ಯಕ್ಷ ಸಾಧಕರು ೧೪೨
ಯಕ್ಷತೇಜಶ್ರೀ
ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ. ಇಂತಹ ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಪ್ರತಿಭೆ ಗುರುತೇಜ್ ಶೆಟ್ಟಿ ಒಡಿಯೂರು.
ದಕ್ಷಿಣ ಕನ್ನಡ ಜಿಲ್ಲೆಯ ಒಡಿಯೂರಿನ ಕರೋಪಾಡಿ ಗ್ರಾಮದ ಸುಬ್ರಮಣ್ಯ ಶೆಟ್ಟಿ ಹಾಗೂ ಉಷಾ ಶೆಟ್ಟಿ ಮಗನಾಗಿ ೨೦.೦೩.೨೦೦೦ ರಂದು ಇವರ ಜನನ. ಬಿಕಾಂ ಪದವಿ ಪೂರೈಸಿ ಪ್ರಸ್ತುತ LL.b ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ತಾಯಿಯರ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದರು. ಶೇಖರ ಶೆಟ್ಟಿ ಬಾಯಾರು, ಉಂಡೆಮನೆ ಕೃಷ್ಣ ಭಟ್, ಸಬ್ಬಣಕೋಡಿ ರಾಮ್ ಭಟ್ ಇವರ ಯಕ್ಷಗಾನದ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲು ಮೇಳದ ಪ್ರಧಾನ ಭಾಗವತರಲ್ಲಿ ನಡೆ, ಪದ್ಯಗಳನ್ನು ಕೇಳಿಕೊಳ್ಳುವುದು, ಮತ್ತೆ ಹಿರಿಯರಲ್ಲಿ ಅದಕ್ಕೆ ಬೇಕಾದ ನಡೆ, ಹೇಗೆ ಅರ್ಥ ಹೇಳುವುದು ಎಂದು ತಿಳಿಯುವುದು, ತಾಳಮದ್ದಳೆಗಳನ್ನು ಕೇಳಿ ಅರ್ಥ ಸಂಗ್ರಹ ಮಾಡುವುದು ಹೀಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಗುರುತೇಜ್ ಹೇಳುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಕಾಲಕ್ಕೆ ತಕ್ಕ ಕೋಲದಂತೆ ಕೆಲವರಿಂದ ಆಗ್ತ ಇದೆ. ನಿಂತ ನೀರಾಗಬಾರದು ಅಂತ ಕೆಲವರು ಅದನ್ನು ಬದಲಾಯಿಸಲು ಹೋಗಿ ಏನೇನೋ ಆಗಿ ಹೋಗಿದೆ. ಜನರು ಬೇರೇಯೇ ರೀತಿಯಲ್ಲಿ ಕಂಡು ಕೊಂಡಿದ್ದಾರೆ. ಆದರೆ ಪರಂಪರೆಯನ್ನು ಅನುಸರಿಸಿ ನಡೆಸಿಕೊಂಡು ವಿಭಿನ್ನತೆಯನ್ನು ಪ್ರದರ್ಶಿಸುವವರು ಇದ್ದಾರೆ. ಅಂತೂ ಇಂದಿನ ಸ್ಥಿತಿಯಲ್ಲಿ ಯುವಜನತೆ ಅತಿ ಆಕರ್ಷಿತವಾಗಿ ಅತಿ ಗೌರವಯುತವಾಗಿ ಒಲವಿನಿಂದ ನೋಡುವವರು ಹೆಚ್ಚು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಇವತ್ತಿನ ಪ್ರೇಕ್ಷಕರಲ್ಲಿ ಹೊಸದನ್ನು ಬಯಸುವವರು ಇದ್ದಾರೆ, ಹಳೆ ಸಂಪ್ರದಾಯ ಬಯಸುವವರು ಇದ್ದಾರೆ, ಹಳೆಯದರಲ್ಲಿ ಹೊಸದನ್ನು ಬಯಸುವವರಿದ್ದಾರೆ, ಅಂತೂ ನಮ್ಮ ಪ್ರದರ್ಶನ ಕಂಡು ಮುಖದಲ್ಲಿ ಭಾವನೆಗಳನ್ನು ಕಂಡಾಗ ಪ್ರೇಕ್ಷಕರು ಆಸ್ವಾದಿಸುತ್ತಿದ್ದಾರೋ ಇಲ್ಲವೋ ಎಂದು ಅರ್ಥವಾಗುತ್ತದೆ.
ಯಕ್ಷಗಾನ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷರಂಗದಲ್ಲಿ ಮುಂದುವರಿಯುತ್ತೇನೋ ಅಥವ ಇಲ್ಲವೋ ಎಂದು ಗೊತ್ತಿಲ್ಲ, ಹಾಗಾಗಿ ಯೋಜನೆಗಳೇನು ತಿಳಿದಿಲ್ಲ.
ಎಲ್ಲಾ ವೇಷ ಹಾಗೂ ಎಲ್ಲಾ ಪ್ರಸಂಗಗಳೂ ನೆಚ್ಚಿನದ್ದೇ, ಪ್ರತ್ಯೇಕವಾಗಿ ಹಾಗೇನು ಇಲ್ಲ.
ಎಡನೀರು ಮೇಳ, ಹಾಗೂ ಕಟೀಲು ಮೇಳಗಳಲ್ಲಿ ತಿರುಗಾಟದ ಅನುಭವ ಇವರದು.
ಪ್ರಶಸ್ತಿಗಳು ಯಾವುದೂ ದೊರೆತಿಲ್ಲ. ಬಾಲ ಪ್ರತಿಭೆ ಅಂತ ಮೊದಲು ಹುಟ್ಟೂರಲ್ಲಿ ಸನ್ಮಾನಗಳು ಆಗಿದೆ.
ಭರತನಾಟ್ಯದಲ್ಲಿ ವಿದ್ವತ್ ಪದವಿ ಪಡೆದಿರುವ ಇವರು, ಯಕ್ಷಗಾನ ಹಿಮ್ಮೇಳ ಕಲಿಕೆ, ಶಾಸ್ತ್ರೀಯ ಸಂಗೀತ ಕೇಳುವುದು, ಕ್ರೀಡೆ ಇವರ ಹವ್ಯಾಸಗಳು.
ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಎಡನೀರು ಮಠ, ಒಡಿಯೂರು ಗುರುದೇವಾನಂದ ಸ್ವಾಮೀಜಿ, ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಮೇಳದ ಹಿರಿಯ ಹಾಗೂ ಕಿರಿಯ ಕಲಾವಿದರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಗುರುತೇಜ್ ಶೆಟ್ಟಿ ಒಡಿಯೂರು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos By:- Dhanu.K.P, Natesh Vitla, Yaksha Madhava, Sunil Kulal, Thanaya Arnady, Madhu Photography, G.P Bhat Photography.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment