ಯಕ್ಷ ಸಾಧಕರು ೪೮
ಮದ್ದಳೆಯ ನಾದ ಶ್ರೀಯುತ ಕೃಷ್ಣಪ್ರಕಾಶ ಉಳಿತ್ತಾಯ.
ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿ, ಪ್ರವೃತ್ತಿಯಲ್ಲಿ ಮದ್ದಳೆವಾದಕರು. ವೃತ್ತಿಗೆ ಬ್ಯಾಂಕ್ ಕೆಲಸಕ್ಕೆ ಅಡ್ಡಿಯಾಗದಂತೆ ಯಕ್ಷಗಾನ ಕೂಟಗಳಲ್ಲಿ ಕಾಣಿಸಿಕೊಳ್ಳುವ ಉಳಿತ್ತಾಯರು ಇಂದು ಯಕ್ಷಗಾನ ಕ್ಷೇತ್ರದಲ್ಲಿ ಒಂದು ದೊಡ್ಡ ಹೆಸರು. ಉಳಿತ್ತಾಯರ ಮದ್ದಳೆವಾದನ ಕರ್ಣಾನಂದಕರ. ಮದ್ದಳೆಯ ಉರುಳಿಕೆಯ ಕ್ರಮವಾಗಲಿ, ಭಾಗವತರ ಭಾವವನ್ನರಿತು ನುಡಿಸುವ ವಿಧಾನವಾಗಲಿ, ಎಲ್ಲವೂ ಉಳಿತ್ತಾಯರ ಮದ್ದಳೆವಾದನದಲ್ಲಿರುವ ಅಚ್ಚುಕಟ್ಟು.
1980 ಏಪ್ರಿಲ್ 29 ರಂದು ಶ್ರೀಮತಿ ಅಮರಾವತಿ ಹಾಗೂ ವೆಂಕಟೇಶ ಉಳಿತ್ತಾಯ ಇವರ ಮಗನಾಗಿ ಇವರ ಜನನ. ಕಾನೂನು ಸ್ನಾತಕೋತ್ತರ ಪದವಿ (LLM), ಡಿಪ್ಲೊಮಾ ಇನ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಇವರ ವಿದ್ಯಾಭ್ಯಾಸ. ಪ್ರಸ್ತುತ ಕರ್ಣಾಟಕ ಬ್ಯಾಂಕ್ ನಲ್ಲಿ HR & IR ವಿಭಾಗದಲ್ಲಿ ಪ್ರಬಂಧಕರಾಗಿರುವ ಉಳಿತ್ತಾಯರು ಒಬ್ಬ ಹವ್ಯಾಸಿ ಮದ್ದಳೆವಾದಕರು.
ಚೆಂಡೆ ಮದ್ದಳೆ ಕಲಿಯಲು ಪ್ರೇರಣೆ ತನ್ನ ತಂದೆಯವರು ಮತ್ತು ದುರ್ಗಪ್ಪ ಗುಡಿಗಾರರ ಮದ್ದಳೆ ವಾದನ ಮೂಡಿಸಿದ ವಿಸ್ಮಯ. ಅನಂತರ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಅವರ ಮನದಲ್ಲಿ ಆವರಿಸಿಕೊಂಡು ಬಿಟ್ಟರು; ಅವರೇ ಸ್ಫೂರ್ತಿ ಎಂದೆನ್ನುತ್ತಾರೆ.
ತನ್ನ ತಂದೆಯಿಂದ ಚೆಂಡೆವಾದನದ ಪ್ರಾಥಮಿಕ ಪಾಠ ಕಲಿತರು. ಮೊದಲು ಮೋಹನ ಬೈಪಾಡಿತ್ತಾಯರ ಬಳಿ ಕೆಲವು ದಿನಗಳ ಅಧ್ಯಯನ. ಅನಂತರ
ದಿ.ಪುಂಡಿಕಾಯಿ ಕೃಷ್ಣ ಭಟ್ ರನ್ನು ಗುರುಗಳಾಗಿ ಪಡೆದು ಚೆಂಡೆ-ಮದ್ದಳೆ ಕಲಿಯುವ ಯೋಗ ಉಳಿತ್ತಾಯರಿಗೆ ಒಲಿದು ಬಂತು. ಪುಂಡಿಕಾಯ್ ಕೃಷ್ಣ ಭಟ್ಟರ ಸಮರ್ಥ ಶಿಕ್ಷಣ, ನಿರ್ದೇಶನದಲ್ಲಿ ಉಳಿತ್ತಾಯರು ಉತ್ತಮ ವಾದಕರಾಗಿ ಮೂಡಿ ಬಂದರು. ಹಿರಿಯ ಮದ್ದಳೆಗಾರ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ ಇವರಿಂದ ಸೂಕ್ಷ್ಮ ಪಟ್ಟುಗಳನ್ನು ಕಲಿತು, ಸಬ್ಬಣಕೋಡಿ ರಾಮ ಭಟ್ ಇವರಿಂದ ನಾಟ್ಯಾಭ್ಯಾಸವನ್ನು ಕಲಿತು, ಕವಿ ಛಾಂದಸ ಗುರು ಗಣೇಶ ಕೊಲಕಾಡಿ ಇವರ ಬಳಿ ಯಕ್ಷಗಾನ ಛಂದಸ್ಸು ಕಲಿಕೆ. ವಿ. ತ್ರಿಚ್ಚಿ ಕೆ.ಆರ್ ಕುಮಾರ್ ಮತ್ತು ವಿ. ಕುಕ್ಕಿಲ ಶಂಕರ ಭಟ್ ಕರ್ಣಾಟಕ ಶಾಸ್ತ್ರೀಯ ಮೃದಂಗವಾದನದ ಗುರುಗಳು. ಶ್ರೀ ಗೋವಿಂದ ನಾಯಕ್ ಪಾಲೆಚ್ಚಾರ್ ಇವರಿಂದ ಭಾಗವತಿಕೆಯನ್ನು ಸ್ವಲ್ಪ ಸಮಯ ಕಲಿತಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿದ್ದು 1994 ನೇ ಇಸವಿಯಿಂದ. ತಮ್ಮ ಊರಾದ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದಲ್ಲಿ. ಒಟ್ಟು ಇಪ್ಪತ್ತೇಳು ವರುಷಗಳಿಂದ ಈ ಕಲೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎನ್ನುತ್ತಾರೆ ಉಳಿತ್ತಾಯರು.
ಅತಿಥಿ ಕಲಾವಿದರಾಗಿ ಕಟೀಲು, ಮಂಗಳಾದೇವಿ, ಹೊಸನಗರ, ಎಡನೀರು ಹಾಗೂ ಬಡಗಿನ ಸಾಲಿಗ್ರಾಮ, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ದಿವಾಣ ಭೀಮ ಭಟ್, ಗೋಪಾಲಕೃಷ್ಣ ಕುರೂಪ್, ತಲೆಂಗಳ ಗೋಪಾಲಕೃಷ್ಣ ಭಟ್ ( ಚಕ್ಕುಲಿ ಅಜ್ಜ), ಗುರುಗಳಾದ ಪುಂಡಿಕಾಯ್ ಕೃಷ್ಣ ಭಟ್, ಕಿರಿಯ ಕುದುರೆಕೋಡ್ಲು ರಾಮ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪ್ರಭಾಕರ ಭಂಡಾರಿ ಕರ್ಕಿ, ಅನಂತಪದ್ಮನಾಭ ಪಾಠಕ್, ಪದ್ಮನಾಭ ಉಪಾಧ್ಯಾಯ, ಪೆರುವಾಯಿ ನಾರಾಯಣ ಭಟ್, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಯುವ ಹಿಮ್ಮೇಳವಾದಕರಲ್ಲೂ ಅನೇಕರಿದ್ದಾರೆ.
ನೆಚ್ಚಿನ ಮೃದಂಗ ವಾದಕರು: ದಿ. ವಿ.ಫಾಲ್ಘಾಟ್ ಮಣಿ ಅಯ್ಯರ್, ವಿ. ಕಾರೈಕೋಡಿ ಮಣಿ, ವಿ.ಅರುಣ್ ಪ್ರಕಾಶ್.
ನೆಚ್ಚಿನ ಭಾಗವತರ ಬಗ್ಗೆ ಕೇಳಿದಾಗ ಇವರು ಹೇಳುವುದು:-
"ಅಗರಿ ಶ್ರೀನಿವಾಸ ಭಾಗವತರು, ಅಗರಿ ರಘುರಾಮ ಭಾಗವತರು, ಬಲಿಪ ನಾರಾಯಣ ಭಾಗವತರು, ಕಡತೋಕ ಮಂಜುನಾಥ ಭಾಗವತರು, ಕಾಳಿಂಗ ನಾವಡರು. ಮತ್ತು, ನನಗೆ ಇಷ್ಟ ಇಲ್ಲದ ಭಾಗವತರೆಂದು ಯಾರೂ ಇಲ್ಲ. ಯಾಕೆಂದರೆ ಮದ್ದಳೆವಾದಕ ಚೆಂಡೆವಾದಕನಿಗೆ ಸ್ವತಂತ್ರ ಅಸ್ತಿತ್ವ ಇಲ್ಲ. ತನ್ನಿರವನ್ನು ಭಾಗವತನಲ್ಲಿ ಕಾಣಬೇಕು ಇದ್ದೂ ಇಲ್ಲದಂತೆ" ಎಂದು ಹೇಳುತ್ತಾರೆ ಉಳಿತ್ತಾಯರು.
ಕೃಷ್ಣ ಸಂಧಾನ ಇವರ ನೆಚ್ಚಿನ ಪ್ರಸಂಗ.
ಯಕ್ಷಗಾನದಲ್ಲಿ ವೇಷ ಮಾಡುವ, ಭಾಗವತಿಕೆ ಮಾಡುವ ಆಸಕ್ತಿ ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
"ವೇಷ ಮಾಡುವ ಅಥವಾ ಭಾಗವತಿಗೆ ಆಸಕ್ತಿ ಇಲ್ಲ. ಆದರೆ ಪಾತ್ರ ಮತ್ತು ಹಾಡುಗಾರಿಕೆಯ ಬಗೆಗೆ ತಿಳಿಯುವ ಕುತೂಹಲ ಯಾವತ್ತೂ ಇದೆ."
ಹವ್ಯಾಸ:-
೧. ಕನ್ನಡ ಕಾವ್ಯಗಳು( ಹಳಗನ್ನಡ ಮತ್ತು ನಡುಗನ್ನಡ) , ಕಾದಂಬರಿ, ಪ್ರಬಂಧಗಳು, ಅಲಂಕಾರ ಶಾಸ್ತ್ರಗ್ರಂಥಗಳು.
೨. ಕಲಾಸಂಬಂಧಿ ಬರೆಹ, ಪ್ರಸಂಗಾವಲೋಕನ, ಕಲಾವಿದರ ಬಗ್ಗೆ ಕಲಾವಲೋಕನ.
೩. ಶಾಸ್ತ್ರೀಯ ಸಂಗೀತ, ಭಾವಗೀತೆ, ಚಿತ್ರಗೀತೆ ಆಲಿಸುವುದು.
೪. ಚಲನಚಿತ್ರ, ನಾಟಕ, ಕ್ರೀಡೆ, ಇತ್ಯಾದಿ
ಯಕ್ಷಗಾನವಲ್ಲದೆ ಕಲೆ, ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಅಧ್ಯಯನ, ಪುಸ್ತಕ ವಿಮರ್ಶೆ ಮಾಡುವುದು ಇವರ ಹವ್ಯಾಸಗಳು.
ಅಲ್ಲದೆ ಉದಯವಾಣಿ, ದಿ. ಹಿಂದು(ಆಂಗ್ಲ ಬರಹ), ಪ್ರಜಾವಾಣಿ, ಕಣಿಪುರ, ಯಕ್ಷದೀಪ, ತುಷಾರ, ರಾಗಸುಧಾ ಇತ್ಯಾದಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಾರೆ. ಹಿಮ್ಮೇಳ ಕಲಾವಿದರ ಪರಿಚಯ ಮಾಲೆ ಸುಘಾತ ಲೇಖನಗಳು, ಪ್ರಸಂಗ ಪರಿಚಯ, ವಿಮರ್ಶಾ ಬರಹಗಳು ಮತ್ತು ಯಕ್ಷಗಾನ ಸಂಬಂಧಿ ಉಪನ್ಯಾಸ, ಭಾಷಣಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ, ವಿಶ್ವವಿದ್ಯಾಲಯ, ಉಡುಪಿ ಕಲಾರಂಗ ನಡೆಸಿದ ಕಮ್ಮಟಗಳಲ್ಲಿ ಕೊಟ್ಟಿದ್ದಾರೆ. ಹಲವು ಸಂಸ್ಮರಣಾ ಗ್ರಂಥಗಳಿಗೆ ಲೇಖನ ಕೊಡುಗೆ ಇವರು ಕೊಟ್ಟಿರುತ್ತಾರೆ.
ಇವರು ಬರೆದಿರುವ ಪುಸ್ತಕಗಳು:-
1.ಅಗರಿ ಮಾರ್ಗ (ಯಕ್ಷಗಾನ ಅಕಾಡಮಿ ಪುಸ್ತಕ ಬಹುಮಾನ ಪುರಸ್ಕೃತ ಪುಸ್ತಕ).
2. ಸುಘಾತ ( ಬಿಡುಗಡೆಗೆ ಸಿದ್ಧವಾಗಿದೆ).
ಇವರಿಗೆ ಸಿಕ್ಕಿರುವ ಪುರಸ್ಕಾರಗಳು:-
◆ ಕರ್ಣಾಟಕ ಯಕ್ಷಗಾನ ಅಕಾಡಮಿ ಪುರಸ್ಕಾರ - 2019 ( ಪುಸ್ತಕ ಬಹುಮಾನ)
◆ "ಯುವ ಯಕ್ಷಕಲಾರಾಧಕ" ಪ್ರಶಸ್ತಿ ಪುರಸ್ಕಾರ ದೊರಕಿದೆ ಯಕ್ಷಕಲಾರಾಧನಾ ಕೇಂದ್ರ ಮಂಗಳೂರು ಸಂಸ್ಥೆ ಯಿಂದ. - 2016.
◆ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆ, ಸುರತ್ಕಲ್ "ಅಗರಿ ಭಾಗವತಾನುಗ್ರಹ" ಪುರಸ್ಕಾರ. - 2019.
ಯಕ್ಷಗಾನದ ಇಂದಿನ ಸ್ಥಿತಿಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಬದಲಾವಣೆ ಆಗುತ್ತಾ ಇದೆ. ಸಂಪ್ರದಾಯ ಉಳಿಯಬೇಕು ಎಂಬ ಕಕ್ಕುಲತೆಯ ಮಧ್ಯೆ ಬದಲಾವಣೆಯೂ ಆಗುತ್ತಿದೆ. ಸತ್ತ್ವ ಇದ್ದದ್ದು ಉಳಿಯುತ್ತೆ. ಇಲ್ಲದ್ದು ಅಳಿಯುತ್ತೆ ಎಂದು ಹೇಳುತ್ತಾರೆ ಉಳಿತ್ತಾಯರು.
ಮತ್ತೆ ಹೇಳುತ್ತಾರೆ:-
"ಬದಲಾವಣೆ ಆಗಬೇಕು. ಆದರೆ, ಸಂಪ್ರದಾಯದ ಪ್ರಭಾವದ ಹಿನ್ನೆಲೆಯಲ್ಲಿ ಬದಲಾವಣೆ ಆಗಬೇಕು. ಉದಾಹರಣೆಗೆ ದೊಂದಿ ಬೆಳಕಿನ ಆಟ. ದೊಂದಿ ಬೆಳಕಿನಲ್ಲಿ ಆಟ ಆಡುವಾಗ ದೊರಕುವ ದೃಶ್ಯ ಪರಿಣಾಮಗಳನ್ನು ಈಗಿನ ಆಧುನಿಕ ವಿದ್ಯುದ್ದೀಪದ ವ್ಯವಸ್ಥೆಯಲ್ಲಿ ಮತ್ತೂ ಆಕರ್ಷಕವಾಗಿ ಅಂದರೆ ಭಾವಪರಿಣಾಮ ರಮಣೀಯತೆಯಿಂದ ಖಂಡಿತಕ್ಕೂ ಮಾಡಬಹುದು. ಹೀಗಿರುತ್ತಾ ನಾವು ಇಂಥಾ ಆಧುನಿಕತೆಯನ್ನು ಬಳಸಿಕೊಳ್ಳುತ್ತ ಕಲೆಯನ್ನು ಎತ್ತರಿಸಬೇಕು ( ಥಿಯೇಟರ್ ಯಕ್ಷ ಪ್ರಸ್ತುತ ಪಡಿಸಿದ ಅಭಿಮನ್ಯು ಕಾಳಗ ಈ ಹಿನ್ನೆಲೆಯಲ್ಲಿ ಗಮನೀಯ). ಹಾಗೆಂದು ಚೆಂಡೆ- ಮದ್ದಳೆಯ ಜಾಗದಲ್ಲಿ ರಿದಂ ಪೇಡ್ ತಂದರೆ ಅದು ಕಲೆಯ ನಾಶ. ಪಾತ್ರಾಭಿವ್ಯಕ್ತಿಯಲ್ಲಿ ಜೀವಸಂಚಾರ - ಒಂದು ಪಾತ್ರ ಮಾತಾಡುತ್ತಿರುವಾಗ ಆ ಪಾತ್ರಕ್ಕೆ ಪೂರಕವಾಗಿ ಮತ್ತೊಂದು ಪಾತ್ರ ತನ್ನ ಆಂಗಿಕದಲ್ಲಿ ಪ್ರತಿಸ್ಪಂದವನ್ನು ತೋರುವುದು ಇತ್ಯಾದಿ. ಬಹುಮುಖ್ಯವಾಗಿ, ಯಕ್ಷಗಾನ ಭರತನ ನಾಟ್ಯಶಾಸ್ತ್ರ ಹೇಳಿದ ಅಂಶಗಳನ್ನು ಅಳವಡಿಸಿದ ಭಾರತದ ಏಕೈಕ ಕಲೆಯಾದುದರಿಂದ ಆ ಶಾಸ್ತ್ರದ ಮಿಕ್ಕ ಎಷ್ಟೋ ಅಂಶಗಳನ್ನು ಇನ್ನಷ್ಟೂ ಸ್ವೀಕರಿಸಬಹುದೇನೋ? ಉದಾಹರಣೆಗೆ ಭರತ ಹೇಳಿದ ನೂರೆಂಟು ಕರಣಗಳನ್ನು ರಸೌಚಿತ್ಯಪೂರ್ಣವಾಗಿ ಅಳವಡಿಸಿಕೊಂಡರೆ ಯಕ್ಷಗಾನ ಮತ್ತೂ ಶ್ರೀಮಂತವಾಗುದರಲ್ಲಿ ಸಂಶಯವಿಲ್ಲ. (ಈ ಕುರಿತು ಖಂಡಿತ ಅಭಿಪ್ರಾಯ ಭೇದಗಳು ಇರಬಹುದು. ಕರಣಗಳು ಯಕ್ಷಗಾನಕ್ಕೆ ಬೇಕು ಅನ್ನುವುದರ ಬಗೆಗೆ ನನಗೆ ಎಳ್ಳಿನಿತೂ ಸಂಶಯವಿಲ್ಲ - ನಮ್ಮ ಭಾರತೀಯ ಪರಂಪರೆಯ ಭರತಾದಿ ಮುನಿಗಳು ನಮಗೆ ದಯಪಾಲಿಸಿದ ಅನರ್ಘ್ಯ ಸೊತ್ತುಗಳಿವು. ಅದಕ್ಕೆ ಅಧಿಕಾರಿಗಳು ನಾವಲ್ಲದೆ ಇನ್ಯಾರು?). ಇವನ್ನು ಅಳವಡಿಸಿದರೆ ಯಕ್ಷಗಾನದ ನೃತ್ತದಲ್ಲಿ ರಸಪೂರ್ಣತೆಯು ಇನ್ನಷ್ಟೂ ಮೆಯ್ವಡೆಯುವುದರಲ್ಲಿ ಸಂಶಯವಿಲ್ಲ."
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಪ್ರೇಕ್ಷಕರಲ್ಲೂ ಎರಡು ಬಗೆ:-
ಕಲಾಪ್ರಮೇಯ ತಿಳಿದವರು ಮತ್ತು ತಿಳಿಯದೇ ಮುಗ್ಧತೆಯಿಂದ ನೋಡುವವರು. ಎರಡನೆಯ ಬಗೆಯವರು ನೋಡುತ್ತಾ ನೋಡುತ್ತಾ ಮಾಗುತ್ತಾರೆ. ಕಲೆ ಬೆಳೆಯಲು ಎರಡನೆಯ ಬಗೆಯ ಮುಗ್ಧತೆಯಿಂದ ಶುದ್ಧ ಕಲಾರಸವನ್ನು ಆಸ್ವಾದಿಸುವ ಸಹೃದಯರೇ ಹೆಚ್ಚು ಕಾರಣರು ಎಂಬುದನ್ನು ಮರೆಯಬಾರದು. ಕಲೆಯ ಓರೆಕೋರೆಗಳನ್ನು ತಿವಿದು ತಿಳಿಹೇಳಲು ಪಂಡಿತ - ಪ್ರೇಕ್ಷಕರೂ, ವಿಮರ್ಶಕರೂ ಖಂಡಿತ ಬೇಕು. ಆದರೆ, ಎಲ್ಲಕ್ಕಿಂತಲೂ ಮಿಗಿಲು ಆವೇಶಗಳಿಲ್ಲದ ಆಸ್ವಾದ. ಭಾರತೀಯ ಕಲಾಸಂವೇದನೆಯಲ್ಲಿ ರಸಾಸ್ವಾದದ ಸಮಯ ಯಾವ ಭಾವವಿಕಾರವೂ ಇರದೆ ಕಲೆಯನ್ನು ಅದಿದ್ದಂತೆ ಶುದ್ಧ ರಸವನ್ನಾಗಿ ನೋಡುವುದಾಗುತ್ತದೆ.
ಯಕ್ಷಗಾನದ ಮುಂದಿನ ಯೋಜನೆಯ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಪುಸ್ತಕ ಬರೆಯುವುದು. Preaching ತರಹ ಅಲ್ಲ. ಉಪದೇಶ ಕೊಡುವುದರಲ್ಲಿ ಇವರಿಗೆ ಆಸಕ್ತಿಯೂ ಇಲ್ಲ ನಂಬಿಕೆಯೂ ಇಲ್ಲ. ಕಂಡದ್ದನ್ನು ಬರೆದಿಡುವುದು ಅಷ್ಟೆ ಇವರ ಜಾಯಮಾನ. ಬಲಿಪ ನಾರಾಯಣ ಭಾಗವತರ ಕುರಿತಾದ ಅಧ್ಯಯನ ಮತ್ತು ಪುಸ್ತಕ ರಚನೆಯಲ್ಲಿ ಸದ್ಯ ತೊಡಗಿದ್ದಾರೆ.ಕೆಲವು ಪ್ರಸಂಗಗಳ ಬಗೆಗೂ ಬರೆಯುತ್ತಿದ್ದಾರೆ. ಒಂದೆರಡು ವಿದ್ಯಾರ್ಥಿಗಳಿಗೆ ಚೆಂಡೆ- ಮದ್ದಳೆ ಅಭ್ಯಾಸವನ್ನೂ ಮಾಡಿಸುತ್ತಿದ್ದು ಅವರನ್ನು ಒಳ್ಳೆಯ ವಾದಕರನ್ನಾಗಿ ರೂಪಿಸಬೇಕೆಂಬ ಸಂಕಲ್ಪವೂ ಇವರಿಗಿದೆ.
19.10.2008 ರಂದು ವಿಭಾರಾಣಿ ಅವರನ್ನು ವಿವಾಹವಾದ ಶ್ರೀಯುತ ಕೃಷ್ಣಪ್ರಕಾಶ ಉಳಿತ್ತಾಯರು ಇಬ್ಬರು ಮಕ್ಕಳಾದ ಚಿನ್ಮಯ ಕೃಷ್ಣ ಮತ್ತು ಪ್ರಣವ ಕೃಷ್ಣ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಹರಿಪಾದಸೇರಿದ ಎಡನೀರು ಶ್ರೀಪಾದರಾದ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಇವರ ಆಶೀರ್ವಾದಪೂರ್ವಕ ಪ್ರೋತ್ಸಾಹ ಮತ್ತು
ತಾನು ಕೆಲಸ ಮಾಡುವ ಸಂಸ್ಥೆ ಕರ್ಣಾಟಕ ಬ್ಯಾಂಕ್ ಕೊಟ್ಟ ಆಶ್ರಯ, ಪ್ರೋತ್ಸಾಹ ಮತ್ತು ಮುಖ್ಯವಾಗಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಯರಾಮ್ ಭಟ್ ಮತ್ತು ಎಂ.ಡಿ. ಮತ್ತು ಸಿ.ಇ.ಓ. ಶ್ರೀ ಮಹಾಬಲೇಶ್ವರ ಎಂ.ಎಸ್ ಇವರ ಕಲೆಯ ಮೇಲಿನ ನಿರ್ವ್ಯಾಜ ಪ್ರೀತಿಯನ್ನು ಉಳಿತ್ತಾಯರು ನೆನೆಯುತ್ತಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ಚಿತ್ರ ಕೃಪೆ:-Anil S Karkera, Prashanth malyadi, P.K.Jain.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment