ಯಕ್ಷ ಸಾಧಕರು ೯೪

ಯಕ್ಷ ಲೋಕದ ನಾಟ್ಯ ಮಯೂರಿ  ಗೋವಿಂದ ವಂಡಾರು ಮೊಗವೀರ.

ವಂಡಾರು ಎನ್ನುವುದೇನು ಹೆಸರೇ ಬರಿಯ ಊರಿಗೆ..? ಒಂದು ಜೀವಕೆ ಉಸಿರಿದಾದರೆ, ಹಲವು ಮನಸಿನ ಮಿಡಿತವಿದು. ಹಲವು ನೆನಪುಗಳ ಆಗರ, ಆಕರ್ಷಣೆಯ ನೃತ್ಯದ ಸರದಾರ. ಹೆಚ್ಚೇಕೆ, ಯಕ್ಷಾಭಿಮಾನಿಗಳ ಪಾಲಿಗೆ  ನಾಟ್ಯ ಮಯೂರಿ ಶ್ರೀ ವಂಡಾರು ಗೋವಿಂದ ಮೊಗವೀರ.

೦೧.೦೭.೧೯೮೫ ರಂದು ಬೋಳು ಮೊಗವೀರ ಹಾಗೂ ಗೌರಿ ಮರಕಾಲ್ತಿ ಇವರ ಮಗನಾಗಿ ಜನನ. ೮ನೇ ತರಗತಿವರೆಗೆ ವಿದ್ಯಾಭ್ಯಾಸ. ಸುರೇಶ್ ಉಪ್ಪೂರು, ಚಂದ್ರ ಕುಲಾಲ್ ಅವರ್ಸೆ, ಕೃಷ್ಣ ಹಾಸ್ಯಗಾರ್ ಹಾಲಾಡಿ ಇವರ ಯಕ್ಷಗಾನ ಗುರುಗಳು.

ಪ್ರಸಂಗದ ಪದ್ಯವನ್ನು ನೋಡಿ, ಬೇರೆಯವರು ಮಾಡಿದ ವೇಷವನ್ನು ನೋಡಿ ನೆನಪಿಸಿಕೊಂಡು, ಎದುರಿನ ಪಾತ್ರಧಾರಿಯಲ್ಲಿ ಸಮಾಲೋಚನೆ ನಡೆಸಿ ಹಿರಿಯವರಿಂದ ಅನುಭವ ಪಡೆದು ರಂಗ ಪ್ರವೇಶ ಮಾಡುತ್ತೇನೆ ಎಂದು ವಂಡಾರು ಅವರು ಹೇಳುತ್ತಾರೆ.

ಭಸ್ಮಾಸುರ ಮೋಹಿನಿ, ಲಂಕಾದಹನ, ಶಶಿಪ್ರಭಾ ಪರಿಣಯ, ಚಂದ್ರಾವಳಿ ವಿಲಾಸ, ಭೀಷ್ಮ ಪ್ರತಿಜ್ಞೆ, ಮೀನಾಕ್ಷಿ ಕಲ್ಯಾಣ ಇವರ ನೆಚ್ಚಿನ ಪ್ರಸಂಗಗಳು.
ಮೋಹಿನಿ, ತ್ರಿಲೋಕ ಸುಂದರಿ, ಮೀನಾಕ್ಷಿ ಇವರ ನೆಚ್ಚಿನ ವೇಷಗಳು. ಹಾಲಾಡಿ, ಮಾರಣಕಟ್ಟೆ, ಹಿರಿಯಡಕ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ತಿರುಗಾಟವನ್ನು  ಮಾಡುತ್ತಿದ್ದಾರೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಸದ್ಯದ ವಾತಾವರಣದಲ್ಲಿ ಕೋರೊನಾ ಸಮಸ್ಯೆಯಿಂದ ಆರ್ಥಿಕ ವ್ಯವಸ್ಥೆ ಹದಗೆಟ್ಟ ಕಾರಣ ಎಲ್ಲಾ ರೀತಿಯಿಂದ ಅನಾನುಕೂಲ ಆಗಿದೆ ಎಂದು ವಂಡಾರು ಅವರು ಹೇಳುತ್ತಾರೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಕಾಲಮಿತಿಯ ಪ್ರದರ್ಶನವೆಂದರೆ ತುಂಬಾ ಇಷ್ಟ ಪಡುತ್ತಾರೆ. ೮ ತಾಸು ಅಂದರೆ ರಾತ್ರಿಯಿಂದ ಬೆಳಿಗ್ಗೆವರೆಗೆ ಯಕ್ಷಗಾನ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಯಾಕೆಂದರೆ ಪರಿಸ್ಥಿತಿಯ ಒತ್ತಡದಿಂದಾಗಿ. ಮೊದಲಿನವರಾದರೆ ರಾತ್ರಿ ನಿದ್ದೆ ಬಿಟ್ಟು ಹಗಲು ಕೆಲಸಕ್ಕೆ ಹೋಗುವಂತ ಉತ್ಸಾಹ ಹಾಗೂ ಅನುಕೂಲ ಇದ್ದಿತ್ತು. ಈಗ ಆರೋಗ್ಯ ಸ್ಥಿತಿ ಹಾಗೂ ಆರ್ಥಿಕ ವ್ಯವಸ್ಥೆಯ ಅನಾನುಕೂಲದಿಂದಾಗಿ ಕಾಲಮಿತಿಯ ಪ್ರದರ್ಶನವನ್ನು ಇಷ್ಟಪಡುತ್ತಾರೆ.

ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಮುಂದಿನ ತಲೆಮಾರಿಗೆ ಯಕ್ಷಗಾನ ಆಸಕ್ತಿ ಮೂಡಿಸಬೇಕು. ಯಕ್ಷಗಾನದ ಕುರಿತು ತಿಳಿದುಕೊಳ್ಳಬೇಕು. ಅದೇ ವೃತ್ತಿಯಾಗಿ ಅಲ್ಲ ಹವ್ಯಾಸಿಯಾಗಿ ಆಸಕ್ತಿ ಇರಬೇಕು ಎನ್ನುವ ಕನಸು. ಇದೇ ಉದ್ದೇಶದಿಂದ "ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್" ಒಂದನ್ನು ಪ್ರಾರಂಭಿಸಿದ್ದೇನೆ ಎಂದು ಹೇಳುತ್ತಾರೆ ವಂಡಾರು.

ವಂಡಾರು ಗ್ರಾಮದ ಗಣೇಶೋತ್ಸವ ಸಮಿತಿ ವತಿಯಿಂದ ಹುಟ್ಟೂರು ಸನ್ಮಾನ.
ಶಿರೂರುನಲ್ಲಿ ಸಾಲಿಗ್ರಾಮ ಮೇಳದ ರಂಗಸ್ಥಳದಲ್ಲಿ "ನಾಟ್ಯ ರಾಣಿ" ಎನ್ನುವ ಹಾಗೆ ಸನ್ಮಾನ.
ಹೈದರಾಬಾದ್ ನಲ್ಲಿ ಕೃಷ್ಣಮೂರ್ತಿ ಮಂಜರಿಂದ "ನಾಟ್ಯ ಮಯೂರಿ" ಎನ್ನುವ ಹಾಗೆ ಬಿರುದು. ಮಲ್ಪೆ ಮೊಗವೀರ ಸಂಘದಿಂದ ಸನ್ಮಾನ. ಹೀಗೆ ಅನೇಕ ಸನ್ಮಾನ ಹಾಗೂ ಪ್ರಶಸ್ತಿಗಳು ಇವರಿಗೆ ಸಿಕ್ಕಿರುತ್ತದೆ.

ಪುಸ್ತಕ ಓದುವುದು, ಯೋಗಾಸನ - ಪ್ರಾಣಯಾಮ ಮಾಡುವುದು, ಕೃಷಿ ಇವರ ಹವ್ಯಾಸಗಳು.

೨೭.೦೬.೨೦೨೧ ರಂದು ಶ್ವೇತಾ ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photos by:- Praveen Perdoor, Ramesh Naresh Manchi, Dheeraj Udupa Uppinakudru, Sumanth Photography.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395