ಯಕ್ಷ ಸಾಧಕರು ೨೩
ತೆಂಕು - ಬಡಗಿನ ಭಾಗವತರು ಶ್ರೀಯುತ ದಿನೇಶ್ ಭಟ್ ಯಲ್ಲಾಪುರ.
ಉತ್ತರ ಕನ್ನಡ ಜಿಲ್ಲೆ ಅನೇಕ ಯಕ್ಷಗಾನ ಕಲಾವಿದರನ್ನು ಯಕ್ಷರಂಗಕ್ಕೆ ನೀಡಿದೆ. ಇಂತಹ ಗಂಡು ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡಲು ಹೊರಟಿರುವ ಕಲಾವಿದರು ಸದ್ಯ ತೆಂಕು ಬಡಗು ಉಭಯತಿಟ್ಟು ಯಕ್ಷಗಾನದಲ್ಲಿ ಮಿಂಚುತ್ತಿರುವ ಭಾಗವತರು ಶ್ರೀಯುತ ದಿನೇಶ್ ಭಟ್ ಯಲ್ಲಾಪುರ.
ದಿನಾಂಕ 24.04.1984 ರಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತೇಲಂಗಾರ ಎಂಬಲ್ಲಿ ಕೃಷಿ ಪ್ರಧಾನವಾದ ಹವ್ಯಕ ಬ್ರಾಹ್ಮಣ ಕುಟುಂಬದ ಸದಾಶಿವ ಭಟ್ ಮತ್ತು ಶಾರದಾ ಭಟ್ ದಂಪತಿಗಳ ಮೊದಲನೇ ಪುತ್ರನಾಗಿ ಜನನ. ಒಂಬತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ. ಯಕ್ಷಗಾನಕ್ಕೆ ನನ್ನ ಪ್ರವೇಶ ಆಕಸ್ಮಿಕವಾಗಿ ಆಯಿತು ಎಂದು ಇವರು ಹೇಳುತ್ತಾರೆ.
ಯಕ್ಷಗಾನ ಶಿಕ್ಷಣ ಪಡೆಯಲು ಮೊದಲು ಕೆರೆಮನೆಯ ಶ್ರೀ ಮಯಕಲಾಕೇಂದ್ರಕ್ಕೆ ಪ್ರಸಿದ್ಧ ಕಲಾವಿದ ಮಲವಳ್ಳಿ ಸದಾಶಿವ ಭಟ್ರ ಮೂಲಕ ಸೇರ್ಪಡೆ. ಕೇಂದ್ರದಲ್ಲಿ ಮೊದಲ ವರ್ಷ ನಗರ ಸುಬ್ರಹ್ಮಣ್ಯ ಆಚಾರ್ ಮತ್ತು ಎರಡನೇ ವರ್ಷ ದಂತಳಿಗೆ ಅನಂತ ಹೆಗಡೆಯವರಲ್ಲಿ ಭಾಗವತಿಕೆ ಮತ್ತು ಸುಬ್ರಹ್ಮಣ್ಯ ಪ್ರಸಾದ ಮುದ್ರಾಡಿಯವರಲ್ಲಿ ನಾಟ್ಯಾಭ್ಯಾಸ. ನಂತರ ಧರ್ಮಸ್ಥಳ ಕೇಂದ್ರದಲ್ಲಿ ದಿವಾಣ ಶಿವಶಂಕರ ಭಟ್ ರಲ್ಲಿ ತೆಂಕಿನ ನಾಟ್ಯಾಭ್ಯಾಸ. ಯಕ್ಷಗಾನ ಛಂದಸ್ಸು ಮತ್ತು ತೆಂಕುತಿಟ್ಟಿನ ಭಾಗವತಿಕೆ ಕುರಿತು ಗಣೇಶ ಕೊಲೆಕಾಡಿಯವರಲ್ಲಿ ಅಭ್ಯಾಸ.
ಕೆರೆಮನೆ ಯಕ್ಷಗಾನ ಕೇಂದ್ರದಲ್ಲಿ ಎರಡು ವರ್ಷ, ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಮೂರು ವರ್ಷ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ಗುಂಡಬಾಳ, ಮಂದಾರ್ತಿ, ಬನ್ನಂಜೆ ಸಂಜೀವ ಸುವರ್ಣ ನೇತೃತ್ವದ ಯಕ್ಷರಂಗ ತಂಡಗಳಲ್ಲಿ ತಿರುಗಾಟ ಮಾಡಿರುವ ಇವರು ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. 12 ವರ್ಷಗಳಿಂದ ಯಕ್ಷಗಾನದಲ್ಲಿ ಸಕ್ರಿಯವಾಗಿದ್ದಾರೆ.
ರತ್ನಾವತಿ ಕಲ್ಯಾಣ ಇವರ ನೆಚ್ಚಿನ ಪ್ರಸಂಗ. ಕೇದಾರಗೌಳ ಇವರ ನೆಚ್ಚಿನ ರಾಗ. ಕೃಷ್ಣ ಪ್ರಕಾಶ ಉಳಿತ್ತಾಯ ಅಚ್ಚುಮೆಚ್ಚಿನ ಮದ್ದಳೆ ವಾದಕರು. ಕುರಿಯ ಗಣಪತಿ ಶಾಸ್ತ್ರಿ ಇವರ ನೆಚ್ಚಿನ ಭಾಗವತರು. ಬಡಗಿನ ಗುಂಡಬಾಳ ಮೇಳದಲ್ಲಿ ಪ್ರಾರಂಭದಲ್ಲಿ ಸಂಗೀತ ಮಾಡಿ ನಂತರ ಬೆಳಗಿನ ಜಾವದ ಪ್ರಸಂಗಗಳಲ್ಲಿ ವೇಷ ಮಾಡುತ್ತಿದ್ದೆ ಹಾಗೂ ತೆಂಕಿನಲ್ಲೂ ಐದಾರು ವೇಷ ಮಾಡಿದ್ದೇನೆ ಎಂದು ಯಲ್ಲಾಪುರ ಅವರು ಹೇಳುತ್ತಾರೆ.
ವಿವಿಧ ಭಾಷೆಗಳನ್ನು ಕಲಿಯುವ ಕುರಿತು ಆಸಕ್ತಿ, ಎಸ್.ಎಲ್ ಭೈರಪ್ಪ, ಶಿವರಾಮ ಕಾರಂತ, ಮುನಶಿ ಪ್ರೇಮಚಂದ, ಶಹಾದತ್ ಹಸನ್ ಮಂಟೋ ಮುಂತಾದವರ ಕಾದಂಬರಿ, ಬರಹಗಳನ್ನು ಓದುವುದು ಇವರ ಹವ್ಯಾಸ.
ತೆಂಕು ಬಡಗು ಎರಡೂ ಪ್ರದೇಶದಲ್ಲಿ ಅನೇಕ ಪ್ರೇಕ್ಷಕರ ಪ್ರೀತಿ, ಪ್ರೋತ್ಸಾಹ ದೊರೆತಿದೆ. ಇದುವೇ ನನ್ನ ಜೀವನದಲ್ಲಿ ಸಿಕ್ಕಿದ ದೊಡ್ಡ ಸನ್ಮಾನ ಎಂದು ಯಲ್ಲಾಪುರ ಅವರು ಹೇಳುತ್ತಾರೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಇವರು ಹೇಳುವುದು ಹೀಗೆ:-
ಕಲೆ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಗುಣವುಳ್ಳ ಸದಭಿರುಚಿಯ ಪ್ರೇಕ್ಷಕರು ಹಿಂದೆಯು ಇದ್ದರು ಇಂದು ಇದ್ದಾರೆ. ಹಾಗಾಗಿ ಕಲಾವಿದ ತನ್ನ ಅಧ್ಯಯನ, ಅವಲೋಕನ, ಆಲೋಚನೆಯಿಂದ ಪ್ರಭುದ್ಧನಾದರೆ ಹಿಂದಿನ ಇಂದಿನ ಎಲ್ಲಾ ಕಾಲದ ಪ್ರೇಕ್ಷಕರು ಒಪ್ಪುವುದು ಸಿದ್ಧ ಎಂದು ಇವರು ಹೇಳುತ್ತಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಕಲೆಯ ಕುರಿತಾದ ಅದಮ್ಯ ಆಸಕ್ತಿಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸಮಾಡಿ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಶ್ರಮಿಸಿದ
ನನ್ನ ಸುತ್ತಮುತ್ತಲಿರುವ ಹಳೆಯ ಹವ್ಯಾಸಿ ಕಲಾವಿದರ ಬಗ್ಗೆ ದಾಖಲೀಕರಣ ಮಾಡುವ ಯೋಜನೆ ಇದೆ ಎಂದು ಇವರು ಹೇಳುತ್ತಾರೆ.
ಶ್ರೀಯುತ ದಿನೇಶ್ ಭಟ್ ಯಲ್ಲಾಪುರ ಇವರು ಸಾವಿತ್ರಿ ಭಟ್ ಇವರನ್ನು ಮದುವೆಯಾಗಿ ಮಗನಾದ ಜಯಂತನ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
Comments
Post a Comment