ಯಕ್ಷ ಸಾಧಕರು ೪೪
ರಂಗದ ಚೆಲುವ ಹರೀಶ್ ಮೊಗವೀರ ಜಪ್ತಿ
ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯುವ ಕಲಾವಿದರು ನೋಡಲು ಸಿಗುತ್ತಾರೆ. ಇಂತಹ ಕಲಾವಿದರ ಸಾಲಿನಲ್ಲಿ ಸದ್ಯ ಸೌಕೂರು ಮೇಳದಲ್ಲಿ ಮಿಂಚುತ್ತಿರುವ ಯುವ ಕಲಾವಿದ ರಂಗದ ಚೆಲುವ ಹರೀಶ್ ಮೊಗವೀರ ಜಪ್ತಿ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಇಂಬಾಳಿ ಹಕಲ್ಮನೆ ಜಪ್ತಿಯಲ್ಲಿ ದಿನಾಂಕ ೦೭.೦೪.೧೯೯೧ ರಂದು ಶ್ರೀಮತಿ ಸಾಧು ಮೊಗವೀರ ಹಾಗೂ ಶ್ರೀಯುತ ಆನಂದ ಮೊಗವೀರ ಇವರ ಮಗನಾಗಿ ಜನನ. ಬಿ.ಕಾಮ್ ಇವರ ವಿದ್ಯಾಭ್ಯಾಸ. ಸುಳಗೋಡು ನಾರಾಯಣರಿಂದ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ. ಶ್ರೀಯುತ ಶ್ರೀಧರ್ ಉಪ್ಪೂರು, ಪಾಂಡರಿನಾಥ ಸಾಲಿಗ್ರಾಮ, ಉದಯ ಹೊಸಾಳ ಇವರ ಯಕ್ಷಗಾನದ ಗುರುಗಳು.
ಅಭಿಮನ್ಯು ಕಾಳಗ, ಚಕ್ರಚಂಡಿಕಾ, ಬಬ್ರುವಾಹನ, ಶ್ವೇತಕುಮಾರ, ಸುಧನ್ವ ಮೋಕ್ಷ, ಅಗ್ರಪೂಜೆ, ಪಾಂಚಜನ್ಯ, ವಧೂ ವೈಶಾಲಿನಿ, ಕಂಸವಧೆ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ಅಭಿಮನ್ಯು, ಬರ್ಬರೀಕ, ವಿದ್ಯುನ್ಮಾಲಿ, ಬಬ್ರುವಾಹನ, ವಿಷ್ಣು, ಕುಶ-ಲವ, ಶಿಶುಪಾಲ, ಧರ್ಮಾಂಗದ, ಚಂಡ -ಮುಂಡ, ರುದ್ರಕೋಪ ಮುಂತಾದವು ಇವರ ನೆಚ್ಚಿನ ವೇಷಗಳು. ಸಾಲಿಗ್ರಾಮ, ಸೌಕೂರು ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವ ಇವರಿಗೆ ಇದೆ. ಅನೇಕ ಕಡೆಗಳಲ್ಲಿ ಮೇಳದ ರಂಗವೇದಿಕೆಯಲ್ಲಿ ಹಲವಾರು ಸಂಮಾನಗಳು ಹಾಗೂ ಪ್ರಶಸ್ತಿ ಇವರಿಗೆ ಸಿಕ್ಕಿರುತ್ತದೆ. ಇವೆಲ್ಲವೂ ನನ್ನ ಹೊಣೆಗಾರಿಕೆಯನ್ನು ಹೆಚ್ಚಿಸಿದೆ ಎಂದು ಇವರು ಹೇಳುತ್ತಾರೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಮೊದಲಿಗೆ ಪ್ರಸಂಗ ಪ್ರತಿಯನ್ನು ಪೂರ್ಣವಾಗಿ ಒಮ್ಮೆ ಓದಿಕೊಳ್ಳುವೆ.. ಆ ಬಳಿಕ ಹಿರಿಯ ಕಲಾವಿದರಲ್ಲಿ ಪ್ರಸಂಗದ ನಡೆ ಕೇಳಿಕೊಂಡು, ಪ್ರಸಂಗದಲ್ಲಿ ಹೇಳಲೇಬೇಕಾದ ಮಾತುಗಳನ್ನು ಗುರುತಿಸಿಕೊಂಡು ಉಳಿದಂತೆ ಪಾತ್ರವನ್ನು ಹೇಗೆ ಚಿತ್ರಿಸಬಹುದು ಎಂಬುದಾಗಿ ಯೋಚಿಸುತ್ತೇನೆ.
ಇವರ ಹವ್ಯಾಸಗಳ ಬಗ್ಗೆ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಯಕ್ಷಗಾನ ನನ್ನ ಬದುಕಿನ ಪ್ರಧಾನ ಅಂಗ. ಸಮಯ ಸಿಕ್ಕಾಗ ಓದುವುದು ಹಾಗೂ ಯಕ್ಷಗಾನ ನೋಡುವುದು ನನ್ನ ಪ್ರಧಾನ ಹವ್ಯಾಸಗಳು. ದೈಹಿಕ ಸಾಮರ್ಥ್ಯ ಹೆಚ್ಚಿಸುವ ಕ್ರೀಡೆಗಳನ್ನು ಸಮಯ ಸಿಕ್ಕಾಗ ಆಡುವೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ಇಂದು ಉಚ್ಚಾಯ ಸ್ಥಿತಿಯಲ್ಲಿದೆ. ಹೊಸತನದ ಹೊಳಪು ಪರಂಪರೆಯ ಜೊತೆ ಸೇರಿ ಕಲೆ ಬೆಳೆದಿದೆ. ಹಳೆಯ ಮಟ್ಟು, ತಿಟ್ಟುಗಳ ಉಳಿವಿನೊಂದಿಗೆ ಹೊಸತನದ ಸೇರ್ಪಡೆಯೊಂದಿಗೆ ಕಲೆ ಸಾಗುತ್ತಿರುವುದು ಸಂತೋಷದ ವಿಚಾರ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಇವರು ಹೇಳುವುದು ಹೀಗೆ:-
ಸಜ್ಜನ ಹಾಗೂ ಪ್ರಬುದ್ಧ ಪ್ರೇಕ್ಷಕರು ಯಕ್ಷಗಾನ ವಲಯದಲ್ಲಿ ಸಿದ್ಧರಾಗುತ್ತಿದ್ದಾರೆ.. ಕಲಾವಿದರು ತಪ್ಪಿದಲ್ಲಿ ತಿದ್ದುವ ಪ್ರೇಕ್ಷಕರೇ ಕಲಾಪ್ರಪಂಚದ ಉಳಿವಿಗೆ ಜೀವಾಳ. ಅಂತಹ ಸಹೃದಯಿ ಸಂವಾದಕರ ಸಲಹೆಯನ್ನು ಪ್ರತಿ ಕಲಾವಿದರು ಸ್ವೀಕರಿಸಿದರೆ ಒಳ್ಳೆಯದು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಎಂದು ಕೇಳಿದಾಗ ಇವರು ಹೇಳುವುದು ಹೀಗೆ:-
ಕಲಾವಿದನಾಗಿ ಕಲಾಕ್ಷೇತ್ರದಲ್ಲಿ ಉಳಿಯಬೇಕು, ಬೆಳೆಯಬೇಕು ಎಂಬುದು ನನ್ನ ಕನಸು ಹಾಗೂ ಹಂಬಲ. ಯೋಜನೆ ಏನು ಇಲ್ಲದಿದ್ದರೂ ಕಲಾವಿದನಾಗಿ ಕಲಾ ಸೇವೆಯಲ್ಲಿ ಬದುಕು ಸಾಗಿಸುವ ಆಶಯ ನನ್ನದು.. ನನ್ನಲ್ಲಿರುವ ವಿಚಾರ ಇನ್ನೊಬ್ಬರಿಗೆ ತಿಳಿಸುತ್ತಾ , ಹಿರಿಯರ - ಕಿರಿಯರ ಮಾರ್ಗದರ್ಶನ ಪಡೆಯುತ್ತಾ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವ ಯೋಚನೆ, ಯೋಜನೆ ಇದೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಹಾಗೂ ಸೌಕೂರು ದುರ್ಗಾಪರಮಶ್ವರೀ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photo Click:- ಪ್ರವೀಣ್ ಪೆರ್ಡೂರು, ಯಕ್ಷ ಸಾರಂಗ, ಸುಮಂತ್, ಸುದರ್ಶನ್ ಮಂದಾರ್ತಿ.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment