ಯಕ್ಷ ಸಾಧಕರು ೩೩
ಯಕ್ಷ ನಾಟ್ಯ ಗುರು, ವೇಷಧಾರಿ ಶ್ರೀಯುತ ದಿವಾಣ ಶಿವಶಂಕರ ಭಟ್.
ಕಾಸರಗೋಡು ಜಿಲ್ಲೆಯ ಎಡನಾಡಿನಲ್ಲಿ ಶ್ರೀಮತಿ ಶಾರದಾ ಹಾಗೂ ಗಣಪತಿ ದಿವಾಣ ಇವರ ೭ ಮಂದಿ ಮಕ್ಕಳಲ್ಲಿ ೪ನೇ ಪುತ್ರನಾಗಿ ೩೧.೦೫.೧೯೬೪ ರಂದು ಇವರ ಜನನ. ಸರಕಾರಿ ಹಿರಿಯ ಬುನಾದಿ ಶಾಲೆ ಸೂರಂಬೈಲು ಹಾಗೂ ಸರಕಾರಿ ಪ್ರೌಢಶಾಲೆ ಕುಂಬಳೆಯಲ್ಲಿ ಇವರ ವಿದ್ಯಾಭ್ಯಾಸ. ಮನೆ ಹಿರಿಯರು ಹವ್ಯಾಸಿ ಕಲಾವಿದರಾಗಿದ್ದರು. ಶೇಡಿಗುಮ್ಮೆ ಕೃಷ್ಣ ಭಟ್ ಮತ್ತು ವೈ.ಡಿ.ನಾಯಕರು ಇವರಿಗೆ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾದರು.
ತನ್ನ 16ನೇ ವಯಸ್ಸಿಗೆ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಸೂರಿಕುಮೇರು ಗೋವಿಂದ ಭಟ್ಟರ ಬಳಿಯಲ್ಲಿ ಯಕ್ಷಗಾನ ನಾಟ್ಯ ಕಲಿಕೆಯನ್ನು ಪ್ರಾರಂಭಿಸಿದರು. ನಿಡ್ಲೆ ನರಸಿಂಹ ಭಟ್ಟರ ಬಳಿಯಲ್ಲಿ ಚೆಂಡೆ-ಮದ್ದಳೆ ಹಾಗೂ ಭಾಗವತಿಕೆಯನ್ನು ಅಭ್ಯಾಸ ಮಾಡಿದ್ದು ಗುರು ಬನ್ನಂಜೆ ಸಂಜೀವ ಸುವರ್ಣರ ಬಳಿಯಲ್ಲಿ ಬಡಗುತಿಟ್ಟು ನಾಟ್ಯವನ್ನೂ ಅಭ್ಯಾಸ ಮಾಡಿದ್ದಾರೆ. ಪುರಾಣದ ಎಲ್ಲಾ ಪ್ರಸಂಗಗಳನ್ನು ಇಷ್ಟಪಡುವ ಇವರಿಗೆ ಭಾವನಾತ್ಮಕ ಪ್ರಸಂಗಗಳಲ್ಲಿ ಅಭಿನಯ ಮಾಡುವುದೆಂದರೆ ಹೆಚ್ಚಿನದಾಂತಹ ಒಲವು. ಋಷಿಗಳ ವೇಷಗಳನ್ನು (ವಿಶ್ವಾಮಿತ್ರ, ವಸಿಷ್ಠ , ವಾಲ್ಮೀಕಿ ಇತ್ಯಾದಿ) ಹೆಚ್ಚಾಗಿ ಇಷ್ಟಪಡುತ್ತೇನೆಯಾದರೂ ರಂಗದಲ್ಲಿ ಎಲ್ಲಾ ವೇಷಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತೇನೆ ಎಂಬುದು ಅವರು ಹೇಳುವ ಮಾತು.
ಕಟೀಲು ಮೇಳ(8 ವರ್ಷ), ಬಪ್ಪನಾಡು ಮೇಳ(2 ವರ್ಷ), ಮಲ್ಲ ಮೇಳ(4 ವರ್ಷ), ಕೂಡ್ಲು ಮೇಳ(2 ವರ್ಷ), ಧರ್ಮಸ್ಥಳ(10 ವರ್ಷ), ಹೊಸನಗರ ಮೇಳ(ಮೆನೇಜರ್ 1 ವರ್ಷ), ಎಡನೀರು(4 ವರ್ಷ) ಹಾಗೂ ಪ್ರಸ್ತುತ ಪಾವಂಜೆ ಮೇಳದಲ್ಲಿ ಕಲಾವ್ಯವಸಾಯ ಮಾಡುತ್ತಿದ್ದು ಒಟ್ಟು 40 ವರ್ಷಗಳಿಂದ ಯಕ್ಷಗಾನ ಮೇಳದಲ್ಲಿ ತಿರುಗಾಟ ಹಾಗೂ ಕಲಾ ಸೇವೆ ಮಾಡಿದ ಅನುಭವದ ಕೀರ್ತಿ ಇವರಿಗೆ ಸಲ್ಲುತ್ತದೆ. ತೋಡಿಕಾನ ವಿಶ್ವನಾಥ ದೇವಸ್ಥಾನದಲ್ಲಿ ಕೆಲಕಾಲ ಕಛೇರಿ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಕೊರೋನಾ ಸಮಯದಲ್ಲಿ ಕುಂಬಳೆಯ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅರ್ಚಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ 10 ವರ್ಷಗಳ ಕಾಲ ಯಕ್ಷಗಾನ ನಾಟ್ಯಗುರುಗಳಾಗಿ ಸಾವಿರಾರು ಕಲಾವಿದರನ್ನು ಯಕ್ಷರಂಗಕ್ಕೆ ನೀಡಿರುವ ಇವರು ತನ್ನ ಹುಟ್ಟೂರಾದ ಎಡನಾಡು ಪರಿಸರದಲ್ಲಿ ಯಕ್ಷಗಾನ ವಾತಾವರಣವನ್ನು ಉಳಿಸಬೇಕು ಎಂಬ ಹಿತದೃಷ್ಟಿಯಿಂದ ಆಸಕ್ತ ತರುಣರನ್ನು ಒಂದುಗೂಡಿಸಿ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿ ಕಳೆದ ಹಲವು ವರ್ಷಗಳಿಂದ ಹಲವಾರು ಮಕ್ಕಳಿಗೆ ಉಚಿತವಾಗಿ ನಾಟ್ಯತರಬೇತಿಯನ್ನು ನೀಡುತ್ತಿದ್ದಾರೆ. ಊರಿನ ಹಾಗೂ ರಾಜ್ಯದ ಹಲವಾರು ಭಾಗಗಳಲ್ಲಿ ನಾಟ್ಯತರಗತಿಗಳನ್ನು ಮಾಡಿದ್ದಾರೆ ಹಾಗೂ ಈಗಲೂ ಮಾಡುತ್ತಿದ್ದಾರೆ.
ರಂಗಕ್ಕೆ ಹೋಗುವ ಮೊದಲು ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಸಮಗ್ರ ಪುರಾಣದ ಅಭ್ಯಾಸದ ಜೊತೆಗೆ ಪ್ರಸಂಗ ನಡೆಯ ಬಗ್ಗೆ ಅಧ್ಯಯನವನ್ನು ಮಾಡಬೇಕು ಹಾಗೂ ಚೌಕಿಯಲ್ಲಿ ಬಣ್ಣ ಹಾಕುವಾಗಲೂ ಪ್ರಸಂಗದ ಒಳಗೇ ಮನಸ್ಸನ್ನು ಕೇಂದ್ರೀಕರಿಸಿಕೊಂಡಿರಬೇಕು ಎಂಬುದು ಅವರ ಅನಿಸಿಕೆ. ಭಾಗವತರ ಜೊತೆ ಪ್ರಸಂಗದ ಬಗೆಗೆ ಚರ್ಚೆ ನಡೆಸಿ ರಂಗನಡೆಯನ್ನು ಅರಿತು ವೇಷಮಾಡಬೇಕು ಎಂಬುದು ಅವರ ನಿಲುವು.
ಇಂದಿನ ಪ್ರೇಕ್ಷಕರ ಬಗ್ಗೆ ಇವರ ಅಭಿಪ್ರಾಯ:
ಯಕ್ಷಗಾನಕ್ಕೆ ಈಗ ಪ್ರೌಢಪ್ರೇಕ್ಷಕರ ಕೊರತೆಯಿದೆ. ಒಬ್ಬ ಕಲಾವಿದ ಉತ್ತಮವಾಗಿ ಬೆಳೆಯಬೇಕಾದರೆ ಪೂರಕವಾಗಿ ಪ್ರೇಕ್ಷಕನ ಪ್ರೌಢತೆ ಸಹಕಾರಿಯಾಗುತ್ತದೆ. ಆದರೆ ಈಗ ಹಾಗಿಲ್ಲ, ಈಗಿನ ಕಾಲಮಾನದಲ್ಲಿ ಪ್ರೌಢಪ್ರೇಕ್ಷಕರು ಕಡಿಮೆಯಾಗಿದ್ದಾರೆ ಎಂಬುದು ಅವರ ಅನಿಸಿಕೆ.
ಹಲವಾರು ಯಕ್ಷಗಾನ ಕಮ್ಮಟಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ, ಹಲವಾರು ಯಕ್ಷಗಾನ ಸ್ಪರ್ಧೆಗಳಿಗೆ ನಿರ್ಣಾಯಕರಾಗಿ ಇವರನ್ನು ಕರೆದು ಗೌರವಿಸಲಾಗಿದ್ದು ಹಲವಾರು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗೌರವಿಸಿ ಸನ್ಮಾನಿಸಿ ಪುರಸ್ಕರಿಸಿವೆ.
ನಾಟ್ಯದ ಜೊತೆಗೆ ಭಾಗವತಿಕೆಯನ್ನೂ ಅಭ್ಯಾಸ ಮಾಡಿದ್ದು ಈ ಹಿಂದೆ ರಂಗದಲ್ಲಿ ಭಾಗವತಿಕೆಯನ್ನೂ ಮಾಡಿದ್ದಾರೆ. ಬಹಳ ವರ್ಷಗಳ ಹಿಂದೆ ಶ್ವೇತಕುಮಾರ ಚರಿತ್ರೆ ಯಕ್ಷಗಾನವೊಂದರಲ್ಲಿ ಭಾಗವತರಿಗೆ ಮಧ್ಯರಾತ್ರಿ ಅನಾರೋಗ್ಯವುಂಟಾದ ಸಂದರ್ಭದಲ್ಲಿ ಇವರು ಭಾಗವತಿಕೆಗೆ ಕೂತು ಬೆಳಗಿನ ತನಕ ಆಟವನ್ನು ಮುನ್ನಡೆಸಿದ ಘಟನೆಯನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಅದೇ ರೀತಿ ಹಲವು ವರ್ಷಗಳ ಹಿಂದೆ ಕಟೀಲು ಮೇಳದಲ್ಲಿ ಸಂಗೀತವನ್ನೂ ಮಾಡುತ್ತಿದ್ದರು.
ಪತ್ನಿ ರೋಹಿಣಿ ಎಸ್ ದಿವಾಣ, ಮಕ್ಕಳಾದ ಗಣೇಶ ಹಾಗೂ ಶ್ರೀಸ್ಕಂದ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ಪತ್ನಿ ರೋಹಿಣಿ ಎಸ್ ದಿವಾಣ ಇವರು ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದು ಯಕ್ಷಗಾನ ಭಾಗವತಿಕೆಯನ್ನೂ ಅಭ್ಯಸಿಸಿ ಹಲವಾರು ಕಾರ್ಯಕ್ರಮಗಳಲ್ಲಿ ಸಂಗೀತ ಕಛೇರಿ ಹಾಗೂ ಭಾಗವತಿಕೆಯನ್ನೂ ಮಾಡಿದ್ದಾರೆ. ಕಿರಿಯ ಮಗ ಶ್ರೀಸ್ಕಂದ ದಿವಾಣ ಇವರೂ ಕೂಡಾ ಯಕ್ಷಗಾನ ಚೆಂಡೆ-ಮದ್ದಳೆ, ಸಂಗೀತ ಮೃದಂಗ ಹಾಗೂ ಮೋರ್ಸಿಂಗ್ ಅನ್ನು ಅಭ್ಯಾಸ ಮಾಡಿದ್ದು ಇದುವರೆಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
Comments
Post a Comment