ಯಕ್ಷ ಸಾಧಕರು ೫೭

ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ತಾಯಿ-ಮಗಳು; 
ಶ್ರೀಮತಿ ಜ್ಯೋತಿ ಟಿ.ಎನ್ ಹಾಗೂ ಅವರ ಮಗಳು ಕುಮಾರಿ ಟಿ.ಎನ್ ಶ್ರೀರಕ್ಷಾ ಭಟ್.

ಮಲೆನಾಡಿನ ಪುಟ್ಟ ಹಳ್ಳಿ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹಳುವಳ್ಳಿಯ ಶ್ರೀಮತಿ ಜ್ಯೋತಿ ಟಿ.ಎಸ್ ದಿನಾಂಕ ೨೬.೦೪.೧೯೭೦ರಂದು ದಿ.ಟಿ.ಕೃಷ್ಣ ರಾವ್ ಹಾಗೂ ರಾಧಮ್ಮ ಇವರ ಮಗಳಾಗಿ ಜನನ. SSLC ವರೆಗೆ ವಿದ್ಯಾಭ್ಯಾಸ. ಶ್ರೀಮತಿ ಜ್ಯೋತಿ ಟಿ.ಎಸ್ ಇವರ ತಾಯಿ ಮನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಕಾಟಿಪಳ್ಳ. ಸಣ್ಣ ವಯಸ್ಸಿನಲ್ಲೇ ಮನೆಯ ಸುತ್ತಮತ್ತ ನಡೆಯುತ್ತಿದ್ದ ಧರ್ಮಸ್ಥಳ, ಕಟೀಲು ಮೇಳಗಳ ಯಕ್ಷಗಾನ ಬಯಲಾಟ ನೋಡಿ ಹಾಗೂ ತಂದೆ ಸ್ವತಃ ಹವ್ಯಾಸಿ ಭಾಗವತರಾಗಿದ್ದ ಕಾರಣ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು ಹಾಗೂ ೧೯೮೮ ರಲ್ಲಿ ಯಕ್ಷಗಾನ ರಂಗಕ್ಕೆ ಬಂದರು.

ಶ್ರೀಯುತ ಶಿವರಾಮ್ ಪಣಂಬೂರು ಹಾಗೂ ಶ್ರೀಯುತ ರಮೇಶ್ ಶೆಟ್ಟಿ ಬಾಯಾರು ಇವರ ಯಕ್ಷಗಾನ ಗುರುಗಳು. ಶ್ರೀಮತಿ ಲೀಲಾವತಿ ಬೈಪಡಿತ್ತಾಯ ಇವರ ಭಾಗವತಿಕೆ ಗುರುಗಳು.
ಪ್ರಾರಂಭದಲ್ಲಿ "ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ತಂಡ ಬಾಳ, ಕಾಟಿಪಳ್ಳ" ಈ ತಂಡದಲ್ಲಿ ಸುಮಾರು ೫ ರಿಂದ ೬ ವರ್ಷಗಳ ಕಾಲ ಹಲವು ಪ್ರಸಂಗಳಲ್ಲಿ ವೇಷ ಮಾಡಿದ ಅನುಭವ. ಮದುವೆ ಬಳಿಕ ಇವರು ಕಲಿತ ವಿದ್ಯೆ ಇವರ ಬಳಿಯೆ ಉಳಿದು ಹೋಗಬಾರದೆನ್ನುವ ನೆಲೆಯಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಕಲಾಸಕ್ತ ಮಹಿಳೆಯರಿಗೆ ಯಕ್ಷಗಾನ ನಾಟ್ಯಾಭ್ಯಾಸ ನೀಡಿ, ಮಹಿಳಾ ಹಾಗೂ ಮಕ್ಕಳ "ಶ್ರೀ ಕುಮಾರ ಸಾಂಸ್ಕೃತಿ ಪ್ರತಿಷ್ಠಾನ (ರಿ) ಹಳುವಳ್ಳಿ" ತಂಡವನ್ನು ಕಟ್ಟಿ ಸ್ವಂತ ವೇಷಭೂಷಣ, ಮುಮ್ಮೇಳ ತಂಡವನ್ನು ಕಟ್ಟಿ ಹಲವಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಹಾಗೂ ಡೆಲ್ಲಿ ಕರ್ನಾಟಕ ಸಂಘದ ಪ್ರಾಯೋಜಕತ್ವದಲ್ಲಿ  ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಇವರ ತಂಡಕ್ಕೆ ಸಲ್ಲುತ್ತದೆ.

ಶ್ರೀ ದೇವಿ ಮಹಾತ್ಮೆ, ದಕ್ಷಾಧ್ವರ, ಕಂಸ ವಧೆ ಮುಂತಾದ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಮಹಿಷಾಸುರ, ಕಂಸ, ದಕ್ಷ, ವಿಷ್ಣು ಮುಂತಾದ ವೇಷಗಳು ಇವರ ನೆಚ್ಚಿನ ವೇಷಗಳು.

ರಂಗಕ್ಕೆ ಹೋಗುವ ಮೊದಲು ಯಾವ ರೀತಿ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಒಂದು ಪಾತ್ರ ಪ್ರಸಂಗದ ಬಗ್ಗೆ ತಿಳಿದುಕೊಳ್ಳುತ್ತೇನೆ ಮತ್ತು ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ನಾನು ಕಲಿಯುತ್ತಾ ಮಕ್ಕಳಿಗೂ ಕಲಿಸುತ್ತೇನೆ ಎಂದು ಜ್ಯೋತಿ ಅವರು ಹೇಳುತ್ತಾರೆ.

ನಾನು ನಮ್ಮ ಊರ ಸುತ್ತಮುತ್ತ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು, ದೆಹಲಿ, ಕಾಸರಗೋಡು ಮುಂತಾದ ಹತ್ತು ಹಲವು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಅಪಾರ ಜನಮನ್ನಣೆಯನ್ನು ಗಳಿಸಿದರೂ ಕೂಡ ತೆಂಕುತಿಟ್ಟು ಯಕ್ಷಗಾನದ ತವರೂರರಲ್ಲಿ ಇಂದಿನ ಪ್ರಸ್ತುತ ವಾತಾವರಣದಲ್ಲಿ ಇತ್ತೀಚೆಗೆ ಕಲಿಯುತ್ತಿರುವ ಕಲಾವಿದರಿಗೆ ಸಿಗುವಂತಹ ಮನ್ನಣೆ  ಸನ್ಮಾನ ಪ್ರಶಸ್ತಿಗಳು, ಅಭಿಮಾನ ಸಂಘಗಳು ಕೇವಲ ಯಕ್ಷಗಾನವನ್ನು ಪ್ರೀತಿಸಿ, ಅದರಲ್ಲೂ ಮಲೆನಾಡಿನಲ್ಲಿ ನಶಿಸುತ್ತಿರುವ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಇವರಿಗೆ ಹೇಳಿಕೊಳ್ಳುವಂತಹ ಸನ್ಮಾನ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿಲ್ಲ ಹಾಗೇ ನಾನು ಕೂಡ ಹುಡುಕಿಕೊಂಡ ಹೋಗಿಲ್ಲ. ಸಣ್ಣ ಮಟ್ಟದಲ್ಲಿ ಹತ್ತು ಹಲವು ಸನ್ಮಾನಗಳು ನನಗೆ ದೊರೆಕಿರುವುದು ಸಂತಸಪಡುವ ವಿಷಯ ಎಂದು ಜ್ಯೋತಿ ಅವರು ಹೇಳುತ್ತಾರೆ.

ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನದಲ್ಲಿ "ಕರ್ನಾಟಕ ಯಕ್ಷ ಮಹಿಳಾ ಪ್ರಶಸ್ತಿ", ಯಕ್ಷದೇವ ಮಿತ್ರ ಮಂಡಳಿ ಬೆಳುವಾಯಿಯಿಂದ "ಶ್ರೇಷ್ಠ ಯಕ್ಷ ಗುರು ಪ್ರಶಸ್ತಿ", ರೋಟರಿ ಕ್ಲಬ್ ಕಳಸ, ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಕಳಸ, ಸ್ತ್ರೀ ಶಕ್ತಿ ಮಹಿಳಾ ಮಂಡಳಿ ಬಸರೀಕಟ್ಟೆ ಮುಂತಾದ ಸಂಸ್ಥೆಗಳು ಮಹಿಳಾ ಸಾಧಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ ಹಾಗೂ ಡೆಲ್ಲಿ ಕರ್ನಾಟಕ ಸಂಘ ಡೆಲ್ಲಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಬೆಂಗಳೂರು, ರೋಟರಿ ಕ್ಲಬ್ ಕಳಸ, ಓಂ ಶಕ್ತಿ ಆಂಜನೇಯ ಚಿಕ್ಕ ಮೇಳ ಪುತ್ತೂರು, ದುರ್ಗಾ ಸೇವಾ ಸಮಿತಿ ಕಟೀಲು ಮುಂತಾದ ಹಲವು ಸಂಘ ಸಂಸ್ಥೆಗಳು ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇವರ ಸಂಸ್ಥೆಗೆ ಯಕ್ಷ ಧ್ರುವ ಪಟ್ಲ ಫೌಂಡೇಷನ್ ಯಿಂದ ಸಹಾಯ ನಿಧಿ ದೊರೆತಿರುತ್ತದೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
೩೩ ವರ್ಷಗಳ ನನ್ನ ಯಕ್ಷಗಾನ ವ್ಯವಸಾಯದ ಹಿಂದಿನ ಸ್ಥಿತಿ ಗತಿಗೂ ಇಂದಿಗೂ ತುಂಬಾ ಬದಲಾವಣೆ ಕಂಡಿದೆ.
ಓರ್ವ ಮಹಿಳಾ ಕಲಾವಿದೆಯಾಗಿ ಹೇಳುವುದಾದರೆ ನಮ್ಮ ಬಾಲ್ಯದಲ್ಲಿ ಇದ್ದಂತೆ ಈಗ ಭಯಪಡಬೇಕಾಗಿಲ್ಲ, ಸಮಾಜದ ಕ್ರೂರ ನೋಟಗಳಿಲ್ಲ, ವ್ಯಂಗ್ಯ ಮಾತುಗಳಿಲ್ಲ, ಯಕ್ಷಗಾನ ಕುಣಿದರೆ ಕಂಕಣ ಕೂಡಿ ಬರವುದಿಲ್ಲ ಎಂಬ ಆತಂಕವಿಲ್ಲ. ಮಹಿಳೆಯರೂ ಯಕ್ಷಗಾನ ಕ್ಷೇತ್ರಕ್ಕೆ ಆಗಮಿಸುತ್ತಿರುವುದಕ್ಕೆ ಕಲಾಸಕ್ತ ಅಭಿಮಾನಿಗಳು ತುಂಬಾನೇ ಪ್ರೋತ್ಸಾಹ ನೀಡುತ್ತಾರೆ.
ಆದರೆ ಇಂದಿನ ಪ್ರದರ್ಶನಗಳನ್ನು ಕಾಣುತ್ತಿರುವಾಗ ಮನಸ್ಸಿಗೆ ಬೇಸರವೆನಿಸುತ್ತದೆ. ಅನಗತ್ಯ ಚಾಲು ಕುಣಿತಗಳು, ಸಾಹಿತ್ಯವಿಲ್ಲದ ಹೆಚ್ಚಿನ ನಾಟ್ಯಗಳಿಂದ ಕೂಡಿದ ಪ್ರಸಂಗಳನ್ನು ನೋಡುವಾಗ ಮನಸ್ಸಿಗೆ ಬೇಜಾರು ಆಗುತ್ತದೆ, ಆದರೆ ಹೆಚ್ಚಿಗೆ ಹೇಳ ಹೊರಟರೆ ಬೇರೆಯವರ ಭಾವನೆಗಳಿಗೆ ನೋವಾಗುತ್ತದೆ. ಪ್ರೇಕ್ಷಕರೂ ಅಂತಹ ಪ್ರದರ್ಶನಗಳಿಗೆ ಹೊಂದಿಕೊಂಡಿದ್ದಾರೆ. ಅಬ್ಬರ ಕುಣಿತಗಳಿದ್ದರೆ ಪ್ರಸಂಗ ಹಿತ ಎನ್ನುವ ಭಾವನೆ ಬಂದುಬಿಟ್ಟಿದೆ. ಪರಂಪರೆ, ಹಿತಮಿತ ಕುಣಿತ ಸಾಹಿತ್ಯವನ್ನೊಳಗೊಂಡ ಪ್ರಸಂಗ ಸಪ್ಪೆ ಎನ್ನುವ ಮನೋಭಾವವಿದೆ ಎಂದು ಜ್ಯೋತಿ ಅವರು ಹೇಳುತ್ತಾರೆ.

ದಿನಾಂಕ ೨೬.0೫.೧೯೯೩ ರಂದು ಶ್ರೀಯುತ ಟಿ.ಕೆ ನಾರಾಯಣ ಇವರನ್ನು  ಮದುವೆಯಾಗಿ ಮಗಳಾದ ಶ್ರೀರಕ್ಷಾ ಭಟ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಟಿ.ಕೆ ನಾರಾಯಣ ಅವರು ಜ್ಯೋತಿ ಅವರ ಎಲ್ಲ ಯಕ್ಷ ಸಾಧನೆಗೆ ನಿರಂತರ  ಪ್ರೋತ್ಸಾಹ ನೀಡುತ್ತಿರುವುದು ನಾನು ಯಕ್ಷಗಾನ ರಂಗದಲ್ಲಿ ಇಷ್ಟು ಬೆಳೆಯಲು ಕಾರಣವಾಯಿತು ಎಂದು ಜ್ಯೋತಿ ಟಿ.ಎಸ್ ಅವರು ಹೇಳುತ್ತಾರೆ. ಇವರ ಮಗಳು ಕುಮಾರಿ ಶ್ರೀರಕ್ಷಾ ಭಟ್ ಕೂಡ ಒಳ್ಳೆಯ ಯಕ್ಷಗಾನ ಕಲಾವಿದೆ.

ಕುಮಾರಿ ಟಿ.ಎಸ್.ಶ್ರೀರಕ್ಷಾ ಭಟ್:-
ದಿನಾಂಕ ೦೫.೧೨.೨೦೦೧ ರಂದು ಟಿ.ಕೆ ನಾರಾಯಣ ಹಾಗೂ ಟಿ.ಎನ್.ಜ್ಯೋತಿ ಇವರ ಮಗಳಾಗಿ ಜನನ. ಪ್ರಸ್ತುತ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ತಾಯಿ ಟಿ.ಎನ್.ಜ್ಯೋತಿ ಇವರು ಯಕ್ಷಗಾನ ರಂಗಕ್ಕೆ ಬರಲು ಸ್ಫೂರ್ತಿ ಎಂದು ಶ್ರೀರಕ್ಷಾ ಅವರು ಹೇಳುತ್ತಾರೆ.

ತಾಯಿ ಟಿ.ಎನ್.ಜ್ಯೋತಿ, ದಿನಕರ ಪಚ್ಚನಾಡಿ, ರಮೇಶ್ ಶೆಟ್ಟಿ ಬಾಯಾರು ಹಾಗೂ ಜಿ.ಕೆ ನಾವಡ ಬಾಯಾರು ಇವರ ಯಕ್ಷಗಾನ ಗುರುಗಳು. ದೇವಿ ಮಹಾತ್ಮೆ, ರಕ್ತರಾತ್ರಿ, ಶ್ವೇತ ಕುಮಾರ ಚರಿತ್ರೆ, ಶಶಿಪ್ರಭಾ ಪರಿಣಯ ಇವರ ನೆಚ್ಚಿನ ಪ್ರಸಂಗಗಳು. ದೇವಿ, ಸುದರ್ಶನ, ಬಬ್ರುವಾಹನ, ಕೃಷ್ಣ ಇತ್ಯಾದಿ ಇವರ ನೆಚ್ಚಿನ ವೇಷಗಳು. "ಶ್ರೀ ಕುಮಾರ ಸಂಸ್ಕೃತಿ ಪ್ರತಿಷ್ಠಾನ (ರಿ) ಹಳುವಳ್ಳಿ" ಹವ್ಯಾಸಿ ಯಕ್ಷಗಾನ ತಂಡ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಅವರ ಯಕ್ಷಗಾನ ತಂಡ ಹಾಗೂ ಹವ್ಯಾಸಿ ತಂಡಗಳಲ್ಲಿ ವೇಷ ಮಾಡಿದ ಅನುಭವ ಶ್ರೀರಕ್ಷಾ ಅವರಿಗೆ ಇರುತ್ತದೆ.
ರಂಗಕ್ಕೆ ಹೋಗುವ ಮೊದಲು ಅಮ್ಮ ಹಾಗೂ ಗುರುಗಳ ಹತ್ತಿರ ಕೇಳಿ ಅವರ ಮಾರ್ಗದರ್ಶನ ಪಡೆದು ರಂಗಕ್ಕೆ ಹೋಗುತ್ತೇನೆ ಎಂದು ಹೇಳುತ್ತಾರೆ.
ಮಕ್ಕಿಮನೆ ಕಲಾ ವೃಂದ ಇವರಿಂದ ಪ್ರತಿಭಾ ಪುರಸ್ಕಾರ ಇವರಿಗೆ ಸಿಕ್ಕಿರುತ್ತದೆ.

ಯಕ್ಷಗಾನದ ಇಂದಿನ ಸ್ಥಿತಿಗತಿ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಹಿಂದಿನ ಕಾಲದಲ್ಲಿ ನಡೆಯುವ ಆಟಕ್ಕೂ ಈಗಿನ ಕಾಲದಲ್ಲಿ ಆಗುವ ಆಟಕ್ಕೂ ವ್ಯತ್ಯಾಸ ಇದೆ. ಹೊಸ ಪ್ರಭೇದಗಳು ಕಾಲಕ್ಕೆ ತಕ್ಕಂತೆ ಬೆಳೆದು ನಿಂತಿದೆ. ಆದರೂ ಪರಂಪರೆಯನ್ನು ಕಾಯ್ದಿರಿಸಿ ಬೆಳೆದರೆ ಯಕ್ಷ ರಂಗದ ಮೆರುಗು ಎನ್ನುವುದು ಇವರ ಅಭಿಪ್ರಾಯ.

ಯಕ್ಷಗಾನವನ್ನು ಆಸ್ವಾದಿಸುವ ಪ್ರತಿಯೊಬ್ಬ ಪ್ರೇಕ್ಷಕರು ಬಹಳ ವಿಚಾರಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು ಎಂದು ಇವರ ಅಭಿಪ್ರಾಯ. ಯಾಕಂದ್ರೆ ಈಗಿನ ಅನೇಕ ಮಂದಿಗೆ ರಾಮಾಯಣ, ಮಹಾಭಾರತದಲ್ಲಿ ಬರುವ ಪಾತ್ರ ಪರಿಚಯಗಳೇ ಇರುವುದಿಲ್ಲ. ಯಕ್ಷಗಾನ ಪ್ರಸಂಗದಲ್ಲಿ ಅವುಗಳ ಕಥೆ ಹಾಗೂ ಪಾತ್ರಗಳಿಂದ ಎಷ್ಟೋ ವಿಷಯ ಓದದೇ ತಿಳಿದುಕೊಳ್ಳಬಹುದು ಎಂದು ಶ್ರೀರಕ್ಷಾ ಅವರು ಹೇಳುತ್ತಾರೆ.

ಯಕ್ಷಗಾನದಲ್ಲಿ ಮುಂದೆ ಚೆಂಡೆ ಮದ್ದಳೆ ಕಲಿಯುವ ಆಸೆ ಹಾಗೂ ವೇಷದಲ್ಲಿ ಇನ್ನು ಕಲಿಯಬೇಕು ಹಾಗೂ ಬೇರೆ ಬೇರೆ ರೀತಿಯ ವೇಷಗಳನ್ನು ಮಾಡುವ ಬಯಕೆ ಇದೆ ಎಂದು ಶ್ರೀರಕ್ಷಾ ಅವರು ಹೇಳುತ್ತಾರೆ.

ಯಕ್ಷಗಾನ ರಂಗದಲ್ಲಿ ತಾಯಿ ಹಾಗೂ ಮಗಳು ಇನ್ನಷ್ಟು ಸಾಧನೆ ಮಾಡಲಿ,  ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

✍️
ಶ್ರವಣ್ ಕಾರಂತ್ ಕ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395