ಯಕ್ಷ ಸಾಧಕರು ೪

ಯಕ್ಷರಂಗದ ಧಿಗಿಣ ವೀರ ಲೋಕೇಶ್ ಮುಚ್ಚೂರು.

ಕಲಾ ಪ್ರಪಂಚದ ಮುತ್ತಿನ ಕಿರೀಟದಲ್ಲಿ ಹೊಳೆವ ರತ್ನಮಣಿಯಂತೆ ಕಂಗೊಳಿಸುವ ಗಂಡುಕಲೆ ಎಂದೇ ಖ್ಯಾತವಾದ ನಮ್ಮ ಕರಾವಳಿಯ ಯಕ್ಷಗಾನ ಹಲವಾರು ಅದ್ಭುತ ಪ್ರತಿಭೆಗಳನ್ನು ಕಲಾಜಗತ್ತಿಗೆ ಪರಿಚಯಿಸಿದೆ...  ಇಂತಹ ಅದ್ಭುತ ಕಲಾಮಾಣಿಕ್ಯಗಳಲ್ಲಿ ಕೆಲವರು ಪ್ರಜ್ವಲಿಪ ದೀಪದಂತೆ ಜಗತ್ತಿಗೆ ಕಂಡರೆ ಮತ್ತೆ ಕೆಲ ಪ್ರತಿಭೆಗಳು ಎಲೆಮರೆಯ ಕಾಯಿಯಂತೆ ಉಳಿದುಕೊಂಡಿದ್ದಾರೆ. ಅಂತಹ ಅದ್ಭುತ ಪ್ರತಿಭೆಗಳಲ್ಲಿ ಪ್ರಸ್ತುತ ತೆಂಕು ತಿಟ್ಟಿನ ಪ್ರಖ್ಯಾತ ಪುಂಡು ವೇಷಧಾರಿ "ಧಿಗಿಣ ವೀರ"ನೆಂದೇ ಖ್ಯಾತಿ ಪಡೆದ ಲೋಕೇಶ್ ಮುಚ್ಚೂರು.
ಮುಚ್ಚೂರು ಸಮೀಪದ ಕಾನ ಎಂಬಲ್ಲಿ ಶ್ರೀಯುತ ರಾಮಗೌಡ ಹಾಗು ಶ್ರೀಮತಿ ರಾಜೀವಿ ದಂಪತಿಗಳ ಆರು ಮಕ್ಕಳ ತುಂಬು ಸಂಸಾರದಲ್ಲಿ ಹಿರಿಯ ಮಗನಾಗಿ  24-5-1993ರಲ್ಲಿ ಜನಿಸಿ, ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಚ್ಚೂರು ಶಾಲೆಯಲ್ಲಿ ಪೂರೈಸಿ ಆರ್ಥಿಕ ಮುಗ್ಗಟ್ಟಿನ‌ ಪರಿಣಾಮ ಓದನ್ನು ಮುಂದುವರಿಸಲಾಗದೇ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯನ್ನಿತ್ತು ಕಲೆಯ ಮೇಲಿನ ಆಸಕ್ತಿಯಿಂದ ಧರ್ಮಸ್ಥಳ ಯಕ್ಷಗಾನ ಕಲಾ ಕೇಂದ್ರವನ್ನು ಸೇರಿ ಅಲ್ಲಿ ಗುರುಗಳಾದ ದಿವಾಣ ಶಿವಶಂಕರ ಭಟ್ ಇವರಲ್ಲಿ ಪ್ರಾಥಮಿಕ ನಾಟ್ಯಾಭ್ಯಾಸವನ್ನು ಕಲಿತು, 2004ನೇ ಇಸವಿಯಲ್ಲಿ ಕಟೀಲು ಮೇಳವನ್ನು ಸೇರಿದರು.

24-11- 2004 ರಂದು ಕಟೀಲು ಮಾತೆಯ ಸನ್ನಿಧಿಯಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ಇವರು ಆ ಬಳಿಕ ಹಿಂತಿರುಗಿ ನೋಡದೆ ಕಲಾಸಾಧನೆಯ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಏರುತ್ತಾ ಇಂದು ಪ್ರಸಿದ್ಧರ ಪಟ್ಟಿಗೆ ಸೇರಿ ತೆಂಕು ತಿಟ್ಟಿನ ಬಹುಬೇಡಿಕೆಯ ಪುಂಡುವೇಷಧಾರಿಯಾಗಿ ಜನಮನ್ನಣೆ ಗಳಿಸಿರುವುದು ಇವರ ನಿರಂತರ ಶ್ರಮಕ್ಕೆ ಸಿಕ್ಕ  ಗೌರವವಾಗಿದೆ.

ನಿರಂತರ 17 ವರುಷ ಒಂದೇ ಮೇಳದಲ್ಲಿ ಕಟೀಲು ಮಾತೆಯ ಕಲಾ ಸೇವೆಯಲ್ಲಿಯೇ ನಿರತನಾಗಿರುವುದು ಇವರ ವಿಶೇಷ... ಪ್ರಸ್ತುತ ಕಟೀಲು 6ನೇ ಮೇಳದಲ್ಲಿ  ಪುಂಡು ವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ....

ದಿ.ಕುಬಣೂರು ಶ್ರೀಧರ ರಾಯರ ಮಾರ್ಗದರ್ಶನ ಹಾಗೂ ರವಿಶಂಕರ ವಳಕುಂಜ, ವಿಷ್ಣು ಶರ್ಮ ವಾಟೆಪಡ್ಪು, ಸುಬ್ರಾಯ ಹೊಳ್ಳ ಕಾಸರಗೋಡು ಹಾಗೂ ಇನ್ನಿತರ ಹಿರಿಯ ಕಲಾವಿದರ ಒಡನಾಟ ಹಾಗೂ ಮಾರ್ಗದರ್ಶನದಿಂದ ರಂಗನಡೆಯನ್ನು ಕರಗತ ಮಾಡಿಕೊಂಡ ಇವರ ಲಯಬದ್ಧವಾದ ಕುಣಿತ ಹಾಗೂ ರಂಗದ ಮೇಲೆ ರೋಮಾಂಚನಭರಿತ ಪ್ರದರ್ಶನವನ್ನು ನೋಡುವುದೇ ಹಬ್ಬ...
ಕಾಳಿಂಗ ಮರ್ದನದ ಮೋಹಕ ಕೃಷ್ಣನಾಗಿ, ಲಲಿತೋಪಖ್ಯಾನದ ಬಾಲಸರಸ್ವತಿಯಾಗಿ, ಸುದರ್ಶನ ವಿಜಯದ ಸುದರ್ಶನನಾಗಿ, ಚಕ್ರವ್ಯೂಹವನ್ನು  ಪ್ರವೇಶಿಸುವ ಸಿಡಿಲಮರಿ ವೀರ ಅಭಿಮನ್ಯುವಾಗಿ, ಅಲ್ಲದೇ ಬಬ್ರುವಾಹನ, ಯಕ್ಷ, ವೃಷಕೇತು, ಚಂಡ ಮುಂಡ ಮೊದಲಾದ ತನಗೆ ಸಿಕ್ಕ ಯಾವುದೇ ವೇಷಕ್ಕೆ ರಂಗದಲ್ಲಿ ತನ್ನದೇ ಭಾಷ್ಯ ಬರೆದು ಪಾತ್ರಕ್ಕೆ ನ್ಯಾಯವನ್ನೊದಗಿಸಿ ರಂಗದಲ್ಲಿ ಮಿಂಚಿನ ಸಂಚಾರ ಗೈಯುವ ಇವರು ತೆಂಕು ತಿಟ್ಟಿನಲ್ಲಿ ಬಹು ಬೇಡಿಕೆಯ ಕಲಾಮಾಣಿಕ್ಯ...

ರಾತ್ರಿ ಪೂರ್ತಿ ಯಕ್ಷರಂಗದಲ್ಲಿ ಮಿಂಚಿನ ಸಂಚಾರಗೈದು ಕಲಾರಸಿಕರ ನಾಡಿಯರಿತು ಶ್ರಮಿಸುವ ಕಲಾವಿದನಾದರೆ, ಹಗಲಿನಲ್ಲಿ ಇದಕ್ಕೆ ತದ್ವಿರುದ್ಧವಾಗಿ ಮಂಗಳೂರಿನ ಹೋಟೆಲ್ ಮಥುರಾದಲ್ಲಿ ಕೆಲಸ ಮಾಡುತ್ತಾ ಅಲ್ಲಿನ ಜನ ಸಾಮಾನ್ಯರ ಜತೆ ತನ್ನ ಮಾಲೀಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಹಲವಾರು ಸಂಘಸಂಸ್ಥೆಗಳಿಂದ ಗುರುತಿಸಲ್ಪಟ್ಟ ಇವರಿಗೆ ಕುಂದೇಶ್ವರ ಸನ್ಮಾನ, ಶ್ರೀ ರಾಮ ಯುವಕ ಸಂಘ ಮುಚ್ಚೂರು, ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಹೀಗೆ ಅನೇಕ ಸಮ್ಮಾನಗಳು ಸಾಧನೆಯ ಶಿಖರಕ್ಕೆ ಕಲಶಪ್ರಾಯವಾಗಿದೆ.

ದುಬೈ, ಮಸ್ಕತ್ ದೇಶದಲ್ಲೂ ತಮ್ಮ ಕಲಾಪ್ರತಿಭೆಯನ್ನು ತೋರಿಸಿದ ಇವರು ನಮ್ಮ ದೇಶದ ರಾಜಧಾನಿ ದೆಹಲಿ, ಮುಂಬೈ, ಸೂರತ್, ಬೆಂಗಳೂರು, ಪುಣೆ ಮೊದಲಾದ ಮಹಾನಗರಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿದ್ದಾರೆ.

ಶ್ರೀಯುತ ಲೋಕೇಶ್ ಮುಚ್ಚೂರು ಇವರಿಗೆ ನಾವು ನಂಬಿರುವ ಕಲಾಮಾತೆ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು


Comments

  1. Super duper kalavida Lokesh great artist amma sadaa rakshanna madali dear 👍🌹🎈🌷🥰🙏🙏🙏

    ReplyDelete

Post a Comment

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395