ಯಕ್ಷ ಸಾಧಕರು ೧೧೮

ಚೆಂಡೆ ಮದ್ದಳೆಯ ಚೈತನ್ಯ.

ಯಕ್ಷಗಾನ ಇವರಿಗೆ ವಂಶ ಪಾರಂಪರ್ಯವಾಗಿ ಬಂದ ಕಲೆ. ಕಲೆಯ ಬಳುವಳಿ ರಕ್ತಗತವಾಗಿ ಬಂದಾಗ ಆ ಕೆಲಸ ಹೆಚ್ಚು ಸುಲಭವೂ ಹೌದು, ಪ್ರೀತಿ ಪಾತ್ರವೂ ಆಗುತ್ತದೆ ಎನ್ನುತ್ತಾರೆ ಚೈತನ್ಯ ಕೃಷ್ಣ ಪದ್ಯಾಣ.

೧೬.೦೫.೧೯೮೯ ರಂದು ಮೀನಾಕ್ಷಿ ಮತ್ತು ಶಿವರಾಮ್ ಭಟ್ ಇವರ ಮಗನಾಗಿ ಜನನ. ಪಿ.ಯು.ಸಿ ಶಿಕ್ಷಣವನ್ನು ಪೂರೈಸಿ, ಕೇರಳದ ಕಣ್ಣೂರು ಹತ್ತಿರ ಪಿಲತಾಲದಲ್ಲಿ ಲಾಸ್ಯ ಮೂಸಿಕ್ ಕಾಲೇಜ್ ನಲ್ಲಿ ೨ ವರ್ಷಗಳ ಕಾಲ ಮೃದಂಗ ತರಬೇತಿಯನ್ನು ಪ್ರಶಾಂತ್ ಕುಮಾರ್ ಅವರ ಬಳಿ ಕಲಿತು, ನಂತರ ಚೆನ್ನೈ ಯಲ್ಲಿ ಮೃದಂಗ ದಂತ ಕಥೆ ಗುರು ಕಾರೈಕುಡಿ ಆರ್ ಮಣಿ ಅವರ ಮನೆಯಲ್ಲಿ ೨ ವರ್ಷಗಳ ಕಾಲ ಗುರುಕುಲ ಅಭ್ಯಾಸ ಮಾಡಿ ೨೦೧೧ ರಂದು ಯಕ್ಷಗಾನ ವೃತ್ತಿ ಮೇಳದಲ್ಲಿ ತಿರುಗಾಟವನ್ನು ಪ್ರಾರಂಭ ಮಾಡಿದರು.




ದೊಡ್ಡಪ್ಪ ಪದ್ಯಾಣ ಶಂಕರನಾರಾಯಣ ಭಟ್ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಹಾಗೂ ಇವರೇ ಇವರ ಚೆಂಡೆ ಹಾಗೂ ಮದ್ದಳೆ ಗುರುಗಳು.

ಎಲ್ಲಾ ಹಿರಿ-ಕಿರಿಯ ಚಂಡೆ ಮದ್ದಳೆಯ ಕಲಾವಿದರು ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು. ಹಿಂದಿನ ತಲೆಮಾರಿನ ಎಲ್ಲಾ ಭಾಗವತರು ಇವರ ನೆಚ್ಚಿನ ಭಾಗವತರು. ಯಕ್ಷಗಾನದ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಯಕ್ಷಗಾನ ರಂಗದಲ್ಲಿ ವೇಷ ಮಾಡುವ ಆಸಕ್ತಿ ಇರುವ ಚೈತನ್ಯರು ಮೊದಲಿಗೆ ವೇಷಧಾರಿಯು ಹೌದು; ಭಾಗಮಂಡಲ ಮಹಾಬಲ ಭಟ್ಟರು ನಾಟ್ಯ ಗುರುಗಳು.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಕಲಿತದ್ದು ಕಡಿಮೆ ಕಲಿಯಬೇಕಾದದ್ದು ಹೆಚ್ಚು.. ಹಾಗಾಗಿ ಯಕ್ಷಗಾನದ ಬಗ್ಗೆ ಆಮೂಲಾಗ್ರವಾಗಿ ಕಲಿಯುವುದೇ ಮುಂದಿನ ಯೋಜನೆ.

ಟಿ.ಶಾಮಭಟ್ಟರ ಯಜಮಾನದ ಹೊಸನಗರ ಮೇಳ, ಎಡನೀರು ಮೇಳ, ಪ್ರಸ್ತುತ ಹನುಮಗಿರಿ ಮೇಳದಲ್ಲಿ ತಿರುಗಾಟ ಮಾಡುತ್ತಿರುವ ಇವರು ಯಕ್ಷಗಾನ ರಂಗದಲ್ಲಿ ಒಟ್ಟು ೧೧ ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ.
ಶಾಸ್ತ್ರೀಯ ಸಂಗೀತ, ಮೃದಂಗ ನುಡಿಸುವುದು ಇವರ ಹವ್ಯಾಸಗಳು.

ಕಟೀಲು ಅಸ್ರಣ್ಣ ಪ್ರತಿಭಾ ಪುರಸ್ಕಾರ, ನಾಳ ಯಕ್ಷೋತ್ಸವ ಸನ್ಮಾನ, ದುಬೈ ಯಕ್ಷೋತ್ಸವ ಸನ್ಮಾನ, ರವಿ ಅಲೆವೂರಾಯರ ನೇತೃತ್ವದಲ್ಲಿ ತುಳು ಯಕ್ಷಗಾನ ಸಪ್ತಾಹದಲ್ಲಿ ಸನ್ಮಾನ,... ಹೀಗೆ ಹಲವು ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಯಕ್ಷಗಾನ ರಂಗದಲ್ಲಿ ತುಂಬಾ ಪ್ರೋತ್ಸಾಹ ನೀಡಿದವರು ಮೇಳದ ಯಜಮಾನರು ಟಿ.ಶಾಮ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಜಯರಾಮ ಭಟ್, ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ, ಕಡಬ ವಿನಯ ಆಚಾರ್ಯ, ಅದರಲ್ಲೂ ರವಿಚಂದ್ರ ಕನ್ನಡಿಕಟ್ಟೆ ಜೊತೆಗೆ ಕಳೆದ ೧೧ ವರ್ಷಗಳಿಂದ ಒಟ್ಟಿಗೆ ತಿರುಗಾಟವನ್ನು ಮಾಡುತ್ತಿದ್ದು ಭಾಗವತಿಕೆ, ಚೆಂಡೆ ಮದ್ದಳೆ ಬಗ್ಗೆ ತುಂಬಾನೇ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ ಹಾಗೂ ಮೇಳದ ಸರ್ವ ಕಲಾವಿದರ ಪ್ರೋತ್ಸಾಹವನ್ನು ಯಾವತ್ತೂ ಸ್ಮರಿಸುತ್ತೇನೆ ಎಂದು ಚೈತನ್ಯ ಹೇಳುತ್ತಾರೆ.




೨೫.೧೧.೨೦೧೮ ರಂದು ಪ್ರಣತಿ (ಭರತನಾಟ್ಯ ವಿದುಷಿ ಮತ್ತು ಪ್ರತಿಷ್ಠಿತ autodesk ಎನ್ನುವ ಕಂಪೆನಿಯಲ್ಲಿ software Engineer) ಇವರನ್ನು ವಿವಾಹವಾಗಿ  ಸುಖಿ ಸಂಸಾರವನ್ನು ನಡೆಸುತ್ತಿದ್ದರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photos by:-
Krishna Kumar, Dheeraj Udupa Uppinakudru, A.K Photography, Yaksha Manchi.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395