ಯಕ್ಷ ಸಾಧಕರು ೧೦೦

“ಸುವರ್ಣ ಸ್ವರ ಶ್ರವಣ”
“ಮಯ್ಯರ ಕಲಾರೂಪ..ಮಧುರಾಲಾಪ”

ಸ್ವರ ಸ್ನೇಹ ಜೀವಿ ಶ್ರೀಯುತ ರಾಘವೇಂದ್ರ ಮಯ್ಯ ಹಾಲಾಡಿ.

ತಮ್ಮ ಅದ್ಭುತ ಕಂಠಸಿರಿಯಿಂದ ಯಕ್ಷಗಾನದ ಹಾಡುಗಾರಿಕೆಗೆ ಅತ್ಯಮೂಲ್ಯ ಶಾಸ್ತ್ರೀಯ ಸಂಸ್ಕಾರವನ್ನು ಕೊಟ್ಟು ಯಕ್ಷಗಾನಲೋಕವನ್ನು ಮಧೂರ್ಯಗೊಳಿಸಿ ದಂತಕತೆ ಏನಿಸಿದ ಶ್ರೇಷ್ಠರ ಸಾಲಿನಲ್ಲಿ ನಿಲ್ಲುವ ಸಾಯೋಗ್ಯತಾ ಸಂಪನ್ನ ರಂಗ ತಜ್ಞ ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ. ಭಾವ ತುಂಬಿದ ಸ್ಪಷ್ಟ ಉಚ್ಚಾರದೊಂದಿಗೆ ಕಥೆಯ ದೃಶ್ಯಗಳಿಗೆ ಜೀವ ನೀಡಬಲ್ಲ ರಾಗವನ್ನು ಬಳಸಿ ಆ ರಾಗದಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸಿ, ಮಾಧುರ್ಯ ಭರಿತ ಸಮ್ಮೋಹಕ ಕಂಠ ಸಿರಿಯಿಂದ ಪ್ರದರ್ಶನಕ್ಕೆ ರಂಗನ್ನು ತರಬಲ್ಲ ಸಂಜೀವಕ ಸುಸ್ವರದ ರಾಗಸ್ವರಸಿರಿಯ ದೊರೆ ಭಾಗವತ ರಾಘವೇಂದ್ರ ಮಯ್ಯ.

ನಾಗಪ್ಪ ಮಯ್ಯ ಹಾಗೂ ಸರಸ್ವತಿ ಮಯ್ಯ ಇವರ ಮಗನಾಗಿ ೧೫.೧೦.೧೯೬೮ ರಂದು ಇವರ ಜನನ. ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ. ದಿ.ಕಾಳಿಂಗ ನಾವಡರು ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾದರು ಎಂದು ಮಯ್ಯರು ಹೇಳುತ್ತಾರೆ.

ದಿ.ನಾರ್ಣಪ್ಪ ಉಪ್ಪೂರು, ದಾಮೋದರ ಉಪ್ಪೂರು, K.P. ಹೆಗ್ಡೆ, ಸದಾನಂದ ಐತಾಳ್ ಇವರ ಯಕ್ಷಗಾನ ಗುರುಗಳು. ವೃಂದಾವನ ಸಾರಂಗ, ಚಾಂದ್, ತುಜಾವಂತು, ಮಧ್ಯಮವತಿ, ಹಿಂದೋಳ ಇವರ ನೆಚ್ಚಿನ ರಾಗಗಳು.
ಕೆಮ್ಮಣ್ಣು ಆನಂದ, ರಾಮಕೃಷ್ಣ ಮಂದಾರ್ತಿ ಇವರ ನೆಚ್ಚಿನ ಚೆಂಡೆ ವಾದಕರು. ಮದ್ದಳೆಯಲ್ಲಿ ಗೋಪಾಲ ರಾಯರು ಹಿರಿಯಡ್ಕ, ಹುಂಚದಕಟ್ಟೆ ಶ್ರೀನಿವಾಸ ರಾವ್, ದುರ್ಗಪ್ಪ ಗುಡಿಗಾರ್, ಶಂಕರ ಭಾಗವತ ಯಲ್ಲಾಪುರ ಇವರ ನೆಚ್ಚಿನ ಮದ್ದಳೆ ವಾದಕರು.
ಗುರುಗಳಾದ ನಾರ್ಣಪ್ಪ ಉಪ್ಪೂರು, ಕಾಳಿಂಗ ನಾವಡ, ನರಸಿಂಹ ದಾಸ್ ಹಾಗೂ ತೆಂಕಿನಲ್ಲಿ ದಾಮೋದರ ಮಂಡೇಚ ಇವರ ನೆಚ್ಚಿನ ಭಾಗವತರು. ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.

ಅಮೃತೇಶ್ವರಿ, ಸೌಕೂರು, ಹಾಲಾಡಿ, ಪೆರ್ಡೂರು, ಸಾಲಿಗ್ರಾಮ ಜೊತೆಗೆ ಅತಿಥಿಯಾಗಿ ಮಂಗಳದೇವಿ, ದೇಂತಡ್ಕ, ಹಿರಿಯಡ್ಕ, ಮಡಾಮಕ್ಕಿ, ಇತ್ಯಾದಿ ಮೇಳಗಳಲ್ಲಿ ಸುಮಾರು ನಲುವತ್ತು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಯಕ್ಷಗಾನದ ಇಂದಿನ ಸ್ಥತಿಗತಿ ಹಾಗೂ ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದ ದಿಕ್ಕು ಇಂದು ಬದಲಾವಣೆ ಹೊಂದಿದೆ. ಆದರೆ ಅದು ಯಾವತ್ತೂ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳಬಾರದು.
ಇಂದು  ಹೆಚ್ಚಿನ ಯುವಕರು ಯಕ್ಷಗಾನದತ್ತ ಒಲವು ತೋರಿಸುತ್ತಿದ್ದಾರೆ. ಅದು ಸಂತೋಷದ ವಿಷಯ. ಆದರೆ  ಪ್ರೇಕ್ಷಕರು ಕಲಾವಿದರೊಡನೆ ಧೈರ್ಯವಾಗಿ ಮಾತಾಡುವಂತಿರಬೇಕು. ತಪ್ಪು ಒಪ್ಪುಗಳನ್ನು ಸರಿಯಾಗಿ ತಿಳಿ ಹೇಳುವಂತಿರಬೇಕು. ಇದರಿಂದ ಕಲೆ, ಕಲಾವಿದ ಎರಡೂ ಬೆಳೆಯಲು ಸಾಧ್ಯ ಎಂದು ಮಯ್ಯರು ಹೇಳುತ್ತಾರೆ.

ಜಿಲ್ಲಾ ರಾಜ್ಯೋತ್ಸವ, ಕವಿ ಮುದ್ದಣ, ಕಾಳಿಂಗ ನಾವಡ ಪ್ರಶಸ್ತಿ, ಗುರುನರಸಿಂಹ ಪ್ರಶಸ್ತಿ, ಬೆಳದಿಂಗಳ ಸಮ್ಮೇಳನ ಪ್ರಶಸ್ತಿ, ಇನ್ನೂ ಸಾವಿರಾರು ಪ್ರಶಸ್ತಿ ಸನ್ಮಾನಗಳು ಇವರಿಗೆ ಲಭಿಸಿವೆ.

೧೯.೦೬.೨೦೦೬ ರಂದು ಪಲ್ಲವಿ ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳಾದ ಧಿಷಣ ಹಾಗೂ ಧನ್ವಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651


ಸ್ವರ ಸ್ನೇಹ ಜೀವಿ ಶ್ರೀಯುತ ರಾಘವೇಂದ್ರ ಮಯ್ಯ ಹಾಲಾಡಿ ಇವರ ಜೊತೆಗೆ ಯಕ್ಷ ಸಾಧಕರು ಸರಣಿ ಲೇಖನದ
"ಸುವರ್ಣ ಸ್ವರ ಶ್ರವಣ"
"ಮಯ್ಯರ ಕಲಾರೂಪ..ಮಧುರಾಲಾಪ"
ವಿಶೇಷ ಸಂದರ್ಶನ ಹಾಗೂ ಅವರ ಜೀವನದ ಕತೆ ಹಾಗೂ ಅವರ ಯಕ್ಷ ರಂಗದ ಸುದೀರ್ಘ ೪೦ ವರ್ಷಗಳ  ಯಕ್ಷ ಪಯಣದ ಅನುಭವವನ್ನು ನಮ್ಮ ಜೊತೆಗೆ ಹಂಚಿಕೊಂಡಿರುತ್ತಾರೆ. ಈ ಕೆಳಗಿರುವ ಲಿಂಕ್ ಅನ್ನು ಒತ್ತಿ ಸಂದರ್ಶನದ ವಿಡಿಯೋ ವೀಕ್ಷಿಸಬಹುದು
.

https://youtu.be/yTtbGtW9JAs


Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395