ಯಕ್ಷ ಸಾಧಕರು ೩೦
ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ, ಪ್ರಸಂಗಕರ್ತ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಯಕ್ಷಗಾನ ಕ್ಷೇತ್ರಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಹಲವು ಕಲಾವಿದರ ಸಾಲಿನಲ್ಲಿ ಸದ್ಯ ಮಿಂಚುತ್ತಿರುವ ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ, ಪ್ರಸಂಗಕರ್ತ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು.
ಕುಂದಾಪುರ ತಾಲೂಕು ಬೇಳೂರು ಗ್ರಾಮದ ಮೊಗೆಬೆಟ್ಟು ಹೆರಿಯ ನಾಯ್ಕ ಹಾಗೂ ಗುಲಾಬಿ ಇವರ ಏಕಮಾತ್ರ ಪುತ್ರರಾಗಿ ದಿನಾಂಕ 28.09.1983ರಂದು ಜನಿಸಿದ ಪ್ರಸಾದ್ ಕುಮಾರ್ ಮೊಗೆಬೆಟ್ಟು ರವರಿಗೆ ಯಕ್ಷಗಾನ ರಕ್ತಗತವಾಗಿ ಬಂದ ಕಲೆ. ತಂದೆ ಯಕ್ಷಗಾನ ಕಲಾವಿದರು. ಅವರು ವೃತ್ತಿ ಮೇಳಗಳಲ್ಲಿ ವೇಷಧಾರಿಯಾಗಿ ತಿರುಗಾಟ ಮಾಡಿದವರು. ಅವರು ನಾಲ್ಕೈದು ಹೊಸ ಪ್ರಸಂಗ ಬರೆದಿದ್ದರು. ಮೊದಲ ಪ್ರೇರಣೆ ಅವರೇ. ಆ ನಂತರ ಇವರ ಮಾನಸಗುರು ಕಂದಾವರ ರಘುರಾಮ ಶೆಟ್ಟರ ಪ್ರಸಂಗಗಳು, ಕಂದಾವರರ ಚೆಲುವೆ ಚಿತ್ರಾವತಿ, ಬನಶಂಕರಿ ಯಕ್ಷಗಾನ ಪ್ರದರ್ಶನ ನೋಟ ಹಾಗೂ ಕಂದಾವರರ ಪದ್ಯ ರಚನೆಯ ಪ್ರಭಾವ; ಕಾಳಿಂಗ ನಾವಡರ ಪದ್ಯ ಹಾಗೂ ಪ್ರಸಂಗಗಳೂ ಪ್ರೇರಣೆ.
ಯಕ್ಷಗಾನದಲ್ಲಿ ವೇಷ ಮಾಡುವ ಆಸಕ್ತಿ ಹಾಗೂ ವೇಷ ಮಾಡಿದ ಅನುಭವದ ಬಗ್ಗೆ ಇವರು ಹೀಗೆ ಹೇಳುತ್ತಾರೆ:-
ನಾನು ಹವ್ಯಾಸಿ ಯಕ್ಷಗಾನ ರಂಗಭೂಮಿಯಿಂದ ಬಂದವನು. ಮೊಗೆಬೆಟ್ಟು ಚಿಕ್ಕಮ್ಮ ಹೈಗುಳಿ ಯಕ್ಷಗಾನ ಮಂಡಳಿಯ ಬಾಲಕಲಾವಿದನಾಗಿ 10 ನೆಯ ವಯಸ್ಸಿನಲ್ಲಿ ಬಬ್ರುವಾಹನನಾಗಿ ರಂಗ ಪ್ರವೇಶ ಮಾಡಿದೆ. ಆ ದಿವಸವೇ ನನ್ನ ವೇಷ ಮೆಚ್ಚಿ ಆಟ ನೋಡುತ್ತಿದ್ದ ಪಂಚಾಯತ್ ಅಧ್ಯಕ್ಷರು ನನಗೆ ಸನ್ಮಾನ ಮಾಡಿ ಗೌರವಿಸಿದರು. 1998 ರಲ್ಲಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಸಾಂಪ್ರದಾಯಿಕ ಯಕ್ಷಗಾನ ಶಿಕ್ಷಣಕ್ಕೆ ಸೇರಿದೆ. ಕಲಿತ ಕೇಂದ್ರದಲ್ಲಿ ಗುರುವಾದೆ.
ಅಲ್ಲಿ ಡಾ.ಶಿವರಾಮ ಕಾರಂತರ ನಿರ್ದೇಶನದ “ಯಕ್ಷರಂಗ” ಎಂಬ ಹೆಸರಿನ ಯಕ್ಷಗಾನ ಬ್ಯಾಲೆ ( ಅಂತಾರಾಷ್ಟ್ರೀಯ ಯಕ್ಷಗಾನ ತಂಡ ) ದಲ್ಲಿ ಭಾಗವತನಾಗಿಯೂ ವೇಷಧಾರಿಯಾಗಿಯೂ ಭಾಗವಹಿಸಿದ್ದೆ.
ಕೃಷ್ಣ, ಬಬ್ರುವಾಹನ, ಅಭಿಮನ್ಯು, ಪ್ರಸೇನ, ಶರಸೇತು, ಲಂಕಿಣಿ ಮೋಕ್ಷ, ಚೂಡಾಮಣಿಯ ಹನುಮಂತ, ಅಂಬೆ, ಸುಭದ್ರೆ, ಭ್ರಮರಕುಂತಳೆ, ಪ್ರಭಾವತಿ, ಚಿತ್ರಾಂಗದೆ, ತ್ರಿಲೋಕಸುಂದರಿ, ತಾರೆ, ಸೀತೆ ಎಲ್ಲಾ ರೀತಿಯ ಸ್ತ್ರೀ ವೇಷ ಹಾಗೂ ಪುರುಷ ವೇಷ ಮಾಡಿದ್ದೇನೆ. ತೆಂಕುತಿಟ್ಟಿನಲ್ಲಿ ಭಾಗವತಿಕೆ ಹಾಗೂ ವೇಷಗಾರಿಕೆ ಮಾಡಿದ ಅನುಭವವೂ ಇದೆ. ಕಳೆದ 8 ವರ್ಷಗಳಿಂದ ವೇಷ ಮಾಡುತ್ತಿಲ್ಲ. ಇನ್ನು ವೇಷ ಮಾಡುವುದಿಲ್ಲ.
ತಮ್ಮ14ನೆಯ ವಯಸ್ಸಿನಲ್ಲಿ ಅಂದರೆ 9ನೆಯ ತರಗತಿಯಲ್ಲಿ 'ಕೋಳಿ ಪಡೆ ರಂಗ' ಎಂಬ ಆಡಿಯೋ ಹಾಸ್ಯ ಪ್ರಸಂಗ ಬರೆದೆ. ಅದು ಗಾನಸುಧಾ ಹಾಗೂ ಲಹರಿ ಮ್ಯೂಸಿಕ್ ಮೂಲಕ ಯಕ್ಷಗಾನ ಆಡಿಯೋ ಆಗಿ ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟವಾಯಿತು. ಆ ಮೇಲೆ
1. ಅಮರಾಮೃತ,
2. ಅಮೃತ ಘಳಿಗೆ,
3. ಸಿಂಗಾರ ಪುಷ್ಪ ,
4. ಶೃಂಗಾರಕಾವ್ಯ,
5. ದುರ್ಗಾಷ್ಟಮಿ ,
6. ನಕ್ಷತ್ರ ನಾಗಿಣಿ,
7. ನಾಟ್ಯವಲ್ಲಿ,
8. ಬ್ರಹ್ಮಾಕ್ಷರ( ಪಂಚತಂತ್ರ),
9. ಮಹಾಶಕ್ತಿ ಗದ್ದುಗೆ ಅಮ್ಮ,
10. ವಡ್ಡರ್ಸೆ ವಸುಂಧರೆ,
11. ಹಿರೇ ಮಹಾಲಿಂಗೇಶ್ವರ ಕ್ಷೇತ್ರ ಮಹಾತ್ಮೆ,
12. ಪ್ರಚಂಡ ಪಂಜುರ್ಲಿ,
13. ಪಂಚದೈವ ಪ್ರತಾಪ,
14. ಭಾಗ್ಯದ ಬಬ್ಬುಸ್ವಾಮಿ,
15. ಪಾವನ ಪಕ್ಷಿ ( ಪೌರಾಣಿಕ),
16. ಸರ್ಪ ಸುಪರ್ಣ (ಪೌರಾಣಿಕ),
17. ಕಾಮನಬಿಲ್ಲು,
18. ಅಗ್ನಿ ವರ್ಷ,
19. ಅಪೂರ್ವ ಅರ್ಧಾಂಗಿ,
20. ಸ್ವಪ್ನ ಮಂಟಪ,
21. ಕುಂದ ಪಂಚಮಿ,
22. ಯೋಧಧರ್ಮೋ ವರಂ ಕರ್ಮ,
23. ರಂಗಸಖಿ,
24. ಚಿತ್ರ ಫಲ್ಗುಣ,
25. ಕೋಳಿ ಪಡೆ ರಂಗ,
26. ನರಹರಿ ಹೊಯ್ಕೈ (ಕುಂದಾಪುರ ಕನ್ನಡದ ಸಂಪೂರ್ಣ ಯಕ್ಷಗಾನ ಪ್ರಸಂಗ),
27. ವಿಕ್ರಮ ಶಿಲ್ಪಿ ವೀರ ಕಲ್ಕುಡ,
28. ಕ್ರಾಂತಿ ಸೂರ್ಯ ಭಗತ ಸಿಂಹ,
29. ಹಾಸ್ಯ ರತ್ನ ತೆನಾಲಿ ರಾಮಕೃಷ್ಣ.
28 ಸ್ವರಚಿತ ಪ್ರಸಂಗಗಳ ರಚನೆ. 18 ಇತರ ಪ್ರಸಂಗಕಥೆಗಾರರ ಪ್ರಸಂಗಗಳಿಗೆ ಪದ್ಯ ರಚನೆ.
ಸರಿಸುಮಾರು 10,000 ಯಕ್ಷಗಾನ ಪದ್ಯಗಳನ್ನು ಯಕ್ಷಗಾನ ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಧನ್ಯತೆ ಇವರಿಗೆ ಸಲ್ಲುತ್ತದೆ.
ಇವರ ಹವ್ಯಾಸಗಳು:
ಮೊದಲಿನಿಂದಲೂ ಯಕ್ಷಗಾನ ಹಾಗೂ ಕಲೆಗೆ ಸಂಬಂಧಿಸಿದ ಲೇಖನ ರಚನೆ, ಚಿತ್ರಕಲೆ, ಪುಸ್ತಕ ಓದುವುದು, ಸಾಂಸ್ಕೃತಿಕ - ಸಾಹಿತ್ಯಿಕ ಎಲ್ಲಾ ವಿಚಾರಗಳೂ ಆಸಕ್ತಿದಾಯಕ.
ಹೊಸ ಪ್ರಸಂಗಗಳ ಬಗ್ಗೆ ಆಕ್ಷೇಪ ಹಾಗೂ ಅಭಿಪ್ರಾಯ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಹೊಸ ಪ್ರಸಂಗಗಳು ಇಂದು ನಿನ್ನೆಯ ಹೊಸತಲ್ಲ. ಮುದ್ದಣಕವಿಯ ರತ್ನಾವತಿಯಿರಬಹುದು, ಕೃಷ್ಣಾರ್ಜುನ, ದ್ರೌಪದಿ ಪ್ರತಾಪ ಮೊದಲಾದ ಪ್ರಕ್ಷಿಪ್ತ ಕಥಾನಕಗಳು ಒಂದು ಕಾಲಕ್ಕೆ ಹೊಸ ಪ್ರಸಂಗಗಳು. ಆದರೆ ಅವುಗಳ ಪೌರಾಣಿಕ ಸತ್ವದಿಂದ ಉಳಿದುಕೊಂಡಿವೆ. ನಾವಡರ ನಾಗಶ್ರೀ, ಕಂದಾವರರ ಹೊಸ ಪ್ರಸಂಗಗಳು ಈಗಲೂ ಜನರ ಮನದಲ್ಲಿವೆ. ಪ್ರಸಂಗ ರಚನೆಯೆಂದರೆ ಸುಲಭಸಾಧ್ಯದ ಸಂಗತಿಯಲ್ಲ. ಒಬ್ಬ ಕವಿ ಏಕಕಾಲಕ್ಕೆ ಪ್ರಸಂಗ ಕವಿಯಾಗಿ, ರಂಗದೊಳಗಿರುವ ವಿವಿಧ ಪಾತ್ರಗಳಾಗಿ, ಹಿಮ್ಮೇಳದ ಭಾಗವತನಾಗಿ, ಒಬ್ಬ ಸದಭಿರುಚಿಯ ಪ್ರೇಕ್ಷಕನಾಗಿ, ಲಕ್ಷಾಂತರ ಹಣ ಹೂಡಿದ ಯಜಮಾನರಾಗಿ ಹೀಗೆ ಬಹುಮುಖೀ ಭಾವದಿಂದ ಪ್ರಸಂಗ ರಚನೆ ಮಾಡುತ್ತಾನೆ. ಹೊಸ ಪ್ರಸಂಗಗಳಿಂದ ಸಾಧಕವೂ ಆಗಿದೆ. ಬಾಧಕವೂ ಆಗಿದೆ.
ಯಕ್ಷಗಾನ ಎಂಬುದು ಒಂದು ಸಾಂವಿಧಾನಿಕ ರಂಗಭೂಮಿ. ಇಲ್ಲಿ ಹೊಸ ಪ್ರಸಂಗಗಳು ಕೇವಲ ಪ್ರಯೋಗವಷ್ಟೆ. ಜನರಂಜನೆಯ ಪ್ರಸಂಗಗಳು ಬಾಳಿಕೆ ಕಡಿಮೆ. ಪ್ರಯೋಗ ದೃಷ್ಟಿಯಲ್ಲಿ ಪ್ರೇಕ್ಷಕರು ಸ್ವೀಕರಿಸಬೇಕು.
ಛಂದೋಬಲವಿಲ್ಲದ ಪ್ರಸಂಗಗಳ ಆಕ್ರಮಣ, ಕಲಿಕೆಯಿಲ್ಲದ ಪ್ರಸಂಗ ಕವಿತ್ವ, ಮೇಳದ ಪ್ರದರ್ಶನ ಸಂಘಟನೆ, ಆಟದ ದೃಷ್ಟಿಯಿಂದ ಮೇಳಕ್ಕೆ ಪ್ರಸಂಗ ತೆಗೆದುಕೊಳ್ಳುವ ಪರಿಪಾಠ, ನವೀನವಾದಿಗಳ ಕ್ಷುದ್ರ ಅಭಿರುಚಿಗೆ ಸ್ಪಂದಿಸುವ ಪ್ರಸಂಗ ರಚನೆ, ಗಲ್ಲಿ- ಗಲ್ಲಿಯ ದೈವದ ಮನೆಯ ಕಟ್ಟುಕಥೆಯ ಕ್ಷೇತ್ರ ಮಹಾತ್ಮೆಯ ಅಣಿವೇಷಗಳ ಪ್ರಸಂಗಗಳು, ಸಾಕ್ಷರತಾ, ರಸ್ತೆ ಸುರಕ್ಷಾ ಹೀಗೆ ಎಲ್ಲದಕ್ಕೂ ಪ್ರಸಂಗ ಎಂಬಂತಾಗಿ ಪ್ರಸಂಗ ಮೌಲ್ಯ ಹದಗೆಟ್ಟದ್ದು ಸತ್ಯ. ಪ್ರಸಂಗ ರಚನೆಯೆಂದರೆ ಬಹಳ ಸುಲಭ ಎಂಬಂತಾಗಿದೆ. ಇದಕ್ಕೆ ಕಾರಣ ಪ್ರಸಂಗ ಎಂದು ಕರೆಸಿಕೊಳ್ಳುವ ಆ ಯಕ್ಷಗಾನದ ಆಟದ ವಸ್ತುವಿನ ಕಥೆಗಳು, ಅದನ್ನು ಹಿಂದೆ ಮುಂದೆ ನೋಡದೆ ಪ್ರದರ್ಶನ ಮಾಡುವ ಮೇಳಗಳು.
ಈಗ ನಿಜವಾದ ಯಕ್ಷಗಾನ ಕವಿ ಸಾರಸ್ವತ ಸನ್ಯಾಸ ಮಾಡದೇ ವಿಧಿಯಿಲ್ಲ. ಉತ್ತಮ ಪ್ರಸಂಗಗಳುಬಂದಿವೆ. ಉತ್ತಮೋತ್ತಮ ಪ್ರಸಂಗ ಕವಿಗಳು ನಮ್ಮಲ್ಲಿದ್ದಾರೆ. ಯಾವುದೇ ಪ್ರಸಂಗವಿದ್ದರೂ ಸಾಧ್ಯವಾದಷ್ಟು ಮಟ್ಟಿಗೆ ರಂಗ ಆವರಣದಲ್ಲಿ ಇರಲಿ. ಪ್ರಸಂಗ ಬರೆಯುವವರಿಗೆ ಪ್ರಾಥಮಿಕ ಯಕ್ಷಗಾನ ಛಂದಸ್ಸಿನ ಪರಿಣತಿಯಾದರೂ ಬೇಕು.
ಯಕ್ಷಗಾನ ರಂಗಭೂಮಿಗೆ ಹೊಸ ಹೊಸ ಸಾಹಿತ್ಯಿಕ ಮುಖಗಳು ಪರಿಚಯವಾಗುತ್ತಿರುವುದು ಸಂತೋಷ.
ಕೆಲವು ಉತ್ತಮ ಪ್ರಸಂಗ ಕಥೆಗಾರರಿದ್ದಾರೆ.
ಒಂದೋ ನಮಗೆ ಗೊತ್ತಿದ್ದು ಮಾಡಬೇಕು - ಇಲ್ಲವೇ ಕಲಿತು ಮಾಡಬೇಕು.
ಕೆಲವು ಯಕ್ಷಗಾನ ಕಥಾಕರ್ತರು ಪದ್ಯ ರಚನೆ ಬಲ್ಲವರಿಂದಲೇ ತಮ್ಮ ಕಲ್ಪನೆಯ ಕಥೆಗೆ ಪದ್ಯ ಬರೆಸುತ್ತಾರೆ. ಇದು ತಾವು ಬೆಳೆಯುವ ಹಂತದವರೆಗೆ ಒಳ್ಳೆಯ ಲಕ್ಷಣ. ಇನ್ನು ಕೆಲವರು ತಮಗೆ ಪರಿಣತಿಯಿಲ್ಲದೆ ಬರೆಯುತ್ತಾರೆ ಅಥವಾ ಪರಿಣತಿ ಇಲ್ಲದವರಲ್ಲಿ ಪದ್ಯ ಬರೆಸಿ ಪ್ರದರ್ಶಿಸುತ್ತಾರೆ. ಇದು ಸಾರಸ್ವತ ಲೋಕಕ್ಕೆ ಬಹಳ ಅಪಾಯ.
ಯಕ್ಷಗಾನ ರಂಗಭೂಮಿಯಲ್ಲಿ ಹೊಸ ಪ್ರಸಂಗಗಳಿಂದ ಯಕ್ಷಗಾನ ತನ್ನ ತನ ಕಳೆದುಕೊಂಡಿತು ಎನ್ನುವವರು ಹಳೇ ಪ್ರಸಂಗಗಳಲ್ಲಿ ಯಕ್ಷಗಾನ ತನ ಪರಿಪೂರ್ಣವಾಗಿ ಉಳಿದುಕೊಂಡಿವೆಯೇ ಎಂಬುದನ್ನೂ ಯೋಚಿಸಬೇಕು.
ಪದ್ಯ ಬರೆಯುವ ಬಗ್ಗೆ ನಿಲುವು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ನಾನು ಸಾಧ್ಯವಾದಷ್ಟು ಮಟ್ಟಿಗೆ ಛಂದೋಬದ್ಧ ಪದ್ಯಗಳನ್ನು ರಚಿಸುವುದಕ್ಕೆ ಬಯಸುತ್ತೇನೆ.
ಪ್ರತೀ ಪದ್ಯಗಳಿಗೂ ನಿರ್ದಿಷ್ಟ ಛಂದೋ ಗುಣವಿದೆ. ಅದನ್ನು ಪ್ರಸಂಗ ರಚನೆಕಾರ ಪಾಲಿಸಬೇಕು. ದಿಡೀರ್ ಜನಪ್ರಿಯತೆಗೆ ಪದ್ಯ ಸಾಹಿತ್ಯ ಕೃಷಿ ಸರಿಯಲ್ಲ. ಇದರಲ್ಲಿ ತಾಳ್ಮೆ, ತಾದಾತ್ಮ್ಯ ಮುಖ್ಯ. ನಮ್ಮ ಕಥೆಯಿರಲಿ, ಇನ್ನೊಬ್ಬರ ಕಥಾನಕಗಳ ಪದ್ಯ ರಚನೆಯಿರಲಿ ಸಾಹಿತ್ಯ ಸರಸ್ವತಿ ಸೇವೆಯಲ್ಲಿ ಮೋಸ ಮಾಡಬಾರದು. ಹೊಸ ಪ್ರಸಂಗಗಳ ಪದ್ಯಗಳು ಪೌರಾಣಿಕ ಪದ್ಯಗಳ ಧಾಟಿಯಲ್ಲಿ ಇದ್ದರೆ ಅದು ರಂಗಭೂಮಿಗೆ ಸಹ್ಯ. ಹೊಸ ಪ್ರಸಂಗಗಳ ಕವಿಗಳು ವಿವಿಧ ಸಾಹಿತ್ಯ- ಕಾವ್ಯ ಪ್ರಕಾರಗಳನ್ನೂ ಓದಬೇಕು. ಸಾಂದರ್ಭಿಕವಾಗಿ ಅಂತಹ ಪದಪ್ರಯೋಗ ಮಾಡಬಹುದು. ಪ್ರಸಂಗ ಪದ್ಯ ಅಂದರೆ ಒಂದು ಪ್ರಸಂಗ ಪುಸ್ತಕದಲ್ಲಿ ಎಲ್ಲಾ ರೀತಿಯಲ್ಲೂ ಇರಬೇಕು. ಕವಿಪದ್ಯ, ಭಾಮಿನಿ, ವಾರ್ಧಿಕ, ವಚನ, ದ್ವಿಪದಿ.. ಎಲ್ಲವೂ ಬೇಕು. ಸಂಭಾಷಣೆಗಷ್ಟೇ ಪದ್ಯ ಸೀಮಿತವಾಗಿರಬಾರದು. ಕವಿ ಎಲ್ಲಾ ಕಡೆ ಪ್ರಸಂಗದೊಂದಿಗೆ ಇರಲಾಗದು. ಅವನ ಪ್ರತಿನಿಧಿಗಳಾಗಿ ಪದ್ಯಗಳು ಇರುತ್ತವೆಯಾದುದರಿಂದ ಇಡೀ ಪ್ರಸಂಗದ ಆಶಯಗಳು ಪದ್ಯಗಳ ರೂಪದಲ್ಲಿ ಇರಬೇಕು. ಛಂದಸ್ಸು ಕಲಿಯುವ ಮೊದಲು ನಾನು ಕಸದಂತಿರುವ ಎರಡು ಪ್ರಸಂಗ ಬರೆದಿದ್ದೆ. ಅದನ್ನು ನನ್ನ ಪ್ರಸಂಗ ಪಟ್ಟಿಗೆ ಸೇರಿಸಿಲ್ಲ. ನನ್ನ ಛಂದೋ ಗುರುಗಳಾದ ಗಣೇಶ್ ಕೊಲೆಕಾಡಿ ಅವರಲ್ಲಿ ಕಲಿತ ಮೇಲೆ ನನಗೆ ಛಂದೋವಿರುದ್ಧವಾದ ಪದ್ಯ ಬರೆಯಲು ಸಾಧ್ಯವಾಗಿಲ್ಲ .
ಪ್ರಸಂಗ ಬಿಟ್ಟು ಬೇರೆ ಯಾವ ರೀತಿಯ ಬರವಣಿಗೆ ಅಳವಡಿಸಿಕೊಂಡಿದ್ದೀರಿ:-
ಪ್ರಸಂಗ ಬಿಟ್ಟು ಭಾವಗೀತೆಗಳನ್ನು ಬರೆದಿದ್ದೆ. ಮಂಗಳೂರು ಆಕಾಶವಾಣಿಯಲ್ಲಿ ಪ್ರಸಿದ್ಧ ಗಾಯಕರ ಕಂಠದಲ್ಲಿ ನನ್ನ ಭಾವಗೀತೆಗಳು ಪ್ರಸಾರವಾಗಿವೆ. ಭಕ್ತಿ ಗೀತೆಗಳನ್ನು ಬರೆದಿದ್ದೆ. ಕೋಟ ಅಮೃತೇಶ್ವರಿ ದೇವಿ ಬಗ್ಗೆ ಬರೆದ ಭಕ್ತಿ ಗೀತೆ ಅಮೃತ ಗಾನಾಮೃತ (mp3), ಮಾಬುಕಳ ಮೂಡುಗಣಪತಿ ದೇವರ ಭಕ್ತಿಗೀತೆ ಉದ್ಭವ ಗಣಪತಿ (mp3) ಬಿಡುಗಡೆ ಆಗಿದೆ. ಇನ್ನೊಂದು ಪ್ರಸಿದ್ಧ ಕ್ಷೇತ್ರದ ಭಕ್ತಿ ಗೀತೆಗಳ ಸಾಹಿತ್ಯ ರಚನೆಯಲ್ಲಿದ್ದೇನೆ. ಪತ್ರಿಕೆಗಳಿಗೆ ಲೇಖನ, ಕಥೆ ಬರೆದಿದ್ದೇನೆ.
ತಾಳಮದ್ದಳೆ ಕ್ಷೇತ್ರದಲ್ಲಿ ಆಸಕ್ತಿ ಇದೆಯಾ?ಆ ಬಗ್ಗೆ ಮುಂದಿನ ಯೋಜನೆಗಳೇನು:-
ತಾಳಮದ್ದಳೆಯಲ್ಲಿ ಅರ್ಥ ಹೇಳುವುದಕ್ಕೆ ಹೋಗುವುದಿಲ್ಲ. ತಾಳಮದ್ದಳೆಯಲ್ಲಿ ಭಾಗವತಿಕೆ ಹಾಗೂ ತಾಳಮದ್ದಳೆಗೆ ಪೌರಾಣಿಕ ಪ್ರಸಂಗ ರಚನೆಯ ಉದ್ದೇಶವಿದೆ. ತಾಳಮದ್ದಳೆಯಲ್ಲಿ ಕುಂದಗನ್ನಡ ಪ್ರಯೋಗ , ಚತರ್ಧರ್ಮೀಯರ ತಾಳಮದ್ದಳೆ ಮಾಡಿರುವೆ. ತಾಳಮದ್ದಳೆಯಲ್ಲಿ ವಿಭಿನ್ನ ಪ್ರಯೋಗ ಮಾಡುವ ವಿವಿಧ ಕಲ್ಪನೆಯ ಯೋಚನೆಗಳೂ ಇವೆ.
ಯಕ್ಷರಂಗದಲ್ಲಿ ನಿಮಗೆ ಮಾರ್ಗದರ್ಶನ ನೀಡಿದವರ ಬಗ್ಗೆ:-
ಯಕ್ಷಗಾನರಂಗದಲ್ಲಿ ನನ್ನ ತಂದೆಯ ಮಾರ್ಗದರ್ಶನ ನನಗೆ ಮೊದಲು ಸಿಕ್ಕಿತು. ಆಮೇಲೆ ಯಕ್ಷಗಾನ ಕೇಂದ್ರದಲ್ಲಿ ಗುರುಗಳೆಲ್ಲರ ಮಾರ್ಗದರ್ಶನ.
ಯಕ್ಷಗಾನದ ಅನೇಕ ಹಿರಿಯ - ಕಲಾವಿದರ ಅನುಭವದ ನುಡಿ, ನನ್ನ ಗುರುತನದ ಅನೇಕ ಸಂಸ್ಥೆಗಳ ಸದಸ್ಯರು ಹಾಗೂ ನಾನು ಕಲಾವ್ಯವಸಾಯ ಮಾಡುವ ಯಕ್ಷಾಂತರಂಗ ಕೋಟ ಸದಸ್ಯರ ಸಹಕಾರ,
ಸಹಪಾಠಿಗಳ ಸಹಕಾರ, ಶಿಷ್ಯರ ಪ್ರೀತಿ, ನನ್ನ ಕಲಾವಂತಿಕೆಯ ಬಗ್ಗೆ ವಿಶ್ವಾಸ ಇರಿಸಿದ ನನ್ನ ಅಭಿಮಾನಿ ಮಿತ್ರರೇ ನನಗೆ ಮಾರ್ಗದರ್ಶಕರು.
ನನಗೆ ಸಮುದಾಯದ ಬಲವಾಗಲಿ, ಆರ್ಥಿಕ ಬಲವಾಗಲಿ ಇಲ್ಲ. ಕಷ್ಟ ಪಟ್ಟು ಕಲೆಯನ್ನು ಕಲಿತಿದ್ದೇನೆ. ಕಲಿತಿದ್ದನ್ನು ಹಂಚುತ್ತಿದ್ದೇನೆ..
ಯಕ್ಷಗಾನ ನನ್ನ ಅನ್ನದ ಬಟ್ಟಲು. ಕಲಾಮಾತೆಯೇ ನನಗೆ ನಿತ್ಯ ಮಾರ್ಗದರ್ಶಿ.
ನನ್ನನ್ನು ಯಕ್ಷಗಾನೇತರ ಸಾಹಿತ್ಯ ಲೋಕಕ್ಕೆ ಕರೆತಂದ ಪ್ರಸಿದ್ಧ ಗಾಯಕ ಕೃಷ್ಣ ಸಾಸ್ತಾನ, ಯಕ್ಷಗಾನ ಕಮರ್ಷಿಯಲ್ ದಾರಿ ತೋರಿದ ರಮೇಶ ಬೇಗಾರ್, ಡೇರೆಮೇಳದಲ್ಲಿ ನನ್ನ ಪ್ರಸಂಗಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿದ ವಿದ್ಯಾಧರ ರಾವ್ ಜಲವಳ್ಳಿ ,
ನರೇಂದ್ರ ಕುಮಾರ್ ಕೋಟ, ಸತೀಶ ಪಿ.ಡಿ.ಓ, ಗೋವಿಂದ ಶೇರಿಗಾರ್ ವಡ್ಡರ್ಸೆ, ಜನ್ಸಾಲೆ ರಾಘವೇಂದ್ರ ಆಚಾರ್ಯ, ಗಣೇಶ್ ಪಡಿಯಾರ್, ಸುರೇಶ್ ಶೆಟ್ಟಿ ಶಂಕರನಾರಾಯಣ, ವೆಂಕಟೇಶ್ ವೈದ್ಯ, ಪ್ರಶಾಂತ ಮಲ್ಯಾಡಿ ಇತರರು ಬೇರೆ ಬೇರೆ ನೆಲೆಯಲ್ಲಿ ನನ್ನ ಕಲಾದಾರಿಯಲ್ಲಿ ಜತೆಯಾಗಿದ್ದಾರೆ. ನನಗೆ ಯಕ್ಷಗಾನ ಲೋಕದಲ್ಲಿ ಎಲ್ಲರೂ ಆಪ್ತರು. ಯಕ್ಷಲೋಕದ ಅಜಾತಶತ್ರು ಎಂದೇ ಆತ್ಮೀಯರು ನನ್ನನ್ನು ಗುರುತಿಸಿದ್ದಾರೆ.
ಜಲವಳ್ಳಿ ಮೇಳದಲ್ಲಿ ನನ್ನ ಪ್ರಧಾನ ಪ್ರಸಂಗ ಅಗ್ನಿ ವರ್ಷ. ಅದೇ ವರ್ಷ ನನ್ನ ಪದ್ಯ ರಚನೆಯ ಅಕ್ಷಯ ಶೆಟ್ಟಿ ಮುಂಬಾರು ಇವರ ಕಥಾಸಾಂಗತ್ಯದ ವಿಧಿವೈಷಮ್ಯ ಪೆರ್ಡೂರು ಮೇಳದಲ್ಲಿ, ನನ್ನ ಸಾಹಿತ್ಯದ ಅರ್ಪಿತಾ ಹೆಗಡೆ ಅವರ ಚಕ್ರ ಪೌರ್ಣಮಿ ಸಾಲಿಗ್ರಾಮ ಮೇಳದಲ್ಲಿ ಹೀಗೆ ಮೂರು ಡೇರೆ ಮೇಳಗಳಲ್ಲೂ ಒಂದೇ ವರ್ಷ ನನ್ನ ಸಾಹಿತ್ಯ ಕೃಷಿ ನಡೆದಿದೆ. ಇದಕ್ಕೆ ಮೇಳದ ಮೂರು ಯಜಮಾನರು ವಿರೋಧಿಸಿಲ್ಲ. ಯಕ್ಷಗಾನ ರಂಗದಲ್ಲಿ ಸೌಹಾರ್ದತೆ ಮುಖ್ಯ. ಈ ಸಂಗತಿ ನನಗೆ ಸದಾ ಸ್ಮರಣೀಯ.
ವಿವಿಧ ಸಂಘ - ಸಂಸ್ಥೆಗಳಲ್ಲಿ, ದೇಶ- ವಿದೇಶಗಳಲ್ಲಿ 300 ಕ್ಕೂ ಹೆಚ್ಚು ಸನ್ಮಾನ.
ಸೂಡದಲ್ಲಿ ನಡೆದ ಕವಿಸಮ್ಮೇಳನದಲ್ಲಿ - ಸ್ಕಂದ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಾಳಿಂಗ ನಾವಡ ಪ್ರಶಸ್ತಿ, ಜಲವಳ್ಳಿ ಪ್ರಶಸ್ತಿ ಸನ್ಮಾನ ಹಾಗೂ ಪ್ರಶಸ್ತಿಗಳು ಇವರಿಗೆ ಸಿಕ್ಕಿರುತ್ತದೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಇಂದು ಯಕ್ಷಗಾನ ಎಲ್ಲಾ ದೃಷ್ಟಿಯಲ್ಲಿಯೂ ಪ್ರಬಲ ಮಾಧ್ಯಮವಾಗಿ ಬೆಳೆದಿದೆ.
ಯುವ ಸಮುದಾಯ ಹೆಚ್ಚು ಹೆಚ್ಚು ಆಕರ್ಷಿತರಾಗಿದ್ದಾರೆ.
ಕಲಿಯುವ ಹಲವು ಕಲಾ ಮನಸ್ಸುಗಳು ಯಕ್ಷಗಾನತನವನ್ನು ಪುರಸ್ಕರಿಸುತ್ತಿರುವುದು ಗಮನೀಯ. ಹವ್ಯಾಸಿ ಯಕ್ಷಗಾನ ರಂಗಭೂಮಿಯು ಇವತ್ತು ಪರಿಪೂರ್ಣವಾಗಿ ಬೆಳೆದಿದೆ.
ಇನ್ನೂ ಹತ್ತಿಪ್ಪತ್ತು ವರ್ಷ ಹರಕೆ ಪೂರೈಸಲಾಗದ ಹರಕೆ ಮೇಳಗಳು ಶುದ್ಧ ಸಾಂಪ್ರದಾಯಿಕ ಯಕ್ಷಗಾನ ಪ್ರದರ್ಶನ ನೀಡಲು ಮನಸ್ಸು ಮಾಡಬೇಕು.
ಯಕ್ಷಗಾನದಲ್ಲಿ ಬಡಗಿನಲ್ಲಿ ಕೆಲವೆಡೆ ಈಗ ಕುಣಿತವೇ ಪ್ರಧಾನವಾದಂತಿದೆ. ಆಲಾಪ ರಂಗಕ್ಕೆ ಪ್ರಲಾಪವಾಗುತ್ತಿದೆ. ಸರ್ವಾಂಗ ಸುಂದರ ಸಮಷ್ಠಿ ಕಲೆಯಲ್ಲಿ ಯಾವುದೇ ಒಂದೊಂದು ಅಂಗ ಮಾತ್ರ ಉದ್ದುದ್ದವಾದರೆ ಆಕಾರ ಕೆಟ್ಟು ಹೋಗುತ್ತದೆ.
ಯಕ್ಷಗಾನದಲ್ಲಿ ಸ್ವಪ್ರತಿಷ್ಠೆಗಿಂತ ಟೀಮ್ ವರ್ಕ್ ಮುಖ್ಯ ಎಂಬುದು ನನ್ನ ಮೂಲ ಆಶಯ. ಯಕ್ಷಗಾನವನ್ನು ತಮ್ಮ ಮಕ್ಕಳಿಗೆ ಕಲಿಸುವ ಪೋಷಕರು ಯೂಟ್ಯೂಬ್ ಯಕ್ಷಗಾನವನ್ನು ಗುರುವಾಗಿ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಯಕ್ಷಗಾನ ಕಲಿಕೆ ಫ್ಯಾಷನ್ ಆಗುತ್ತಿರುವುದು ಸರಿಯಲ್ಲ.
ಪ್ರಮುಖವಾಗಿ ಪ್ರತಿಭೆಯನ್ನು ಗುರುತಿಸುವ ಗುಣಕ್ಕಿಂಥ ವ್ಯಕ್ತಿಯನ್ನು ನೋಡುವ ಪರಿ ಇದೆ. ಜಾತಿಯ ವೈಷಮ್ಯವೂ ಅಲ್ಲಲ್ಲಿದೆ.
ಪರಂಪರೆ ಎಂದರೆ ಗೊಡ್ಡು ಸಂಪ್ರದಾಯವೆಂಬ ಮಂದಿಯೊಂದಿಗೆ ಹಳತು ಉಳಿಸೋಣ ಎಂದು ಕೈಜೋಡಿಸುವವರೂ ಇದ್ದಾರೆ.
ಪೌರಾಣಿಕ ಪ್ರಸಂಗಗಳನ್ನು ತುಂಡು ತುಂಡು ಮಾಡುವ ಪ್ರಕ್ರಿಯೆ ಇದೆ. ಕಾಲಮಿತಿಗೆ ಅನುಗುಣವಾಗಿ ಕಥಾನಕದ ಕಥೆಗೆ ಕತ್ತರಿ ಬೀಳುತ್ತಿದೆ. ಕಲಾವಿದರ ಮಿತಿಗನುಗುಣವಾಗಿ ಪಾತ್ರಗಳಿಗೆ ಕತ್ತರಿ ಬೀಳುತ್ತಿದೆ.
ಈಗ ಎಲ್ಲರೂ ಗುರುಗಳು. ಯಾವುದೇ ಕಲಾಸಂಸ್ಥೆಯಲ್ಲಿ ಸಂಪ್ರದಾಯಬದ್ಧ ಅಥವಾ ವ್ಯವಸ್ಥಿತ ತರಬೇತಿ ಪಡೆದವರನ್ನೇ ಗುರುವಾಗಿ ಸ್ವೀಕರಿಸುವ ಗುಣ ಬೇಕು. ಕಾಲೋಚಿತವಾಗಿ
ಕಲೋಚಿತವಾದ ಬದಲಾವಣೆ ಸರಿ. ಆದರೆ ಸುಧಾರಣೆ - ಸುಧೋರಣೆಯ ನೆಪದಲ್ಲಿ ಕಲೆಯಲ್ಲಿ ಕಲೆಯ ಒಟ್ಟು ಆವರಣ ಭಂಗವಾಗಬಾರದು.
ಯಕ್ಷಗಾನ ಆಟವೆಂದರೆ ಹರಕೆ ಬಲಿ ಸಂದಾಯ ಎಂಬ ಧೋರಣೆ ಅಲ್ಲಲ್ಲಿದೆ. ಇದು ದೂರವಾಗಬೇಕು.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರಜ್ಞಾವಂತ ಪ್ರೇಕ್ಷಕರು ಇದ್ದಾರೆ. ಇವರೊಂದಿಗೆ ಕಲಾವಿದನ ಕಲಾಮೌಲ್ಯವನ್ನು ಜನಪ್ರಿಯತೆಯ ನೆಲೆಯಲ್ಲಿ ಅಳೆಯುವವರೂ ಇದ್ದಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಕನುಸುಗಳು ಸಾವಿರ. ಹೆಚ್ಚೇನೂ ಹೇಳಲಾರೆ.
ಕಾಲ ಕಾಲಕ್ಕೆ ನಿಮ್ಮ ಆಶೀರ್ವಾದದಿಂದ ಪ್ರಕಟಿಸುತ್ತಲೇ ಹೋಗುವೆ. ನಾನು ಸಂಪಾದನೆಯ ಮುಖವೊಂದೇ ಕಂಡಿದ್ದರೆ ನನಗೆ ಅಂಥ ಸುವರ್ಣ ಅವಕಾಶವೂ ಇದ್ದವು. ನನಗೆ ಬದುಕು ಕೊಟ್ಟ ಕಲೆ ಬದುಕಿಗೆ ಎಷ್ಟು ಕೊಡುವುದೋ ಅಷ್ಟೇ ಸ್ವೀಕರಿಸುವೆ. ನಾನು ಶಿಷ್ಯರಿಗೆ ವಿದ್ಯೆ ನೀಡಿದ್ದೇನೆ. ಮೊನ್ನೆ ಒಬ್ಬರು ಕೇಳಿದರು ಕಲಾಸಂಸ್ಥೆಗಳು ನಿಮಗೆ ಏನು ನೀಡಿವೆ ಎಂದು. ಅವರು ನನಗೆ ಏನು ನೀಡಿವೆಯೆಂಬುದನ್ನು ಯೋಚಿಸಲಾರೆ. ನನಗೆ ಯಾವುದೇ ನಿರೀಕ್ಷೆ ಇಲ್ಲ.
ನನ್ನ ನಿರ್ದೇಶನದ ಕಲಾಸಂಸ್ಥೆಗಳಲ್ಲಿ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶನ ಗೊಳಿಸುವೆ.
ಐತಿಹಾಸಿಕ ಪ್ರಸಂಗಗಳಿಗೂ ಮಹತ್ವ ನೀಡುವೆ. ಸಾಮಾಜಿಕ - ಕಾಲ್ಪನಿಕ ಪ್ರಸಂಗ ಆಡುವ ಮನವಿಲ್ಲ. ಪ್ರಚಲಿತದಲ್ಲಿ ಇಲ್ಲದ ಪೌರಾಣಿಕ ಪ್ರಸಂಗಗಳನ್ನು ರಂಗಕ್ಕೆ ತರುವಾಸೆ. ಕಥಾನಕವೇ ಆಗಿರದ ಪೌರಾಣಿಕ ಕಥೆಗಳನ್ನು ಪ್ರಸಂಗವಾಗಿಸಿ ಪ್ರದರ್ಶಿಸುವ ಹಂಬಲವೂ ಇದೆ. ಸಂಪ್ರದಾಯಬದ್ಧ ಯಕ್ಷಗಾನ ಶಿಕ್ಷಣ, ಭಾಗವತಿಕೆ, ಪ್ರಸಂಗ ನಿರ್ಮಾಣ ಒಟ್ಟು ಆಶಯ.
ತೆಂಕು- ಬಡಗಿನ ಎಲ್ಲಾ ಭಾಗವತರೊಂದಿಗೂ ರಂಗ ಹಂಚಿಕೊಂಡ ಹಾಗೂ ಬಡಗಿನ ಎಲ್ಲಾ ಸುಪ್ರಸಿದ್ಧರನ್ನು ರಂಗದಲ್ಲಿ ಕುಣಿಸಿದ ಧನ್ಯತೆಯಿದೆ.
ಭಾರತಾದ್ಯಂತ ಕಲಾಸಂಚಾರ: ದೆಹಲಿ, ನಾಗ್ಪುರ್, ಸಿಕ್ಕಿಂ, ಮದ್ರಾಸ್, ರಾಜಸ್ಥಾನ, ಮೇಘಾಲಯ, ಗುಜರಾತ್, ಅಸ್ಸಾಂ, ಪುರಿ, ಭುವನೇಶ್ವರ್, ಗೋವಾ, ಕೇರಳ, ಮುಂಬೈ, ತಮಿಳುನಾಡು..
ವಿದೇಶಗಳಲ್ಲಿ: ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್, ಐರ್ಲ್ಯಾಂಡ್, ಸಿಂಗಾಪುರ್, ಆಸ್ಟ್ರೇಲಿಯಾದಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಹಿರಿಮೆ ಇವರಿಗೆ ಸಲ್ಲುತ್ತದೆ.
2009 ಜನವರಿ 4 ರಂದು ಶರಾವತಿ ಅವರನ್ನು ವಿವಾಹವಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಇಬ್ಬರು ಮಕ್ಕಳು ಪುತ್ರ ಅಮೋಘ, ಪುತ್ರಿ ಆರಾಧ್ಯ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
Comments
Post a Comment