ಯಕ್ಷ ಸಾಧಕರು ೧೩೧
ಯಕ್ಷಲೋಕದ ಸಂಪನ್ನ ಪ್ರತಿಭೆ ಥಂಡಿಮನೆ ಶ್ರೀಪಾದ ಭಟ್ಟ.
ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೋಳಿಗಾರ ಎಂಬಲ್ಲಿ ಸುಸಂಸ್ಕೃತ ಹವ್ಯಕ ಬ್ರಾಹ್ಮಣ ಕುಟುಂಬದ ತಿಮ್ಮಣ್ಣ ಭಟ್ ಮತ್ತ ಗಿರಿಜಮ್ಮ ದಂಪತಿಗಳ ಮಗನಾಗಿ ೨೦.೦೭.೧೯೬೩ ರಂದು ಜನನ. ದ್ವಿತೀಯ ಪಿಯುಸಿ ವರೆಗೆ ವಿದ್ಯಾಭ್ಯಾಸ. ಯಕ್ಷ ಕಲಾತಪಸ್ವಿ ಹೊಸ್ತೋಟ ಮಂಜುನಾಥ ಭಾಗವತ ಇವರ ಗುರುಗಳು.
ಶ್ರೀಪಾದ ಭಟ್ಟ ಅವರ ತಂದೆ ಹವ್ಯಾಸಿ ಕಲಾವಿದರಾದ ಕಾರಣ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ. ೧೯೮೫ ರಲ್ಲಿ ವೃತ್ತಿ ಮೇಳವಾದ ಪಂಚಲಿಂಗೇಶ್ವರ ಮೇಳಕ್ಕೆ ಒಡ್ಡೋಲಗ ವೇಷಧಾರಿಯಾಗಿ ಸೇರ್ಪಡೆಗೊಂಡರು. ಹಿರಿಯ ಕಲಾವಿದರಾದ ಕೆರೆಮನೆ ಮಹಾಬಲ ಹೆಗೆಡೆ, ಶಂಭು ಹೆಗಡೆ, ನೆಬ್ಬೂರು ನಾರಾಯಣ ಭಾಗವತರು, ಕೊಳಗಿ ಅನಂತ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ ಮುಂತಾದವರಿಂದ ಮಾರ್ಗದರ್ಶನ ಪಡೆದು ಪರಿಪೂರ್ಣ ಕಲಾವಿದನಾಗಿ ಬೆಳೆದರು.
ತಮ್ಮ ಆಳ್ತನ, ನಿಲುವು, ಅಪೂರ್ವವಾದ ಯಕ್ಷಗಾನೀಯ ಕಂಠ ಮಾಧುರ್ಯ, ಶ್ರುತಿಬದ್ಧತೆ ಇವುಗಳಿಂದ ಕಥಾನಾಯಕ, ಪ್ರತಿನಾಯಕ ಪಾತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಕಂಸ, ಯಮ, ಹಿರಣ್ಯಕಶ್ಯಪು, ಮಾಗದ, ಕೌರವ ಮುಂತಾದ ಖಳ ಪಾತ್ರಗಳು ಅವರ ಅಪೂರ್ವವಾದ ಏರುಶೃತಿಯ ಸ್ವರಕ್ಕೆ ಹೊಂದಿಕೊಳ್ಳುವ ಪಾತ್ರಗಳಾಗಿದ್ದು. ಆಂಜನೇಯ, ಭದ್ರಸೇನ, ಕಾರ್ತವೀರ್ಯ, ಜಮದಗ್ನಿ, ಭೀಷ್ಮ, ವಾಲಿ, ಬಲರಾಮ, ಪರಶುರಾಮ ಮುಂತಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಗೋಡೆ ನಾರಾಯಣ ಹೆಗಡೆ, ರಾಮದಾಸ ಸಾಮಗ, ವಾಸುದೇವ ಸಾಮಗ, ಎಂ.ಎ ನಾಯಕ್, ಯಾಜಿ, ಕೊಂಡಕುಳಿ, ಆರ್ಗೋಡು, ತೀರ್ಥಹಳ್ಳಿ, ಕಡತೋಕ, ಕಾಳಿಂಗ ನಾವಡ, ಧಾರೇಶ್ವರ ಹಾಗೂ ಇತ್ತೀಚಿನ ಎಲ್ಲಾ ಕಲಾವಿದರ ಜೊತೆಗೆ ತಿರುಗಾಟ ಮಾಡಿದ ಅನುಭವ ಶ್ರೀಪಾದ ಭಟ್ಟರದು.
ಹಳೆಯ ಪೌರಾಣಿಕ ಪಾತ್ರವಲ್ಲದೆ ಅವರು ಅಭಿನಯಿಸಿದ ರಂಗನಾಯಕಿ ಪ್ರಸಂಗದ ಬೈರಾನ್ ಖಾನ್ ಎಂಬ ಮುಸ್ಲಿಮ್ ರಾಜನ ಪಾತ್ರ ಅಪಾರ ಜನಮನ್ನಣೆ ಪಡೆಯಿತು ಹಾಗೂ ಪ್ರಸಿದ್ಧ ಬಯಲಾಟ ಮೇಳವಾದ ಮಂದಾರ್ತಿ ಮೇಳದಲ್ಲಿ ಪ್ರದರ್ಶನಗೊಳುತ್ತಿದ್ದ ಪೌರಾಣಿಕ ಪ್ರಸಂಗದ ಪಾತ್ರಗಳು ಜನಮನ್ನಣೆ ಪಡೆದವು.
ಬದುಕಿನ ಬದಲಾವಣೆಯೊಂದಿಗೆ ಕಲೆಯ ಬದಲಾವಣೆ ಅನಿವಾರ್ಯ. ಇತ್ತೀಚೆಗೆ ಯಕ್ಷಗಾನ ಮನೋರಂಜನೆ ಸೊತ್ತಾಗಿದೆ. ಬೇಕಾದಲ್ಲಿ ಎಲ್ಲಾ ಯಕ್ಷಗಾನ ಕಲಾವಿದರನ್ನು ಬಳಸಿಕೊಂಡು ಕಲಾಕ್ಷೇತ್ರ ಅಗ್ಗವಾಗುತ್ತಿದೆ. ಎಲ್ಲದಕ್ಕೂ ಕಾಲವೇ ಕಾರಣ.
ಅನೇಕ ಮಕ್ಕಳಿಗೆ ಯಕ್ಷಗಾನ ಹೇಳಿಕೊಟ್ಟಿದ್ದೇನೆ. ಈಗ ಕಲಿಯುವ ಮಕ್ಕಳು ಹೊಸತನ್ನು ಬಯಸುತ್ತಾರೆ, ನಮ್ಮಿಂದ ಈ ಕ್ಷೇತ್ರಕ್ಕೆ ಹೊಸತು ಕೊಡಲಿಕ್ಕೆ ಇನ್ನು ಸದ್ಯ ಇಲ್ಲ, ಓದು ಅಧ್ಯಯನ, ಪರಿಶ್ರಮ ಈ ಕ್ಷೇತ್ರಕ್ಕೆ ಅಗತ್ಯ ಬೇಕು ದೇವರೇ ಆ ಬುದ್ಧಿ ಮುಂದಿನ ಕಲಾವಿದರಿಗೆ ಕೊಡಬೇಕು.
ಯಕ್ಷಗಾನ ನನಗೆ ಕೀರ್ತಿ,ಹಣ ಮರ್ಯಾದೆ ಬದುಕು ನೀಡಿದೆ.
ನೂರಾರು ಸನ್ಮಾನಗಳು ಲಭಿಸಿವೆ. ಯಕ್ಷ ಸಾರಥಿ, ಸ್ವರಸಿಂಹ ಬಿದನೂರ ಭೀಷ್ಮ, ಸ್ವರ ಸಾಮ್ರಾಟ ಕಂಚಿನ ಕಂಠ, ಯಕ್ಷ ಪ್ರವೀಣ ಮೊದಲಾದ ಬಿರುದುಗಳು ಲಭಿಸಿವೆ.
೧೯೮೪-೮೫ ರಲ್ಲಿ ಶಿರಸಿಯ ಪಾಂಚಾಲಿ ಮೇಳಕ್ಕೆ ಸೇರ್ಪಡೆ. ಸಾಲಿಗ್ರಾಮ, ಮಂದಾರ್ತಿ, ಹಟ್ಟಿಯಂಗಡಿ ಮೇಳದಲ್ಲಿ ತಿರುಗಾಟ ಮಾಡಿ ಕಳೆದ ೧೪ ವರ್ಷದಿಂದ ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಯಕ್ಷರಂಗದಲ್ಲಿ ೩೭ ವರ್ಷಗಳಿಂದ ವೃತ್ತಿ ಕಲಾವಿದರಿಗೆ ತಿರುಗಾಟ ಮಾಡುತ್ತಿದ್ದಾರೆ.
ಶ್ರೀಪಾದ ಭಟ್ಟ ಅವರು ಸುನೀತಾ ಅವರನ್ನು ವಿವಾಹವಾಗಿ ಮಗ ಶ್ರೀಕಾಂತ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos by:- Ashok Donderangadi, Praveen perdoor, Dheeraj Udupa uppinakudru.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment