ಯಕ್ಷ ಸಾಧಕರು ೧೩೩
ಯಕ್ಷ ಕಲಾಸೌರಭ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶ್ರೀಮತಿ ಇಂದಿರಾ ಎ ವಿ ಹಾಗೂ ದಕ್ಷಿಣಾಮೂರ್ತಿ ಬಿ ವಿ ಇವರ ಮಗಳಾಗಿ ೦೬.೦೩.೧೯೯೪ ರಂದು ಸೌರಭ ಡಿ ಮೂರ್ತಿ ಅವರ ಜನನ.
೧ ರಿಂದ ೭ನೇ ತರಗತಿಯವರೆಗೆ ಸೇವಾಭಾರತಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ೧೦ನೇ ತರಗತಿಯವರೆಗೆ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ತೀರ್ಥಹಳ್ಳಿಯಲ್ಲಿ ಮುಗಿಸಿ ನಂತರದ ಪದವಿ (BCA) ಯನ್ನು ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗ ಇಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿರುತ್ತಾರೆ. ಪ್ರಸ್ತುತ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯಕ್ಷಗಾನದ ಗುರುಗಳು:- ಮೊದಲಿಗೆ ಮೂರ್ತಿ ಗೌಡರು ಗುಡ್ಡೇ ಕೊಪ್ಪ, ನಂತರದಲ್ಲಿ ಶ್ರೀ ನಾಗಭೂಷಣ ಉಪಾಧ್ಯಾಯರು ಕಲ್ಮನೆ, ಮದ್ದಲೆಗಾರರಾದ ಗಣೇಶಮೂರ್ತಿ ಹುಲ್ಗಾರ್ ಇವರೂ ಸಹ ಇವರ ಹೆಜ್ಜೆಗೆ ಲಯವನ್ನು ತುಂಬಿರುತ್ತಾರೆ. ತದನಂತರದಲ್ಲಿ ಯಕ್ಷಗಾನದ ಶಿಸ್ತುಬದ್ದಿನ ಶಿಕ್ಷಣವನ್ನು ಯಕ್ಷ ಗುರುಗಳಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿಯವರ ಬಳಿ ಕಲಿತಿರುತ್ತಾರೆ.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಯಾರು :- ಯಕ್ಷಗಾನ ಕ್ಷೇತ್ರಕ್ಕೆ ಬರವುದು ಇವರ ತಂದೆಯ ಕನಸು. ಇವರ ತಂದೆ ಚಿಕ್ಕಂದಿನಿಂದಲೂ ಟೆಂಟ್ ಆಟಕ್ಕೆ ಕರೆದುಕೊಂಡು ಹೋಗುತ್ತಿದ್ದರು, ಪ್ರತಿಬಾರಿಯೂ ವೇಷ ಭೂಷಣ ನೋಡಿ ಇವರೂ ಕಲಿಯಬೇಕೆಂಬ ಆಸೆ ಇತ್ತು, ಅಪ್ಪ ಕ್ಯಾಸೆಟ್ ಸಹ ತಂದು ಪ್ರತಿದಿನ ರಾತ್ರಿ ಕಾಳಿಂಗ ನಾವುಡರ ಹಾಗೂ ಧಾರೇಶ್ವರರ ಪದ್ಯವನ್ನು ಕೇಳಿಸುತ್ತಿದ್ದರು. ಹಾಗಾಗಿ ಯಕ್ಷಗಾನದ ಮೇಲೆ ಒಲವು ಜಾಸ್ತಿಯಾಗಿತ್ತು, ಅಮ್ಮ ಮೊದಲ ಬಾರಿಗೆ ಯಕ್ಷಗಾನಕ್ಕೆ ಸೇರು ಎಂದು ಪ್ರೋತ್ಸಾಹಿಸಿ 2014ರಲ್ಲಿ ಪ್ರಥಮ ಬಾರಿಗೆ ಕಾರ್ಯಕ್ರಮ ಕೊಟ್ಟಿದ್ದಾರೆ. ಅಪ್ಪನ ಸಂಕಲ್ಪ, ಅಮ್ಮನ ಆಶೀರ್ವಾದದಿಂದ ಈಗಲೂ ಯಕ್ಷಗಾನ ಕಲಿಕೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ ಎಂದು ಸೌರಭ ಡಿ ಮೂರ್ತಿ ಹೇಳುತ್ತಾರೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ :-
ರಂಗಕ್ಕೆ ಹೋಗುವ ಮುಂಚೆ ಪ್ರತಿಬಾರಿಯೂ ರಿಹರ್ಸಲ್ ಇರುತ್ತೆ, ನಮ್ಮ ತಂಡದ ಸದಸ್ಯರಿಗೆ ಪ್ರಸಂಗದ ಬಗ್ಗೆ ತಿಳಿಸಿ ಅವ್ರಿಗೆ ಹೇಳಿಕೊಟ್ಟು ನಂತರ ನಾನು ತಯಾರಿ ಮಾಡಿಕೊಳ್ಳುತ್ತೇನೆ, ಹಿರಿಯ ಕಲಾವಿದರ ಜೊತೆ ಮಾಡುವ ಅವಕಾಶ ಸಿಕ್ಕಿಲ್ಲ ಅಷ್ಟು ಎತ್ತರಕ್ಕೆ ಬೆಳೆಯುವ ಹಂಬಲವಂತೂ ಇದೆ.
ಶ್ರೀದೇವಿ ಮಹಾತ್ಮೆ, ಕಂಸ ವಧೆ, ಜಾಂಬವತಿ ಕಲ್ಯಾಣ, ಭಸ್ಮಾಸುರ ಮೋಹಿನಿ, ಶೂದ್ರ ತಪಸ್ವಿನಿ, ದಕ್ಷಯಜ್ಞ, ಭೀಷ್ಮ ವಿಜಯ, ಕೃಷ್ಣಾರ್ಜುನ ಕಾಳಗ ನೆಚ್ಚಿನ ಪ್ರಸಂಗಗಳು ಹಾಗೂ ಅನೇಕ ಪ್ರಸಂಗಗಳು ತುಂಬಾ ಇಷ್ಟ ಪಟ್ಟು ನೋಡುತ್ತೇನೆ ಎಂದು ಹೇಳುತ್ತಾರೆ ಇವರು.
ಈಶ್ವರ, ಭಸ್ಮಾಸುರ, ದಕ್ಷ, ಕಂಸ, ಜಾಂಬವಂತ, ದಾರುಕ, ಹಾಸ್ಯ ಪಾತ್ರಗಳು, ರಾವಣ ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಪ್ರಸ್ತುತ ಯಕ್ಷಗಾನದಲ್ಲಿ ಅನೇಕ ಬದಲಾವಣೆಯಾಗಿದೆ, ಮೂಲ ಯಕ್ಷಗಾನದ ಕಲೆ ಕಳೆದುಹೋಗುತ್ತಿದೆ. ಆದಷ್ಟು ಪೌರಾಣಿಕ ಪ್ರಸಂಗಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕೆನ್ನುವುದು ಇವರ ಅಭಿಪ್ರಾಯ. ಮಕ್ಕಳಿಗೆ ಆದಷ್ಟು ಪೌರಾಣಿಕ ಪ್ರಸಂಗಗಳನ್ನು ತೋರಿಸುವುದರಿಂದ ಕಥೆಗಳು ಅವರ ಮನಸ್ಸಲ್ಲಿ ಉಳಿಯುತ್ತದೆ. ಕಲೆಯ ಮೇಲಿನ ಆಸಕ್ತಿ ಹೆಚ್ಚುತ್ತದೆ ಎಂದು ಇವರು ಹೇಳುತ್ತಾರೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನವನ್ನು ಆದಷ್ಟು ಮಕ್ಕಳಿಗೆ ತೋರಿಸಬೇಕು ಏಕೆಂದರೆ ಪೌರಾಣಿಕ ಪ್ರಸಂಗಗಳು ಮಕ್ಕಳಿಗೆ ತಿಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ವೇಷ ಹಾಕಿ ದೊಂಬರಾಟ ಮಾಡಿ ಯಕ್ಷಗಾನ ಬಂತು ಅನ್ನೋ ಜನರೇ ಜಾಸ್ತಿ; ಆದರೆ ನಿಜವಾದ ಕಲೆಯನ್ನು ಮಕ್ಕಳಿಗೆ ಕಲಿಸಿ ಅದರಲ್ಲಿರುವ ನವರಸ, ಕುಣಿತ, ತಾಳ, ಲಯಬದ್ಧವಾದ ಮಾತುಗಾರಿಕೆ ಮಕ್ಕಳಿಗೆ ಉಪಯುಕ್ತವಾಗುತ್ತದೆ. ಭಾಷಪ್ರೌಢತೆ ಹೆಚ್ಚಾಗುತ್ತದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನಾದರು ಇದೆಯಾ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಭಾರತಿ ಟ್ರಸ್ಟ್ ತೀರ್ಥಹಳ್ಳಿ ಇವರು ಪ್ರಸ್ತುತ ತೀರ್ಥಹಳ್ಳಿಯಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ನಡೆಸುತ್ತಿದ್ದಾರೆ. ಇವರ ಗುರುಗಳಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಇವರ ಜೊತೆ ಸುಮಾರು 40 ಮಕ್ಕಳಿಗೆ ಯಕ್ಷಗಾನ ಹೆಜ್ಜೆ ತರಗತಿಯನ್ನು ಹೇಳಿಕೊಡುತ್ತಿದ್ದಾರೆ ಹಾಗೂ ಗುರುಗಳ ಬಳಿ ಭಾಗವತಿಕೆಯನ್ನು ಸಹ ಕಲಿಯುತ್ತಿದ್ದಾರೆ. ತಮ್ಮದೇ ಶ್ರೀ ರಾಮೇಶ್ವರ ಮಹಿಳಾ ಯಕ್ಷಗಾನ ಮಂಡಳಿಯನ್ನು ನಡೆಸುತ್ತಿದ್ದಾರೆ.
ಶ್ರೀ ರಾಮೇಶ್ವರ ಮಹಿಳಾ ಯಕ್ಷಗಾನ ಮಂಡಳಿ ಎಂಬ ಇವರ ಮಂಡಳಿಯಿಂದ ಈಗಾಗಲೇ ಕಮಲಶಿಲೆ, ಹೊರನಾಡು, ದಾವಣಗೆರೆ, ಲಿಂಗದಹಳ್ಳಿ, ದಾವಣಗೆರೆ, ಶಿವಮೊಗ್ಗ, ತರೀಕೆರೆ, ಭೀಮನ ಕಟ್ಟೆ , ತೀರ್ಥಹಳ್ಳಿ ಹೀಗೆ ಹಲವಾರು ಕಡೆ ಯಕ್ಷಗಾನ ಪ್ರದರ್ಶನವನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಭರತನಾಟ್ಯ, ಸಂಗೀತ, ಮೆಹೆಂದಿ artist ಇವರ ಹವ್ಯಾಸಗಳು.
ಇವರಿಗೆ ಸಿಕ್ಕಿರುವ ಸನ್ಮಾನ ಹಾಗೂ ಪ್ರಶಸ್ತಿ:- ತೀರ್ಥಹಳ್ಳಿ ಪೊಲೀಸ್ ಇಲಾಖೆಯಿಂದ ಮಲೆನಾಡ ಹಬ್ಬದಲ್ಲಿ ಬಹುಮುಖ ಪ್ರತಿಭೆ ಸನ್ಮಾನ, ಮಹಿಳಾ ಸಮಾಜದಿಂದ ಗುರುವಂದನಾ ಸನ್ಮಾನ, ಯಕ್ಷಭಾರತಿ ವತಿಯಿಂದ ಗುರುವಂದನಾ ಸನ್ಮಾನ, ರಾಜ್ಯ ಮಟ್ಟದ ಜಾನಪದ ನೃತ್ಯದಲ್ಲಿ ತೃತೀಯ ಬಹುಮಾನ, ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಹೀಗೆ ಶಾಲಾ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ 3 ಬಾರಿ ರಾಜ್ಯಮಟ್ಟದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment