ಯಕ್ಷ ಸಾಧಕರು ೧೩೦
ಯಕ್ಷ ರಂಗದ ರಜತ ಚಂದ್ರ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಅಂಟೆ ಮಜಲು ಎಂಬಲ್ಲಿ ಗುರುವಪ್ಪ ಪೂಜಾರಿ ಹಾಗೂ ನೀಲಮ್ಮ ದಂಪತಿಯರ ಸುಪುತ್ರನಾಗಿ ದಿನಾಂಕ ೨೨.೧೧.೧೯೭೫ ರಂದು ಚಂದ್ರಶೇಖರ ಧರ್ಮಸ್ಥಳ ಅವರ ಜನನ. ೫ನೇ ತರಗತಿವರೆಗೆ ವಿದ್ಯಾಭ್ಯಾಸ ಪೂರೈಸಿ ೨ ವರ್ಷ ಹೋಟೆಲ್ ಕೆಲಸ ಮಾಡುತ್ತಿದ್ದರು. ಬಳಿಕ ೧೯೯೦ರಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದರು.
ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಡಾ. ಕೋಳ್ಯೂರು ರಾಮಚಂದ್ರ ರಾಯರಲ್ಲಿ ನಾಟ್ಯ ತರಬೇತಿ ಪಡೆದು, ೧ ವರ್ಷ ಬಪ್ಪನಾಡು ಮೇಳದಲ್ಲಿ ತಿರುಗಾಟ ನಡೆಸಿ, ೧೦ ವರ್ಷ ಕರ್ನಾಟಕ ಮೇಳ, ೧ ವರ್ಷ ಸಾಲಿಗ್ರಾಮ, ೧ ವರ್ಷ ಪುತ್ತೂರು ಮೇಳ, ೪ ವರ್ಷ ಎಡನೀರು ಹಾಗೂ ಪ್ರಸ್ತುತ ೧೫ ವರ್ಷಗಳಿಂದ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಆರಂಭದಲ್ಲಿ ಬಾಲ ಗೋಪಾಲ, ಬಳಿಕ ಹಂತ ಹಂತವಾಗಿ ಹಿರಿಯ ಕಲಾವಿದರ ಮಾರ್ಗದರ್ಶನದಿಂದ ಸ್ತ್ರೀ ವೇಷ, ಪುಂಡು ವೇಷ, ಕಿರೀಟ ವೇಷ, ಬಣ್ಣದ ವೇಷ ಮಾಡಿದರು. ಆದರೆ ಹೆಚ್ಚಿನ ಆಸಕ್ತಿ ಪುಂಡು ವೇಷದಲ್ಲಿ ಎಂದು ಇವರು ಹೇಳುತ್ತಾರೆ ಧರ್ಮಸ್ಥಳ.
ರಂಗಕ್ಕೆ ಹೋಗುವ ಮೊದಲು ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ರಂಗಕ್ಕೆ ಹೋಗುವ ಪೂರ್ವದಲ್ಲಿ ಪಾತ್ರದ ಬಗ್ಗೆ ಭಾಗವತರಲ್ಲಿ ಕೇಳಿ, ಹಿರಿಯ ಕಲಾವಿದರಲ್ಲಿ ಕೇಳಿಕೊಂಡು ಹೋಗುತ್ತೇನೆ.
ಅಭಿಮನ್ಯು, ಬಬ್ರುವಾಹನ, ಕೃಷ್ಣ, ಭಾರ್ಗವ, ಸುದರ್ಶನ, ಚಂಡ ಮುಂಡ, ಅಶ್ವತ್ಥಾಮ. ಕಿರೀಟ ವೇಷಗಳಲ್ಲಿ ಇಂದ್ರಜಿತು, ಹಿರಣ್ಯಾಕ್ಷ, ಶಿಶುಪಾಲ ಇವರ ನೆಚ್ಚಿನ ವೇಷಗಳು. ಕನ್ನಡ , ತುಳು ಅಲ್ಲದೇ ಯಕ್ಷ ಮಂಜೂಷ ತಂಡದಲ್ಲಿ ಉತ್ತರಭಾರತದಲ್ಲಿ ಹಿಂದಿಯಲ್ಲಿಯೂ ಪಾತ್ರ ನಿರ್ವಹಸಿದ್ದಾರೆ.
ನಾನು ಯಕ್ಷಗಾನಕ್ಕೆ ಸೇರುವಾಗ ಇಡೀ ರಾತ್ರಿ ಯಕ್ಷಗಾನವನ್ನು ನೋಡುವ ಬಹು ಸಂಖ್ಯೆಯ ಪ್ರೇಕ್ಷಕರಿದ್ದರು. ಆದರೆ ಈಗ ಹೆಚ್ಚಿನವರು ಕಾಲಮಿತಿ ಯಕ್ಷಗಾನವನ್ನೇ ಬಯಸುತ್ತಾರೆ. ನನ್ನ ದೃಷ್ಟಿಯಲ್ಲಿ ಕಾಲಮಿತಿ ಯಕ್ಷಗಾನವೇ ಒಳ್ಳೆಯದು ಅನಿಸುತ್ತದೆ. ಯಕ್ಷಗಾನ ಮುಗಿಯುವವರೆಗೂ ಪ್ರೇಕ್ಷಕರಿರುತ್ತಾರೆ. ಕಲಾವಿದರ ಆರೋಗ್ಯಕ್ಕೂ ಒಳ್ಳೆದು.
ಪ್ರಥಮವಾಗಿ ವಿದ್ಯಾ ಕೋಳ್ಯೂರರ ಯಕ್ಷ ಮಂಜೂಷ ತಂಡದಲ್ಲಿ ಅಮೆರಿಕಾ ಪ್ರವಾಸ. ಬಳಿಕ ದೇವಾನಂದ ಭಟ್ರ ತಂಡದಲ್ಲಿ ಅಮೇರಿಕಾ, ಪಟ್ಲ ಭಾಗವತರ ತಂಡದಲ್ಲಿ ೨ ಸಲ ಅಮೆರಿಕಾ, ಯಕ್ಷ ಮಂಜೂಷ ತಂಡದಲ್ಲಿ ಲಂಡನ್ ಪ್ರವಾಸ ಮಾಡಿದ್ದಾರೆ.
ದುಬೈ, ಮಸ್ಕತ್, ಬೆಹರಿನ್, ಕುವೈಟ್, ಅಮೆರಿಕ, ಲಂಡನ್ ನಲ್ಲಿ ಸನ್ಮಾನಿಸಿದ್ದಾರೆ.
ಪೇಜಾವರ ಸ್ವಾಮಿಗಳ ರಾಮ ವಿಠ್ಠಲ ಪ್ರಶಸ್ತಿ, ಬಿಲ್ಲವ ಸಂಘದ ಸನ್ಮಾನ, ಹೀಗೆ ಹತ್ತು ಹಲವು ಕಡೆಗಳಲ್ಲಿ ಗೌರವಿಸಿದ್ದಾರೆ.
ಕೃಷಿಯಲ್ಲಿ ಹೆಚ್ಚಿನ ಆಸಕ್ತಿ, ಪುಸ್ತಕ ಓದುವುದು ಇವರ ಹವ್ಯಾಸಗಳು.
ನಿರಂತರವಾಗಿ ೩೧ ವರ್ಷ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಮಾಡಿದ್ದಾರೆ. ಇನ್ನೂ ಜೀವನದ ಕೊನೆವರೆಗೂ ಸೇವೆ ಸಲ್ಲಿಸಲು ಆರೋಗ್ಯ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಂದ್ರಶೇಖರ ಹೇಳುತ್ತಾರೆ.
೧೧.೧೦.೨೦೧೦ ರಂದು ದೀಪಾ ಇವರನ್ನು ವಿವಾಹವಾಗಿ ಮಕ್ಕಳಾದ ಚಿಂತನಾ, ವಂಶಿಕಾ, ಆಶ್ಲೇಷ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos by:- Kolthige Photography, Yakshaloka.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment