ಯಕ್ಷ ಸಾಧಕರು ೭
ಪಂಚರಾಜ್ಯ ಯಕ್ಷಪ್ರಭೃತಿ ಕೆ ಗೋವಿಂದ ಭಟ್ ನಿಡ್ಲೆ.
ತೆಂಕುತಿಟ್ಟು ಯಕ್ಷಗಾನ ರಂಗ ಅನೇಕ ಹಿರಿಯ ಹಾಗೂ ಕಿರಿಯ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಅಂತಹ ಕಲಾವಿದರ ಸಾಲಿನಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದರು ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ಕಲಾವಿದರಾದ ಶ್ರೀಯುತ ಕೆ ಗೋವಿಂದ ಭಟ್ ನಿಡ್ಲೆ.
ಅಕ್ಟೋಬರ್ 2 1958ರಂದು ಈಶ್ವರ ಭಟ್ ಮತ್ತು ಶಂಕರಿ ಅಮ್ಮ ಇವರ ಮಗನಾಗಿ ಜನನ. ಶಾಲಾ ವಿದ್ಯಾಭ್ಯಾಸ ಏಳನೇ ತರಗತಿವರೆಗೆ. ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಇದ್ದ ಕಾರಣ ಧರ್ಮಸ್ಥಳ ಲಲಿತಕಲಾ ಕೇಂದ್ರವನ್ನು ಸೇರಿ ಶ್ರೀ ಕುರಿಯ ವಿಠ್ಠಲ ಶಾಸ್ತ್ರಿ ಹಾಗೂ ಪಡ್ರೆ ಚಂದು ಇವರಿಂದ ಯಕ್ಷಗಾನವನ್ನು ಕಲಿತು ಧರ್ಮಸ್ಥಳ ಲಲಿತಕಲಾ ಕೇಂದ್ರದ ಮೊದಲ ಬ್ಯಾಚ್ ವಿದ್ಯಾರ್ಥಿಯಾಗಿ ಹೊರಬಂದರು. ಲಲಿತಕಲಾ ಕೇಂದ್ರದಲ್ಲಿ , ದಿ. ಸಿದ್ಧಕಟ್ಟೆ ಚನ್ನಪ್ಪ ಶೆಟ್ಟಿ, ಪದ್ಯಾಣ ಗಣಪತಿ ಭಟ್, ಉಬರಡ್ಕ ಉಮೇಶ ಶೆಟ್ಟಿ, ಮುಂಡಾಜೆ ಸದಾಶಿವ ಶೆಟ್ಟಿ, ಮುಂಡಾಜೆ ಬಾಲಕೃಷ್ಣ ಶೆಟ್ಟಿ, ಉದ್ಯಾವರ ಜಯಕುಮಾರ್ ಮುಂತಾದವರು ಇವರ ಯಕ್ಷಶಿಕ್ಷಣದ ಸಹಪಾಠಿಗಳು.
ಮೊದಲು 2 ವರ್ಷ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಮಾಡಿ ಆಮೇಲೆ ಕೊಲ್ಲೂರು, ವೇಣೂರು, ಮುಂಬೈ ಗೀತಾಂಬಿಂಕಾ ಯಕ್ಷಗಾನ ಮಂಡಳಿ, ಸುಬ್ರಹ್ಮಣ್ಯ, ಬಪ್ಪನಾಡು, ಪುತ್ತೂರು, ಕರ್ನಾಟಕ ಮೇಳದಲ್ಲಿ ತಿರುಗಾಟ ಮಾಡಿ ನಂತರ ಸುಮಾರು 28 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಮಾಡಿದ್ದಾರೆ. ಪುಂಡು ವೇಷ, ಕಿರೀಟ ವೇಷ, ನಾಟಕೀಯ ವೇಷ, ಹಾಸ್ಯ, ಬಣ್ಣದ ವೇಷ ಹೀಗೆ ಎಲ್ಲ ತರಹದ ವೇಷವನ್ನು ಮಾಡಿದ್ದಾರೆ. ಪೌರಾಣಿಕ ಪ್ರಸಂಗದ ಎಲ್ಲಾ ವೇಷಗಳೂ ಇವರಿಗೆ ಮೆಚ್ಚುಗೆಯೇ.. ನಾಟಕೀಯ ರಾವಣ, ಹಿರಣ್ಯಾಕ್ಷ, ಇಂದ್ರಜಿತು, ಅರ್ಜುನ, ಕರ್ಣ, ಕೌರವ, ಋತುಪರ್ಣ, ಭೀಮ, ಜಮದಗ್ನಿ, ದಕ್ಷ, ಕಂಸ, ಕೌಂಡ್ಲಿಕ, ಹನುಮಂತ, ಧರ್ಮಸ್ಥಳ ಕ್ಷೇತ್ರಮಹಾತ್ಮೆ ಬ್ಯಾರಿ ಇವರ ಪ್ರಸಿದ್ಧ ಪಾತ್ರಗಳು. ಧರ್ಮಸ್ಥಳ ಮೇಳದ ಅನುಭವವನ್ನು ಇವರು "ಅದೊಂದು ಅದ್ಭುತ ಹಾಗೂ ವಿಶಿಷ್ಟ! ಜನ ಗುರುತಿಸುವುದೇ ಧರ್ಮಸ್ಥಳ ಮೇಳದ ಕಲಾವಿದನೆಂದು" ಹೀಗೆ ಕೊಂಡಾಡುತ್ತಾರೆ.
1980ರ ದಶಕದಲ್ಲಿ ಈಗಿನಂತೆ ಮಳೆಗಾಲದಲ್ಲಿ ಆಟಗಳು ನಡೆಯದ ಕಾರಣ ಕಲಾವಿದರಾದ ಮುಳಿಯಾಲ ಭೀಮ ಭಟ್, ಕುಂಬಳೆ ಸುಂದರ ರಾವ್ ಮುಂತಾದವರು ಮಳೆಗಾಲದಲ್ಲಿ ಕಲಾವಿದರಿಗೆ ಆಸರೆಯಾಗುವ ಉದ್ದೇಶದಿಂದ ಯಕ್ಷಗಾನ ತಂಡ ಕಟ್ಟಿಕೊಂಡು ಹೊರ ಜಿಲ್ಲೆ ಹೊರರಾಜ್ಯಗಳಲ್ಲಿ ಕೆಲವು ಕಾರ್ಯಕ್ರಮ ಮಾಡುತ್ತಿದ್ದರು. ಅವರಿಂದ ಸ್ಪೂರ್ತಿ ಪಡೆದು "ಚೌತಿ ತಿರುಗಾಟ"ದ ಹೆಸರಿನಲ್ಲಿ ಆರಂಭವಾದ ನಿಡ್ಲೆ ತಂಡ, ಮುಂದೆ “ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ" ಎಂಬ ಹೆಸರಿನಲ್ಲಿ ಮಳೆಗಾಲದ ಯಕ್ಷಗಾನ ತಿರುಗಾಟವನ್ನು ನಿಡ್ಲೆಯವರ ಸಮರ್ಥ ಮುಂದಾಳತ್ವದಲ್ಲಿ ಅಚ್ಚುಕಟ್ಟಾದ ಕಾಲಮಿತಿ ಪ್ರದರ್ಶನದೊಂದಿಗೆ ಮುಂದುವರಿಸುತ್ತಾ ಬಂತು. ಮೊದಲ ವರ್ಷ ನಡೆದದ್ದು 8 ಆಟಗಳು, ಬರಬರುತ್ತಾ ಕಲಾಪೋಷಕರ ಹಾಗೂ ಕಲಾವಿದರ ಸಹಕಾರದಿಂದ ಸತತ 100-120 ಕಾರ್ಯಗಳಷ್ಟು ಬೆಳೆಯಿತು. ಮಳೆಗಾಲದಲ್ಲಿ 3 ತಿಂಗಳಿಗೂ ಹೆಚ್ಚು ಕರ್ನಾಟಕ, ಕೇರಳ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಹೀಗೆ ರಾಜ್ಯ- ಹೊರರಾಜ್ಯಗಳಲ್ಲಿ ತಿರುಗಾಟ ಮಾಡಿದ ನಿಡ್ಲೆ ತಂಡ ಕಳೆದ ವರ್ಷ 35ವರ್ಷದ ತಿರುಗಾಟವನ್ನು ಪೂರೈಸಿದೆ.
ನಿಡ್ಲೆವರಿಗೆ ದೇಶಾದ್ಯಂತ ನೂರಾರು ಸನ್ಮಾನ - ಗೌರವಾರ್ಪಣೆ, ಕಲ್ಕೂರ ಪ್ರಶಸ್ತಿ, ರಾಮವಿಠ್ಠಲ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಹೀಗೆ ಅನೇಕ ಸನ್ಮಾನ ಹಾಗೂ ಪ್ರಶಸ್ತಿಗಳು ಸಿಕ್ಕಿದೆ. 43 ವರ್ಷಗಳ ಮೇಳದ ತಿರುಗಾಟದಿಂದ ಸ್ವನಿವೃತ್ತಿ ಹೊಂದಿದ್ದು, ಅತಿಥಿ ಕಲಾವಿದರಾಗಿ ಕಾರ್ಯಕ್ರಮಗಳಿಗೆ ಹೋಗುತ್ತಾರೆ.
“ಪಂಚರಾಜ್ಯ ಯಕ್ಷಪ್ರಭೃತಿ”, “ಯಕ್ಷ ಲೋಕ ವಿಹಾರಿ”, “ಯಕ್ಷಸಾರಥಿ”, “ಯಕ್ಷಗಾನ ನಟಸಾಮ್ರಾಟ್" ಇತ್ಯಾದಿ ಇವರಿಗೆ ಸಿಕ್ಕಿರುವ ಬಿರುದುಗಳು.
ಇವರ ತಮ್ಮ ನಿಡ್ಲೆ ನಾರಾಯಣ ಭಟ್ - ಯಕ್ಷಗಾನ ಕಲಾವಿದರು, ಕಟೀಲು ಹಾಗೂ ಬಪ್ಪನಾಡು ಮೇಳದಲ್ಲಿ ಸುಮಾರು 12 ವರ್ಷ ತಿರುಗಾಟದ ನಂತರ ಮನೆ ಜವಾಬ್ದಾರಿ ಹೊತ್ತು ನಿಡ್ಲೆಯವರ ಮೇಳ ಹಾಗೂ ಮಳೆಗಾಲದ ತಿರುಗಾಟ ಮುಂದುವರೆಯಲು ಬೆನ್ನೆಲುಬಾಗಿ ನಿಂತವರು.
ಶ್ರೀಯುತ ನಿಡ್ಲೆ ಗೋವಿಂದ ಭಟ್,
ಮಡದಿ ವಸಂತಿ, ಮಗ ಈಶ್ವರಚಂದ್ರ ನಿಡ್ಲೆ(MBA) ಬೆಂಗಳೂರಿನಲ್ಲಿ ಇನ್ಫೋಸಿಸ್ ಉದ್ಯೋಗಿ ಹಾಗೂ ಹವ್ಯಾಸಿ ಕಲಾವಿದ, ಮಗಳು ವಿದ್ಯಾಶಂಕರಿ (MSW) ಮದುವೆಯಾಗಿ ಅಹ್ಮದಾಬಾದ್ ನಲ್ಲಿ ಕಂಪೆನಿ HR ಆಗಿ ವೃತ್ತಿ, ಅಳಿಯ- ಗಣೇಶ್ ಮಾರ್ಕಾಂಡೆ (M.Tech) ಮೆಕ್ಯಾನಿಕಲ್ ಇಂಜಿನಿಯರ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು
Comments
Post a Comment