ಯಕ್ಷ ಸಾಧಕರು ೩೧
ತೆಂಕುತಿಟ್ಟು ಯಕ್ಷರಂಗದ ಯುವ ಭಾಗವತರು ಶ್ರೀಯುತ ಹರಿಪ್ರಸಾದ್ ಕಾರಂತ್ ಸರಪಾಡಿ
ತೆಂಕುತಿಟ್ಟು ಯಕ್ಷಗಾನ ರಂಗ ಅನೇಕ ಯುವ ಭಾಗವತರನ್ನು ಯಕ್ಷಗಾನಕ್ಕೆ ಕೊಡುಗೆಯಾಗಿ ನೀಡಿದೆ. ಅಂತಹ ಯುವ ಭಾಗವತರಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದರು ಶ್ರೀಯುತ ಹರಿಪ್ರಸಾದ್ ಕಾರಂತ್ ಸರಪಾಡಿ.
ದಿನಾಂಕ 26.04.1986ರಂದು ಶ್ರೀಮತಿ ಶ್ರೀಲಕ್ಷ್ಮೀ ಕಾರಂತ್ ಹಾಗೂ ಶ್ರೀಯುತ ಶಂಕರನಾರಾಯಣ ಕಾರಂತ್ ಸರಪಾಡಿ ಇವರ ಪ್ರೀತಿಯ ಮಗನಾಗಿ ಜನನ. MA LLB ವರೆಗೆ ವಿದ್ಯಾಭ್ಯಾಸ. ವೃತ್ತಿಯಲ್ಲಿ ನ್ಯಾಯವಾದಿ ಆಗಿರುವ ಇವರು ಪ್ರವೃತ್ತಿಯಲ್ಲಿ ಕಟೀಲು ಮೇಳದ ಭಾಗವತರು. ಇವರ ಅಣ್ಣ ಕೇಶವಪ್ರಸಾದ್ ಕಾರಂತ್ ಪೌರೋಹಿತರು, ಮದ್ದಳೆ ವಾದಕರು ಹಾಗೂ ತಮ್ಮ ಗುರುಪ್ರಸಾದ ಕಾರಂತ ಅವರು ಹವ್ಯಾಸಿ ವೇಷಧಾರಿಗಳು. ತಂದೆ ಧರ್ಮಸ್ಥಳ, ಕಟೀಲು, ಮೂಲ್ಕಿ, ಕುಂಬಳೆ ಹಾಗೂ ಅರುವ ಮೇಳದಲ್ಲಿ ತಿರುಗಾಟ ಮಾಡಿದ್ದರು ಹಾಗೂ 20 ವರ್ಷ ಮೇಳದಲ್ಲಿ ತಿರುಗಾಟ ಮಾಡಿದ್ದಾರೆ. ಮನೆಯಲ್ಲಿ ಯಕ್ಷಗಾನದ ವಾತಾವರಣ ಇದ್ದ ಕಾರಣ ಯಕ್ಷಗಾನ ಕ್ಷೇತ್ರಕ್ಕೆ ಬರಲು ಇವರಿಗೆ ತುಂಬಾನೇ ಪ್ರೇರಣೆ ಆಯಿತು.
ತಂದೆ ಶಂಕರನಾರಾಯಣ ಕಾರಂತ್ ಸರಪಾಡಿ ಹಾಗೂ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರ ಯಕ್ಷಗಾನದ ಗುರುಗಳು. ಯಕ್ಷಗಾನದಲ್ಲಿ ಒಟ್ಟು 4 ವರ್ಷಗಳಿಂದ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಇವರಿಗೆ ಇದೆ. ಕಟೀಲು ಮೇಳ ಸೇರುವ ಮುಂಚೆ ಕಟೀಲು ಮೇಳದಲ್ಲಿ ಭಾಗವತರು ರಜೆಯಲ್ಲಿ ಇದ್ದಾಗ ಬದಲಿ ಭಾಗವತರಾಗಿ 5 ವರ್ಷಗಳ ಸೇವೆ ಮಾಡಿದ ಅನುಭವ ಇದೆ ಹಾಗೂ ಸಸಿಹಿತ್ಲು ಮೇಳಕ್ಕೆ ಬದಲಿ ಭಾಗವತರಾಗಿ ಹೋಗುತ್ತಿದ್ದರು.
ದೇವಿ ಮಹಾತ್ಮೆ, ಬ್ರಹ್ಮ ಕಪಾಲ, ಮಾನಿಷಾದ, ಜಾಂಬವತಿ ಕಲ್ಯಾಣ, ಗಜೇಂದ್ರ ಮೋಕ್ಷ ಇವರ ನೆಚ್ಚಿನ ಪ್ರಸಂಗಗಳು. ವೃಂದಾವನ ಸಾರಂಗ, ಹಿಂದೋಳ, ಆರಭಿ, ಶುದ್ಧ ಸಾವೇರಿ, ಅಮೃತವರ್ಷಿಣಿ ಇವರ ನೆಚ್ಚಿನ ರಾಗಗಳು. ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪಡ್ರೆ ಶ್ರೀಧರ, ಮುರಾರಿ ಕಡಂಬಳಿತ್ತಾಯ, ಜಯರಾಮ್ ಆಚಾರ್ ಚೇಳ್ಯಾರು, ಲವ ಕುಮಾರ್ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು. ಕೆ.ಗೋವಿಂದ ಭಟ್, ವಿಷ್ಣು ಶರ್ಮಾ, ಲಕ್ಷ್ಮಣ ಕುಮಾರ್ ಮರಕಡ ಇವರ ನೆಚ್ಚಿನ ವೇಷಧಾರಿಗಳು. ಶಿಶುಪಾಲ, ದೇವೇಂದ್ರ, ರಕ್ತಬೀಜ, ಕೃಷ್ಣ ಮುಂತಾದ ವೇಷಗಳನ್ನು ಮಾಡಿದ ಅನುಭವ ಇದೆ. ಬಲಿಪರು, ಪುತ್ತಿಗೆ ರಘುರಾಮ ಹೊಳ್ಳರು, ಇವರ ನೆಚ್ಚಿನ ಭಾಗವತರು. ಭಜನೆ ಹಾಗೂ ಸಂಗೀತ ಕೇಳುವುದು ಇವರ ಹವ್ಯಾಸಗಳು.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ಕಾಲದಲ್ಲಿ ಯಕ್ಷಗಾನದಲ್ಲಿ ತುಂಬಾ ಉತ್ತಮ ಪ್ರೇಕ್ಷಕರು ಇದ್ದಾರೆ. ಯಾಕಂದ್ರೆ ಒಳ್ಳೆಯದನ್ನು ಹಾಗೂ ತಪ್ಪು ಇದ್ದರೆ ಅದನ್ನು ಬಂದು ನೇರವಾಗಿ ಹೇಳುತ್ತಾರೆ.
ನನ್ನ ಯಕ್ಷಗಾನದ ಕ್ಷೇತ್ರದಲ್ಲಿ ಬೆಳವಣಿಗೆಗೆ ಕಾರಣರಾದ ಯಕ್ಷಗಾನ ನಾಟ್ಯ ಗುರುಗಳು ಶಿವರಾಮ್ ಪಣಂಬೂರು ಹಾಗೂ ದಿನಕರ ಎಸ್ ಪಚ್ಚನಾಡಿ. ವಿಷ್ಣುಮೂರ್ತಿ ಯಕ್ಷಗಾನ ಮಂಡಳಿ ಕುಳಾಯಿ, ನಂದನೇಶ್ವರ ಯಕ್ಷಗಾನ ಮಂಡಳಿ ಪಣಂಬೂರು, ಸರಯು ಬಾಲ ಯಕ್ಷ ವೃಂದ ಕೋಡಿಕಲ್, ಶುಭವರ್ಣ ಯಕ್ಷಗಾನ ಮಂಡಳಿ ಮರಕಡ ಇವರಿಗೆ ಧನ್ಯವಾದಗಳು. ನನಗೆ ಯಕ್ಷಗಾನದಲ್ಲಿ ಪ್ರೋತ್ಸಾಹ ಮಾಡಿದ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಅಂಡಾಲ ದೇವಿಪ್ರಸಾದ ಶೆಟ್ಟಿ, ಪ್ರಪುಲ್ಲ ಚಂದ್ರ ನೆಲ್ಯಾಡಿ, ರವಿ ಅಲೆವೂರಾಯ, ಒಡ್ಡೂರು ಸುಬ್ರಹ್ಮಣ್ಯ ಭಟ್ ಇವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತಾರೆ ಕಾರಂತರು.
31.05.2012ರಂದು ನಾಗಲಕ್ಷ್ಮೀ ಅವರನ್ನು ವಿವಾಹವಾದ ಹರಿಪ್ರಸಾದ್ ಕಾರಂತ್ ಸರಪಾಡಿ, ಇಬ್ಬರು ಮಕ್ಕಳು ಪುತ್ರ ಆದಿತ್ಯ ನಾರಾಯಣ, ಪುತ್ರಿ ಆಧ್ಯಾ ಕಾರಂತ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
Comments
Post a Comment