ಯಕ್ಷ ಸಾಧಕರು ೩೫

ಬಡಗುತಿಟ್ಟಿನ ಖ್ಯಾತ ಭಾಗವತರು ಸ್ವರ ನಿಧಿ ಶ್ರೀಯುತ ಪ್ರಸನ್ನ ಭಟ್ ಬಾಳ್ಕಲ್.

ಉತ್ತರಕನ್ನಡ ಜಿಲ್ಲೆಯು ಅನೇಕ ಕಲಾವಿದರನ್ನು ಯಕ್ಷಗಾನ ರಂಗಕ್ಕೆ ನೀಡಿದೆ. ಇಂತಹ ಕಲಾವಿದರ ಸಾಲಿನಲ್ಲಿ ಸದ್ಯ ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಕಲಾವಿದರು ಸ್ವರ ನಿಧಿ ಶ್ರೀಯುತ ಪ್ರಸನ್ನ ಭಟ್ ಬಾಳ್ಕಲ್.

ದಿನಾಂಕ 25.02.1979 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಸಮೀಪ ಬಾಳ್ಕಲ್ ಶ್ರೀಮತಿ ಪಾರ್ವತಿ ಭಟ್ ಹಾಗೂ ಪದ್ಮನಾಭ ಭಟ್ಟ ಇವರ ಪ್ರೀತಿಯ ಮಗನಾಗಿ ಜನನ. SSLC ಮತ್ತು ಸಂಸ್ಕ್ರತ ಭಾಷೆ ಅಧ್ಯಯನ, ಜೋತಿಷ್ಯ ವಿದ್ವನ್ ಮಧ್ಯಮಾ, ಸಂಸ್ಕೃತ MA ಇವರ ವಿದ್ಯಾಭ್ಯಾಸ. ತಂದೆ ತಾಳಮದ್ದಳೆ ಅರ್ಥಧಾರಿ, ಮತ್ತೆ ಆ ಕಾಲದ ವೇಷಧಾರಿಯೂ ಹೌದು. ಸೋದರಮಾವಂದಿರೂ ಯಕ್ಷಗಾನ ಕಲಾವಿದರು, ಪರಿಸರದಲ್ಲಿ ಇರುವ ಯಕ್ಷಗಾನದ ಪ್ರಭಾವವೇ ಯಕ್ಷಗಾನದತ್ತ ಒಲವು ಮೂಡಲು ಪ್ರೇರಣೆಯಾಯಿತು. ಪ್ರಸಿದ್ಧ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರೊಂದಿಗಿನ ಬಾಂಧವ್ಯ ಯಕ್ಷಗಾನದ ಆಸಕ್ತಿಗೆ ಮೂರ್ತರೂಪ ಬರಲು ಕಾರಣ.

ಭಾಗವತಿಕೆಯ ಪ್ರಾಥಮಿಕ ಪಾಠ ಕೊಂಡದಕುಳಿಯವರಲ್ಲೇ ಕಲಿತು, ಆನಂತರ ಉಡುಪಿ ಯಕ್ಷಗಾನ ಕೇಂದ್ರದ ಗುರುಗಳಾದ ಗೋರ್ಪಡಿ ವಿಠಲ ಪಾಟೀಲರಲ್ಲಿ ಹೆಚ್ಚಿನ ಅಭ್ಯಾಸ, ವಿದ್ವಾನ್ ಗಣಪತಿ ಭಟ್, ಕೆಪಿ ಹೆಗಡೆ, ಹೆರಂಜಾಲ್ ಗೋಪಾಲ ಗಾಣಿಗರು, ಕಪ್ಪೆಕೆರೆ ಸುಬ್ರಾಯ ಭಾಗವತರು, ನೀಲಾವರ ಲಕ್ಷ್ಮಿನಾರಾಯಣಯ್ಯ ಮೊದಲಾದ ಹಿರಿಯ ಭಾಗವತರ ಮಾರ್ಗದರ್ಶನದಿಂದ ಯಕ್ಷಗಾನದಲ್ಲಿ ಸಮರ್ಥ ಭಾಗವತರಾಗಿ ಹೊರ ಹೊಮ್ಮಿದರು.

ಕೊಂಡದಕುಳಿಯವರ ಪೂರ್ಣಚಂದ್ರ ಮೇಳದಲ್ಲಿ‌17 ವರ್ಷ ಭಾಗವತನಾಗಿ ನಿರ್ವಹಣೆ, ಸಾಲಿಗ್ರಾಮ, ಮಂದಾರ್ತಿ, ಅಮೃತೇಶ್ವರಿ, ಸೌಕೂರು, ಹಾಲಾಡಿ, ಮಡಾಮಕ್ಕಿ, ಕಮಲಶಿಲೆ ಮುಂತಾದ ಬಡಗಿನ ಬಹುತೇಕ ಮೇಳಗಳಲ್ಲಿ ಅತಿಥಿಯಾಗಿ ಭಾಗವತರಾಗಿ ಭಾಗವಹಿಸಿದ ಅನುಭವ. ಎರಡು ವರ್ಷ ಜಲವಳ್ಳಿ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಎರಡು ವರ್ಷದಿಂದ ದಕ್ಷ ಯಜಮಾನರಾದ ಕರುಣಾಕರ ಶೆಟ್ಟಿಯವರ ಯಾಜಮಾನ್ಯದ ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. 

ಹೆಚ್ಚಿನ ಎಲ್ಲ ಪೌರಾಣಿಕ ಪ್ರಸಂಗಳು ಇವರ ನೆಚ್ಚಿನ ಪ್ರಸಂಗಗಳು. ಅದರಲ್ಲೂ ಸೀತಾ ವಿಯೋಗ, ಕೃಷ್ಣಾರ್ಜುನ, ಲಂಕಾದಹನ, ಸತ್ಯವಾನ ಸಾವಿತ್ರಿ, ಹರಿಶ್ಚಂದ್ರ, ಬ್ರಹ್ಮಕಪಾಲ, ದಕ್ಷಯಜ್ಞ, ಜಾಂಬವತಿ ಕಲ್ಯಾಣ, ಪಟ್ಟಾಭಿಷೇಕ, ಕೀಚಕ ವಧೆ, ಮಾಗಧ ವಧೆ, ಚಂದ್ರಹಾಸ ಮುಂತಾದವು ಇವರ ಅತ್ಯಂತ ಇಷ್ಟದ ಪ್ರಸಂಗಗಳು. ಎಲ್ಲ ರಾಗಗಳಲ್ಲಿ ಹಾಡುವುದು ಅಂದರೆ ಇವರಿಗೆ ತುಂಬಾ ಇಷ್ಟ. ಅದರಲ್ಲೂ ಮೋಹನ, ಕಲ್ಯಾಣಿ, ಭೈರವಿ, ಸಾವೇರಿ, ಹಂಸಾನಂದಿ, ಹಿಂದೋಳ, ಬೃಂದಾವನಿ, ಕಲಾವತಿ, ಬೇಹಾಗ್, ತೋಡಿ, ಮುಂತಾದವು ಇವರು ಹೆಚ್ಚು ಇಷ್ಟಪಡುವ ರಾಗಗಳು. 
ಯಕ್ಷಗಾನ ರಂಗದಲ್ಲಿ ಇರುವ ಎಲ್ಲಾ ಚೆಂಡೆ ಹಾಗೂ ಮದ್ದಳೆಯವರು ಇವರ ನೆಚ್ಚಿನ ಕಲಾವಿದರು. ಕಾಳಿಂಗ ನಾವಡರು, ವಿದ್ವಾನ್ ಗಣಪತಿ ಭಟ್, ಸುಬ್ರಹ್ಮಣ್ಯ ಧಾರೇಶ್ವರ, ಹೆರಂಜಾಲ್ ಗೋಪಾಲ್ ಗಾಣಿಗ, ಕೆಪಿ ಹೆಗಡೆ, ನಗರ ಸುಬ್ರಹ್ಮಣ್ಯ ಆಚಾರ್, ಜನ್ಸಾಲೆ ರಾಘವೇಂದ್ರ ಆಚಾರ್, ತೆಂಕಿನಲ್ಲಿ ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ ಮುಂತಾದವರು ಇವರ ನೆಚ್ಚಿನ ಭಾಗವತರು.

ಯಕ್ಷಗಾನದಲ್ಲಿ ವೇಷ ಮಾಡುವ ಆಸಕ್ತಿ ಇದೆಯಾ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ: 
ವೇಷ ಮಾಡುವ ಆಸಕ್ತಿ, ಅರ್ಹತೆ ಯಾವುದೂ ಇಲ್ಲ, ಅನಿವಾರ್ಯತೆಗೆ ಎರಡು ಮೂರು ಬಾರಿ ವೇಷ ಮಾಡಿದ್ದಿದೆ ಎಂದು ಹೇಳುತ್ತಾರೆ. ಶಾಸ್ತ್ರೀಯ ಸಂಗೀತ ಕೇಳುವುದು, ಬೇರೆ ಬೇರೆ ಯಕ್ಷಗಾನ ನೋಡುವುದು ಇವರ  ಹವ್ಯಾಸಗಳು. ಕೊಂಡದಕುಳಿ‌ ರಾಮ ಹೆಗಡೆ ಪ್ರಶಸ್ತಿ, ಮುಂಬೈ ಕನ್ನಡಿಗರಿಂದ‌ ಸಮ್ಮಾನ,  ಹಾಗೇ ಕೆಲವು ವೇದಿಕೆಗಳಲ್ಲಿ ಸಮ್ಮಾನಗಳು ಇವರ ಮುಡಿಗೆ ಸಿಕ್ಕಿರುತ್ತದೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಬಗ್ಗೆ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಇಡೀ ರಾತ್ರಿ ನಿದ್ದೆ ಬಿಟ್ಟು ಆಟ ನೋಡುವ ಜನ ವಿರಳ‌ ಆಗಿದ್ದಾರೆ. ಗುಂಪುಗಾರಿಕೆ ಮಾಡುವ ಪ್ರೇಕ್ಷಕರೂ ಹಲವರು ಇದ್ದಾರೆ. ವಸ್ತುನಿಷ್ಠ ಅಭಿಮಾನ ‌ಪ್ರೋತ್ಸಾಹ ಇದ್ದರೆ ಯಕ್ಷಗಾನಕ್ಕೆ ಅದು ಹಿತ, ಅದನ್ನುಳಿದು ವ್ಯಕ್ತಿನಿಷ್ಠ ಪ್ರೋತ್ಸಾಹ , ಅನಾರೋಗ್ಯಕರ ಬೆಂಬಲ, ಅತಿಯಾದ ಪ್ರಚಾರ ಯುಕ್ತಾಯುಕ್ತ ವಿವೇಚನೆ ಇಲ್ಲದ ವಿಮರ್ಷೆ, ತಮ್ಮ ವೈಯಕ್ತಿಕ ಅಭಿಪ್ರಾಯವನ್ನೇ ಸಾರ್ವತ್ರಿಕ ತೀರ್ಮಾನ ಎಂಬಂತೆ ಮಾಧ್ಯಮಗಳಲ್ಲಿ ಹರಿಯ ಬಿಡುವುದು ಇವುಗಳೆಲ್ಲ ಯಕ್ಷಗಾನ ಕ್ಷೇತ್ರಕ್ಕೆ ಖಂಡಿತವಾಗಿಯೂ ತುಂಬಾನೇ ಮಾರಕ. ಒಳ್ಳೆಯದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲವು ಪ್ರಜ್ಞಾವಂತ ಪ್ರೇಕ್ಷಕರೂ ಇದ್ದಾರೆ. ದಯವಿಟ್ಟು ಯಾರೇ ಕಲಾವಿದರಲ್ಲಾದರೂ ಒಳ್ಳೆಯದಿದ್ದಲ್ಲಿ ಮೆಚ್ಚಿಕೊಂಡು ಪ್ರೋತ್ಸಾಹಿಸಿ, ಹಾಗೇ ಬೇಡದಿದ್ದು ಕಂಡರೆ ಅದನ್ನೂ‌ ತಿಳಿಸಿ, ನಿಮಗೆ ವೈಯಕ್ತಿಕವಾಗಿ ಬೇಕಾದವರು ಎಂದ ಮಾತ್ರಕ್ಕೆ ಅವರು ಮಾಡುವುದೆಲ್ಲವನ್ನೂ (ರಂಗದ ಒಳಗೂ, ಹೊರಗೂ) ಬೆಂಬಲಿಸಿದರೆ ಅದು ಆ ಕಲಾವಿದರಿಗೂ, ಕಲೆಗೂ ಎರಡೂ ಮಾರಕ.
ಸಂಘಟಕರಲ್ಲಿ ಒಂದು ವಿಜ್ಞಾಪನೆ, ದಯವಿಟ್ಟು ನಿಮ್ಮ ಮೂಲಕ ಆಗುವ ಯಕ್ಷಗಾನಗಳಲ್ಲಿ ಆದಷ್ಟು ವೃತ್ತಿಪರ ಕಲಾವಿದರಿಗೇ ಅವಕಾಶ ಮಾಡಿ ಕೊಡಿ, ಅದರಿಂದ ಯಕ್ಷಗಾನವನ್ನೇ ವೃತ್ತಿಯಾಗಿಸಿಕೊಂಡವರಿಗೆ ಸಹಾಯ ಆಗತ್ತೆ, ಹವ್ಯಾಸಿಗಳು ಆಸಕ್ತಿಯಿದ್ದರೆ ಅವರ ಸ್ವಂತ ಖರ್ಚಿಂದ ಪ್ರದರ್ಶನ ಏರ್ಪಡಿಸಬಹುದು.

ಯಕ್ಷಗಾನ ಕಲಾವಿದರಿಗೆ ನೀವು ಕೊಡುವ  ಒಂದು ಸಂದೇಶ ಏನು ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಮೊದಲು ಒಳ್ಳೆಯ ಮನುಷ್ಯರಾಗಿ, ಆಮೇಲೆ ಒಳ್ಳೆಯ ಕಲಾವಿದರಾಗಿ. ಒಳ್ಳೆಯ ಕಲಾವಿದನಾದವ ಒಳ್ಳೇ ಮನುಷ್ಯನಾಗದಿದ್ದರೆ ತುಂಬಾ ಅಪಾಯ. ಯಾಕೆಂದರೆ ನೆಚ್ಚಿನ ಕಲಾವಿದರನ್ನು ಅನುಸರಿಸುವ ಎಷ್ಟೋ ಅಭಿಮಾನಿಗಳಿರುತ್ತಾರೆ. ಒಳ್ಳೆಯ ಕಲಾವಿದರಾದರೆ ಸಂತೋಷ, ಆಗದಿದ್ದರೆ ಯಾವ ಊರಿಗೂ ನಷ್ಟ ಇಲ್ಲ, ಆದರೆ ಒಳ್ಳೆಯ ಮನುಷ್ಯ ಆಗದಿದ್ದರೆ ಇಡೀ ಪ್ರಪಂಚಕ್ಕೆ ಕಷ್ಟ.

ಇವರು, ಪ್ರಸ್ತುತ ಕಿರುಮಂಜೇಶ್ವರದ ಮನೆಯಲ್ಲಿ ಹೆಂಡತಿ ರೇಖಾ, ಮತ್ತು ತಾಯಿ ಪಾರ್ವತಿ ಇವರೊಂದಿಗೆ ವಾಸವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395