ಯಕ್ಷ ಸಾಧಕರು ೯೮

ತೆಂಕು ಬಡಗಿನ ಯುವ ಕಲಾವಿದ ಶಬರೀಶ್ ಆಚಾರ್ಯ ಮುನಿಯಾಲು.

ಕರಾವಳಿಯ ಗಂಡು ಕಲೆ ಎಂದೇ ಪ್ರಖ್ಯಾತಿ ಪಡೆದ ಕಲೆ ಯಕ್ಷಗಾನ, ಸಾಧಿಸುವ ಛಲ ಇದ್ದರೆ  ಯಾರಿಗೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ಶಬರೀಶ್ ಆಚಾರ್ಯ ಮುನಿಯಾಲು.

ಎಮ್ ಬಾಲಕೃಷ್ಣ ಆಚಾರ್ಯ ಹಾಗೂ ಮಾಲತಿ ಬಿ ಆಚಾರ್ಯ ಇವರ ಮಗನಾಗಿ ೦೯.೦೫.೨೦೦೧ರಲ್ಲಿ ಜನನ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲಿನಲ್ಲಿ ಮುಗಿಸಿ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಯಕ್ಷಗಾನದ ದತ್ತು ಸ್ವೀಕಾರ ಉಚಿತ ಶಿಕ್ಷಣ ಯೋಜನೆಯಲ್ಲಿ ಪ್ರವೇಶಾತಿ ಪಡೆದು ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪೂರೈಸಿದೆ. ಪ್ರಸ್ತುತ ಉಡುಪಿಯ ತೆಂಕನಿಡಿಯೂರು ಸರಕಾರಿ ಕಾಲೇಜಿನಲ್ಲಿ ಕನ್ನಡ ಎಂ.ಎ ಯನ್ನು ವ್ಯಾಸಂಗ ಮಾಡುತ್ತಿದ್ದಾರೆ.

ಇವರ ಸೋದರಮಾವನಾದ ಕುಂಜಾಲು ಕೇಶವ ಆಚಾರ್ಯ ಇವರು ಯಕ್ಷಗಾನದ ಗುರುಗಳಾಗಿದ್ದು, ನನ್ನ ದೊಡ್ಡಮ್ಮನ ಮಕ್ಕಳು ಮಾವನಲ್ಲಿ ಯಕ್ಷಗಾನವನ್ನು ಅಭ್ಯಾಸ ಮಾಡುತ್ತಿದ್ದುದನ್ನು ಕಂಡು ನನ್ನನ್ನು ಯಕ್ಷಗಾನವನ್ನು ಕಲಿಯುವಂತೆ ನನ್ನ ತಂದೆ-ತಾಯಿ ಪ್ರೇರೇಪಿಸಿದರು. ನಂತರ ಸೋದರಮಾವನಾದ ಕುಂಜಾಲು ಕೇಶವ ಆಚಾರ್ಯ ಹಾಗೂ ದೊಡ್ಡಮ್ಮನ ಮಗ ಸರ್ವೇಶ್ ಆಚಾರ್ಯ ಇವರಲ್ಲಿ ಆರಂಭಿಕ ಹೆಜ್ಜೆಗಳನ್ನು ಅಭ್ಯಾಸ ಮಾಡಿ ಅವರ ಸಂಘದ ಯಕ್ಷಗಾನ ಕಾರ್ಯಕ್ರಮದಲ್ಲಿ ನಾರದ ಪಾತ್ರವನ್ನು ಮಾಡುವುದರ  ಮುಖೇನ ರಂಗ ಪ್ರವೇಶಿಸಿದೆ.
ನಂತರ ಹೆಚ್ಚಿನ ಅಭ್ಯಾಸವನ್ನು ಮುನಿಯಾಲು ಕಾಡುಹೊಳೆ ಜಂಗಮೇಶ್ವರ ಮಠದಲ್ಲಿ ಗುರುಗಳಾದ ಸುಬ್ರಮಣ್ಯ ಪ್ರಸಾದ್ ಮುದ್ರಾಡಿ ಇವರಲ್ಲಿ ಕಲಿತು, ನಂತರದ ದಿನಗಳಲ್ಲಿ ಮಹೇಶ್ ಕುಮಾರ್ ಮಂದಾರ್ತಿ, ಮಂಜುನಾಥ ಕುಲಾಲ್ ಐರೋಡಿ, ದಿವಂಗತ ರಾಘವೇಂದ್ರ ನಾಯಕ್ ಕರಂಬಳ್ಳಿ ಇವರಲ್ಲಿ ಬಡಗು ಯಕ್ಷಗಾನವನ್ನು ಅಭ್ಯಾಸ ಮಾಡಿರುತ್ತಾರೆ.

ಪದವಿ ಪೂರ್ವ ಶಿಕ್ಷಣಕ್ಕೆ ಆಳ್ವಾಸ್ ಪ್ರವೇಶಿಸಿದ ನಂತರ ಅಲ್ಲಿ ಇವರ ತೆಂಕುತಿಟ್ಟು ಯಕ್ಷಗಾನ ಅಭ್ಯಾಸ ಆರಂಭವಾಯಿತು. ದೀವಿತ್ ಎಸ್ ಕೋಟ್ಯಾನ್, ಆದಿತ್ಯ ಅಂಬಲಪಾಡಿ, ಮಯೂರ ನಾಯ್ಗ, ಪ್ರಸಾದ್ ಚೇರ್ಕಾಡಿ, ಶೇಖರ್ ಡಿ ಶೆಟ್ಟಿಗಾರ್ ಗುರುಗಳಾಗಿ, ಮಾರ್ಗದರ್ಶಕರಾಗಿ ಇವರಿಗೆ ತೆಂಕುತಿಟ್ಟು ಅಭ್ಯಾಸ ಮಾಡುವಲ್ಲಿ ನೆರವಾದರು. ಇನ್ನು ಅಲ್ಲಿನ  ಸಹಪಾಠಿಗಳು ಇವರ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ಮಾಡಿದ್ದಾರೆ.

2020 ರಲ್ಲಿ ನಡೆದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಗೋವಿಂದದಾಸ್ ಕಾಲೇಜು ಸುರತ್ಕಲ್ ನಲ್ಲಿ ಇವರ ತರಣಿಸೇನ ಪಾತ್ರಕ್ಕೆ ಸಮಗ್ರ ವೈಯಕ್ತಿಕ ಪ್ರಥಮ ಪ್ರಶಸ್ತಿ ಲಭಿಸಿದೆ. ಇನ್ನುಳಿದು ಅದೇ ವರ್ಷದಲ್ಲಿ  ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮಂಗಳೂರಿನಲ್ಲಿ ಪುಂಡುವೇಷ ಪ್ರಥಮ ಪ್ರಶಸ್ತಿ ಹಾಗೂ ಮಂಗಳೂರು ಎಸ್ ಡಿ ಎಂ ಕಾಲೇಜಿನಲ್ಲಿ ಸಮಗ್ರ ವೈಯಕ್ತಿಕ ಪ್ರಥಮ ಪ್ರಶಸ್ತಿ ಲಭಿಸಿದೆ. 2019 ರಲ್ಲಿ ಗೋವಿಂದ ದಾಸ ಕಾಲೇಜು ಸುರತ್ಕಲ್ ನಲ್ಲಿ ಸಮಗ್ರ ವೈಯಕ್ತಿಕ ದ್ವಿತೀಯ, ಮಂಗಳೂರು ಎಸ್.ಡಿ.ಎಂ. ನಲ್ಲಿ ಸಮಗ್ರ ವೈಯಕ್ತಿಕ ತೃತೀಯ ಪ್ರಶಸ್ತಿ ಲಭಿಸಿದೆ.

ಹಟ್ಟಿಯಂಗಡಿ, ಜಲವಳ್ಳಿ, ಮಡಾಮಕ್ಕಿ ಈ ಮೇಳಗಳಲ್ಲಿ ಹವ್ಯಾಸಿಯಾಗಿ ತಿರುಗಾಟ ಮಾಡಿದ ಅನುಭವವಿದೆ.

ಇವರು ನಿರ್ವಹಿಸಿದ ಪಾತ್ರಗಳೆಂದರೆ ಅಭಿಮನ್ಯು ಕಾಳಗದ ಅಭಿಮನ್ಯು ಪಾತ್ರ ಬಡಗು ಹಾಗೂ ತೆಂಕು ಎರಡರಲ್ಲೂ ಮಾಡಿದ್ದೇನೆ. ವೃಷಸೇನ ಕಾಳಗದ ವೃಷಸೇನ (ಬಡಗು), ವೀರಮಣಿ ಪ್ರಸಂಗದಲ್ಲಿ ರುಕ್ಮಾಂಗ ಹಾಗೂ ಪುಷ್ಕಳ (ಬಡಗು),  ಶ್ವೇತಕುಮಾರ ಚರಿತ್ರೆಯ ತ್ರಿಲೋಕಸುಂದರಿ (ಬಡಗು), ಕೃಷ್ಣ ಲೀಲೆ - ಕಂಸವಧೆಯ ಕೃಷ್ಣನ ಪಾತ್ರ, ತರಣಿಸೇನ ಕಾಳಗದ ತರಣಿಸೇನ (ತೆಂಕು), ಸುದರ್ಶನ ವಿಜಯದ ಸುದರ್ಶನ (ತೆಂಕು), ಪಾಂಚಜನ್ಯ ಪ್ರಸಂಗದ ಕೃಷ್ಣ (ತೆಂಕು), ಇತ್ಯಾದಿ ಪಾತ್ರಗಳನ್ನು ನಿಭಾಯಿಸಿರುತ್ತಾರೆ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ :-
ಯಾವುದೇ ಪಾತ್ರವನ್ನು ಮಾಡುವುದಿದ್ದರೂ ಮುಂಚಿತವಾಗಿ ಗುರುಗಳಲ್ಲಿ ಹಾಗೂ ನನ್ನ ಇದಿರಾಗಿ ಬರುವ ಪಾತ್ರಧಾರಿಗಳೊಡನೆ  ಪಾತ್ರದ ಕುರಿತಾಗಿ ಮಾತನಾಡಿ ನಂತರ ರಂಗಪ್ರವೇಶ ಮಾಡುತ್ತೇನೆ. ಪಾತ್ರಕ್ಕೆ ಬೇಕಾಗುವ ಕೆಲ ಅಗತ್ಯ ವಿಷಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ವೀಕ್ಷಿಸಿ ಅದನ್ನು ನನಗೆ ಬೇಕಾಗುವಂತೆ ಅಳವಡಿಸಿಕೊಳ್ಳುತ್ತೇನೆ.

ನನ್ನ ನೆಚ್ಚಿನ ಪ್ರಸಂಗಗಳೆಂದರೆ ಚಂದ್ರಹಾಸ ಚರಿತ್ರೆ, ಶ್ರೀಕೃಷ್ಣ ತುಲಾಭಾರ, ರುಕ್ಮಿಣಿ ಸ್ವಯಂವರ, ಸುಧನ್ವ ಕಾಳಗ, ಶಿವ ಪಂಚಾಕ್ಷರಿ ಮಹಿಮೆ ಇತ್ಯಾದಿ.

ಯಕ್ಷಗಾನ ಪ್ರಸಂಗಗಳನ್ನು ನೋಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸ.

ಯಕ್ಷಗಾನದ ಇಂದಿನಿ ಸ್ಥಿತಿ ಗತಿ ಹಾಗೂ ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ಈಗಿನ ಕಾಲದಲ್ಲಿ ಬಹಳಷ್ಟು ಮುಂದುವರೆದಿದೆ. ಕರ್ನಾಟಕದಲ್ಲಿ ಕನ್ನಡವನ್ನು ಉಳಿಸುವಲ್ಲಿ ಯಕ್ಷಗಾನವು ಪ್ರಮುಖ ಪಾತ್ರ ವಹಿಸುತ್ತದೆ. ಹಲವಾರು ಕಲಾಪೋಷಕರು, ಯಕ್ಷಗಾನ ಅಭಿಮಾನಿಗಳು ಅಲ್ಲಲ್ಲಿ ಕಾರ್ಯಕ್ರಮವನ್ನು ಸಂಯೋಜಿಸಲು ಶ್ರಮ ಪಡುತ್ತಿರುವುದು ಸಂತಸದ ಸಂಗತಿ. ಅಂತಹ ಕಲಾಭಿಮಾನಿಗಳ ಶ್ರಮಕ್ಕೆ ಎಲ್ಲರೂ ಕೈ ಜೋಡಿಸಿ ಯಕ್ಷಗಾನ ಕಲೆಯನ್ನು ಬೆಳೆಸುವಲ್ಲಿ ಮುಂದಾಗಬೇಕು ಎನ್ನುವುದು ಇವರ ಅಭಿಪ್ರಾಯ.

ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395