ್ಯಕ್ರಮಕ್ಕಾಗಿ ಯಕ್ಷಗಾನ ಕಲಿಯುತ್ತಿರುವುದರ ಬಗ್ಗೆ, ವೇಷ ಧರಿಸದೇ, ಯಕ್ಷಗಾನ ಪ್ರದರ್ಶನ ನೀಡುವ ಪ್ರಹಸನದ ಬಗ್ಗೆ ತೀವ್ರವಾದ ವಿರೋಧ ವ್ಯಕ್ತಪಡಿಸುವ ಇವರ ನಿಲುವು ಸರ್ವದಾ ಸ್ವಾಗತಾರ್ಹ. ಈ ನಿಲುವನ್ನು ಯಕ್ಷಗಾನದ ಅಭಿಮಾನಿಯಾಗಿ ನಾನೂ ಸಮರ್ಥಿಸುತ್ತೇನೆ.(ಇತ್ತೀಚೆಗೆ ಒಂದೆರಡು ಟಿ.ವಿ.ಸಂದರ್ಶನದಲ್ಲಿ ಈ ಕುರಿತಾಗಿ ದಿಶಾ ಪ್ರಬಲವಾದ ವಿರೋಧ ವ್ಯಕ್ತ ಪಡಿಸಿದ್ದನ್ನು ಉಲ್ಲೇಖಿಸಲೇಬೇಕು ). ಚಲನಚಿತ್ರಗಳಲ್ಲೂ , ಯಕ್ಷಗಾನವನ್ನು ವಾಣಿಜ್ಯ ಉದ್ದೇಶಗಳಿಗೋಸ್ಕರ ಬಳಸುವಲ್ಲಿ ದುರುಪಯೋಗ ಆಗುತ್ತಿರುವುದರ ಬಗ್ಗೆಯೂ ವಿರೋಧವನ್ನು ಹೊಂದಿದ್ದಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನಾದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದಲ್ಲಿ ಮುಂದಕ್ಕೆ, ಕಿರಿಯ ಕಲಾವಿದರು ಹಾಗೂ ಕಲಿಯುವ ಮಕ್ಕಳಿಗೆ ತಾಳ, ಹಾಗೂ ವೇಷ ಹೇಗೆ ಕಟ್ಟುವುದು, ಮುಖವರ್ಣಿಕೆ ಹೀಗೆ ಎಲ್ಲಾ ವಿಷಯಗಳನ್ನು ಮಕ್ಕಳಿಗೆ ಕಲಿಸಿ ಒಳ್ಳೆಯ ಕಲಾವಿದರಾಗಿ ಯಕ್ಷಗಾನ ರಂಗಕ್ಕೆ ಕೊಡುಗೆಯಾಗಿ ನೀಡಬೇಕು ಎಂಬ ಯೋಜನೆ ಇದೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
ಒಳ್ಳೆಯ ಲೇಖನ , ಅದಕ್ಕೊಪ್ಪುವ ಸುಂದರ ಫೋಟೋಗಳು.ಶ್ರವಣ್ ಕಾರಂತ್ ಅವರೀಗೆ ವಂದನೆಗಳು.
ReplyDeleteಧನ್ಯವಾದಗಳು ♥️🙏
Delete