ಯಕ್ಷ ಸಾಧಕರು ೫
ಯಕ್ಷರಂಗದ ದೇವಿ ಭಟ್ರು ರಮೇಶ್ ಭಟ್ ಬಾಯಾರು
ತೆಂಕುತಿಟ್ಟು ಯಕ್ಷಗಾನ ರಂಗಕ್ಕೆ ಕೇರಳ ರಾಜ್ಯವು ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಅಂತಹ ಕಲಾವಿದರ ಸಾಲಿನಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದರು ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ಕಲಾವಿದರಾದ ಶ್ರೀಯುತ ರಮೇಶ್ ಭಟ್ ಬಾಯಾರು. ಇವರನ್ನು ಅಭಿಮಾನಿಗಳು ಪ್ರೀತಿಯಿಂದ “ದೇವಿ ಭಟ್ರು" ಎಂದು ಕರೆಯುತ್ತಾರೆ.
ರಮೇಶ್ ಭಟ್ ಯಸ್ ಇವರು ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ಬಾಯಾರು ಗ್ರಾಮದ ಸರವು ಎಂಬಲ್ಲಿ ವಾಸಿಸುತ್ತಿದ್ದಾರೆ. ಕೇರಳ ಕರ್ನಾಟಕ ಗಡಿ ಪ್ರದೇಶದ ಗಡಿನಾಡು ಕಲಾವಿದರು. ದಿನಾಂಕ 17.11.1967 ರಲ್ಲಿ ನಾರಾಯಣ ಭಟ್ ಹಾಗೂ ಪಾರ್ವತಿ ಅಮ್ಮ ಇವರ 2 ಹೆಣ್ಣು ಮಕ್ಕಳು ಹಾಗೂ 3 ಜನ ಗಂಡು ಮಕ್ಕಳಲ್ಲಿ ಮಧ್ಯಮ ಆಗಿ ಜನನ. ಪೆರುವಡಿ ಹಾಗೂ ಮಿತ್ತನಡ್ಕದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಕನ್ಯಾನದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದರು. ಇವರ ತಂದೆಯವರು ಧರ್ಮಸ್ಥಳ ಮೇಳದಲ್ಲಿ ಅಡುಗೆ ಭಟ್ರು ಆಗಿದ್ದರು. ಸಣ್ಣ ವಯಸ್ಸಿನಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ನೋಡಲು ಇವರು ಹೋಗುವಾಗ "ನಾನು ಒಬ್ಬ ಯಕ್ಷಗಾನ ಕಲಾವಿದ ಆಗಬೇಕು" ಎಂಬ ಆಸಕ್ತಿ ಬೆಳೆಯಿತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಂದೆಯವರ ಸಂಪಾದನೆಯಿಂದ ನಮ್ಮ ಜೀವನ ಸಾಗಬೇಕಿತ್ತು. ನನ್ನ ವಿದ್ಯಾಭ್ಯಾಸವನ್ನು 10ನೇ ತರಗತಿಯಲ್ಲಿ ಕೊನೆಗೊಳಿಸಿ, 1984ರಲ್ಲಿ ಶ್ರೀ ಧರ್ಮಸ್ಥಳದ ಯಕ್ಷಗಾನ ಲಲಿತ ಕಲಾಕೇಂದ್ರವನ್ನು ಸೇರಿದೆ ಎಂದು ಹೇಳುತ್ತಾರೆ ದೇವಿಭಟ್ರು.
ಸೂರಿಕುಮೇರು ಗೋವಿಂದ ಭಟ್ ಹಾಗೂ ಕರ್ಗಲ್ಲು ವಿಶ್ವೇಶ್ವರ ಭಟ್ ಇವರು ಇವರ ಗುರುಗಳು. ಆಗ ನಿಡ್ಲೆ ನರಸಿಂಹ ಭಟ್ ಹಿಮ್ಮೇಳಕ್ಕೆ ಗುರುಗಳು ಆಗಿದ್ದರು. ಧರ್ಮಸ್ಥಳ ಕೇಂದ್ರದಲ್ಲಿ 5 ತಿಂಗಳು ಪ್ರಾಥಮಿಕ ನಾಟ್ಯಭ್ಯಾಸ, ಬಣ್ಣಗಾರಿಕೆ, ರಂಗಪ್ರವೇಶ ಹಾಗೂ ಪ್ರಸಂಗ ನಡೆಗಳನ್ನು ಕಲಿತರು. 1984-1985ರಲ್ಲಿ ಕೆ.ಎಚ್.ದಾಸಪ್ಪ ರೈ ಇವರ ನೇತೃತ್ವದ ಕಣಿಪುರ ಶ್ರೀ ಗೋಪಾಲಕೃಷ್ಣ ಪ್ರಸಾದಿತ ಯಕ್ಷಗಾನ ಮಂಡಳಿ ಕುಂಬಳೆ ಮೇಳದಲ್ಲಿ ಮುಖ್ಯ ಸ್ತ್ರೀ ವೇಷದ ಕಲಾವಿದನಾಗಿ ಸೇರಿಕೊಂಡರು. "ಸ್ತ್ರೀ ವೇಷದ ಬಗ್ಗೆ ಅಷ್ಟೇನು ಆಸಕ್ತಿ ಇರಲಿಲ್ಲ ಹಾಗೂ ವೇಷಕ್ಕೆ ಬೇಕಾಗುವ ಸಾಮಗ್ರಿಗಳು ನನ್ನ ಬಳಿ ಇರಲಿಲ್ಲ. ಆ ಸಮಯದಲ್ಲಿ ಶ್ರೀಯುತ ತೋಡಿಕಾನ ವಿಶ್ವನಾಥ ಗೌಣಡರು ಸ್ತ್ರೀ ವೇಷಕ್ಕೆ ಬೇಕಾದ ಹಾಗೇ ನನ್ನನ್ನು ತಯಾರಿ ಮಾಡಿದ್ದರು. ಇಷ್ಟು ಅಲ್ಲದೆ ಸೀರೆ ಉಡುವುದು ಕೂಡ ನನಗೆ ಗೊತ್ತಿರಲಿಲ್ಲ ಆ ಸಮಯದಲ್ಲಿ ನನಗೆ ಸಹಾಯ ಮಾಡಿದವರು ತೋಡಿಕಾನ ವಿಶ್ವನಾಥ ಗೌಡ" ಎಂದು ಇವರು ಹೇಳುತ್ತಾರೆ. ಕಣಿಪುರ ಮೇಳದಲ್ಲಿ 1 ವರ್ಷ ತಿರುಗಾಟ ಮಾಡಿ ನಂತರ ಕಟೀಲು ಮೇಳ ಸೇರಿದರು.
ಶ್ರೀ ಕಟೀಲು ಮೇಳದಲ್ಲಿ 35 ವರ್ಷಗಳ ತಿರುಗಾಟದ ಅನುಭವ. ಆರಂಭದಲ್ಲಿ ಪೀಠಿಕೆ ಸ್ತ್ರೀವೇಷ, ಮುಖ್ಯ ಸ್ತ್ರೀವೇಷ ಹಾಗೂ ಪ್ರಸಂಗದಲ್ಲಿ ಬರುವ ಸಣ್ಣ ಪುಟ್ಟ ಪಾತ್ರಗಳು ಸಿಗುತ್ತಾ ಇತ್ತು. ಶ್ರೀಯುತ ಕುರಿಯ ಗಣಪತಿ ಶಾಸ್ತ್ರಿಗಳು ನನ್ನನ್ನು ಮೇಳದ ಯಜಮಾನರಿಗೆ ಪರಿಚಯಿಸಿದರು. ಆದರೆ ನನಗೆ ಬಲಿಪ ಭಾಗವತರ ಜೊತೆಗೆ ತಿರುಗಾಟ ಮಾಡುವ ಅವಕಾಶ ಸಿಕ್ಕಿತು. ಪೂಜ್ಯ ಬಲಿಪ ನಾರಾಯಣ ಭಾಗವತರು, ಪೆರುವಾಯಿ ನಾರಾಯಣ ಭಟ್, ಅಜೆಕಾರು ರಾಜೀವ ಶೆಟ್ಟಿ, ಪೆರುವಾಯಿ ನಾರಾಯಣ ಶೆಟ್ಟಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಕೋಳ್ಯೂರು ನಾರಾಯಣ ಭಟ್ ಹಿರಿಯ ಕಲಾವಿದರ ಮಾರ್ಗದರ್ಶನ ನನ್ನ ಕಲಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಕಾರಿಯಾಯಿತು ಹಾಗೂ ಒಂದು ವರ್ಷ ಮೇಳದಲ್ಲಿ ಪೂರ್ವ ಸಂಗೀತವನ್ನು ಬಲಿಪ ನಾರಾಯಣ ಭಾಗವತರ ಕೇಳಿ ಹಾಗೂ ಪೆರುವಾಯಿ ನಾರಾಯಣ ಭಟ್ ಹಾಗೂ ಬಲಿಪ ಭಾಗವತರ ಮಾರ್ಗದರ್ಶನದಲ್ಲಿ ಮೇಳದಲ್ಲಿ ಪೀಠಿಕೆ ಸ್ತ್ರೀ ವೇಷಕ್ಕೆ ಪೂರ್ವ ಸಂಗೀತವನ್ನು ಮಾಡಿದ ಅನುಭವ ಇದೆ ಎನ್ನುತ್ತಾರೆ ದೇವಿಭಟ್ರು.
ಕಟೀಲು 4ನೇ ಮೇಳ ಆಗುವ ಹೊತ್ತಿಗೆ ಮೇಳದ ಪ್ರಧಾನ ಸ್ತ್ರೀ ಪಾತ್ರಧಾರಿಯಾಗಿ ಬಡ್ತಿ ಹೊಂದಿದೆ. ಶ್ರೀಯುತ ದಿ. ಅಜೆಕಾರು ರಾಜೀವ ಶೆಟ್ಟಿ ನನ್ನನ್ನು ಮೇಳದಲ್ಲಿ ತಿದ್ದಿ ನನ್ನನ್ನು ಇಷ್ಟು ಎತ್ತರಕ್ಕೆ ಬೆಳಸಿದರು. ಶ್ರೀ ದೇವಿ ಮಹಾತ್ಮೆಯ ದೇವಿ, ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ, ಯಶೋಮತಿ ಹಾಗೆಯೇ ಕಯಾದು, ದಮಯಂತಿ, ಚಂದ್ರಮತಿ, ದಾಕ್ಷಾಯಿಣಿ, ಶಶಿಪ್ರಭೆ, ಮೀನಾಕ್ಷಿ, ಸೀತೆ ಹೀಗೆ ಎಲ್ಲಾ ಪಾತ್ರಗಳನ್ನು ಮಾಡಿದ್ದೇನೆ. 27 ವರ್ಷದಿಂದ ಸ್ತ್ರೀವೇಷ ಮಾಡುತ್ತಾ ಬಂದಿದ್ದೇನೆ ಎಂದು ದೇವಿಭಟ್ರು ಹೇಳುತ್ತಾರೆ.
ತಿರುಗಾಟದಲ್ಲಿ ಪುರುಷ ಪಾತ್ರಗಳನ್ನು ಮಾಡಿ ಅನುಭವ ಇರುವ ನಾನು ಸ್ವಲ್ಪ ಬದಲಾವಣೆ ಬೇಕು ಅನಿಸಿತು. ಯಜಮಾನರಲ್ಲಿ ನನ್ನ ಬೇಡಿಕೆಯನ್ನು ಮುಂದಿಟ್ಟೆ ಹಾಗೂ ಅವರು ಅದನ್ನು ಒಪ್ಪಿದ ಕಾರಣ ಪ್ರಸ್ತುತ 2 ವರ್ಷಗಳಿಂದ ಪುರುಷ ಪಾತ್ರಧಾರಿಯಾಗಿಯೇ ಗುರುತಿಸಿಕೊಂಡಿದ್ದೇನೆ. ರಕ್ತಬೀಜ, ಅರುಣಾಸುರ, ಹಿರಣ್ಯಾಕ್ಷ, ಕಂಸ, ಶಿಶುಪಾಲ, ಅರ್ಜುನ, ಕರ್ಣ, ರಾಮ ಮೊದಲಾದ ಪಾತ್ರಗಳನ್ನು ಮಾಡಿದ್ದೇನೆ. ಮೇಳದ ಸಹಕಲಾವಿದರು ನನ್ನನ್ನು ತುಂಬಾ ಮೆಚ್ಚಿಕೊಂಡಿದ್ದಾರೆ ಹಾಗೂ ಹಚ್ಚಿಕೊಂಡಿದ್ದಾರೆ ಎನ್ನುತ್ತಾರೆ ರಮೇಶ್ ಭಟ್ರು.
ಸ್ಥಳೀಯವಾಗಿ ಕೆಲವು ಸಮ್ಮಾನಗಳು ಬಂದಿದೆ. ಸುರತ್ಕಲ್ ಸಮೀಪ ಚೇಳಾರಿನಲ್ಲಿ ಶ್ರೀ ದೇವಿ ಪಾತ್ರದಲ್ಲಿ ಬೆಳ್ಳಿಯ ಉಯ್ಯಾಲೆಯಲ್ಲಿ ಕುಳಿತಿರುವಾಗ ಕೈ ಬೆರಳಿಗೆ ಚಿನ್ನದ ಉಂಗುರವನ್ನು ತೊಡಿಸಿ ಗೌರವಿಸಿದ್ದು ಮರೆಯಲಾಗದ ಕ್ಷಣ. ನೂರಾರು ಅಭಿಮಾನಿಗಳನ್ನು ಗಳಿಸಿದ್ದೇನೆ, ಇದರಿಂದ ದೊಡ್ಡ ಸಮ್ಮಾನ ಬೇರೆ ಯಾವುದು ಇಲ್ಲ ಅಲ್ವಾ.
ಶ್ರೀಯುತ ರಮೇಶ್ ಭಟ್ ಬಾಯರು ಇವರು ದಿನಾಂಕ 06.03.1996 ರಂದು ಗೀತಾ ಇವರನ್ನು ಮದುವೆಯಾಗಿ ಮಗನಾದ ಶ್ರೀ ರಾಮನ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು
Comments
Post a Comment