ಯಕ್ಷ ಸಾಧಕರು ೧೩೯

ಉಜ್ವಲ ಪ್ರತಿಭೆ

ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಅನೇಕ ಮಹಿಳಾ ಕಲಾವಿದರು ಮಿಂಚುತ್ತಿದ್ದಾರೆ. ಇಂತಹ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಪ್ರತಿಭೆ ಶಿವಾನಿ ಸುರತ್ಕಲ್. 

೨೭.೦೪.೧೯೯೬ ರಂದು ಶ್ರೀಮತಿ ಆಶಾ ರವಿಶಂಕರ್ ಹಾಗೂ ಶ್ರೀಯುತ ರವಿಶಂಕರ್ ಎಸ್ ಇವರ ಮಗಳಾಗಿ ಜನನ. ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಪೂರೈಸಿ ಪ್ರಸ್ತುತ ಹಣಕಾಸು ವಿಷಯದಲ್ಲಿ PhD ಮಾಡುತ್ತಿದ್ದಾರೆ. ತಾಯಿಯಿಂದ, ಹಾಗೂ ಯಕ್ಷಗಾನದ ಮೇಲಿನ ಒಲವು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಶಿವಾನಿ. ರಾಕೇಶ್ ರೈ ಅಡ್ಕ, ರಕ್ಷಿತ್ ಶೆಟ್ಟಿ ಪಡ್ರೆ ಇವರ ಯಕ್ಷಗಾನದ ಗುರುಗಳು.




ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ :-
ಪ್ರಸಂಗದ ಕಥೆಯ ಬಗ್ಗೆ ತಿಳಿದುಕೊಂಡು, ಪಾತ್ರ ಪರಿಚಯ, ಅದರ ಪದ್ಯ ಹಾಗೂ ಹೇಳಬೇಕಾದ ಅರ್ಥಗಳನ್ನು ಸಂಗ್ರಹಿಸುವುದು, ಪ್ರಸಂಗದಲ್ಲಿ ಬರುವ ಸಂದರ್ಭಕ್ಕೆ ಅನುಗುಣವಾಗಿ ಭಾವನೆಗಳನ್ನು ಅರ್ಥ ಮಾಡಿಕೊಂಡು ವೇದಿಕೆಯ ಮೇಲೆ ಪ್ರದರ್ಶಿಸುವ ಮೊದಲು ಮನಸಿನಲ್ಲಿ ಆ ಪಾತ್ರದ ಚಿತ್ರೀಕರಣ ಮಾಡಿಕೊಂಡು ತಯಾರಿ ಮಾಡಿಕೊಳುತ್ತೇನೆ ಎಂದು ಶಿವಾನಿ ಹೇಳುತ್ತಾರೆ.

ಸುಧನ್ವಾರ್ಜುನ ಕಾಳಗ, ಸುದರ್ಶನ ವಿಜಯ, ಶ್ರೀ ದೇವಿ ಮಹಾತ್ಮೆ, ಶಶಿಪ್ರಭಾ ಪರಿಣಯ, ದಿಗಂತ ಧರುಣಿ (ಸಾಮಾಜಿಕ ಪ್ರಸಂಗ) ಇವರ ನೆಚ್ಚಿನ ಪ್ರಸಂಗಗಳು.
ಸುಧನ್ವ, ಸುದರ್ಶನ, ಶ್ರೀ ದೇವಿ, ಚಂಡ ಮುಂಡ, ಭ್ರಮರಕುಂತಳೆ, ಧರುಣಿ ಇತ್ಯಾದಿ ಇವರ ನೆಚ್ಚಿನ ವೇಷಗಳು.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಜನರಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ, ಯುವ ಪೀಳಿಗೆ ಯಕ್ಷಗಾನದ ಹಿಮ್ಮೇಳ ಹಾಗೂ ಮುಮ್ಮೇಳದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಕಲಿಯುವವರು ಹಾಗೂ ಕಲಿಸುವವರು ಇಬ್ಬರ ಸಂಖ್ಯೆ ಕೂಡ ಹೆಚ್ಚುತ್ತಿರುವುದು ಒಳ್ಳೆಯ ವಿಷಯ, ಯಕ್ಷಗಾನ ಕರಾವಳಿ ಪ್ರದೇಶವನ್ನು ಹೊರತು ಪಡಿಸಿ ಹೊರ ರಾಜ್ಯ ಹಾಗೂ ರಾಷ್ಟ್ರಗಳಲ್ಲಿ ಪ್ರದರ್ಶಿಸುವ ನಿಟ್ಟಿನಲ್ಲಿ ಯಕ್ಷಗಾನದಲ್ಲಿ ಹೊಸ ಪ್ರಯೋಗದ ನಡೆಯುತ್ತಲೇ ಇವೆ. ಕನ್ನಡ ಹಾಗೂ ತುಳು ಹೊರತು ಪಡಿಸಿ ಇಂಗ್ಲಿಷ್, ಹಿಂದಿ ಮುಂತಾದ ಇತರೆ ಭಾಷೆಗಳಲ್ಲಿ ಪ್ರದರ್ಶನ ನೀಡುವುದು ಇನ್ನಷ್ಟು ಜನರನ್ನು ಯಕ್ಷಗಾನದ ಕಡೆಗೆ ಸೆಳೆಯುವಂತೆ ಮಾಡುತ್ತದೆ. ತೆಂಕು ಬಡಗು ಕೂಡಾಟಗಳು ಜನರನ್ನು ಎರಡು ಶೈಲಿಗಳಿಗೆ ಪರಿಚಯಿಸುತ್ತದೆ. ಕೆಲವು ವರ್ಷಗಳಿಂದ ಪ್ರಾರಂಭಗೊಂಡ ಯಕ್ಷಗಾನ ಸಂಬಂಧಿತ ಸಂಸ್ಥೆಗಳು ಹಾಗೂ ಅದರಲ್ಲಿ ತನು, ಮನ, ಧನ ನೀಡಿ ಸಹಕರಿಸುತ್ತಿರುವ ಜನಗಳ ಸಂಖ್ಯೆಯನ್ನು ಕಂಡರೆ ಯಕ್ಷಗಾನಕ್ಕೆ ಉತ್ತಮ ಭವಿಷ್ಯವಿದೆ ಎನ್ನುವುದು ಸ್ಪಷ್ಟ. ಆದರೆ ನನ್ನ ಅನಿಸಿಕೆಯಲ್ಲಿ ಯಕ್ಷಗಾನವನ್ನೇ ನಂಬಿ ಜೀವನ ನಡೆಸುತ್ತಿರುವ ಕಲಾವಿದರಿಗೆ ಇನ್ನಷ್ಟು ವ್ಯವಸ್ಥೆ ಹಾಗೂ ಸೌಲಭ್ಯಗಳ ಅಗತ್ಯವಿದೆ. ಇದನ್ನು ಕೊರೋನ ಲಾಕ್ಡೌನ್ ಸಂದರ್ಭದಲ್ಲಿ ಕಲಾವಿದರ ಜೀವನದಲ್ಲಿ ಉಂಟಾದ ಕಷ್ಟಗಳನ್ನು ನೋಡಿ ನಾವು ಅರ್ಥೈಸಿಕೊಳ್ಳಬಹುದು.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ಪ್ರೇಮಿಗಳು ಯಕ್ಷಗಾನದಲ್ಲಿ ಪರಂಪರೆ ಒಟ್ಟಿಗೆ ಹೊಸತನವನ್ನು ಸ್ವೀಕಾರ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇವತ್ತಿನ ಬ್ಯುಸಿ ಲೈಫ್ ಸ್ಟೈಲ್ ನಿಂದಾಗಿ ಇಡೀ ರಾತ್ರಿ ಕೂತು ಯಕ್ಷಗಾನ ನೋಡುವ ಬದಲು ಕಾಲಮಿತಿಯಲ್ಲಿ ನಡೆಯುವಂತಹ ಪ್ರದರ್ಶನಗಳನ್ನು ಜಾಸ್ತಿ ಇಷ್ಟ ಪಡುತ್ತಿದ್ದಾರೆ ಎನ್ನುವುದು ಇವರ ಅನಿಸಿಕೆ. ಅದು ಬಿಟ್ಟರೆ ಸಾಮಾಜಿಕ  ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಯಕ್ಷಗಾನವನ್ನು ಇನ್ನಷ್ಟು ಜನರಿಗೆ ಮುಟ್ಟುವ ಹಾಗೆ ಮಾಡಿರುವಲ್ಲಿ ನಮ್ಮ ಯುವ ಪ್ರೇಕ್ಷಕರ ಪ್ರೀತಿ ಎದ್ದು ಕಾಣುತ್ತದೆ.




ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ನಾನು ಭರತನಾಟ್ಯ ಹಾಗೂ ಯಕ್ಷಗಾನ ಎರಡನ್ನು ಕಲಿತಿರುವ ಕಾರಣ, ಹಾಗೂ ಯಕ್ಷಗಾನದಲ್ಲಿ ಕೂಡ ಬಹಳಷ್ಟು ಶಾಸ್ತ್ರೀಯ ನೃತ್ಯಗಳ ಅಂಶಗಳು ಇರುವ ಕಾರಣ ಈ ಎರಡನ್ನು ಒಗ್ಗೂಡಿಸಿ ಹೊಸ ಪ್ರಯೋಗವೊಂದನ್ನು ಮಾಡಬೇಕೆಂದು ಯೋಚಿಸುತ್ತಿದ್ದೇನೆ. ಮಹಿಳಾ ತಂಡವನ್ನು ಕಟ್ಟಿ ಮುನ್ನಡೆಸುತ್ತಿರುವ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಮುಂತಾದವರು ಶ್ರಮಿಸುತ್ತಿದ್ದಾರೆ. ಅಂತೆಯೇ ನಾನೂ ಕೂಡ ಮುಂದಿನ ದಿನಗಳಲ್ಲಿ ಗಂಡುಕಲೆಯಾದ ಯಕ್ಷಗಾನದಲ್ಲಿ ಮಹಿಳಾ ಸಾಮ್ರಾಜ್ಯವನ್ನು ಮುಂದುವರಿಸುವಲ್ಲಿ ಶ್ರಮಿಸುತ್ತೇನೆ.

ಡ್ಯಾನ್ಸ್, ಹಾಡುವುದು, ಪುಸ್ತಕ ಓದುವುದು ಹಾಗೂ ಬೇಕಿಂಗ್ & ಕೇಕ್ ಡಿಸೈನಿಂಗ್ ಇವರ ಹವ್ಯಾಸಗಳು.


ಕಟೀಲಿನಲ್ಲಿ ನಡೆದ ಸ್ಪರ್ಧೆಯಲ್ಲಿ ಉತ್ತಮ ರಾಜ ವೇಷ ಪ್ರಶಸ್ತಿ, ಎಸ್.ಡಿ.ಎಂ ಕಾನೂನು ಕಾಲೇಜ್ ನಲ್ಲಿ ಯಕ್ಷೋತ್ಸವದಲ್ಲಿ ಸತತವಾಗಿ ಐದು ವರ್ಷ ವೈಯಕ್ತಿಕ ಪ್ರಶಸ್ತಿ, ಆಳ್ವಾಸ್ ಕಾಲೇಜಿನಲ್ಲಿ ನಡೆದ ಯಕ್ಷೋತ್ಸವದಲ್ಲಿ ಎರಡು ವರ್ಷ ವೈಯಕ್ತಿಕ ಪ್ರಶಸ್ತಿ (ಉತ್ತಮ ಸ್ತ್ರೀ ವೇಷ, ಉತ್ತಮ ಪುಂಡು ವೇಷ), ವಿಜಯ ಕಾಲೇಜಿನಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ವೈಯಕ್ತಿಕ ಪ್ರಶಸ್ತಿ, ಡ್ಯಾನ್ಸ್ ನಲ್ಲಿ ೩೦೦ಕ್ಕು ಹೆಚ್ಚು ಬಹುಮಾನಗಳು ಇವರಿಗೆ ಸಿಕ್ಕಿರುತ್ತದೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395