ಯಕ್ಷ ಸಾಧಕರು ೫೦
ಕಲಾವಿದರ ಕಾಮಧೇನು, ಯಕ್ಷಗಾನ ರಂಗದ ಧ್ರುವ ತಾರೆ, ಪಾವಂಜೆ ಮೇಳದ ಪ್ರಧಾನ ಭಾಗವತರು ಶ್ರೀಯುತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ.
ತುಳುನಾಡು ಎಂದಾಗ ಎಲ್ಲರ ಮನಸ್ಸಿಗೆ ತಟ್ಟನೆ ಹೊಳೆಯುವ ವಿಚಾರಗಳಲ್ಲಿ ಯಕ್ಷಗಾನವೂ ಒಂದು.
ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ. ಇಂತಹ ಯಕ್ಷಗಾನ ಕಲೆಯನ್ನು ದೇಶ ವಿದೇಶಗಳಲ್ಲಿ ಕಂಪಿಸಿ ಅನೇಕ ಯುವಕರನ್ನು ಯಕ್ಷಗಾನದ ಕಡೆ ಒಲವು ಮೂಡುವಂತೆ ಮಾಡಿದ ಕಲಾವಿದ ಕಲಾವಿದರ ಕಾಮಧೇನು, ಯಕ್ಷಗಾನ ರಂಗದ ಧ್ರುವ ತಾರೆ, ಪಾವಂಜೆ ಮೇಳದ ಪ್ರಧಾನ ಭಾಗವತರು ಶ್ರೀಯುತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ.
ಶ್ರೀಮತಿ ಲಲಿತಾ ಶೆಟ್ಟಿ ಹಾಗೂ ಶ್ರೀ ಪಟ್ಲಗುತ್ತು ಮಹಾಬಲ ಶೆಟ್ಟಿ ಇವರ ಮಗನಾಗಿ ೦೫.೦೮.೧೯೭೮ ರಲ್ಲಿ ಇವರ ಜನನ. ದ್ವಿತೀಯ ಪಿ.ಯು.ಸಿ ಇವರ ವಿದ್ಯಾಭ್ಯಾಸ. ಯಕ್ಷಗಾನ ರಂಗದಲ್ಲಿ ಒಟ್ಟು ೨೧ ವರ್ಷಗಳ ಸುದೀರ್ಘ ತಿರುಗಾಟ. ತಂದೆ ಪಟ್ಲಗುತ್ತು ಮಹಾಬಲ ಶೆಟ್ಟಿ ಒಬ್ಬ ಒಳ್ಳೆಯ ಯಕ್ಷಗಾನ ಕಲಾವಿದ ಹಾಗೂ ೧೯೭೦ ರ ಆಸುಪಾಸಿನಲ್ಲಿ ಶ್ರೀ ಮಲ್ಲ ದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸಂಚಾಲಕರು ಆಗಿದ್ದರು ಹಾಗೂ ಒಳ್ಳೆಯ ಮೃದಂಗ ವಾದಕರು ಹಾಗೂ ಯಕ್ಷಗಾನದ ಬಗ್ಗೆ ತುಂಬಾ ಒಲವು ಇದ್ದ ವ್ಯಕ್ತಿ. ಮನೆಯಲ್ಲಿ ಯಕ್ಷಗಾನದ ಪರಿಸರ ಹಾಗೂ ಊರಿನಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ನೋಡಿ ಸತೀಶ್ ಶೆಟ್ಟಿ ಅವರಿಗೆ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಆಯಿತು.
ಯಕ್ಷಗಾನ ಭಾಗವತಿಕೆಯನ್ನು ಯಕ್ಷಗಾನಕ್ಕೆ ಅನುಪಮ ಕೊಡುಗೆಗಳನ್ನು ನೀಡಿದ ಶ್ರೀಯುತ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರ ಬಳಿ ಕಲಿತು, ಶ್ರೀಯುತ ಡಾ. ಶಿಮಂತೂರು ನಾರಾಯಣ ಶೆಟ್ಟಿ ಹಾಗೂ ಶ್ರೀ ಗಣೇಶ ಕೋಲೆಕಾಡಿ ಇವರ ಬಳಿ ಯಕ್ಷಗಾನ ಛಂದಸ್ಸು ಕಲಿತರು. ಹಿಂದೂಸ್ಥಾನಿ ಸಂಗೀತವನ್ನು ಶ್ರೀ ರೋಶನ್ ಶರ್ಮ ಇವರ ಬಳಿ ಕಲಿತು ಮುಂದೆ ಕರ್ನಾಟಕ ಸಂಗೀತವನ್ನು ಶ್ರೀಯುತ ಭಜಕಳ ಗಣಪತಿ ಭಟ್ ಹಾಗೂ ಶ್ರೀಯುತ ಯೋಗೀಶ್ ಶರ್ಮ ಬಲ್ಲಂಪಡವು ಇವರ ಬಳಿ ಕಲಿತು 1999 ರಲ್ಲಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ ಶ್ರೀಯುತ ಪಟ್ಲ ಸತೀಶ್ ಶೆಟ್ಟಿಯವರು.
ಯಕ್ಷಗಾನ ರಂಗದಲ್ಲಿ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಇವರ ಸುಧೀರ್ಘ ೨೧ ವರ್ಷಗಳ ತಿರುಗಾಟದಲ್ಲಿ 1999 ರಿಂದ 2000 ವರೆಗೆ ಶ್ರೀ ಭಗವತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಸಸಿಹಿತ್ಲು ಮೇಳ, 2001 ರಿಂದ 2019 ವರೆಗೆ ಕಟೀಲು ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿ ಕಟೀಲು ಹಾಗೂ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀ ಸುಂಕದಕಟ್ಟೆ ಅಂಬಿಕಾ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಸೇವೆ ಮಾಡಿರುವ ಶ್ರೀಯುತ ಪಟ್ಲ ಸತೀಶ್ ಶೆಟ್ಟಿ ಅವರು ಪ್ರಸ್ತುತ ಶ್ರೀ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ರಜ ಕ್ಷೇತ್ರ ಪಾವಂಜೆ ಮೇಳದ ನಿರ್ದೇಶಕ ಹಾಗೂ ಪ್ರಧಾನ ಭಾಗವತರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಯಕ್ಷ ಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ.) ಮಂಗಳೂರು ಇದರ ಸ್ಥಾಪಕ ಅಧ್ಯಕ್ಷ ಆಗಿದ್ದಾರೆ.
ಯಕ್ಷಗಾನ ರಂಗದಲ್ಲಿ ಇವರು ಮಾಡಿರುವ ಸಾಧನೆಗಳು:-
◆ ವಿದೇಶದಲ್ಲಿ 200 ಕ್ಕೂ ಹೆಚ್ಚು ಯಕ್ಷಗಾನ ಕಾರ್ಯಕ್ರಮ ಹಾಗೂ ಅಮೇರಿಕ ಮತ್ತು ಅರಬ್ ದೇಶದಲ್ಲಿ ಯಕ್ಷಗಾನ ಕಾರ್ಯಕ್ರಮ ನೀಡಿದ ಕೀರ್ತಿ.
◆ 20 ವರ್ಷದಲ್ಲಿ ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ 5000 ಕ್ಕೂ ಹೆಚ್ಚು ಯಕ್ಷಗಾನ ಕಾರ್ಯಕ್ರಮ ನೀಡಿದ ಕೀರ್ತಿ.
◆ 19 ವರ್ಷಗಳ ಕಾಲ ಕಟೀಲು ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ.
◆ 27.11.2020 ರಂದು ಶ್ರೀ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ರಜ ಕ್ಷೇತ್ರ ಪಾವಂಜೆ ಮೇಳದ ಸ್ಥಾಪನೆ.
◆ 500ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನ.
ಶುದ್ಧ ಸಾವೇರಿ, ಭೈರವಿ, ವಾಸಂತಿ, ರೇವತಿ, ಮೋಹನ ಹಾಗೂ ಅಭೇರಿ ರಾಗದಲ್ಲಿ ತುಂಬಾನೇ ಸುಲಲಿತವಾಗಿ ಹಾಡುತ್ತಾರೆ ಶ್ರೀಯುತ ಪಟ್ಲ ಸತೀಶ್ ಶೆಟ್ಟಿಯವರು.
ಯಕ್ಷಗಾನ ರಂಗದಲ್ಲಿ ಇವರಿಗೆ ಸಿಕ್ಕಿರುವ ಸನ್ಮಾನ ಹಾಗೂ ಪ್ರಶಸ್ತಿಗಳು:-
◆ 2016 ರಲ್ಲಿ ಪ್ರತಿಷ್ಠಿತ "ಆರ್ಯಭಟ ಪ್ರಶಸ್ತಿ".
◆ "ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ", "ಸೃಷ್ಟಿ ಕಲಾ ಭೂಷಣ ಪ್ರಶಸ್ತಿ", "ಕುಂದೇಶ್ವರ ಸನ್ಮಾನ".
◆ 2016ರಲ್ಲಿ ಮುಂಬೈನಲ್ಲಿ "ಪಂಚದಶ ಯಕ್ಷ ರಕ್ಷಾ ಪ್ರಶಸ್ತಿ".
◆ 2016ರಲ್ಲಿ "ಸುವರ್ಣ ರಂಗ ಪ್ರಶಸ್ತಿ".
◆ 2016ರಲ್ಲಿ ತುಳು ಚಿತ್ರರಂಗದ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ಪ್ರಶಸ್ತಿ.
◆ ಯಕ್ಷಗಾನ ರಂಗಕ್ಕೆ ಇವರು ನೀಡಿದ ಅಮೂಲ್ಯ ಸೇವೆಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಸನ್ಮಾನ.
◆ ಡೆಲ್ಲಿ ಕರ್ನಾಟಕ ಸಂಘ, ಕರ್ನಾಟಕ ಮದ್ರಾಸ್ ಸಂಘ, ತುಳು ಹಾಗೂ ಕನ್ನಡ ಕೂಟ ಗುಜರಾತ್, ಮುಂಬೈ ಬಂಟ್ಸ್ ಸಂಘಗಳಿಂದ ಸನ್ಮಾನ.
◆ ಎರಡು ಸಾವಿರಕ್ಕೂ ಹೆಚ್ಚು ಸಂಘ ಸಂಸ್ಥೆಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇವರನ್ನು ಸನ್ಮಾನಿಸಿದ್ದಾರೆ.
◆USA, ದುಬೈ, ಕುವೈತ್, ಮಲೇಷ್ಯಾ ದೇಶದಲ್ಲಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದ್ದಾರೆ.
ಯಕ್ಷ ಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ) ಮಂಗಳೂರು ಇದರ ಸ್ಥಾಪಕ ಅಧ್ಯಕ್ಷ.
ಟ್ರಸ್ಟ್ ನ ಪ್ರಮುಖ ಕಾರ್ಯಕ್ರಮಗಳು:-
◆ 2015 ಯಕ್ಷ ಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ) ಉದ್ಘಾಟನೆ.
◆ ಐದು ಕೋಟಿ ರೂಪಾಯಿಗಳು ಯಕ್ಷಗಾನ ಕಲಾವಿದರ ಆರೋಗ್ಯ ವೆಚ್ಚಕ್ಕೆ, ಯಕ್ಷಗಾನ ಕಲಾವಿದರ ಮಕ್ಕಳ ವಿದ್ಯಾರ್ಥಿ ವೇತನ, ಮನೆ ಕಟ್ಟಲು, ಅಪಘಾತ ವಿಮೆ ಹೀಗೆ ಕಳೆದ ಐದು ವರ್ಷಗಳಲ್ಲಿ ಕಲಾವಿದರಿಗೆ ಸಹಾಯ.
◆ ಈ ಟ್ರಸ್ಟ್ ನ ಪ್ರಧಾನ ಉದ್ದೇಶವೇ ಯಕ್ಷಗಾನ ಕಲಾವಿದರ ಅಭಿವೃದ್ಧಿ ಹಾಗೂ ಕಲಾವಿದರ ಸಹಾಯಕ್ಕಾಗಿ.
◆ ಕರ್ನಾಟಕದಲ್ಲಿ 24 ಘಟಕ; ಚೆನ್ನೈ, ಗುಜರಾತ್, ಡೆಲ್ಲಿ, ಮುಂಬೈ, ಕೇರಳ ರಾಜ್ಯದಲ್ಲಿ 2 ಘಟಕ ಸೇರಿ ಒಟ್ಟು 6 ಘಟಕ ಭಾರತದ ಇತರೆ ರಾಜ್ಯದಲ್ಲಿ ಹಾಗೂ ವಿದೇಶದಲ್ಲಿ 5 ಘಟಕಗಳು USA, ದುಬೈ, ಸೌದಿ ಬೆಹರೈನ್, ಮಸ್ಕತ್, ಕತಾರ್ ಸೇರಿಸಿ ಟ್ರಸ್ಟ್ ಒಟ್ಟು 36 ಶಾಖೆಗಳನ್ನು ಹೊಂದಿದೆ.
◆ಯಕ್ಷಗಾನ ಕಲಾವಿದರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ.
◆ ಯಕ್ಷಗಾನ ಕಲಾವಿದರಿಗೆ ಟ್ರಸ್ಟ್ ವತಿಯಿಂದ ಅಪಘಾತ ವಿಮೆ ಸೌಲಭ್ಯ, ಟ್ರಸ್ಟ್ ಇದರ ಮೊತ್ತವನ್ನು ಭರಿಸುತ್ತದೆ.
◆ 2019ರಲ್ಲಿ ಟ್ರಸ್ಟ್ "ಯಕ್ಷ ಧ್ರುವ ಕ್ರೀಡಾ ಕೂಟ" ಆಯೋಜನೆ ಮಾಡಿ ಈ ಕ್ರೀಡಾ ಕೂಟದಲ್ಲಿ 650 ಯಕ್ಷಗಾನ ಕಲಾವಿದರು ಭಾಗವಹಿಸಿದ್ದರು.
◆ ಟ್ರಸ್ಟ್ ವತಿಯಿಂದ ತಲಾ ಐದು ಲಕ್ಷ ವೆಚ್ಚದ ಮೂರು ಮನೆಗಳನ್ನು ನಿರ್ಮಾಣ ಮಾಡಿ ಯಕ್ಷಗಾನ ಕಲಾವಿದರಿಗೆ ಹಸ್ತಾಂತರಿಸಿದ್ದಾರೆ. ಮುಂದೆ ನೂರು ಮನೆಗಳನ್ನು ಕಟ್ಟಿಸಿ ನೂರು ಕಲಾವಿದರಿಗೆ ಹಸ್ತಾಂತರಿಸುವ ಯೋಜನೆಯನ್ನು ಹೊಂದಿದೆ ಹಾಗೂ ಎಲ್ಲಾ ಮನೆಗಳನ್ನು ಉಚಿತವಾಗಿ ಟ್ರಸ್ಟ್ ವತಿಯಿಂದ ಕಟ್ಟಿಸಿ ಕೊಡಲಾಗುತ್ತದೆ.
◆ ಕೊರೋನ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ 2500ರೂ ಮೊತ್ತದ ಆಹಾರ ಸಾಮಗ್ರಿಗಳನ್ನು 1000 ಯಕ್ಷಗಾನ ಕಲಾವಿದರಿಗೆ ನೀಡಲಾಗಿದೆ.
◆ ಯಕ್ಷಗಾನವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ "ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ" You Tube channel ಮಾಡಿ ಈ channel ನಲ್ಲಿ 21,072 Subscribers ಹಾಗೂ 16,92,282 ಜನರು online ಯಕ್ಷಗಾನವನ್ನು ಲೈವ್ ನೋಡಿದ್ದಾರೆ 6 ತಿಂಗಳ ಅವಧಿಯಲ್ಲಿ.
◆ ಹಲವಾರು ಯಕ್ಷಗಾನ ಕಾರ್ಯಕ್ರಮವನ್ನು ತಮ್ಮ official ಚಾನೆಲ್ ನಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ ಕೋವಿಡ್ ಸಮಯದಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಸಿ ಕಲಾವಿದರಿಗೆ ಆರ್ಥಿಕವಾಗಿ ಸಹಾಯ ಮಾಡಲಾಯಿತು.
◆ ತಲಾ 25000ರೂ ಕನಿಷ್ಠ 15 ಯಕ್ಷಗಾನ ಕಲಾವಿದರಿಗೆ ನೀಡಲಾಗುತ್ತದೆ.
◆ ತಲಾ 10000ರೂ ಕನಿಷ್ಠ ಎಂಟು ಕಲಾವಿದರಿಗೆ ಯಕ್ಷಗಾನ ರಂಗದಲ್ಲಿ ಅವರು ಮಾಡಿದ ಸಾಧನೆಯನ್ನು ಪ್ರೋತ್ಸಾಹಿಸಿ ನೀಡಲಾಗುತ್ತದೆ.
◆ 25000ರೂ ವೈದ್ಯಕೀಯ ವೆಚ್ಚವನ್ನು ಅಗತ್ಯವಿರುವ ಕಲಾವಿದರಿಗೆ ನೀಡಲಾಗುತ್ತದೆ.
◆ ತಲಾ 50000ರೂ ಕನಿಷ್ಠ 12 ಜನ ಕಲಾವಿದರಿಗಾಗಿ ನೀಡಲಾಗುತ್ತದೆ.
◆ 25000ರೂ ಕನಿಷ್ಠ 10 ಕಲಾವಿದರಿಗೆ ತಮ್ಮ ಮನೆ ಸರಿ ಮಾಡಲು ನೀಡಲಾಗುತ್ತದೆ.
◆ ಯಕ್ಷಗಾನ ರಂಗದಲ್ಲಿ ಅಪ್ರತಿಮ ಸಾಧನೆ ಮಾಡಿದ ಕಲಾವಿದರಿಗೆ 1,00,000ರೂ ನಗದು ಬಹುಮಾನದೊಂದಿಗೆ "ಪಟ್ಲ ಪ್ರಶಸ್ತಿ" ನೀಡಿ ಗೌರವಿಸಲಾಗುತ್ತದೆ.
26.01.2011 ರಂದು ನಿರ್ಮಿತ ಶೆಟ್ಟಿ ಅವರನ್ನು ವಿವಾಹವಾದ ಪಟ್ಲ ಸತೀಶ್ ಶೆಟ್ಟಿ, ಮಗ ಹೃದಾನ್ ಶೆಟ್ಟಿ ಹಾಗೂ ಮಗಳು ರಿತ್ವಿಕ ಶೆಟ್ಟಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ಫೋಟೋ ಕೃಪೆ:-Yaksha Madhava, Murali Navada, Apul Alva Ira, Sharaj Vikram Photography.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment