ಯಕ್ಷ ಸಾಧಕರು ೨೦
ತೆಂಕುತಿಟ್ಟು ಯಕ್ಷಗಾನದ ಯುವ ಮದ್ದಳೆ ಹಾಗೂ ಚೆಂಡೆ ವಾದಕರು ಶ್ರೀಯುತ ಲವ ಕುಮಾರ್ ಐಲ.
ಕೇರಳ ರಾಜ್ಯ, ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಈ ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ ಶ್ರೀಯುತ ಲವ ಕುಮಾರ್ ಐಲ.
ಶ್ರೀಯುತ ಚಂದ್ರಶೇಖರ್ ಆಚಾರ್ಯ ಹಾಗೂ ಶಶಿಕಲಾ ಇವರ ಸುಪುತ್ರನಾಗಿ ದಿನಾಂಕ 02.03.1990 ರಲ್ಲಿ ಇವರ ಜನನ. ದ್ವಿತೀಯ ಪಿ.ಯು.ಸಿ ಇವರ ವಿದ್ಯಾಭ್ಯಾಸ. ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದ ಮೇಲೆ ತುಂಬಾನೇ ಆಸಕ್ತಿ ಇದ್ದ ಇವರು ಯಕ್ಷಗಾನ ನಾಟ್ಯವನ್ನು ಶ್ರೀಯುತ ರಾಮ ಸಾಲಿಯಾನ್ ಮಂಗಲ್ಪಾಡಿ ಇವರಿಂದ ಕಲಿತರು. ತಬಲ ನುಡಿಸುವುದು ಅಂದ್ರೆ ಇವರಿಗೆ ತುಂಬಾನೇ ಪ್ರೀತಿ ಆದ್ದರಿಂದ ಯಕ್ಷಗಾನದ ಹಿಮ್ಮೇಳ ಕಲಿಯಬೇಕು ಅಂತ ಅನಿಸಿತು ಹಾಗೂ ಅಭಿರುಚಿಯಿಂದ ಮದ್ದಳೆ ಹಾಗೂ ಚೆಂಡೆ ನುಡಿಸುವುದನ್ನು ನೋಡಿ ಕಲಿತರು.
ಇವರು ಯಕ್ಷಗಾನ ಕಲಾ ಜೀವನವನ್ನು ಮೊದಲಿಗೆ ಕಟೀಲು ಮೇಳದಲ್ಲಿ ಪ್ರಾರಂಭಿಸಿದರು. ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರು ಚೌಕಿಯಲ್ಲಿ ಸಮಯ ಸಿಕ್ಕಿದಾಗ ಹಾಗೂ ರಂಗದಲ್ಲಿ ಚೆಂಡೆ ಹಾಗೂ ಮದ್ದಳೆಯ ಪಾಠವನ್ನು ಮಾಡುತಿದ್ದರು. ಇದರ ಜೊತೆಗೆ ಪೆರುವಾಯಿ ನಾರಾಯಣ ಭಟ್, ಪ್ರಶಾಂತ್ ಶೆಟ್ಟಿ ವಗೆನಾಡು, ಗುರುಪ್ರಸಾದ್ ಬೊಳಿಂಜಡ್ಕ ಇವರೆಲ್ಲರು ಸಹಕಾರ ಮಾಡಿದ್ದರು. ಯಕ್ಷಗಾನ ರಂಗದಲ್ಲಿ 7 ವರ್ಷಗಳಿಂದ ತಿರುಗಾಟ ಮಾಡುತ್ತಿರುವ ಇವರು ಕಟೀಲು ಮೇಳದಲ್ಲಿ 3 ವರ್ಷ, ಎಡನೀರು ಮೇಳದಲ್ಲಿ 3 ವರ್ಷ ಹಾಗೂ ಪ್ರಸ್ತುತ ಬಪ್ಪನಾಡು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ಮಾನಿಷಾದ, ದೇವಿ ಮಹಾತ್ಮೆ, ಸತ್ಯ ಹರಿಶ್ಚಂದ್ರ, ಮಹಾರಥಿ ಕರ್ಣ, ನಳದಮಯಂತಿ ಇವರ ನೆಚ್ಚಿನ ಪ್ರಸಂಗಗಳು. ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿ, ದಿನೇಶ್ ಅಮ್ಮಣ್ಣಾಯ, ಪಟ್ಲ ಸತೀಶ್ ಶೆಟ್ಟಿ ಇವರ ನೆಚ್ಚಿನ ಭಾಗವತರು. ದೇಲಂತಮಜಲು ಸುಬ್ರಮಣ್ಯ ಭಟ್ ಹಾಗೂ ಪ್ರಭಾಕರ್ ಗೋರೆ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು. ಭಾಗವತಿಕೆ ಮಾಡುವುದಕ್ಕೆ ತುಂಬಾನೇ ಆಸಕ್ತಿ ಇದೆ, ಭಾಗವತಿಕೆಯನ್ನು ಮಾಂಬಾಡಿ ಸುಬ್ರಮಣ್ಯ ಭಟ್ ಬಳಿ ಅಭ್ಯಾಸ ಮಾಡಿದ್ದಾರೆ.
ತಬಲ, ಹಾರ್ಮೋನಿಯಂ, ಕೀಬೋರ್ಡ್, ಮೃದಂಗ, ಆಡಿಯೋ ರೆಕಾರ್ಡಿಂಗ್ ಹಾಗೂ ಮಿಕ್ಸಿಂಗ್ ಇವರ ಹವ್ಯಾಸಗಳು.
ಹುಟ್ಟೂರ ಸನ್ಮಾನ, ಮೊಸರು ಕುಡಿಕೆ ಉತ್ಸವ ಸಮಿತಿ ಐಲ, ಸದಾಶಿವ ಕಲಾವೃಂದ ಅಂಬಾರು ಸನ್ಮಾನ ಹಾಗೂ ಪ್ರಶಸ್ತಿ ಇವರಿಗೆ ಲಭಿಸಿದೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಭಾವನಾತ್ಮಕ ಪ್ರಸಂಗಗಳಿಗೆ ಪ್ರೇಕ್ಷಕರ ಕೊರತೆ. ಯಕ್ಷಗಾನ ರಂಗದಲ್ಲಿ ಎಲ್ಲಾ ವಿಭಾಗದಲ್ಲಿ ಸ್ಪರ್ಧಾತ್ಮಕವಾಗಿ ಸಾಗುತ್ತಿದೆ. ತೆಂಕುತಿಟ್ಟು ಯಕ್ಷಗಾನದಲ್ಲಿ ನಿಗಂಟು ಎಂಬ ಪದಗಳು ಇಲ್ಲವಾಗಿ ಹೋಗಿದೆ. ಇತ್ತಿಚಿನ ದಿನಗಳಲ್ಲಿ ಯಕ್ಷಗಾನದಲ್ಲಿ ಸಮಯದ ಪ್ರಜ್ಞೆ ಇಲ್ಲದೆ ನಾಟ್ಯ ವಿಪರೀತವಾಗಿ ಹೋಗಿದೆ.
ದಿನಾಂಕ 23.05.2019ರಂದು ಚಿತ್ರಾಕ್ಷಿ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ನಾವು ನಂಬಿರುವ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
Comments
Post a Comment