ಯಕ್ಷ ಸಾಧಕರು ೮
ಬಡಗುತಿಟ್ಟಿನ ಆಲ್ ರೌಂಡರ್ ಕಲಾವಿದ ನೀಲ್ಕೋಡು ಶಂಕರ ಹೆಗಡೆ
ಉತ್ತರ ಕನ್ನಡ ಯಕ್ಷಗಾನ ರಂಗಕ್ಕೆ ಅನೇಕ ಪ್ರತಿಭೆಯನ್ನು ಬಡಗುತಿಟ್ಟು ಯಕ್ಷಗಾನ ರಂಗಕ್ಕೆ ನೀಡಿದೆ. ಇಂತಹ ಪ್ರತಿಭೆಗಳಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ ಬಡಗುತಿಟ್ಟಿನ ಆಲ್ ರೌಂಡರ್ ಕಲಾವಿದ ನೀಲ್ಕೋಡು ಶಂಕರ ಹೆಗಡೆ.
ದಿನಾಂಕ 09.05.1978ರಂದು ವಿಶ್ವನಾಥ ಹೆಗಡೆ ಹಾಗೂ ಪಾರ್ವತಿ ಹೆಗಡೆ ಇವರ ಪ್ರೀತಿಯ ಮಗನಾಗಿ ಜನನ. ಪಿಯುಸಿ ವರೆಗೆ ವಿದ್ಯಾಭ್ಯಾಸ. ಪಿಯುಸಿ ಶಿಕ್ಷಣದಲ್ಲಿ ಇರುವಾಗಲೇ ಯಕ್ಷಗಾನದ ಮೇಲೆ ತುಂಬಾನೇ ಆಸಕ್ತಿ ಇದ್ದ ಇವರು ಮುಂದೆ ಒಬ್ಬ ಒಳ್ಳೆಯ ಕಲಾವಿದ ಆಗಬೇಕು ಎಂಬ ಕನಸು ಕಂಡರು.
ಹೆಜ್ಜೆಗಾರಿಕೆಯನ್ನು ಶ್ರೀ ಹೆರಂಜಾಲು ಗೋಪಾಲ್ ಗಾಣಿಗ ಇವರಿಂದ ಕಲಿತು, ಮುಂದೆ ತಮ್ಮ ಕಲಾ ಕಲಿಕೆಯನ್ನು "ಶ್ರೀಮಯ ಕಲಾಕೇಂದ್ರ ಗುಣವಂತೆ" ಇಲ್ಲಿ ದಿ.ಕೆರೆಮನೆ ಶಂಭು ಹೆಗಡೆ ಇವರ ಮಾರ್ಗದರ್ಶನದಲ್ಲಿ ಗುರುಗಳಾದ ಶ್ರೀ ವಿದ್ವಾನ ಗಣಪತಿ ಭಟ್ ಹಾಗೂ ಶ್ರೀ ಎ ಪಿ ಪಾಠಕ್ ಇವರಿಂದ ಕಲಿತು ಯಕ್ಷಗಾನ ರಂಗದಲ್ಲಿ ಒಬ್ಬ ಒಳ್ಳೆಯ ಕಲಾವಿದನಾಗಿ ಹೊರಹೊಮ್ಮಿದರು.
ಶ್ರೀ ಕೆರೆಮನೆ ಮೇಳ, ಗುಂಡ ಬಾಳ ಮೇಳ, ಮಂದಾರ್ತಿ ಮೇಳ, ಕಮಲಶಿಲೆ ಮೇಳ, ಪೆರ್ಡೂರು ಮೇಳ, ಜಲವಳ್ಳಿ ಮೇಳದಲ್ಲಿ ತಿರುಗಾಟ ನಡೆಸಿ ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ಸ್ತ್ರೀ ವೇಷ:- ಮೋಹಿನಿ, ದಾಕ್ಷಾಯಿಣಿ, ಅಂಬೆ, ದ್ರೌಪದಿ, ಸತ್ಯಭಾಮೆ, ಚಿತ್ರಾಕ್ಷಿ, ಸಾವಿತ್ರಿ, ದಮಯಂತಿ, ಸುಭದ್ರೆ, ಸೀತೆ, ಪ್ರಭಾವತಿ, ರುಚಿಮತಿ, ವಿಷಯೆ, ಮೇನಕೆ, ಚಂದ್ರಾವಳಿ, ಸುಧೇಷ್ಣೆ, ಅಸಿಕೆ, ಇತ್ಯಾದಿ...
ಪುರುಷ ವೇಷ:- ಕೃಷ್ಣ, ಕೌರವ, ಸುಧನ್ವ, ಕಾರ್ತವೀರ್ಯ, ಅರ್ಜುನ, ಸುದರ್ಶನ, ಸುಗ್ರೀವ, ಕೀಚಕ, ಸಾಲ್ವ, ರುದ್ರಕೋಪ, ಚಂದ್ರಹಾಸ, ಈಶ್ವರ, ಲವ, ಕುಶ, ಹನುಮಂತ, ಇತ್ಯಾದಿ.. ಹಾಗೂ ಪೌರಾಣಿಕ ಪ್ರಸಂಗದ ಎಲ್ಲಾ ಸ್ತ್ರೀ ವೇಷ ಹಾಗೂ ಕೆಲವು ಪುರುಷ ವೇಷಗಳನ್ನು ಇವರು ಮಾಡಿದ್ದಾರೆ.
ಅದರಲ್ಲೂ ಸಾಮಾಜಿಕ ಪ್ರಸಂಗವಾದ ಪದ್ಮ ಪಲ್ಲವಿ, ಬೆಳ್ಳಿ ನಕ್ಷತ್ರ, ನಾಗವಲ್ಲಿ, ನಾದಿನಿ ನಂದಿನಿ, ಶಿವರಂಜಿನಿ, ನಾಗಶ್ರೀ, ಶಂಕರಾಭರಣ, ಮೇಘರಂಜಿನಿ, ಗೋಕುಲಾಷ್ಟಮಿ, ಪುಷ್ಪಸಿಂಧೂರಿ, ಕ್ಷಮಯಾಧರಿತ್ರಿ, ಅಗ್ನಿ ವರ್ಷ, ಅಪೂರ್ವ ಅರ್ಧಾಂಗಿ, ಭ್ರಮರ ಭಾರ್ಗವಿ, ಚಂದ್ರಮುಖಿ ಸೂರ್ಯಸಖಿ ಪ್ರಸಂಗದ ಇವರ ಅಭಿನಯ ಯಾವತ್ತಿಗೂ ಟಾಪ್ ಕ್ಲಾಸ್.
ನೂರಾರು ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಪ್ರಶಸ್ತಿಗಳು ಇವರಿಗೆ ಸಿಕ್ಕಿದೆ. ಯಕ್ಷಗಾನದ ಜೊತೆಗೆ ಸಂಗೀತ, ಬರೆವಣಿಗೆ, ಸಾಂಸ್ಕೃತಿಕವಾಗಿ ಕ್ರಿಯಾಶೀಲವಾಗಿರುವುದು ಇವರ ಹವ್ಯಾಸಗಳು. ಸಾಲಿಗ್ರಾಮ ಮೇಳದ ಅನುಭವ ಕೇಳಿದಾಗ ಇವರು ಹೇಳುವುದು ಹೀಗೆ "ಸಾಲಿಗ್ರಾಮ ಮೇಳ ಒಂದು ಒಳ್ಳೆಯ ಮನೆಯ ವಾತಾವರಣ, ರಂಗಸ್ಥಳದಲ್ಲಿ ಯಾವುದೋ ಭವ್ಯತೆ ಮತ್ತು ಗೌರವ; ಮನಸ್ಸಿಗೆ ದಿವ್ಯತೆ".
ನನಗೆಲ್ಲವನ್ನು ನೀಡಿದ ಯಕ್ಷಗಾನಕ್ಕಾಗಿ ಏನಾದರು ನೀಡಬೇಕು ಎಂಬ ತುಡಿತವೇ "ಅಭಿನೇತ್ರಿ ಟ್ರಸ್ಟ್"ಗೆ ಕಾರಣ. ನನ್ನ ಈ ಸುಂದರ ಕನಸಿಗೆ ಚಂದದ ಹೆಸರಿಟ್ಟು ಮಾರ್ಗದರ್ಶನ ಮಾಡಿದವರು "ಶ್ರೀ ವಿದ್ವಾನ್ ಉಮಾಕಾಂತ್ ಭಟ್". ನನ್ನ ಜೊತೆಗೆ ಬೆನ್ನೆಲುಬಾಗಿ ನಿಂತವರು ನನ್ನ ಸಮಾನಮನಸ್ಕ ಸ್ನೇಹಿತರು, ಕಲಾಭಿಮಾನಿಗಳು, ಕಲಾಪೋಷಕರು.
"ತುಳಿದು ಬೆಳೆಯುವುದು ಗೆಲುವಲ್ಲ
ಬೆಳೆದು ಬೆಳೆಸುವುದೇ ನಿಜವಾದ ಗೆಲುವು" ಇದು ನನ್ನ ಟ್ರಸ್ಟ್ ನ ಧ್ಯೇಯ.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆಗಳು ಕೇಳಿದಾಗ ಇವರು ಹೇಳುವುದು ಹೀಗೆ "ಆಸಕ್ತಿ ಇರುವ ಮಕ್ಕಳಿಗೆ ಯಕ್ಷ ಶಿಕ್ಷಣ, ಶಾಲೆಯಲ್ಲಿ ಯಕ್ಷಗಾನ ಕಲಿಸುವುದು ಹೀಗೆ ಹತ್ತು ಹಲವು ಯೋಜನೆಗಳನ್ನು ನಮ್ಮ ಟ್ರಸ್ಟ್ ನಿಂದ ಮಾಡುವ ಯೋಚನೆ ಇದೆ. ನನ್ನ ಕಲಾ ಅಭ್ಯುದಯಕ್ಕೆ ಸಹಕರಿಸಿದವರು:-
೧) ಶ್ರೀ ಆರ್ಗೋಡು ಮೋಹನದಾಸ ಶೆಣೈ.
೨) ಶ್ರೀ ಸುಬ್ರಹ್ಮಣ್ಯ ಧಾರೇಶ್ವರ.
೩) ಶ್ರೀ ಗೋಪಾಲ ಆಚಾರ್ಯ ತೀರ್ಥಹಳ್ಳಿ
೪) ಶ್ರೀ ಕೃಷ್ಣಯಾಜಿ ಬಳ್ಕೂರು.
೫) ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ ಇತರರು.
ದಿನಾಂಕ 13.12.2009ರಂದು ನನ್ನ ಕಲೆಯನ್ನು ನೋಡಿ ಮೆಚ್ಚಿ ಮದುವೆಯಾದರು ತೃಪ್ತಿ, ನಮ್ಮ ಮಗಳು ದ್ಯುತಿ ನಮ್ಮ ಮನೆಯ ಹಾಗೂ ಸಂಸ್ಥೆಯ ಬೆಳಕು ಎನ್ನುತ್ತಾರೆ ಶ್ರೀಯುತ ನೀಲ್ಕೋಡು ಶಂಕರ ಹೆಗಡೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು
Comments
Post a Comment