ಯಕ್ಷ ಸಾಧಕರು ೩೪

ಸುಮಧುರ ಕಂಠದ ಭಾಗವತರು ಶ್ರೀಯುತ ಪ್ರದೀಪ್ ಕುಮಾರ್ ಗಟ್ಟಿ.

ಯಕ್ಷಗಾನ ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧಿ. ಜಾನಪದ ಕಲೆಯಾದರೂ ಶಾಸ್ತ್ರದ ಚೌಕಟ್ಟಿನಲ್ಲಿಯೇ ಬೆಳದು ಬಂದ ವಿಶಿಷ್ಟ ಕಲೆ. ಇಂತಹ ಗಂಡು ಕಲೆಯಲ್ಲಿ ಸದ್ಯ ಕಟೀಲು ಮೇಳದಲ್ಲಿ ಮಿಂಚುತ್ತಿರುವ ಭಾಗವತರು ಶ್ರೀಯುತ ಪ್ರದೀಪ್ ಕುಮಾರ್ ಗಟ್ಟಿ.

ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಕಂಬಳಪದವುನಲ್ಲಿ ದಿನಾಂಕ ೦೯.೦೮.೧೯೭೫ ರಂದು ಶ್ರೀಮತಿ ಹೆಚ್. ಆರ್. ವಸಂತಿ ಮತ್ತು ಬಿ.ದೇವಪ್ಪ ಗಟ್ಟಿ ಇವರ ಮಗನಾಗಿ ಜನನ. ಬಿ.ಕಾಂ ಇವರ ವಿದ್ಯಾಭ್ಯಾಸ. ಭಜನೆ ಹಿನ್ನೆಲೆ ಇದ್ದ ಕುಟುಂಬ ಇವರದು  ಹಾಗೂ ಇವರ ತಂದೆ ಎರಡು ಭಜನಾಮಂದಿರಗಳ ಸ್ಥಾಪಕರು, ಮಾತ್ರವಲ್ಲದೆ ಉತ್ತಮ ಭಜನೆ ಹಾಡುಗಾರ. ತಾಯಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದವರು. ಬಾಲ್ಯದಿಂದಲೂ ಯಕ್ಷಗಾನ ಆಕರ್ಷಿಸಿತ್ತು. ಅದರಲ್ಲೂ ಬಲಿಪ ಭಾಗವತರ ಭಾಗವತಿಕೆ, ಶೇಣಿಯವರು,ಸಾಮಗರು ಹಾಗೂ ಇನ್ನಿತರ ಹಿರಿಕಲಾವಿದರ ಅರ್ಥಗಾರಿಕೆ ಇರುವ ಕ್ಯಾಸೆಟ್ ಗಳನ್ನು ತಂದು ಕೇಳುವ ಹುಚ್ಚು. ಕ್ರಮೇಣ ಯಕ್ಷಗಾನ ಹಿಮ್ಮೇಳ ಕಲಿಯಲು ಪ್ರೇರಣೆ. ಮೊದಲು ಬರೆ ವಿಶ್ವೇಶ್ವರ ಭಟ್ಟರಿಂದ ಮದ್ದಳೆ ಅಭ್ಯಾಸ, ಮತ್ತೆ ಮಾಂಬಾಡಿ ಗುರುಗಳಿಂದ ಭಾಗವತಿಕೆ ಅಭ್ಯಾಸ. ಹೀಗೆ ಕಲೆ ಇವರಿಗೆ ರಕ್ತಗತವಾಗಿ ಬಂದಿದೆ. ಒಟ್ಟು ೨೦ ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ (ಕಲಿಕೆ ಸೇರಿ) ಸೇವೆಯನ್ನು ಮಾಡುತ್ತಿರುವ ಇವರು ಪ್ರಸ್ತುತ ಕಟೀಲು ಮೇಳದಲ್ಲಿ 6 ವರ್ಷಗಳಿಂದ ತಿರುಗಾಟವನ್ನು ಮಾಡುತ್ತಿದ್ದಾರೆ.

ದೇವಿಮಹಾತ್ಮೆ ಹಾಗೂ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಶುದ್ದಸಾವೇರಿ, ಮಧ್ಯಮಾವತಿ ಇವರ ನೆಚ್ಚಿನ ರಾಗ. ಪದ್ಯಾಣ ಶಂಕರನಾರಾಯಣ ಭಟ್ ಇವರ ನೆಚ್ಚಿನ ಚೆಂಡೆವಾದಕರು ಹಾಗೂ ಕೃಷ್ಣಪ್ರಕಾಶ ಉಳಿತ್ತಾಯರು ನೆಚ್ಚಿನ ಮದ್ದಳೆವಾದಕರು. ಬಲಿಪ ಭಾಗವತರು ಮತ್ತು ಪುತ್ತಿಗೆ ಹೊಳ್ಳರು ನನ್ನ ಇಷ್ಟದ ಭಾಗವತರುಗಳು ಮಾತ್ರವಲ್ಲದೆ ನಾನು ಅವರ ಹಾಡುಗಾರಿಕೆಯನ್ನೇ ನನ್ನ ಭಾಗವತಿಕೆಯಲ್ಲೂ ಅಳವಡಿಸಿಕೊಂಡು ಬರುತ್ತಿರುವುದು .ಯಾಕೆಂದರೆ ನನ್ನ ಮಟ್ಟಿಗೆ ಶುದ್ಧ ಯಕ್ಷಗಾನ ಪರಂಪರೆಯ ಶೈಲಿಗಳು. ಅದನ್ನು ಮುಂದುವರಿಸಿಕೊಂಡು ಹೋಗಬೇಕಾದು ನಮ್ಮಂತಹ ಯುವ ಭಾಗವತರುಗಳ ಜವಾಬ್ದಾರಿ ಎಂದು ಇವರು ಹೇಳುತ್ತಾರೆ.

ಹಳೆಯ ಸಂಗೀತ, ಹಳೆಯ ಯಕ್ಷಗಾನದ ಹಾಡುಗಳು, ಮಂತ್ರಗಳ ಧ್ವನಿಮುದ್ರಿಕೆಗಳು ಕೇಳುವುದು ಇವರ ಹವ್ಯಾಸಗಳು. ಮೊದಲಿಗೆ ಇವರ ಯಕ್ಷಗಾನ ಆಸಕ್ತಿಯನ್ನು ಗುರುತಿಸಿ ಪುರಸ್ಕರಿಸಿದವರು ಆನಂದ ಯುವಕ ಮಂಡಲ ಅನಂಗ ಬಾಳೆಪುಣಿ, ದಕ್ಷ ಯುವ ಬಳಗ, ಕೋಟಿಪದವು ಬೆಳ್ಮ, ಪೆರ್ಣ ಮುಗುಳಿತ್ತಾಯಿ ಸೇವಾ ಸಮಿತಿ ಹೀಗೆ ಕೆಲವು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಾರ್ಪಣೆ ಹಾಗೂ ಸನ್ಮಾನ ಸಲ್ಲಿಸಿರುತ್ತದೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಇವರು ಹೇಗೆ ಹೇಳುತ್ತಾರೆ:-
ಪ್ರಸ್ತುತ ಯಕ್ಷಗಾನ ಸರ್ವರನ್ನೂ ಆಕರ್ಷಿಸುವ ಮನೋರಂಜಕ ಕಲೆಯಾಗುತ್ತಿದೆ. ಹಿಂದೆ ಕೇವಲ ಒಂದು ವರ್ಗದ  ಪ್ರೇಕ್ಷಕರಿಗೆ ಸೀಮಿತವಾದ ಯಕ್ಷಗಾನ ಕಲೆ ಇಂದು ಯುವಜನರನ್ನೂ ಹೆಚ್ಚು ಆಕರ್ಷಿಸುತ್ತಿದೆ. ಇದು ಉತ್ತಮ ಬೆಳವಣಿಗೆ. ಆಧುನಿಕ ಇಲೆಕ್ಟ್ರಾನಿಕ್ ಮಾಧ್ಯಮಗಳ ಪಾತ್ರ ಯಕ್ಷಗಾನದ ಜನಪ್ರಿಯತೆಯನ್ನು ಹೆಚ್ಚಿಸಲು ಪ್ರಮುಖ ಕಾರಣ. ಆದರೆ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬರಬೇಕಾದರೆ ತನ್ನ ಮೂಲ ಸ್ವರೂಪವನ್ನು ಬಿಟ್ಟು ಕೊಡದೇ ನಾವೀನ್ಯತೆಯ ಆಕರ್ಷಣೆಗೆ ಹೆಚ್ಚು ಒಳಪಡದೆ ಇರಬೇಕು. ಆಗಲೇ ಯಕ್ಷಗಾನ ಕಲೆಯ ಮಹತ್ವ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತದೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಕಟೀಲು ಮೇಳದಲ್ಲಿಯೇ ಸೇವೆ ಸಲ್ಲಿಸುವ ಬಗ್ಗೆ ಪ್ರಧಾನ ಆದ್ಯತೆ. ಸಾಧ್ಯವಾದಷ್ಟು ಯಕ್ಷಗಾನ ಪರಂಪರೆಯನ್ನು ಉಳಿಸಿಕೊಂಡು ಬರುವ ನಿಟ್ಟಿನಲ್ಲಿ ಹೊಸತನವನ್ನು ಸ್ವಲ್ಪ ಮಾತ್ರ ಅಳವಡಿಸಿ  ಯಕ್ಷಗಾನ ಚೌಕಟ್ಟು ಮೀರದೆ ಬಳಸಿಕೊಂಡು ಮುಂದುವರಿಯುವುದು.

19.05.2010ರಂದು ಸಂಧ್ಯಾ ಅವರನ್ನು ವಿವಾಹವಾದ ಶ್ರೀಯುತ ಪ್ರದೀಪ್ ಕುಮಾರ್ ಗಟ್ಟಿ
ಇಬ್ಬರು ಮಕ್ಕಳಾದ ಹೃದ್ಯ ಮತ್ತು ಪ್ರಣಮ್ಯ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395