ಯಕ್ಷ ಸಾಧಕರು ೧೪೧
ನಾದ ಪ್ರತಿಭೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬೆಣ್ಣೆಮನೆ ಗ್ರಾಮದ ವರ್ಗಾಸರದ ಶ್ರೀಯುತ ಭಾಸ್ಕರ ಗಣಪತಿ ಹೆಗಡೆ ಹಾಗೂ ಜಯಲಕ್ಷ್ಮಿ ಭಾಸ್ಕರ ಹೆಗಡೆ ಇವರ ಮಗನಾಗಿ ೨೪.೧೨.೨೦೦೧ ರಂದು ಅನಿರುದ್ಧ ಹೆಗಡೆ ವರ್ಗಾಸರ ಜನನ. ದ್ವಿತೀಯ ಪಿಯುಸಿ ವಿದ್ಯಾಭ್ಯಾಸ.
ಚಿಕ್ಕ ವಯಸ್ಸಿನಲ್ಲಿ ಮೇಳಗಳ ಆಟ ನೋಡುತ್ತಿದ್ದಂತೆ ಯಕ್ಷಗಾನದ ಮೇಲೆ ಆಸಕ್ತಿ ಮೂಡಿತು ಮತ್ತು ಸಂಗೀತದ ಮೇಲೆ ಅಪಾರವಾದ ಒಲವು ಇರುವುದರಿಂದ ಹಿಮ್ಮೇಳದ ವಿಭಾಗ ಹತ್ತಿರವಾಯಿತು. ತಬಲಾ ಕಲಿತದ್ದರಿಂದ ಯಕ್ಷಗಾನದಲ್ಲಿ ಮದ್ದಲೆ ತುಂಬಾ ಇಷ್ಟದ ವಾದನವಾಯಿತು,ಕಲಿಯುವ ಆಸಕ್ತಿಯು ಮೂಡಿತು. ಹೀಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಅನಿರುದ್ಧ. ಶ್ರೀ ಶಂಕರ ಭಾಗವತ ಯಲ್ಲಾಪುರ ಇವರ ಮದ್ದಳೆ ಗುರುಗಳು.
ಯಕ್ಷಗಾನದಲ್ಲಿ ವೇಷ ಮಾಡುವ ಅಥವಾ ಭಾಗವತಿಕೆ ಮಾಡುವ ಆಸಕ್ತಿ ಇದೆಯಾ:-
ವೇಷ ಮಾಡುವ ಆಸಕ್ತಿ ಏನು ಇಲ್ಲ, ಭಾಗವತಿಕೆ ಮಾಡುವ ಆಸಕ್ತಿ ಇಲ್ಲದಿದ್ದರು ಭಾಗವತಿಕೆಯ ಬಗ್ಗೆ, ರಾಗಗಳು ಮತ್ತು ಅದರ ಬಳಕೆಗಳ ಬಗ್ಗೆ ತುಂಬಾ ಆಸಕ್ತಿ ಇದೆ.
ಶ್ರೀ ಶಂಕರ ಭಾಗವತ, ಶ್ರೀ ಎ.ಪಿ. ಪಾಠಕ್, ಶ್ರೀ ಪರಮೇಶ್ವರ ಭಂಡಾರಿ ಕರ್ಕಿ, ಶ್ರೀ ಸುನೀಲ ಭಂಡಾರಿ, ನರಸಿಂಹ ಹಂಡ್ರಮನೆ ಇವರ ನೆಚ್ಚಿನ ಮದ್ದಳೆವಾದಕರು.
ಶ್ರೀ ರಾಮಕೃಷ್ಣ ಮಂದಾರ್ತಿ, ಶ್ರೀ ಶಿವಾನಂದ ಕೋಟ, ಶ್ರೀ ರಾಕೇಶ ಮಲ್ಯ, ಶ್ರೀ ಗಣೇಶ ಗಾಂವ್ಕರ್, ಶ್ರೀ ಪ್ರಸನ್ನ ಹೆಗ್ಗಾರ್ ಇವರ ನೆಚ್ಚಿನ ಚೆಂಡೆವಾದಕರು.
ನಿಮ್ಮ ನೆಚ್ಚಿನ ಪ್ರಸಂಗಗಳು:-
ಪೌರಾಣಿಕ:- ಕೃಷ್ಣಾರ್ಜುನ, ಕರ್ಣ ಪರ್ವ, ಭೀಷ್ಮ ವಿಜಯ, ಭೀಷ್ಮ ಪರ್ವ, ಸುದರ್ಶನ ವಿಜಯ, ಪಂಚವಟಿ, ವಾಲಿ ಮೋಕ್ಷ, ಸೀತಾವಿಯೋಗ, ರಾಮ ನಿರ್ಯಾಣ, ಪಾಂಚಜನ್ಯ, ನರಕಾಸುರ ಇತ್ಯಾದಿ.
ಹೊಸ ಪ್ರಸಂಗ:- ನಾಗಶ್ರೀ, ಚಲುವೆ ಚಿತ್ರಾವತಿ, ಶಿವರಂಜಿನಿ, ನಾಗವಲ್ಲಿ, ಈಶ್ವರಿ ಪರಮೇಶ್ವರಿ,ಚಂದ್ರಮುಖಿ ಸೂರ್ಯಸಖಿ ಇತ್ಯಾದಿ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಕಾಲಕ್ಕೆ ತಕ್ಕಂತೆ ಹಲವಾರು ಸ್ಥಿತಿ ಗತಿಗಳು ಬದಲಾಗಿವೆ, ಬದಲಾಗಬೇಕು ಕೂಡ. ಒಳ್ಳೆಯ ಬದಲಾವಣೆ ಮತ್ತು ಬೆಳವಣಿಗೆ ಎಂದಿಗು ಸ್ವೀಕಾರಾರ್ಹ ಎಂದು ನಮ್ಮ ಯಕ್ಷಗಾನದ ಹಿರಿಯರೇ ಹೇಳಿದ ಮಾತು. ತಪ್ಪು ಒಪ್ಪುಗಳು ಎಲ್ಲಾ ಕಲೆಯಲ್ಲಿಯು ಇದ್ದದ್ದೆ ಆದರೆ ಪ್ರಚಾರಕ್ಕೆ ಕಟ್ಟಿಬಿದ್ದು, ಶಿಳ್ಳೆ ಚಪ್ಪಾಳೆಗಳಿಗೆ ಮಾರು ಹೋಗದೆ ನಮ್ಮಂತಹ ಯುವ ಕಲಾವಿದರು ಅಧ್ಯಯನ ಮತ್ತು ಉತ್ತಮ ಪ್ರಬುದ್ಧ ಪ್ರದರ್ಶನವನ್ನು ನೀಡುವುದರ ಬಗ್ಗೆ ಗಮನ ಹರಿಸಿದರೆ ಖಂಡಿತ ಯಕ್ಷಗಾನಕ್ಕೆ ಇನ್ನು ಹೆಚ್ಚಿನ ಮನ್ನಣೆ ಮತ್ತು ಗೌರವ ಸಿಗುತ್ತದೆ ಎಂಬುದು ಇವರ ವೈಯಕ್ತಿಕ ಅನಿಸಿಕೆ .
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಪ್ರೇಕ್ಷಕರ ಬಗ್ಗೆ ಕಲಾವಿದನಾಗಿ ಮಾತನಾಡುವಷ್ಟು ದೊಡ್ಡವ ನಾನಲ್ಲ. ನನ್ನ ಅನಿಸಿಕೆ ಹೇಳುವುದಾದರೆ; ಎಷ್ಟೋ ಪ್ರೇಕ್ಷಕರು ಪ್ರದರ್ಶನ ಸವಿಯನ್ನುಂಡು ಪ್ರಶಂಸೆ ನೀಡಿ ತಪ್ಪುಗಳು ಆದಲ್ಲಿ ಅದನ್ನೂ ಹೇಳಿ ಪ್ರೋತ್ಸಾಹಿಸುವುದನ್ನು ನೋಡಿದರೆ ತುಂಬಾ ಸಂತೋಷವಾಗುತ್ತದೆ. ಕೆಲವು ಪ್ರೇಕ್ಷಕರು ಯಕ್ಷಗಾನವನ್ನು ಕೇವಲ ಮನರಂಜನೆಯಾಗಿ ನೊಡುತ್ತಿದ್ದಾರೆ. ಅದು ಅವರ ವೈಯಕ್ತಿಕ ಇಚ್ಛೆ, ಆದರೆ ಯಕ್ಷಗಾನದ ಉದ್ದೇಶ ಕೇವಲ ಮನರಂಜನೆ ಅಲ್ಲ. ತಪ್ಪು ಒಪ್ಪುಗಳ ತಕ್ಕಮಟ್ಟಿನ ಅರಿವಿದ್ದು ಪ್ರೋತ್ಸಾಹ ನೀಡಿದರೆ ನಮ್ಮಂತಹ ಯುವ ಕಲಾವಿದರ ಭವಿಷ್ಯ ಗಟ್ಟಿಗೊಳಿಸಲು ಸಹಕಾರಿಯಾಗಬಹುದು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದಲ್ಲಿ ಚಂಡೆ - ಮದ್ದಲೆಗಳು ಸಹವಾದನಗಳಾಗಿವೆ. ಮದ್ದಲೆಯನ್ನು ಸ್ವತಂತ್ರವಾದನವನ್ನಾಗಿಯು (ಮದ್ದಲೆ solo) ನುಡಿಸುವುದನ್ನು ಪ್ರಚಲಿತಗೊಳಿಸಬೇಕು ಎನ್ನುವ ಆಸೆ.
ಗುಂಡಬಾಳ, ಹಾಲಾಡಿ, ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ಮಾಡಿರುವ ಇವರು ಯಕ್ಷಗಾನ ರಂಗದಲ್ಲಿ ಒಟ್ಟು ೪ ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ. ತಬಲಾ ವಾದನ, ವಿಡಿಯೋಗ್ರಾಫಿ, ಕೃಷಿ ಇವರ ಹವ್ಯಾಸಗಳು.
ಸನ್ಮಾನಗಳು, ಪ್ರತಿಭಾ ಪುರಸ್ಕಾರಗಳು ಹಲವು ಇವರಿಗೆ ಸಿಕ್ಕಿರುತ್ತದೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment