ಯಕ್ಷ ಸಾಧಕರು ೪೨

ಯಕ್ಷ ಮಾಣಿಕ್ಯ ಶ್ರೀಯುತ ರಾಕೇಶ್ ರೈ ಅಡ್ಕ.

ಶ್ರೀ ರಾಕೇಶ್ ರೈ ಅಡ್ಕ ಇವರು ತಾ-6-11-1981 ರಲ್ಲಿ ಕೃಷ್ಣ ರೈ ಪಾರ್ವತಿ ದಂಪತಿಗಳಿಗೆ ತೃತೀಯ ಪುತ್ರನಾಗಿ ಮಂಗಳೂರು ತಾಲೂಕಿನ ಕೋಟೆಕಾರು ಗ್ರಾಮದ ಅಡ್ಕದಲ್ಲಿ ಜನಿಸಿದರು.
ಇವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆಕಾರು, ಪ್ರೌಢಶಿಕ್ಷಣವನ್ನು ಸೋಮೇಶ್ವರದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಪಡೆದು, ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ತನ್ನ ಬಿ.ಕಾಂ. ಪದವಿಯನ್ನು ಪೂರೈಸಿದರು.

ಬಾಲ್ಯದಲ್ಲಿಯೇ ಇವರಿಗೆ ಯಕ್ಷಗಾನವೆಂದರೆ ಬಹಳ ಅಚ್ಚುಮೆಚ್ಚು. ಅದೃಷ್ಟವೆಂಬಂತೆ ತನ್ನ ಪ್ರಾಥಮಿಕ ಶಿಕ್ಷಣದ ಬಳಿಕ ಪ್ರೌಢಶಾಲೆಯಲ್ಲಿ ಜೀವಶಾಸ್ತ್ರದ ಅಧ್ಯಾಪಕರಾದಂತಹ ಸರಿ ಸುಮಾರು 27 ವರ್ಷಗಳ ಹಿಂದೆ ಯಕ್ಷಗಾನ ರಂಗದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಪ್ರಸಿದ್ಧ ವೇಷಧಾರಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಂತಹ ದಿ.ಎಸ್. ಜಲಂಧರ್ ರೈ ಯವರು ಮೊದಲ ಯಕ್ಷಗುರುಗಳಾಗಿ ರಾಕೇಶ್ ರೈ ಅಡ್ಕರವರ ಪಾಲಿಗೆ ಯಕ್ಷದೇವರಾಗಿ ಒಲಿದ ಸೌಭಾಗ್ಯ. ಹೀಗೆ ಶಾಲಾ ದಿನಗಳಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆಗಳನ್ನು ಶಾಲೆಯ ಯಕ್ಷಗಾನ ತರಗತಿಯಲ್ಲಿ ಜಲಂಧರ ರೈ ಯವರಿಂದ ಅಭ್ಯಾಸ ಮಾಡಿ ಶಾಲಾ ವಾರ್ಷಿಕೋತ್ಸವದಲ್ಲಿ ದಿ.ಉಪ್ಪಳ ಕೃಷ್ಣ ಮಾಸ್ಟರ್ರವರ ದಕ್ಷ ನಿರ್ದೇಶನದಲ್ಲಿ ‌ಪ್ರಪ್ರಥಮವಾಗಿ ಅನಿರುಧ್ಧನ ಪಾತ್ರಕ್ಕೆ ವೇಷ ತೊಟ್ಟು ಗೆಜ್ಜೆ ಕಟ್ಟಿ ರಂಗಪ್ರವೇಶವಾಯಿತು. ಶಾಲಾ ಕಾರ್ಯಕ್ರಮದಲ್ಲಿ ಅಲ್ಲದೆ ಜಲಂಧರ್ ರೈ ಯವರಿಗೆ ಯಾವ ಕಡೆಗಳಲ್ಲಿ ಯಕ್ಷಗಾನ ಕಾರ್ಯಕ್ರಮ ಇರುತ್ತಿತ್ತೋ ಆ ವೇದಿಕೆಗಳಲ್ಲಿ ಕೂಡಾ ರಾಕೇಶ್ ರೈ ಯವರು ಬಾಲಕಲಾವಿದರಾಗಿ ಭಾಗವಹಿಸುತ್ತಿದ್ದರು. ಹೀಗೆ ಗುರುಗಳಾದ ಜಲಂಧರ ರೈ ಯವರ ಜೊತೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಯುವಕ ಸಂಘ ಕಿನ್ಯ, ಯಕ್ಷ ಭಾರತಿ ಪುತ್ತೂರು ಈ ತಂಡಗಳ ಪ್ರದರ್ಶನಗಳಲ್ಲಿ ದೂರದ ಊರು ವಿಟ್ಲ, ಅಳಿಕೆಗಳಲ್ಲಿ ಬಾಲಕಲಾವಿದರಾಗಿ ಭಾಗವಹಿಸುತ್ತಿದ್ದರು. ಶಾಲಾ ದಿನಗಳಲ್ಲಿ ಕಿನ್ಯ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ತುಳು ಪ್ರಸಂಗ "ಕೋಟಿ ಚೆನ್ನಯ" ದ ಪೆರುಮಾಳ ಬಲ್ಲಾಳರಾಗಿ ಹಿರಿಯ ಕಲಾವಿದರಾದ ಶ್ರೀ ಕುಂಬ್ಳೆ ಸುಂದರ್ ರಾವ್ ರವರ ಜೊತೆಯಲ್ಲಿ ಬಾಲ ಕೋಟಿ- ಚೆನ್ನಯರಾಗಿ ವೇದಿಕೆಯಲ್ಲಿ ನಾನು ಬಾಲ ಕೋಟಿಯಾಗಿ ರಾಕೇಶ್ ರೈ ಯವರು ಬಾಲ ಚೆನ್ನಯನ ವೇಷದೊಂದಿಗೆ ನಾವಿಬ್ಬರೂ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ಕ್ಷಣ, ಚೆಂಡಾಡಿದ ದೃಶ್ಯವಂತೂ ಮರೆಯಲಾಗದ ಸಂದರ್ಭ. ನಮ್ಮ ಶಾಲಾ ದಿನಗಳಲ್ಲಿಂದ ಈ ವರೆಗೂ ಅಜರಾಮರವಾದ ಮಿತ್ರತ್ವಕ್ಕೆ ಯಕ್ಷಗಾನವೇ ಸಾಕ್ಷಿಯಾಯಿತು.

ರಾಕೇಶ್ ರೈ ಯವರು ಪ್ರೌಢ ಶಿಕ್ಷಣದ ಬಳಿಕ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ ಸೋಮೇಶ್ವರ ಉಚ್ಚಿಲ ಇಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕೇಂದ್ರದ ಯಕ್ಷ ಗುರುಗಳಾದ ಶ್ರೀ ಸುರೇಶ್ ರಾವ್ ಕೋಟೆಕಾರ್ ಹಾಗೂ ಕಿಶೋರ್. ಡಿ. ಗಟ್ಟಿ ಯವರಿಂದ ಹೆಚ್ಚಿನ ಅಭ್ಯಾಸವನ್ನು ಕೂಡಾ ಮಾಡಿ, ಕಾಲೇಜು ದಿನಗಳಲ್ಲಿ ಬೆಸೆಂಟ್ ಸಂಧ್ಯಾ ಕಾಲೇಜಿನ ಯಕ್ಷಗಾನ ತಂಡದಲ್ಲಿ ಪುಂಡುವೇಷಧಾರಿಯಾಗಿ ಕಾಣಿಸಿಕೊಂಡಂತಹ ಶ್ರೀಯುತ ಅಡ್ಕರವರು ಶಿವರಾಮ್ ಪಣಂಬೂರ್ ರವರ ನಿರ್ದೇಶನದೊಂದಿಗೆ ಅಂತರ್ ಕಾಲೇಜು ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ತಂಡ ಪ್ರಶಸ್ತಿ ಹಾಗೂ ವೈಯುಕ್ತಿಕ ಪ್ರಶಸ್ತಿಗಳನ್ನು ಕೂಡಾ ಪಡೆದಿರುತ್ತಾರೆ. "ದಿ.ಜಲಂಧರ ರೈ ಶಿಷ್ಯ ವೃಂದ" ಎಂಬ ತಂಡವನ್ನು ಕಾರ್ಕಳ ತಾಲೂಕಿನ ಸೂಡದಲ್ಲಿ ಜರಗಿದ ಯಕ್ಷೋತ್ಸವದಲ್ಲಿ ಪ್ರತಿನಿಧಿಸಿ ತಂಡ ಪ್ರಶಸ್ತಿಯನ್ನು ಪಡೆಯಲು ಮಾಡಿದ ಸಾಧನೆ ಅಧ್ಬುತ.
ದೇರಳೆಕಟ್ಟೆ ಸಮೀಪದ ಮಂಜನಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೂಡಾ ಯಕ್ಷಗಾನ ತರಬೇತಿ ಪ್ರಾರಂಭಿಸಿ ಅಲ್ಲಿಯ ತಂಡದ ಮಕ್ಕಳಿಂದ  ಯಕ್ಷಗಾನ ಪ್ರದರ್ಶನವನ್ನೂ ನೀಡುವಂತಹ ಪ್ರಯತ್ನವನ್ನು ಮಾಡಿದ ಎಳೆಯ ನಿರ್ದೇಶಕರಾಗಿದ್ದರು. ಕಾಲೇಜು ದಿನಗಳ ಬಳಿಕ ತನ್ನ ವೃತ್ತಿ ಜೀವನವನ್ನು west coast Agencies ಎಂಬ ಮಂಗಳೂರಿನ ಸಂಸ್ಥೆಯಲ್ಲಿ ಹಣಕಾಸು ವಿಭಾಗದಲ್ಲಿ ಸೇವೆಯನ್ನು ಸಲ್ಲಿಸುವುದರೊಂದಿಗೆ ಪ್ರಾರಂಭಿಸಿದರು.
ಬಿಡುವಿನ ವೇಳೆಯಲ್ಲಿ ಹವ್ಯಾಸಿ ಕಲಾವಿದರಾಗಿ ಯಕ್ಷಗಾನ ರಂಗದಲ್ಲಿ ಕಾಣುವುದನ್ನು ಮುಂದುವರಿಸಿದ ಇವರು ಹವ್ಯಾಸಿ ಬಳಗ ಕದ್ರಿ ಹಾಗೂ ಇತರ ಯಕ್ಷಗಾನ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸತೊಡಗಿದರು. ಆ ಸಮಯದಲ್ಲಿ ಕಾಲೇಜು ತಂಡಗಳಿಗೆ ಯಕ್ಷ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಇವರು ಸತತ ಒಂದೇ ವರ್ಷದಲ್ಲಿ ಮೂರು ಪ್ರತ್ಯೇಕ ಕಾಲೇಜು ತಂಡಗಳಿಗೆ  ನಿರ್ದೇಶಕರಾಗಿ ಭಾಗಿಯಾಗಿ ದಕ್ಷ ನಿರ್ದೇಶಕನೆಂಬ ಹೊಗಳಿಕೆ ಯನ್ನು ಪಡೆದವರು.

ಹಿರಿಯ ಕಲಾವಿದರಾದ ಸೂರಿಕುಮೇರು ಗೋವಿಂದ ಭಟ್ ರವರಲ್ಲಿ ಕೂಡಾ ಯಕ್ಷಗಾನದ ಬಗೆಗಿನ ವಿವಿಧ ಆಯಾಮಗಳನ್ನು ಎಳೆಎಳೆಯಾಗಿ ಅಭ್ಯಾಸವನ್ನು ಮಾಡಿದ ಇವರು ಹಿರಿಯ ಸಾಹಿತಿ ಪ್ರೊ.ಅಮೃತ ಸೋಮೇಶ್ವರರವರಿಂದಲೂ ಹೆಚ್ಚಿನ ಯಕ್ಷಜ್ಞಾನವನ್ನು ಸ್ವೀಕರಿಸಿರುವರು. 2000ನೇ ಇಸವಿಯಲ್ಲಿ ಇಂಡಿಯನ್ ಟೂರಿಸಂ ಆ್ಯಂಡ್ ಕಲ್ಚರಲ್ ಡಿಪಾರ್ಟ್ ಮೆಂಟ್ ನ ಸ್ಕಾಲರ್ಶಿಪ್ ಎವಾರ್ಡನ್ನು ನವದೆಹಲಿಯಲ್ಲಿ ಪಡೆದಿರುವರು. ಶ್ರೀಯುತ ರಾಕೇಶ್ ರೈ ಯವರು ತನ್ನ ಬದುಕಿನ ವೃತ್ತಿ ಜೀವನದಲ್ಲಿ ವಿಶಿಷ್ಟವಾದ ಕನಸನ್ನು ಹೊತ್ತುಕೊಂಡು ದೂರದ ಮುಂಬಯಿ ನಗರಿಗೆ ಕಾಲಿಟ್ಟರು, ತನ್ನ ಹಿರಿಯ ಸಹೋದರಿಯ ಆಶ್ರಯದಲ್ಲಿ ಮುಂಬಯಿಯಲ್ಲಿ ಒಂದು ಕಂಪನಿಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು. ಆ ಸಂದರ್ಭದಲ್ಲಿಯೂ ಅವರಿಗೆ ಯಕ್ಷಗಾನವನ್ನು ಮನದಲ್ಲಿ ನೆನೆಯುವಾಗ ಅದ್ಯಾಕೋ ಆಶೆ ಪಟ್ಟು ಮುಂಬಯಿ ನಗರದಲ್ಲಿ ಯಕ್ಷಗಾನ ಕೇಂದ್ರವನ್ನು ಅರಸಿಕೊಂಡು ವೇಷಮಾಡಿದ ಒಬ್ಬ ಕಲಾವಿದ.
ಕಾರಣವೊಂದೇ ಎಂಬಂತೆ ಶೀಘ್ರವೇ ಹುಟ್ಟೂರಿಗೆ ಮರಳಿದರು, ಹುಟ್ಟೂರಿನ ಯಕ್ಷಗಾನದ ಕಂಪು ಇವರಿಗೆ ಮುಂಬಯಿಯಲ್ಲಿ ಉದ್ಯೋಗದಲ್ಲಿ ಮುಂದುವರಿಯಲು ಅಡ್ಡಿಯಾಯಿತು. ತಾಯ್ನಾಡಿಗೆ ಮರಳಿದ ಇವರು Hindusthan leaver limited  ಮಂಗಳೂರು ಇಲ್ಲಿ ಉದ್ಯೋಗಿಯಾಗಿ ಸೇವೆಯನ್ನು ಮಾಡತೊಡಗಿದರು. ಇಲ್ಲಿಯೂ ಬಿಡುವಿನ ಸಮಯದಲ್ಲಿ ಹವ್ಯಾಸಿ ಕಲಾವಿದರಾಗಿ ಸೇವೆ ಪ್ರಾರಂಭಿಸಿದ ಇವರು ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ನವದೆಹಲಿ ಮುಂತಾದ ಕಡೆಗಳಲ್ಲಿ ತನ್ನ ವೇಷಗಳಿಂದ ಮೇಳೈಸಿ ಯಕ್ಷರಂಗದದಲ್ಲಿ ಬಹು ಬೇಡಿಕೆಯ ಕಲಾವಿದರಾದರು. ಅಪಾರ ಅಭಿಮಾನಿ ವರ್ಗಗಳನ್ನು ಹೊಂದಿರುವ ಇವರು ಮುಂದೆ 4 ವರ್ಷ ಬಪ್ಪನಾಡು ಮೇಳ, ತದ ನಂತರ 4 ವರ್ಷ ಕಟೀಲು ಮೇಳಗಳಲ್ಲಿ ಸೇವೆ ಸಲ್ಲಿಸಿ ಯಕ್ಷಗಾನ ರಂಗ ಕಂಡ ಎಳೆಯ ಪ್ರಾಯದ ಅಧ್ಬುತ ಕಲಾವಿದನೆಂದರೆ ತಪ್ಪಾಗಲಾರದು. 

 ಶ್ರೀಯುತ ರಾಕೇಶ್ ರೈ ಅಡ್ಕ ರವರು ಲಂಡನ್, ಮಸ್ಕತ್, ದುಬಾಯಿ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಯಕ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರದರ್ಶನವನ್ನೂ ನೀಡಿ ಯಕ್ಷರಂಗದ ಹಿರಿಯ ಕಲಾವಿದರಿಂದ ಶಹಬ್ಬಾಸ್ ಗಿರಿಯನ್ನು ಪಡೆದಿರುವರು. ಶ್ರೀಯುತ ರಾಕೇಶ್ ರೈ ಅಡ್ಕರವರು ಯಕ್ಷ ಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷರಾದಂತಹ ಶ್ರೀ ಪಟ್ಲ ಸತೀಶ್ ಶೆಟ್ಟಿಯವರೊಂದಿಗೆ ಕಳೆದ 20 ವರ್ಷಗಳ ಆತ್ಮೀಯತೆಯ ಒಡನಾಟ ಹೊಂದಿದವರಾಗಿದ್ದು, ಪಟ್ಲರವರಿಂದ ತನಗೆ ದೊರೆತ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತಿರುತ್ತಾರೆ. 

ಪ್ರಸ್ತುತ ಬಪ್ಪನಾಡು ಹಾಗೂ ಪಾವಂಜೆ ಮೇಳದಲ್ಲಿ ಸೇವೆ ಸಲ್ಲಿಸುತ್ತಾ ಇರುವ ಇವರು ಅನೇಕ ತುಳು ಪ್ರಸಂಗದಲ್ಲಿ ವಿವಿಧ ಪಾತ್ರದಲ್ಲಿ ಮಿಂಚುತ್ತಿದ್ದು, ಯಕ್ಷಗಾನ ರಂಗದಲ್ಲಿ ವಿಶೇಷ ಆಕರ್ಷಣೀಯ ಕಾರ್ಯಕ್ರಮಗಳಲ್ಲೊಂದಾದ "ಯಕ್ಷನಾಟ್ಯ ವೈಭವ" ದಲ್ಲೂ ವಿವಿಧ ಭಂಗಿಯ ನಿರರ್ಗಳ ದಣಿವರಿಯದ ಪುಂಡುವೇಷ ನಾಟ್ಯದಲ್ಲಿ  ಆಕರ್ಷಣೀಯವಾಗಿ, ಬಹುಬೇಡಿಕೆಯ ಕಲಾವಿದರೆನಿಸಿಕೊಂಡು ಬಿಡುವಿಲ್ಲದ ಕಲಾವಿದರಾಗಿದ್ದಾರೆ. ಇವರು ಯಕ್ಷಗಾನ ರಂಗಕ್ಕೆ ನೀಡುವ ಸೇವೆ ನಿಜಕ್ಕೂ ಆಶ್ಚರ್ಯಕರ.
ನಿತ್ಯವೂ ಬಿಡುವಿಲ್ಲದ ವೇಷಧಾರಿಯಾದರೂ, ನಿತ್ಯವೂ ಬಿಡುವಿಲ್ಲದ ಶಿಸ್ತಿನ "ಯಕ್ಷ ಶಿಕ್ಷಕ" ಶ್ರೀಯುತ ರೈ ಯವರು ವಾರದಲ್ಲಿ ಸರಿಸುಮಾರು 16 ಕಡೆಗಳಲ್ಲಿ ಅದೂ ವಾರದುದ್ದಕ್ಕೂ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಸಂಚರಿಸಿ ಯಕ್ಷ ಶಿಕ್ಷಣವನ್ನು ಭೋದಿಸುವ ತೆಂಕುತಿಟ್ಟು ಯಕ್ಷ ರಂಗ ಕಂಡ ಒಂದು ಅಪರೂಪದ ಯಕ್ಷ ಶಿಕ್ಷಕರಾಗಿರುವರು. "ಯಕ್ಷ ಶಿಕ್ಷಣ"ವೇ ಇವರ ಮೂಲಮಂತ್ರ.

ನಾಟ್ಯವನ್ನು ಮಾತ್ರ ಧಾರೆಯೆರೆಯುವುದಲ್ಲದೆ ವೇಷಭೂಷಣವನ್ನು ಕಟ್ಟುವ ಬಗೆ, ಅರ್ಥಗಾರಿಕೆ, ಮುಖವರ್ಣಿಕೆಯ ತರಗತಿಗಳನ್ನು ಕೂಡಾ ನಡೆಸುತ್ತಾ ಬಂದು ಶಿಷ್ಯರಿಗೆ ಉತ್ತಮ ಗುಣಮಟ್ಟದ ಯಕ್ಷಶಿಕ್ಷಣವನ್ನು ಬೋಧಿಸುವ ಅಪರೂಪದ ಗುರುಗಳಾಗಿರುವರು. ಶ್ರೀಯುತರೇ ಸಂಸ್ಥಾಪಿಸಿ ಕಳೆದ 11 ವರುಷಗಳಿಂದ ಹಲವಾರು ಕಡೆಗಳಲ್ಲಿ ಗುಣಮಟ್ಟ ಹಿಮ್ಮೇಳದೊಂದಿಗೆ ಯಶಸ್ವಿ ಪ್ರದರ್ಶನವನ್ನು ನೀಡುತ್ತಾ ಬಂದಿರುವ 
"ಸನಾತನ ಯಕ್ಷಾಲಯ(ರಿ.)ಮಂಗಳೂರು"
ಇದರ ಇವರ ಯಕ್ಷ ವಿದ್ಯಾರ್ಥಿಗಳ ಪ್ರತಿಭೆಗಳು ಅಪಾರ. ಈ ಸಂಸ್ಥೆಯ 7 ನೇ ವಾರ್ಷಿಕೋತ್ಸವವು ಶ್ರೀ ಕ್ಷೇತ್ರ ಪಾವಂಜೆಯಲ್ಲಿ ಬಹಳ ಅದ್ದೂರಿಯಾಗಿ 
ಅಭಿನವ ವಾಲ್ಮೀಕಿ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಇವರು ವಿರಚಿತ "ಮಾನಿಷಾದ" ಪ್ರಸಂಗವು ಸರ್ವರ ಪ್ರಶಂಸೆಗೆ ಪಾತ್ರವಾದುದಲ್ಲದೆ ಸ್ವತಃ ಹಿರಿಯರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರೇ ಈ ಪ್ರದರ್ಶನವನ್ನು ಕಂಡು ಸಂತೋಷ ಪಟ್ಟದ್ದನ್ನು ಇಲ್ಲಿ ಸ್ಮರಿಸಬಹುದು. ಬಳಿಕ 8 ನೇ ವಾರ್ಷಿಕೋತ್ಸವವು ಕೂಡಾ ಬಲು ಕುತೂಹಲಕಾರಿಯಾಗಿ ಪಾವಂಜೆಯ ಶ್ರೀ ದೇವರ ಸಾನಿಧ್ಯದಲ್ಲಿ ದೇವರ ಕೃಪೆಯಿಂದ 
"ಧರ್ಮಕ್ಷೇತ್ರೆ-ಕುರುಕ್ಷೇತ್ರೆ" ಎಂಬ ಪ್ರಸಂಗವು103 ವೇಷಗಳು ರಂಗದಲ್ಲಿ ಸಾಕ್ಷಾತ್ಕರಿಸುವ ಮೂಲಕ ಅಡ್ಕರವರ ನಿರ್ದೇಶನವು ಮಹಾಭಾರತವನ್ನೇ ಮರು ಸೃಷ್ಟಿಸಿದ ಹಾಗೆ ಭಾಸವಾಗಿದೆ. ಅದೇ ರೀತಿ ಸಂಸ್ಥೆಯ 9ನೇ ವಾರ್ಷಿಕೋತ್ಸವವು "ಏತದ್ದಿ ರಾಮಾಯಣಂ"
ಎಂಬ ಪುರಾಣ ಪ್ರಸಂಗದಲ್ಲಿ ಸರಿ ಸುಮಾರು 70 ಶಿಷ್ಯರ ಪಾತ್ರದೊಂದಿಗೆ ಯಶಸ್ವಿಯಾಗಿ ಮಂಗಳೂರು ಪುರಭವನದಲ್ಲಿ ಪಾವನವಾಯಿತು. ಸಂಸ್ಥೆಯ ದಶಮಾನೋತ್ಸವವು 2019 ಜುಲೈ ತಿಂಗಳಿನಲ್ಲಿ ಮಂಗಳೂರು ಪುರಭವನದಲ್ಲಿ ವೈಶಿಷ್ಟ್ಯಪೂರ್ಣವಾಗಿ ಗಣ್ಯವ್ಯಕ್ತಿಗಳ ಉಪಸ್ಥಿತಿಯೊಂದಿಗಿನ ಸಂಜೆ ಸಭಾ ಕಾರ್ಯಕ್ರಮ ಹಾಗೂ 40 ನವ ಶಿಷ್ಯರ ರಂಗಪ್ರವೇಶ "ಮಾತ್ರಿಕಾ ಮಹಿಮೆ" ಹಾಗೂ 180 ಶಿಷ್ಯರ ವೇಷದೊಂದಿಗೆ ಅಬ್ಬರಿಸಿದ ಪ್ರಸಂಗ 
"ದಶಾವತಾರ"ದೊಂದಿಗೆ ಬೆಳಿಗ್ಗಿನವರೆಗೆ ಸಂಪನ್ನಗೊಂಡಿತು. ಶ್ರೀಯುತ ರಾಕೇಶ್ ರೈ ಯವರ ಶಿಷ್ಯಗಢಣವು ದಶಮಾನೋತ್ಸವದ ಭವ್ಯ ವೇದಿಕೆಯಲ್ಲಿ ಗೌರವಯುತವಾಗಿ ಸನ್ಮಾನಿಸಿದ ಬಗೆ ನಿಜಕ್ಕೂ ಅವಿಸ್ಮರಣೀಯ. ಗುರುಗಳಾದ ರೈ ಯವರಿಗೆ ಆ ಕ್ಷಣ ಶಿಷ್ಯರಿಂದ ಆಶ್ಚರ್ಯವನ್ನುಂಟು ಮಾಡಿದೆ.

ಕರೋನಾ ಸಂಕಷ್ಟವು ಯಕ್ಷಗಾನ ರಂಗವನ್ನು ಕೂಡಾ ಆವರಿಸಿತ್ತಾದರೂ, ಶ್ರೀಯುತ ರಾಕೇಶ್ ರೈ ಯವರು ಹತ್ತು ಹಲವು ಕಡೆಗಳಲ್ಲಿ ನಡೆಸುತ್ತಿರುವ ತರಗತಿಗಳನ್ನು online ತರಗತಿಗಳಿಗೆ ಮಾರ್ಪಾಡು ಮಾಡಿ ತರಗತಿಯನ್ನು ಮುಂದುವರಿಸುತ್ತಿದ್ದಾರೆ. ಅದೇ ರೀತಿ ಕರೋನಾದಿಂದಾಗಿ ತನ್ನ ಸಂಸ್ಥೆಯ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಕೂಡಾ ಸರಕಾರದ ನಿಯಮಕ್ಕನುಗುಣವಾಗಿ ಪ್ರೇಕ್ಷಕರಿಲ್ಲದೆ ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ವೀಕ್ಷಿಸುವ ಹಾಗೆ ಸಂಯೋಜಿಸಿ ತನ್ನ ಶಿಷ್ಯಂದಿರಿಗೆ ಉತ್ತಮ ಅವಕಾಶವನ್ನು ಮಾಡಿರುವರು. ಅಲ್ಲದೆ ತನ್ನ ಶಿಷ್ಯಗಢಣದಲ್ಲಿ ಪ್ರತೀ ವರ್ಷವೂ ಶಾಲಾ ಕಲಿಕೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಗೊಂಡಂತಹ ಶಿಷ್ಯರನ್ನು ಗುರುತಿಸಿ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರವನ್ನು ಕೂಡಾ ನೀಡಿ ಪ್ರೋತ್ಸಾಹಿಸುವ ಸಂಪ್ರದಾಯವನ್ನು ಕೂಡಾ ಕರೋನಾ ಸಂಕಷ್ಟದ ಮಧ್ಯೆಯೂ ಚಾಚೂತಪ್ಪದೆ ನೆರವೇರಿಸಿರುವುದು ಇವರಲ್ಲಿರುವ ಹೃದಯ ವೈಶಾಲ್ಯತೆ. 
 
ರಾಕೇಶ್ ರೈ ಅಡ್ಕರವರು ನಿಭಾಯಿಸುವ ಪಾತ್ರಗಳು...
ರಾಜವೇಷ, ರಕ್ತಬೀಜ, ಶತ್ರುಘ್ನ, ದೇವೇಂದ್ರ, ಅರ್ಜುನ,ಹಿರಣ್ಯಾಕ್ಷ, ಇಂದ್ರಜಿತು, ಭಾನುಕೋಪ, ಕೌಂಡ್ಲಿಕ, ಶಿಶುಪಾಲ, ಮುರಾಸುರ, ಕೌರವ, ಜಾಂಬವಂತ, ಶಂತನು, ಅರುಣಾಸುರ, ದಾರಿಕಾಸುರ
ಅದೇ ರೀತಿ ಪುಂಡುವೇಷದಲ್ಲಿ
ಅಭಿಮನ್ಯು, ಸುಧನ್ವ, ಸುದರ್ಶನ, ಚಂಡಮುಂಡ, ಭಾರ್ಗವ, ರೂಕ್ಷ, ಕೃಷ್ಣ, ಬಬ್ರುವಾಹನ, ಪ್ರವೀರ, ಮನ್ಮಥ, ಕುಶಲವ, ಚಿತ್ರಕೇತ, ಮಾರ್ತಾಂಡತೇಜ, ಕಮಲಧ್ವಜ, ತರಣಿಸೇನ, ಅನಿರುದ್ಧ
ಹಾಗೂ ಸ್ತ್ರೀ ವೇಷದಲ್ಲಿ
ದೇವಿ, ಶಶಿಪ್ರಭೆ, ಭ್ರಮರಕುಂತಳೆ ,ಸ್ವೈರಿಣಿ, ಮಾಯಾಶೂರ್ಪನಖಿ, ಅಂಬೆ ಮುಂತಾದ ವೇಷಗಳನ್ನು ಆಯಾ ಪಾತ್ರಕ್ಕೆ ಒಪ್ಪುವ ಶೈಲಿಯಲ್ಲಿ ರಂಗದ ಚೌಕಟ್ಟಿಗೆ ಚ್ಯುತಿ ಬಾರದ ಹಾಗೆ ಪಾತ್ರಕ್ಕನುಗುಣವಾಗಿ ಮಾತುಗಾರಿಕೆ, ಅಭಿನಯ, ನಾಟ್ಯಗಳನ್ನು ವಿವಿಧತೆಯಲ್ಲಿ ಯಕ್ಷ ಪ್ರೇಕ್ಷಕರಿಗೆ ಉಣಬಡಿಸುವ ಚಾಕಚಕ್ಯತೆಯನ್ನು ಹೊಂದಿರುವ ಎಳೆಯ ಪ್ರಾಯದ ಅನುಭವಿ ಕಲಾವಿದನೆಂದರೆ ತಪ್ಪಾಗಲಾರದು. 

ಶ್ರೀಯುತರಿಂದ ಇನ್ನಷ್ಟು ಮಕ್ಕಳು ಯಕ್ಷ ಶಿಕ್ಷಣವನ್ನು ಪಡೆದು ಮುಂದೆ ಇವರ ಹಾಗೆ ಒಂದು ಉತ್ತಮ ಕಲಾವಿದರಾಗಿ ಯಕ್ಷರಂಗದಲ್ಲಿ ಹೆಸರು ಮಾಡಲಿ, ಯಕ್ಷಗಾನಕ್ಕೂ ಕೀರ್ತಿಯನ್ನು ತರಲೆಂದು ಹಾರೈಸುತ್ತಾ
ರಾಕೇಶ್ ರೈ ಅಡ್ಕರವರ ಯಕ್ಷ ಜೀವನವು ಇನ್ನಷ್ಟು ಉಜ್ವಲವಾಗಲಿ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸುತ್ತಾ ಬಂದು ಇವರ ಮುಡಿಗೇರಲಿ, ಇವರ ಮಡಿಲು ಸೇರಲಿ.

ಸೌಮ್ಯ ಸ್ವಭಾವದ ರಾಕೇಶ್ ರೈ ಅಡ್ಕ ರವರು ತನ್ನ ಮಮತೆಯ ಮಾತೆಯೊಂದಿಗೆ, ಬಾಳ ಸಂಗಾತಿ ಶ್ರೀಮತಿ ಚೇತನಾ ಹಾಗೂ ಏಕೈಕ ಪುತ್ರಿ ಸಾನ್ವಿಯೊಂದಿಗೆ ವಾಸವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photo Click:- ವಿಜಯ್ ಕುಮಾರ್ ಯಾಳಂತೂರ್, ಮುರಳಿ ನಾವಡ, ಕಿರಣ್ ವಿಟ್ಲ, ಯಕ್ಷ ಪ್ರಸನ್ನ.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️:- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395