ಯಕ್ಷ ಸಾಧಕರು ೧೨೯

ತೆಂಕಿನ ರಸಗಾನ ಸಿರಿ

ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದಲ್ಲಿ ದಿ. ಬಾಬು ಗೌಡ ಹಾಗೂ ದಿ. ಬೂದಮ್ಮ ದಂಪತಿಯರ ಕುವರನಾಗಿ ದಿನಾಂಕ ೦೬.೦೬.೧೯೭೬ ರಂದು ಜನನ. ೧೦ನೇ ತರಗತಿವರೆಗೆ ವಿದ್ಯಾಭ್ಯಾಸ. ತಂದೆ ತಾಯಿ, ಅಣ್ಣ ಮತ್ತು ಮಾವ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದರು ಶ್ರೀನಿವಾಸ ಗೌಡ ಬಳ್ಳಮಂಜ. ಶ್ರೀಮತಿ  ಲೀಲಾವತಿ ಬೈಪಾಡಿತ್ತಾಯ, ಹರಿನಾರಾಯಣ ಬೈಪಾಡಿತ್ತಾಯ, ಬಲಿಪ ನಾರಾಯಣ ಭಾಗವತರು ಇವರ ಯಕ್ಷಗಾನ ಗುರುಗಳು.

ಕಲ್ಯಾಣಿ, ಆಭೇರಿ, ಮೋಹನ, ಶುದ್ಧಸಾವೇರಿ, ವೃಂದಾವನ ಸಾರಂಗ, ಶಿವರಂಜನಿ, ಚಕ್ರವಾಕ, ಮಧುವಂತಿ, ಅಠಾಣ, ಇತ್ಯಾದಿ ಇವರ ನೆಚ್ಚಿನ ರಾಗಗಳು.
ಮಾತಂಗ ಕನ್ಯೆ, ಮಾನಿಷಾದ, ಕುಮಾರ ವಿಜಯ, ಅಸಿಕಾ ಪರಿಣಯ, ಶ್ರೀ ದೇವಿ ಮಹಾತ್ಮೆ, ಶ್ರೀ ಕಟೀಲು ಕ್ಷೇತ್ರ  ಮಹಾತ್ಮೆ, ಗಧಾಯುದ್ಧ, ರಕ್ತರಾತ್ರಿ,  ಜಾಂಬವತಿ ಕಲ್ಯಾಣ, ಇನ್ನೂ ಹಲವು ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಯಕ್ಷಗಾನ ರಂಗದ ಎಲ್ಲಾ ಚೆಂಡೆ ಹಾಗೂ ಮದ್ದಳೆ ವಾದಕರು, ಎಲ್ಲಾ ಭಾಗವತರು ಇವರ ನೆಚ್ಚಿನ ಕಲಾವಿದರು ನಾವೆಲ್ಲಾ ಕಲಾವಿದರು ಒಂದೇ ತಾಯಿ ಮಕ್ಕಳಂತೆ ಎಂದು ಹೇಳುತ್ತಾರೆ ಬಳ್ಳಮಂಜ.




ಯಕ್ಷಗಾನ ಇಂದಿನ ಸ್ಥಿತಿಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಇದರ ಬಗ್ಗೆ ನಾನು ಹೇಳುವಷ್ಟು ಸಮರ್ಥನಲ್ಲ. ಆದರೂ ಹಿಂದಿನ ತಲೆಮಾರಿನಿಂದ ಈಗಿನ ಸ್ಥಿತಿಗತಿಗೆ ಹಲವು ವ್ಯತ್ಯಾಸಗಳನ್ನು ನಾನು ಕಟೀಲು ಮೇಳದಲ್ಲಿದ್ದು ಕಂಡಿದ್ದೇನೆ. ಈಗ ಕಲಾವಿದರಿಗೆ ಹೋಗಲು ಬಸ್ಸುಗಳ ವ್ಯವಸ್ಥೆ ಇದೆ. ಕಲಾವಿದರಿಗೆ ಒಳ್ಳೆಯ ಗೌರವ ಸಿಗುತ್ತದೆ. ಅದನ್ನು ಉಳಿಸುವುದು ಕಲಾವಿದರಾದ ನಮ್ಮೆಲ್ಲರ ಕರ್ತವ್ಯ. ಬೇರೆ ಏನು ನಾನು ಹೇಳುವುದಿಲ್ಲ.

ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಈಗಿನ ಪ್ರೇಕ್ಷಕರು ಯಕ್ಷಗಾನವನ್ನು ಬಹಳಷ್ಟು ಆಸ್ವಾದಿಸುತ್ತಾರೆ. ಕಲಾವಿದರಾದ ನಮ್ಮ ತಪ್ಪು ಸರಿಗಳನ್ನು ನಮ್ಮೊಡನೆ ಚರ್ಚಿಸುತ್ತಾರೆ. ಕಲಾವಿದರಾದ ನಮಗೆ ಬೇಕಾದದ್ದು ಅಷ್ಟೇ. ರಂಗದಲ್ಲಿ ಹಾಡುವ, ನಟಿಸುವ, ನುಡಿಸುವ ಕಲಾವಿದನಿಗೆ ಹೆದರಿಕೆ ಇರಬೇಕು - ಮುಂದೆ ಕುಳಿತ ಪ್ರೇಕ್ಷಕರಿಗೆ ತಮ್ಮ ತಪ್ಪುಗಳು ಸಿಗಬಾರದು ಎಂಬುವುದು. ಆಗ ಮಾತ್ರ ಯಕ್ಷಗಾನ ಚಂದವಾಗಬಹುದು.

ಯಕ್ಷಗಾನ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಈಗಾಗಲೇ 6 ಕಡೆಯಲ್ಲಿ ಯಕ್ಷಗಾನ ಭಾಗವತಿಕೆ ತರಬೇತಿ ಕೊಡುತ್ತಿದ್ದೇನೆ. ಈಗಾಗಲೇ 200 ಶಿಷ್ಯರು ನನ್ನ ಸೇರ್ಪಡೆಯಲ್ಲಿ ಇದ್ದಾರೆ. ಇನ್ನಷ್ಟು ಶಿಷ್ಯರನ್ನು ಯಕ್ಷಗಾನಕ್ಕೆ ತಯಾರಿ ಮಾಡಬೇಕೆಂದು ಮನದಲ್ಲಿ ಆಸೆ ಇರಿಸಿದ್ದೇನೆ. ತಾಯಿ ಭ್ರಾಮರಿಯ ಕೃಪೆ ಯಾವ ರೀತಿ ಉಂಟೊ ಗೊತ್ತಿಲ್ಲ.

ಸುಂಕದಕಟ್ಟೆ ಮೇಳದಲ್ಲಿ ೬ ವರ್ಷ ತಿರುಗಾಟ ಮಾಡಿ ಪ್ರಸ್ತುತ ೨೦ ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ಮಳೆಗಾಲದ ರಜಾ ಸಮಯದಲ್ಲಿ ಹಲವು ಬಗೆಯ ತರಕಾರಿ ಮಾಡುವುದು, ಜೊತೆಗೆ ಮನೆಯ ತೋಟದ ಕೆಲಸ ಇವರ ಹವ್ಯಾಸಗಳು.

ಹಲವು ಸಂಘ ಸಂಸ್ಥೆಗಳು ಇವರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮುಂಬೈಯಲ್ಲಿ ಯಕ್ಷರಕ್ಷಾ ಪ್ರಶಸ್ತಿ ಹಾಗೂ ಯಕ್ಷರತ್ನ ಪ್ರಶಸ್ತಿ ಸಿಕ್ಕಿದೆ.


೦೭.೦೪.೨೦೦೮ ರಂದು ಸವಿತಾ ಇವರನ್ನು  ಮಕ್ಕಳಾದ ರಕ್ಷಿತ್, ಮೋಕ್ಷಿತ್, ಸನ್ವಿತ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395