ಯಕ್ಷ ಸಾಧಕರು ೧೪೦
"ಯಕ್ಷ ರಕ್ಷಾ ಪ್ರಶಸ್ತಿ" ಪುರಸ್ಕೃತ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ.
ತುಳುನಾಡು ಎಂದಾಗ ಎಲ್ಲರ ಮನಸ್ಸಿಗೆ ತಟ್ಟನೆ ಹೊಳೆಯುವ ವಿಚಾರಗಳಲ್ಲಿ ಯಕ್ಷಗಾನವೂ ಒಂದು.
ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ. ಇಂತಹ ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ.
೦೧.೦೬.೧೯೭೭ ರಂದು ದಿ.ಮಹಾಬಲ ಶೆಟ್ಟಿ ಹಾಗೂ ಸುಂದರಿ ಶೆಟ್ಟಿ ದಂಪತಿಯರ ಸುಪುತ್ರನಾಗಿ ಜನನ. ಪ್ರಥಮ ಪಿಯುಸಿ ವರೆಗೆ ವಿದ್ಯಾಭ್ಯಾಸ. ಕೋಳ್ಯೂರು ರಾಮಚಂದ್ರ ರಾವ್ ಇವರ ಯಕ್ಷಗಾನ ಗುರುಗಳು. ಯಕ್ಷಗಾನದ ಮೇಲಿದ್ದ ಅಭಿಮಾನದಿಂದಾಗಿ ಯಕ್ಷರಂಗಕ್ಕೆ ಬರಲು ಪ್ರೇರಣೆ ಎಂದು ಹೇಳುತ್ತಾರೆ ಕಾವಳಕಟ್ಟೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲು ಪಾತ್ರದ ಬಗ್ಗೆ ಚಿಂತನೆ, ಪ್ರಸಂಗದ ಎಲ್ಲಾ ಪಾತ್ರಗಳ ಪದ್ಯಗಳನ್ನು ಓದಿ ರಂಗಕ್ಕೆ ಹೋಗುತ್ತೇನೆ ಎಂದು ಹೇಳುತ್ತಾರೆ ಕಾವಳಕಟ್ಟೆ.
ದೇವಿ ಮಹಾತ್ಮೆ, ಚೂಡಾಮಣಿ, ಅಶ್ವಮೇಧ, ಕಾಯಕಲ್ಪ, ಧರ್ಮ ಸಿಂಹಾಸನ, ಹೀಗೆ ಪುರಾಣದ ಹೆಚ್ಚಿನ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ವಿಷ್ಣು, ಕೃಷ್ಣ, ರಾಮ, ಹನುಮಂತ, ದೇವೇಂದ್ರ, ರಕ್ತಬೀಜ, ಸುಧನ್ವ, ಭೀಷ್ಮ ಇತ್ಯಾದಿ ನೆಚ್ಚಿನ ಪಾತ್ರಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಈಗಿನ ಕಾಲದಲ್ಲಿ ಯಕ್ಷಗಾನ ಕೊರೋನಾದಂತಹ ಮಹಾಮಾರಿಯಿಂದ ತಲ್ಲಣಗೊಂಡೀತು ಅಂತ ಭಾವಿಸಿದರೆ ಹಾಗಾಗಲಿಲ್ಲ. ಮತ್ತೆ ಮೇಳೈಸುತ್ತಿದೆ. ಕಲೆ, ಕಲಾವಿದ ಬೆಳೆಯಬೇಕೆಂಬ ಭಾವನೆ ಕಲಾಭಿಮಾನಿಗಳಿಗಿದೆ. ಆದ್ದರಿಂದ ಕಲೆಗೆ ವ್ಯತ್ಯಯ ಇರಬಹುದೇ ವಿನಃ ಅಳಿವಿಲ್ಲ. ಮುಂದೆಯೂ ಯಕ್ಷಗಾನಕ್ಕೆ ಭವಿಷ್ಯವಿದೆ ಎಂದು ಧೃಢವಾಗಿ ಹೇಳಬಲ್ಲೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಪ್ರೇಕ್ಷಕರು ಯಕ್ಷಗಾನವನ್ನು ಈಗ ಬೇರೆ ಬೇರೆ ರೀತಿಯಿಂದ ವೀಕ್ಷಿಸುತ್ತಾರೆ. ಕೆಲವರು ವಿಮರ್ಶಾತ್ಮಕವಾಗಿ, ಕೆಲವರು ಮನೋರಂಜನೆಗಾಗಿ, ಕೆಲವರು ವಿರೋಧಾಭಾಸವಾಗಿ ವೀಕ್ಷಿಸುವವರೂ ಇದ್ದಾರೆ.
ಕಾಡಿನಲ್ಲಿ ಬೇರೆ ಬೇರೆ ಜಾತಿಯ ವೃಕ್ಷಗಳಿರುವಂತೆ, ಪ್ರೇಕ್ಷಕರಲ್ಲಿ ಬೇರೆ ಬೇರೆ ವರ್ಗಗಳಿವೆ. ಕಲಾವಿದ, ಆದರ್ಶಪೂರ್ಣನಾಗಿ ಸಂದೇಶ ಪೂರಿತವಾದ ನಡೆಯೊಂದಿಗೆ ಯಾರಿಗೂ ಸಂದೇಹಕ್ಕೊಳಪಡದಂತೆ ನಡೆದರೆ ಕೀರ್ತಿಶಾಲಿಯಾಗುವುದರಲ್ಲಿ ಎರಡು ಮಾತಿಲ್ಲ.
ಯಕ್ಷಗಾನದಲ್ಲಿ ಮುಂದಿನ ಕಲಾವಿದರು ಅಧ್ಯಯನಶೀಲರಾಗಿ ಬೆಳೆಯಬೇಕು. ವೇಷಕ್ಕೆ ಬೇಕಾದಷ್ಟೇ ಸಿದ್ಧತೆಯಲ್ಲದೆ ಇಡೀ ಪ್ರಸಂಗಾಧ್ಯಯನ, ಪುರಾಣಾಧ್ಯಯನ, ಸಾಹಿತ್ಯಾಧ್ಯಯನ ನಡೆಸಬೇಕು.
ಮುಂಬೈ ಅಜೆಕಾರು ಕಲಾಭಿಮಾನಿ ಬಳಗದಿಂದ "ಯಕ್ಷ ರಕ್ಷಾ ಪ್ರಶಸ್ತಿ" ಮತ್ತು ಬಹಳಷ್ಟು ಪ್ರಶಸ್ತಿ ಸನ್ಮಾನಗಳು ಸಂದಿವೆ. ಯಕ್ಷ ತಿಲಕ ಬಿರುದು ನೀಡಿ ಸನ್ಮಾನವಾಗಿದೆ.
ದ.ಕ.ಜಿ.ಸ.ಹಿ.ಪ್ರಾ. ಶಾಲೆ ಕೆದ್ದಳಿಕೆಯಲ್ಲಿ ೭ ವರ್ಷಗಳಿಂದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ, ವಿ. ಹಿಂ. ಪರಿಷತ್ ಕಾವಳ ಮೂಡೂರು, ರಾಮಸೇನೆ ಕಾರಿಂಜ ಘಟಕದ ಗೌರವ ಸಲಹೆಗಾರ, ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದ ಸಹ ಸಂಚಾಲಕ ಹಾಗೂ ಬಹಳಷ್ಟು ಕಡೆಗಳಲ್ಲಿ ಯಕ್ಷಗಾನ ತರಬೇತಿ ನೀಡಿದ್ದಾರೆ.
23 ವರ್ಷ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿ ಪ್ರಸ್ತುತ ಪಾವಂಜೆ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.
ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ನಿರ್ಮಲಾ ಇವರನ್ನು ಮದುವೆಯಾಗಿ ಮಕ್ಕಳಾದ ನಿಧಿಶಾ, ಸಮೀಕ್ಷಾ, ವಿಷ್ಣುಕುಮಾರ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment