ಯಕ್ಷ ಸಾಧಕರು ೪೦
ಯಕ್ಷಗಾನದ ಪ್ರಸಂಗಕರ್ತ ಶ್ರೀಯುತ ಬೇಳೂರು ವಿಷ್ಣುಮೂರ್ತಿ ನಾಯಕ್.
ಕುಂದಾಪುರ ತಾಲೂಕು ಬೇಳೂರು ಗ್ರಾಮದ ದಿ.ಬಿ.ರಾಮಕೃಷ್ಣ ನಾಯಕ್ ಹಾಗೂ ಜಯಲಕ್ಷ್ಮಿ ಇವರ ಮಗನಾಗಿ ದಿನಾಂಕ ೨೧.೦೩.೧೯೭೧ ರಂದು ಇವರ ಜನನ. ದ್ವಿತೀಯ ಪಿ.ಯು.ಸಿ ಕಲಾ ವಿಭಾಗದಲ್ಲಿ ಪದವಿಯನ್ನು ಪಡೆದಿರುತ್ತಾರೆ. ಕಂದಾವರ ರಘುರಾಮ ಶೆಟ್ಟಿಯವರ ಸಾಹಿತ್ಯ ಪ್ರೇರಣೆಯಿಂದ ಯಕ್ಷಗಾನ ಪ್ರಸಂಗ ಬರೆಯಲು ಪ್ರೇರಣೆಯಾಯಿತು.
ಹವ್ಯಾಸಿ ಕಲಾವಿದರಾಗಿ ಭೀಷ್ಮ, ಸಾಲ್ವ, ಕೌರವ, ಭಸ್ಮಾಸುರ, ಈಶ್ವರ, ಕರ್ಣ, ಅರ್ಜುನ, ಕೃಷ್ಣ, ಕಂಸ, ಮದನಾಕ್ಷಿ ತಾರಾವಳಿ ಹಾಗೂ ಸಾಮಾಜಿಕ ಪ್ರಸಂಗಗಳಲ್ಲಿ ಹಲವಾರು ಪಾತ್ರವನ್ನು ಇವರು ನಿರ್ವಹಿಸಿದ್ದಾರೆ. 2000ನೇ ಇಸವಿಯಲ್ಲಿ ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ವೇಷಧಾರಿಯಾಗಿ ಅಂದಿನ ಪ್ರಧಾನಿ ದಿ.ಅಟಲ್ ಜಿಯವರ ಸಮ್ಮುಖದಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದು ಒಂದು ಮರೆಯಲಾಗದ ಅನುಭವ ಹಾಗೂ 2001ರಲ್ಲಿ ಕೋಲ್ಕತ್ತಾ ಸಾಂಸ್ಕೃತಿಕ ಉತ್ಸವದಲ್ಲಿ ಯಕ್ಷಗಾನ ಪಾತ್ರಧಾರಿಯಾಗಿ ಇವರು ಭಾಗವಹಿಸಿರುತ್ತಾರೆ.
ಚೈತ್ರ ಯಾಮಿನಿ, ಜನನಿ ಜನ್ಮ ಭೂಮಿ, ಸೌಭಾಗ್ಯ ಸಿರಿ ದೀಪ, ಕಪಿಲ ಕಾತ್ಯಾಯಿನಿ, ಮಾಯಾ ಮೇಘನ, ಮಹೀ ಮಾಧುರಿ, ಹಾಲಾಡಿ ಕ್ಷೇತ್ರ ಮಹಾತ್ಮೆ, ಕ್ರಾಂತಿಯ ಕಿಡಿ (ಐತಿಹಾಸಿಕ), ಸಾಲಿಗದ್ದೆ ಶ್ರೀ ವೀರ ಕಲ್ಕುಡ ಮಹಾತ್ಮೆ, ಬಾಲ ಕಲ್ಯಾಣ (ಬಾಲ ಕಾರ್ಮಿಕ ಸಮಸ್ಯೆ ಬಗ್ಗೆ), ಸ್ವಚ್ಛ ಭಾರತ (ಪೌರಾಣಿಕ), ಹೊಂಬುಜ ಶ್ರೀ ಪದ್ಮಾವತಿ, ದೇವಿ ಮಹಾತ್ಮೆ (ಮುದ್ರಿತ ಪ್ರಸಂಗ), ಕೊರಾಳ ಶ್ರೀ ಚಿಕ್ಕಮ್ಮ ದೇವಿ ಮಹಾತ್ಮೆ, ಧೀಕ್ಷ ಡಮರುಗ ಇವರು ಬರೆದಿರುವ ಪ್ರಸಂಗಗಳು.
ಸೌಭಾಗ್ಯ ದೇವತೆ, ದೈವ ಸಂಕಲ್ಪ, ಕುಹು ಕುಹು ಕೋಗಿಲೆ, ಮಧುರ ಮಿಲನ, ಸಾಹಸಸಿಂಹ, ಮಾರ್ಪಳ್ಳಿ ಕ್ಷೇತ್ರ ಮಹಾತ್ಮೆ, ಪುಷ್ಪ ಚಂದನ, ಕಸ್ತೂರಿ ತಿಲಕ, ವಚನ ವಲ್ಲರಿ, ಗಾನ ತರಂಗಿಣಿ, ಮಂತ್ರ ಮಯೂರಿ, ಕೃಷ್ಣ ವೇಣಿ, ಅಗ್ನಿ ಪಂಜರ, ಜ್ವಾಲಾ ಮುಖಿ, ಪವಿತ್ರ ಪಲ್ಗುಣಿ, ಕಲ್ಯಾಣ ಕುಂಕುಮ ಬೇರೆ ಕಥಾಕರ್ತರಿಗೆ ಇವರು ಪದ್ಯ ಸಾಹಿತ್ಯವನ್ನು ನೀಡಿರುತ್ತಾರೆ.
ಧ್ವನಿ ಮುದ್ರಿತ ಹಾಸ್ಯ ಪ್ರಸಂಗ ಬಹದ್ದೂರು ಬಸವ, ಬೇಳೂರು ರಾಮ ಗಿಳಿಯಾರು ಕುಷ್ಠ , ಹಾಲಾಡಿ ಶ್ರೀ ಮರಳುಚಿಕ್ಕು ದೇವಿ ದಿವ್ಯ ದರ್ಶನ ಸಾಕ್ಷ್ಯ ಚಿತ್ರ ಮತ್ತು ಭಕ್ತಿಗೀತೆ ಇವರು ಬರೆದಿರುತ್ತಾರೆ.
ಹೊಸ ಪ್ರಸಂಗಗಳ ಬಗ್ಗೆ ಆಕ್ಷೇಪಗಳಿವೆ, ಅದರ ಬಗ್ಗೆ ಅಭಿಪ್ರಾಯ ಹಾಗೂ ಪದ್ಯ ಬರೆಯುವ ಬಗ್ಗೆ ನಿಮ್ಮ ನಿಲುವು ಏನು ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಮೌಲ್ಯಾಧಾರಿತ ಕಥೆಯನ್ನು ಯಕ್ಷಗಾನೀಯವಾಗಿ ಛಂದೋ ಬದ್ಧವಾದ ಸಾಹಿತ್ಯದಿಂದ ರಚಿಸಿದಾಗ ಅದು ಪ್ರೇಕ್ಷಕನ ಮನವನ್ನು ಮುಟ್ಟುತ್ತದೆ. ಆಸ್ವಾದಕರನ್ನು ಮೆಚ್ಚಿಸುವ ನಿಟ್ಟಿನಲ್ಲಿ ಯಕ್ಷಗಾನ ಶಾಸ್ತ್ರೀಯ ಜೊತೆಗೆ ಧಕ್ಕೆ ಬಾರದ ರೀತಿಯಲ್ಲಿ ರಚಿಸಲಟ್ಟ ಪ್ರಸಂಗಗಳು ಹಲವಾರು ಪ್ರದರ್ಶನ ಕಾಣುವುದರೊಂದಿಗೆ ಜೀವಂತವೆನಿಸಿಗೊಳ್ಳುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರಚಾರದ ಗೀಳಿಗೆ ಬಿದ್ದು ಯಕ್ಷಗಾನದ ಮೌಲ್ಯವನ್ನು ಅರಿಯದ ಕಥೆಗಾರ ಪ್ರಸಂಗಕರ್ತನಾದ ದೆಸೆಯಿಂದ ಪ್ರದರ್ಶನ ಕಳೆಗೊಂದಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸೋಲುತ್ತಿವೆ. ಕಥೆಯನ್ನು ಪದ್ಯ ಸಾಹಿತ್ಯದೊಂದಿಗೆ ರಚಿಸಬಲ್ಲ ಪ್ರಸಂಗಕರ್ತನ ಪ್ರಸಂಗಗಳು ಇನ್ನು ಜೀವಂತ. ಮುಂದೆಯೂ ಕೂಡ ಬದಲಾದ ಕಾಲಘಟ್ಟದಲ್ಲಿ ಪ್ರೇಕ್ಷಕನ ಕಲಾಭಿರುಚಿಗೆ ಹೊಸ ಪ್ರಸಂಗಗಳು ಇನ್ನು ಹೆಚ್ಚಿಗೆ ರಚಿಸಲ್ಪಡಬೇಕು. ಪದ್ಯ ರಚನೆಯಲ್ಲಿ ಕಥೆಯ ಸಂದರ್ಭನುಸಾರ ಪೌರಾಣಿಕ ಹಿನ್ನೆಲೆ ಗಾದೆಗಳ ಜೋಡಣೆ, ಶರಣರ ನುಡಿಗಳನ್ನು ಜೋಡಿಸಿ ಸಾಹಿತ್ಯ ರಚನೆ ಮಾಡುವಷ್ಟು ಅನುಭವ ಅರಿವಿನೊಂದಿಗೆ ಯಕ್ಷಗಾನ ತಾಳಗಳ ಅಭ್ಯಾಸ, ಛಂದಸ್ಸಿನ ಬಗ್ಗೆ ಜ್ಞಾನ, ರಾಗಗಳ ಬಗ್ಗೆ ತಿಳುವಳಿಕೆ ಅಗತ್ಯವಾಗಿರಬೇಕು. ಇಷ್ಟೆಲ್ಲ ಗೊತ್ತಿದ್ದಾಗ ಮಾತ್ರ ಪರಿಪೂರ್ಣ ಯಕ್ಷಗಾನ ಪದ್ಯ ಸಾಹಿತ್ಯವನಿಸಿಕೊಳ್ಳುತ್ತದೆ. ಸರಳವಾದ ಪದ ಜೋಡಣೆಯಿಂದ ಸಾಮಾನ್ಯರಿಗೂ ಅರ್ಥವಾಗುವ ಸಾಹಿತ್ಯವು ಆಸ್ವಾದಕರನ್ನು ಬೇಗ ತಲುಪುತ್ತದೆ.
ಪ್ರಸಂಗ ಬಿಟ್ಟು ಬೇರೆ ಯಾವ ರೀತಿಯ ಬರವಣಿಗೆ ಅಳವಡಿಸಿಕೊಂಡಿದ್ದೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಪ್ರಸಂಗ ರಚನೆಯನ್ನು ಹೊರತು ಪಡಿಸಿ ಯಕ್ಷಗಾನ ಕಾರ್ಯಕ್ರಮ ನಿರೂಪಣೆ, ಪತ್ರಿಕೆಯಲ್ಲಿ ಪರಿಚಯ ಲೇಖನ, ಸನ್ಮಾನ ಪತ್ರ ಬರವಣಿಗೆ, ಮಕ್ಕಳಿಗೆ ಯಕ್ಷಗಾನ ತರಬೇತಿ ಹಾಗೂ ಆಕಾಶವಾಣಿ ಕಲಾವಿದರಾಗಿ ಭಾಗವಹಿಸಿದ್ದಾರೆ.
ತಾಳಮದ್ದಳೆ ಕ್ಷೇತ್ರದಲ್ಲಿ ಆಸಕ್ತಿ ಇದೆಯಾ? ಆ ಬಗ್ಗೆ ಮುಂದಿನ ಯೋಜನೆಗಳೇನು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ತಾಳಮದ್ದಳೆಯಲ್ಲಿ ಒಂದೆರಡು ಬಾರಿ ಭಾಗವಹಿಸಿರುತ್ತೇನೆ. ಸರಿಯಾದ ಮಾರ್ಗದರ್ಶನ ಸಿಕ್ಕರೆ ತಾಳಮದ್ದಳೆ ಕೂಟದಲ್ಲಿ ಭಾಗವಹಿಸುವ ಇಚ್ಛೆಯಿದೆ ಎಂದು ಹೇಳುತ್ತಾರೆ.
ಯಕ್ಷರಂಗದಲ್ಲಿ ನಿಮಗೆ ಮಾರ್ಗದರ್ಶನ ನೀಡಿದವರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ನಾನು ಯಕ್ಷಗಾನಕ್ಕೆ ಬರಲು ಮೊದಲ ಗುರು ಮೊಗೆಬೆಟ್ಟು ಹೆರಿಯ ನಾಯ್ಕ್ ಮಾರ್ಗದರ್ಶನ, ತದನಂತರ ದಿ. ಹಳ್ಳಾಡಿ ಸುಬ್ರಾಯ ಮಲ್ಯ ಹಾಗೂ ದಿ.ಉಳ್ತುರು ಸೀತರಾಮ ನಾಯಕ್ ರ ಗುರುತನದಲ್ಲಿ ತಾಳಾಭ್ಯಾಸ ಮತ್ತು ನಾಟ್ಯಾಭ್ಯಾಸ, ಯಕ್ಷಗಾನ ಛಂದಸ್ಸಿನ ಬಗ್ಗೆ ಕಂದಾವರ ರಘುರಾಮ ಶೆಟ್ಟಿಯವರರಿಂದ ಬೋಧನೆ ಮಾಡಿದ್ದಾರೆ ಎಂದು ಹೇಳುತ್ತಾರೆ.
ಬಡಗಿನ ಹೆಚ್ಚಿನ ಮೇಳದಲ್ಲಿ ಸನ್ಮಾನಗಳು, ಕುಂದಾಪುರ ರೋಟರಿ ಕ್ಲಬ್ ನಲ್ಲಿ, ಹೊಂಬುಜ ಮಠದಲ್ಲಿ ಅಲ್ಲದೆ ಕುಂದಾಪುರ ಭಂಡಾರ್ಕರ್ ಕಾಲೇಜಿನಲ್ಲಿ ಡಾ.ಶಾಂತರಾಮ ಕಲಾ ಪ್ರಶಸ್ತಿ, ಪುರಸ್ಕಾರಗಳು ಇವರಿಗೆ ದೊರೆತಿದೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ಕ್ಷೇತ್ರಕ್ಕೆ ಪ್ರಬುದ್ಧ ಕಲಾವಿದರ ಆಗಮನದಿಂದ ಭಾಷಾ ವೈಖರಿಯಲ್ಲಿ, ನಾಟ್ಯ ವೈಖರಿಯಲ್ಲಿ, ಪ್ರಸಾದನ ವೈಖರಿಯಲ್ಲಿ ಪ್ರೌಢಿಮೆಯನ್ನು ಕಾಣಬಹುದಾಗಿದೆ, ಕೆಲವೊಂದು ಅಸಭ್ಯ ಬದ್ದತೆಗಳು ಮನಸ್ಸಿಗೆ, ಕಲೆಯ ಬೆಳವಣಿಗೆಗೂ ಮಾರಕವೆನಿಸುತ್ತಿವೆ. ಅತಿಯಾದ ಆಲಾಪನೆ, ಕುಣಿತ, ರುಚಿಯಿಲ್ಲದ ಭಾಷೆ ಅಧ್ಯಯನವಿಲ್ಲದ ರಂಗ ಪ್ರವೇಶ, ಪಾತ್ರದ ಮಹತ್ವವನ್ನು ಅರಿಯದೆ ರಂಗ ವ್ಯವಹಾರದಿಂದ ಕಲಾವಿದ ಸೊರಗುತ್ತಿದ್ದಾನೆ, ಕಲೆಯನ್ನು ಕರಗಿಸುತ್ತಿದ್ದಾನೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಬಗ್ಗೆ ಹೀಗೆ ಹೇಳುತ್ತಾರೆ:-
ಒಳೆಯದನ್ನು ಮೆಚ್ಚಿ ಗೌರವಿಸುವವರಿಗಿಂತ ಕಳಪೆ ಎನಿಸಬಹುದಾದ ಕಲಾವಿದನ ರಂಗ ಚೇಷ್ಠೆ ರಂಗ ವ್ಯವಹಾರವನ್ನು ಪ್ರೋತ್ಸಾಹಿಸುವವರ ಸಂಖ್ಯೆ ಇತ್ತಿಚಿನ ದಿನದಲ್ಲಿ ಹೆಚ್ಚಾದಂತೆ ತೋರುತ್ತಿದೆ.
ಉದಾಹರಣೆಗೆ:-
ಮಹಿಷಾಸುರ ರಂಗಸ್ಥಳದ ಕಂಬಕ್ಕೆ ತಲೆ ಹೊಡೆಯುವುದನ್ನು, ಲೆಕ್ಕಾಚಾರವಿಲ್ಲದೆ ರಂಗದಲ್ಲಿ ಸುತ್ತುವುದನ್ನು, ಇನ್ನಿತರ ಚಟುವಟಿಕೆಗಳನ್ನು ದೃಶ್ಯಮಾಧ್ಯಮದಲ್ಲಿ ಬಿಂಬಿಸಿ ಕಲಾವಿದನ ಕಲಾ ಬದುಕಿನ ಹಾದಿ ತಪ್ಪಿಸುವವರೆ ಹೆಚ್ಚಾಗಿದ್ದಾರೆ. ಇದು ನೋವಿನ ಸಂಗತಿ. ಖಂಡಿಸುವವರ ಸಂಖ್ಯೆ ಹೆಚ್ಚಾದರೆ ಎಲ್ಲಾ ಮೇಳಗಳ ರಂಗ ಪ್ರದರ್ಶನದ ಗುಣಮಟ್ಟ ಸುಧಾರಿಸುತ್ತದೆ. ಕಲಾವಿದನ ಅಧ್ಯಯನಶೀಲವಾಗುವುದಕ್ಕೂ ದಾರಿಯಾಗುತ್ತದೆ ಎನ್ನುವುದು ಇವರ ಅನಿಸಿಕೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ಪದ್ಯ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ ಮನ್ನಣೆ ಸಿಗುವಂತಾಗ ಬೇಕು. ಯಕ್ಷಗಾನ ಶಾಸ್ತ್ರೀಯತೆಯ ಮೂಲಸತ್ವ ತತ್ವಗಳನ್ನು ಆಸಕ್ತರಿಗೆ ಅರಿವು ಮೂಡಿಸಿ ಅವರಲ್ಲಿ ಯಕ್ಷಗಾನಾಸಕ್ತಿಯನ್ನು ಮೂಡಿಸಿ ತರಬೇತಿ ನೀಡುವ ಮಹದಾಸೆಯಿದೆ.
ಶ್ರೀಯುತ ಬೇಳೂರು ವಿಷ್ಣುಮೂರ್ತಿ ನಾಯಕ್ ರವರು 11.05.2001ರಂದು ಅನಿತ (ತೀರಿಕೊಂಡಿರುತ್ತಾರೆ ಕ್ಯಾನ್ಸರ್ ರೋಗದಿಂದ) ಅಂಶಿತ ಹಾಗೂ ಅನ್ವಿತ ಇಬ್ಬರು ಮಕ್ಕಳು, ದಿನಾಂಕ 21.05.2017ರಂದು ನಾಗವೇಣಿ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️:- +91 8971275651
Comments
Post a Comment