ಯಕ್ಷ ಸಾಧಕರು ೧೦೪

ಮೌಲ್ಯಾಧಾರಿತ ಯಕ್ಷ ಕವಿ ಪ್ರೊ.ಪವನ್ ಕಿರಣ್ ಕೆರೆ.

ಆಧುನಿಕ ಯುಗದಲ್ಲಿ ಧಾವಂತ ಬದುಕಿನೊಂದಿಗೆ ಧಾವಿಸುತ್ತಿರುವಾಗ ವೃತ್ತಿ ಜೊತೆಗೆ ಹವ್ಯಾಸಗಳ ಕಡೆಗೆ ಗಮನ ಹರಿಸುವುದನ್ನೇ ಮರೆತು ಬಿಡುತ್ತೇವೆ. ಅಂತಹ ಹವ್ಯಾಸ ಜೀವಂತವಾಗಿರಿಸಿಕೊಂಡು ವೃತ್ತಿ ಜತೆಗೆ ಪ್ರವೃತ್ತಿಯನ್ನು ಜತನದಿಂದ ಬೆಳೆಸಿಕೊಂಡು ಬರುತ್ತಿರುವ ಪ್ರಬುದ್ಧ ಯಕ್ಷ ಕವಿ ಪ್ರೊ.ಪವನ್ ಕಿರಣ್ ಕೆರೆ.

ಇವರ ಹೆಸರೇ ಸೂಚಿಸುವಂತೆ, ಇವರು
ಪ - Powerful Speech
ವ - Wonderful Person
ನ - Nice Personality...

ಹಸಿರುಗಿರಿಯ ನಾಡು, ಕವಿಕಾವ್ಯದ ಬೀಡು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆ ಎಂಬಲ್ಲಿ ದಿನಾಂಕ ೧೪ ಮಾರ್ಚ್ ೧೯೮೪ರಲ್ಲಿ ಶ್ರೀ ಉಮೇಶ್ ಚಂದ್ರ ಹಾಗೂ ಸುಮಿತ್ರಾ ದಂಪತಿಗಳಿಗೆ ಮಗನಾಗಿ ಜನಿಸಿದ ತಾವು ತಮ್ಮ ಪಾರ್ಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿ ನಂತರ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಬಿ.ಎಂ ಪದವಿಯನ್ನು ಪೂರ್ಣಗೊಳಿಸಿ ಮುಂದಕ್ಕೆ ಹಣಕಾಸು ಹಾಗೂ ಮಾನವ ಸಂಪನ್ಮೂಲ ವಿಷಯಗಳಲ್ಲಿ ಎಂ.ಬಿ.ಎ ಸ್ನಾತಕೋತ್ತರ ಪದವಿಯನ್ನು ಪಡೆದು ತಮ್ಮ ವಿದ್ಯಾಭ್ಯಾಸವನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದಿರಿ. ಬಾಲ್ಯದಲ್ಲೇ ಕಲೆ-ಸಾಹಿತ್ಯದ ಹಂದರದಡಿಯಲ್ಲಿ ಬೆಳೆದ ತಾವು ವಿದ್ಯಾಭ್ಯಾಸದ ಜೊತೆಜೊತೆಗೇ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಬಹುಮುಖ ಪ್ರತಿಭೆಯಾಗಿ ಬೆಳಗಿದಿರಿ. ತಂದೆಯವರು ಖ್ಯಾತ ಸುಗಮಸಂಗೀತ ಗಾಯಕರಾಗಿದ್ದು ನಗಾರಿಧ್ವನಿ ಎಂಬ ಪ್ರಾದೇಶಿಕ ಪತ್ರಿಕೆಯ ಸಂಪಾದಕರೂ ಆಗಿದ್ದರು. ತಮ್ಮ ಅಜ್ಜ ಹಾಗೂ ಸೋದರಮಾವನವರೂ ಕೂಡಾ ಯಕ್ಷಗಾನ, ಸಾಹಿತ್ಯ, ಹರಿಕಥೆ ಮುಂತಾದ ಕಲಾಪ್ರಕಾರಗಳಲ್ಲಿ ತುಂಬಾ ಹೆಸರುಗಳಿಸಿದುದರ ಪರಿಣಾಮವಾಗಿ ತಾವೂ ಅದೇ ಹಾದಿಯಲ್ಲಿ ಮುಂದುವರಿದು ಕಲೆಯ ಮೆಟ್ಟುಲುಗಳನ್ನು ಹತ್ತುವಲ್ಲಿ ಯಶಸ್ವಿಯಾದಿರಿ.

      ಚಿಕ್ಕಂದಿನಿಂದಲೇ ಯಕ್ಷಗಾನದ ವಾತಾವರಣದಲ್ಲಿ ಬೆಳೆದ ಕಾರಣ ಯಕ್ಷಗಾನ ಕಲಿಕೆಯತ್ತ ಚಿತ್ತವನ್ನಿಟ್ಟು ಉಡುಪಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಗುರು ಶ್ರೀ ಬನ್ನಂಜೆ ಸಂಜೀವ ಸುವರ್ಣರ ಬಳಿ ಹಾಗೂ ಶ್ರೀ ಐರೋಡಿ ಮಂಜುನಾಥ ಕುಲಾಲರ ಬಳಿಯಲ್ಲಿ ನಾಟ್ಯವನ್ನು ಅಭ್ಯಸಿಸಿ ಯಕ್ಷಗಾನದ ಮೇಲಿನ ತಮ್ಮ ಪ್ರೀತಿಯನ್ನು ಲೋಕಮುಖಕ್ಕೆ ಕಾಣಿಸಿದಿರಿ. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸದ ಹಂತದಲ್ಲಿಯೇ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಾ ಬಂದ ತಾವು ಮುಂದೆ ಯಕ್ಷಗಾನ ಕ್ಷೇತ್ರವನ್ನು ಬಹುವಾಗಿ ಆವರಿಸಿಕೊಂಡು ಇಂದಿಗೂ ಕಲಾಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಾ ಬರುತ್ತಿದ್ದೀರಿ. ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಪಾರ್ವತಿ ಶಾಪ ಎಂಬ ಯಕ್ಷಗಾನ ಪ್ರಸಂಗವನ್ನು ಬರೆದು ಜನಮೆಚ್ಚುಗೆಯನ್ನೂ ಪಡೆದುದಲ್ಲದೆ ಯಕ್ಷಗಾನ ಛಂದಸ್ಸಿನ ಸೂಕ್ಷ್ಮವಾದ ಅಧ್ಯಯನದ ಮೂಲಕ ಛಂದೋಬದ್ಧ ಸಾಹಿತ್ಯದೊಂದಿಗೆ ಮೌಲ್ಯಾಧಾರಿತ ಕಥೆಗಳ ಮೂಲಕ ಮುಂದಕ್ಕೆ ಯುಗ್ಮಯಾಮಿನಿ, ಮೇಘರಂಜಿನಿ, ಗಗನತಾರೆ, ಶಂಕರಾಭರಣ, ಗೋಕುಲಾಷ್ಟಮಿ, ಕ್ಷಮಯಾಧರಿತ್ರಿ, ಅಹಂಬ್ರಹ್ಮಾಸ್ಮಿ, ಶತಮಾನಂ ಭವತಿ, ಮಾನಸಗಂಗೆ, ಶಪ್ತ ಭಾಮಿನಿ ಮುಂತಾದ ಸಾಲು ಸಾಲು ಉತ್ತಮ ಪ್ರಸಂಗಗಳನ್ನು ಯಕ್ಷರಂಗಕ್ಕೆ ನೀಡಿದ್ದೀರಿ ಹಾಗೂ ಅವೆಲ್ಲವೂ ಕೂಡಾ ಶತಕಕ್ಕೂ ಮೀರಿದ ಪ್ರದರ್ಶನಗಳನ್ನು ಕಂಡಿರುವುದು ತಮ್ಮ ಸಾಧನೆಯ ಹಿರಿಮೆಗೆ ಭೂಷಣ ಎಂದರೆ ತಪ್ಪಾಗಲಾರದು ಹಾಗೆಯೇ ಈ ಬಾರಿಯ ಕೃಷ್ಣ ಕಾದಂಬಿನಿ, ಧರ್ಮ ಸಿಂಹಾಸನ ಪ್ರಸಂಗಗಳೂ ಕೂಡ ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ. ಯಕ್ಷಗಾನ ನಾಟ್ಯ ಹಾಗೂ ಪ್ರಸಂಗರಚನೆಗಳ ಜೊತೆಗೆ ತಾಳಮದ್ದಲೆ ಕ್ಷೇತ್ರದಲ್ಲೂ ತಾವು ಅರ್ಥಧಾರಿಗಳಾಗಿ ಗುರುತಿಸಿಕೊಂಡು ಮಾತಿನ ರಂಗಮಂಟಪದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಪ್ರೌಢಿಮೆ ಹಾಗೂ ಅನುಭವವನ್ನು ಹೊಂದಿರುವುದು ತಮ್ಮಲ್ಲಿರುವ ಪ್ರತಿಭಾಕೌಶಲ್ಯಗಳನ್ನು ಎತ್ತಿ ಹಿಡಿಯುತ್ತದೆ.



 “ನೈತಿಕ ಶ್ರೇಯಸ್ಸಿನ ದೊಡ್ಡ ಉಪಕರಣವೇ ಪ್ರತಿಭೆ.” ಅಂದರೆ ನೈತಿಕ ಒಳ್ಪನ್ನು ಸಾಧಿಸುವ ಹಲವು ವಿಧಾನಗಳಲ್ಲಿ ಪ್ರತಿಭೆಯು ದೊಡ್ಡದು ಹಾಗೂ ಶ್ರೇಷ್ಠವಾದದ್ದು. ಅಂತಹ ಹಲವಾರು ಪ್ರತಿಭೆಗಳನ್ನು ಯೋಗ್ಯರೀತಿಯಲ್ಲಿ  ಮೈಗೂಡಿಸಿಕೊಂಡಿರುವ ತಾವು ಓರ್ವ ಉತ್ತಮ ಬರಹಗಾರರೂ ಹೌದು. ತಮ್ಮ ಹಲವಾರು ಕಥೆ, ಕವಿತೆ, ಲೇಖನ, ಅಂಕಣಗಳು ವಿಜಯಕರ್ನಾಟಕ, ಪ್ರಜಾವಾಣಿ, ಸುಧಾ, ತರಂಗ, ಮುಗುಳುನಗೆ, ನಗಾರಿಧ್ವನಿ, ಸಹ್ಯಾದ್ರಿ, ವಾರದ ಮಲ್ನಾಡ್ ಮುಂತಾದ ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯ ಮೂಲಕ ಓದುಗರ ಮನದ ಕದವನ್ನು ತಟ್ಟುವಲ್ಲಿ ಪೂರ್ಣಪ್ರಮಾಣದಲ್ಲಿ ಯಶಸ್ಸನ್ನು ಗಳಿಸಿದ್ದೀರಿ. ನಾಡಿನ ಹಲವೆಡೆ ಅನೇಕ ಯಕ್ಷಗಾನ ಕಾರ್ಯಕ್ರಮ, ಆಧ್ಯಾತ್ಮಿಕ ಪ್ರವಚನ, ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸಿ ಓರ್ವ ಸಮರ್ಥ ಸಂಘಟಕರಾಗಿಯೂ ಗುರುತಿಸಿಕೊಂಡಿರುವ ತಮಗೆ ಸುರ್ವೇ ಪ್ರತಿಷ್ಠಾನದಿಂದ ಕರ್ನಾಟಕಭೂಷಣ ರಾಜ್ಯಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಂದ "ಯಕ್ಷಪರಂಪರೆ" ಪ್ರಶಸ್ತಿಗಳೊಂದಿಗೆ ಬೆಂಗಳೂರು ಪತ್ರಕರ್ತರ ವೇದಿಕೆ, ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್, ಕೊಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮುಂತಾದ ಹಲವಾರು ಸಂಘಸಂಸ್ಥೆಗಳು ತಮ್ಮ ಸಾಧನೆಯ ಎತ್ತರವನ್ನು ಗೌರವಿಸಿ ಸನ್ಮಾನಿಸಿರುವುದು ಹೆಮ್ಮೆಯ ವಿಚಾರ. 

         ಅಗಣಿತ ಪ್ರತಿಭಾಸಂಪನ್ನ, ಸಹೃದಯಿ, ಸ್ನೇಹಜೀವಿ, ಸರಳತೆಯ ಬದುಕನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡುತ್ತಾ ಚಂದದಿಂದ ಜೀವನವನ್ನು ಸಾಗಿಸುತ್ತಿರುವ ತಾವು ಎಲ್ಲರಿಗೂ ಮಾದರಿಯಾಗಿದ್ದೀರಿ. ಪತ್ನಿ ಆಶಾ, ಮಕ್ಕಳಾದ ನಿನಾದ್ ಹಾಗೂ ನಿರಾಮಯಿಯವರೊಂದಿಗೆ ಮೂಡಬಿದರೆಯಲ್ಲಿ ವಾಸವಾಗಿರುವ ತಾವು ಸದಾ ನೈತಿಕಮೌಲ್ಯಗಳನ್ನು ಪಾಲಿಸುತ್ತಾ, ಎಲ್ಲರನ್ನೂ ಪ್ರೀತಿಸುತ್ತಾ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದೀರಿ. ಬೆಂಗಳೂರಿನ ವಿಟಿಯು ಎಂ.ಬಿ.ಎ ಸಂಸ್ಥೆಯಲ್ಲಿ ಹಣಕಾಸು, ಮಾನವಸಂಪನ್ಮೂಲ ಹಾಗೂ ಲೆಕ್ಕಶಾಸ್ತ್ರ ಪ್ರಾಧ್ಯಾಪಕರಾಗಿ ೧೦ ವರ್ಷಗಳ ಕಾಲ ಕಾರ್ಯವೆಸಗಿದ ತಾವು ಮೂಡಬಿದರೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಂ.ಕಾಮ್ ವಿಭಾಗದಲ್ಲಿ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಉಡುಪಿಯಲ್ಲಿ ಸ್ವಂತ ಶಾಲೆಯೊಂದನ್ನು ಸ್ಥಾಪಿಸುವ ಪ್ರಾಥಮಿಕ ಹಂತದಲ್ಲಿದ್ದಾರೆ ಅವರ ಪ್ರಯತ್ನದಲ್ಲಿ ಯಶಸ್ಸು ಸಿಗಲಿ. ಓರ್ವ ಸಮರ್ಥ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ಉತ್ತಮ ರೀತಿಯಲ್ಲಿ ರೂಪುಗೊಳಿಸಿದ ಕೀರ್ತಿ ತಮ್ಮದು. ತಮ್ಮ ಈ ಸಾಧನೆಯು ಸದಾ ವಿಜಯದೊಂದಿಗೆ ಸಾಗಲಿ, ತಾವು ಆರಾಧಿಸಿಕೊಂಡು ಬರುತ್ತಿರುವ ಕಲಾಸೇವೆಯಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಆಶಿಸುತ್ತಾ ಕಲಾಮಾತೆ ತಮಗೆ ಆರೋಗ್ಯಭಾಗ್ಯಾದಿ ಐಶ್ವರ್ಯವನ್ನು ಕೊಟ್ಟು ಸದಾ ಕಾಪಾಡಲಿ ಎಂದು ಪ್ರೀತಿಯಿಂದ ಹಾರೈಸುತ್ತೇವೆ.



📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395