ಯಕ್ಷ ಸಾಧಕರು ೧೪೬

ಯಕ್ಷ ವಿನೋದ ನಿಧಿ

ಮಹೇಶ ಮಣಿಯಾಣಿ ದೊಡ್ಡತೋಟ ಅವರು ಹಿರಿಯ, ಅನುಭವೀ ಹಾಸ್ಯಗಾರರು. ಇವರು ಶ್ರೀ ಧರ್ಮಸ್ಥಳ ಮೇಳದ ಕಲಾವಿದರು. ಇವರು ತಮ್ಮ ವೃತ್ತಿಯನ್ನು ಪುಂಡುವೇಷಧಾರಿಯಾಗಿ ಆರಂಭಿಸಿದ್ದರು.ಅಚ್ಚರಿಯ ಬೆಳವಣಿಗೆಯೊಂದರಲ್ಲೇ ಪುಂಡುವೇಷಧಾರಿಯಾಗಿದ್ದ ಇವರು ಹಾಸ್ಯಗಾರರಾಗಿ ಕಲಾಸೇವೆಯನ್ನು ಮಾಡುವಂತಾಗಿತ್ತು.

ಶ್ರೀ ಮಹೇಶ ಮಣಿಯಾಣಿ ಅವರ ಹುಟ್ಟೂರು ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ದೊಡ್ಡತೋಟ ಸಮೀಪದ ಕುದ್ಪಾಜೆ. ೦೧.೦೬.೧೯೭೪ ರಂದು ಅಪ್ಪಯ್ಯ ಮಣಿಯಾಣಿ ಮತ್ತು ಶ್ರೀಮತಿ ಲೀಲಾವತಿ ದಂಪತಿಗಳ ಪುತ್ರನಾಗಿ ಜನನ. ಮಹೇಶ್ ಮಣಿಯಾಣಿ ಅವರು ಓದಿದ್ದು ೭ನೇ ತರಗತಿ ವರೆಗೆ. ೫ನೇ ತರಗತಿಯಲ್ಲಿರುವಾಗಲೇ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೂ ಹುಟ್ಟಿಕೊಂಡಿತ್ತು. ಇದಕ್ಕೆ ಮನೆಯ ಹಿರಿಯರೇ ಕಾರಣರು.




ಸುಳ್ಯದ ಜಾತ್ರಾ ಸಂದರ್ಭ, ಧರ್ಮಸ್ಥಳ ಮೇಳದ ಆಟಕ್ಕೆ ಹೋಗಿ ಹಿರಿಯ ಕಲಾವಿದ ಶ್ರೀ ಉಬರಡ್ಕ ಉಮೇಶ ಶೆಟ್ರಲ್ಲಿ ಮೇಳಕ್ಕೆ ಬರುತ್ತೇನೆಂದು ಕೇಳಿಕೊಂಡಿದ್ದರು. ೭ನೇ ಕ್ಲಾಸ್ ವರೆಗೆ ಓದು ಮುಗಿದ ಮೇಲೆ ಮೇಳಕ್ಕೆ ಬರಬಹುದು ಎಂದು ಹೇಳಿ ಉಮೇಶ ಶೆಟ್ರು ಇವರನ್ನು ಮನೆಗೆ ಕಳುಹಿದ್ದರು. ೬ನೇ ತರಗತಿಯಲ್ಲಿ ಓದುತ್ತಿರುವಾಗ ಮರ್ಕಂಜ ಐತಪ್ಪ ಗೌಡರಿಂದ ಹೆಜ್ಜೆಗಾರಿಕೆಯನ್ನು ಕಲಿತರು. ಐತಪ್ಪ ಗೌಡರು ಕಟೀಲು ಮೇಳದ ಕಲಾವಿದರಾಗಿದ್ದರು. ೭ನೇ ಕ್ಲಾಸಿನ ಓದು ಮುಗಿದ ಕೂಡಲೇ ಮಹೇಶ್ ಅವರು ಧರ್ಮಸ್ಥಳದ ಸೇವೆಯಾಟಕ್ಕೆ ತೆರಳಿ ಉಮೇಶ ಶೆಟ್ಟರಲ್ಲಿ ಮೇಳಕ್ಕೆ ಬರುತ್ತೇನೆಂದು ಕೇಳಿಕೊಂಡರು. ಉಬರಡ್ಕ ಉಮೇಶ ಶೆಟ್ಟರ ಸೂಚನೆಯಂತೆ ನಾಟ್ಯ ಕಲಿಯಲು ನಿರ್ಧಾರ.

೧೯೮೯ನೇ ಇಸವಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ನಾಟ್ಯ ಕಲಿಕೆ. ಆಗ ಗೋಪಾಲಕೃಷ್ಣ ಕುರುಪ್ ಅವರು ಕೇಂದ್ರದಲ್ಲಿ ಹಿಮ್ಮೇಳ ಗುರುಗಳಾಗಿದ್ದರು. ತರಬೇತಿ ಕೇಂದ್ರದಲ್ಲಿ ಶಂಭಯ್ಯ ಭಟ್, ವಾಮನ ಕುಮಾರ್, ಕಿರಣ್ ಕುಮಾರ್ ಪಂಜ, ಲಕ್ಷ್ಮೀನಾರಾಯಣ ನೆಲ್ಯಾಡಿ, ಸೀತಾರಾಮ ಭಟ್, ಬೇಗಾರು ಗೋಪಾಲ ಅವರು ಮಹೇಶ್ ಅವರ ಸಪಾಠಿಗಳಾಗಿದ್ದರು. ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಮೊದಲ ಪ್ರದರ್ಶನ, ಬಬ್ರುವಾಹನ ಕಾಳಗ ಪ್ರಸಂಗದಲ್ಲಿ ಪ್ರದ್ಯುಮ್ನನಾಗಿ ಮಹೇಶ್ ಅವರು ರಂಗಪ್ರವೇಶ ಮಾಡಿದ್ದರು.

ಇವರ ಮೊದಲ ತಿರುಗಾಟ 1989-90ರಲ್ಲಿ. ಕರ್ಗಲ್ಲು ವಿಶ್ವೇಶ್ವರ ಭಟ್ಟರ ಸೂಚನೆಯಂತೆ ಬಪ್ಪನಾಡು ಮೇಳದಲ್ಲಿ. ಮುಂದಿನ ವರ್ಷ ರೆಂಜಾಳ ರಾಮಕೃಷ್ಣ ರಾವ್ ಅವರ ಸೂಚನೆಯಂತೆ ಕಟೀಲು ಮೇಳಕ್ಕೆ. ಕಟೀಲು 2ನೇ ಮೇಳದಲ್ಲಿ. ಒಟ್ಟು ೧೨ ವರ್ಷಗಳು ಕಟೀಲು ಮೇಳದಲ್ಲಿ ವ್ಯವಸಾಯ. ಪ್ರಥಮ ವರ್ಷ ಬಾಲಗೋಪಾಲರಾಗಿ, ಎರಡನೇ ವರ್ಷದಲ್ಲಿ ಮುಖ್ಯ ಸ್ತ್ರೀವೇಷ ಮತ್ತು ಪೀಠಿಕಾ ಸ್ತ್ರೀ ವರ್ಷಗಳ ನಿರ್ವಹಣೆ. ಮೂರನೇ ವೇಷಕ್ಕೆ ಪುಂಡುವೇಷಗಳನ್ನು ಮಾಡಲು ಆರಂಭಿಸಿದ್ದರು.

ಬಲಿಪರ ಭಾಗವತಿಕೆ, ಪೆರುವಾಯಿ ನಾರಾಯಣ ಭಟ್  ಮದ್ದಳೆಗಾರರು. ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಕೊಳ್ಯೂರು ನಾರಾಯಣ ಭಟ್, ಗುರಿಕ್ಕಾರ ನಾರಾಯಣ ಭಟ್, ರೆಂಜಾಳ ರಾಮಕೃಷ್ಣ ರಾವ್, ಪುಂಡರೀಕಾಕ್ಷ ಉಪಾಧ್ಯಾಯ, ಬೆಳ್ಳಾರೆ ಸುಬ್ಬಯ್ಯ ಶೆಟ್ಟಿ, ಅಜೆಕಾರು ರಾಜೀವ ಶೆಟ್ಟಿ, ಗುಂಡಿಮಜಲು ಗೋಪಾಲ ಭಟ್, ಬಣ್ಣದ ಸುಬ್ರಾಯ, ಬಾಯಾರು ರಮೇಶ್ ಭಟ್, ಮೊದಲಾದವರ ಒಡನಾಟವು ದೊರೆತಿತ್ತು. ಮಹೇಶ್ ಅವರು ಅಜೆಕಾರು ರಾಜೀವ ಶೆಟ್ಟರ ಮಾರ್ಗದರ್ಶನದಲ್ಲಿ ಬೆಳೆದವರು. ಚೆನ್ನಾಗಿ ಹೇಳಿಕೊಡುತ್ತಿದ್ದರಂತೆ. ಎಲ್ಲಾ ಹಿರಿಯ ಕಲಾವಿದರಿಂದ ಮಾರ್ಗದರ್ಶನವೂ ದೊರೆತಿತ್ತು. ಇದು ಕಲಿಕೆಗೆ ಅವಕಾಶವಾಗಿತ್ತು.




ಮುಂದಿನ ವರ್ಷಗಳಲ್ಲಿ ಪೆರುವಾಯಿ ನಾರಾಯಣ ಶೆಟ್ಟಿ, ತೊಡಿಕಾನ ವಿಶ್ವನಾಥ ಗೌಡ, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಬಾಬು ಕುಲಾಲ್, ಶ್ರೀಧರ ಪಂಜಾಜೆ, ಗಣೇಶ್ ಶೆಟ್ಟಿ ಮೂಡುಶೆಡ್ಯೆ ಮೊದಲಾದವರ ಒಡನಾಟವೂ ಸಿಕ್ಕಿತ್ತು. ೫ನೇ ತಿರುಗಾಟದಲ್ಲಿ ಮಹೇಶ್ ಮಣಿಯಾಣಿ ಚಂಡಮುಂಡರಾಗಿ ಅಭಿನಯಿಸಿ ಯಶಸ್ವಿಯಾಗಿದ್ದರು. ಅಜೆಕಾರು ರಾಜೀವ ಶೆಟ್ಟಿ ಮತ್ತು ಶ್ರೀಧರ ಪಂಜಾಜೆ ಅವರೊಂದಿಗೆ ಜತೆವೇಷಗಳನ್ನು ಮಾಡಿದ್ದರು. ಭಾರ್ಗವ. ಲಕ್ಷ್ಮಣ, ಷಣ್ಮುಖ, ಮನ್ಮಥ, ಶ್ರೀಕೃಷ್ಣ, ವಿಷ್ಣು ಅಲ್ಲದೆ ಕಸೆ ಸ್ತ್ರೀವೇಷಗಳನ್ನೂ ಮಾಡಿ ಅನುಭವವನ್ನು ಗಳಿಸಿಕೊಂಡಿದ್ದರು. ಆರು ವರ್ಷಗಳ ಬಳಿಕ ಪುಂಡುವೇಷಧಾರಿಯಾಗಿದ್ದ ಇವರು ಹಾಸ್ಯಗಾರನಾದುದು.

ಅನಿವಾರ್ಯ ಕಾರಣದಿಂದ ಕಟೀಲು ಮೇಳದ ಆಟದ ದಿನ ಮೇಳದ ಹಾಸ್ಯಗಾರರು ಅಸೌಖ್ಯದ ಕಾರಣ ಬಂದಿರಲಿಲ್ಲ ಬಲಿಪ ಶ್ರೀ ನಾರಾಯಣ ಭಾಗವತರು ಹಾಸ್ಯಗಾರನು ಆ ಪ್ರಸಂಗದಲ್ಲಿ ಮಾಡಬೇಕಾದ ಪಾತ್ರಗಳನ್ನು ಮಹೇಶ್ ಅವರಿಗೆ ನೀಡಿದ್ದರು. ಎಲ್ಲಾ ಹಿರಿಯ ಕಲಾವಿದರ ಸಹಕಾರ ನಿರ್ದೇಶನವೂ ದೊರೆತಿತ್ತು ಕಟೀಲು ಮೇಳದಲ್ಲಿ ಆರು ವರ್ಷಗಳ ಕಾಲ ಮುಖ್ಯ ಹಾಸ್ಯಗಾರನಾಗಿ ವ್ಯವಸಾಯ. ಬಳಿಕ ಶ್ರೀ ಧರ್ಮಸ್ಥಳ ಮೇಳಕ್ಕೆ  ಸೇರ್ಪಡೆ. ಅಲ್ಲಿ ಹಾಸ್ಯ ಪಾತ್ರಗಳನ್ನು ಮಾಡುವ ಕಲಾವಿದನ ಅವಶ್ಯಕತೆಯಿತ್ತು. ಮುಖ್ಯ ಹಾಸ್ಯಗಾರರಾಗಿದ್ದ ಶ್ರೀ ರಸಿಕರತ್ನ ನಯನಕುಮಾರರ ಅಸ್ವಸ್ಥತೆಯ ಕಾರಣದಿಂದ. ನಯನಕುಮಾರರ ಜತೆಯಲ್ಲಿ ಹಾಸ್ಯಪಾತ್ರಗಳನ್ನು ಮಾಡುತ್ತಾ, ಅವರಿಂದ ಕಲಿಯುತ್ತಾ ಮಹೇಶ್ ಅವರು ಬೆಳೆದವರು.

ಪುತ್ತಿಗೆ ರಘುರಾಮ ಹೊಳ್ಳ, ಕೆ. ಗೋವಿಂದ ಭಟ್, ವಸಂತ ಗೌಡ, ಕುಂಬಳೆ ಶ್ರೀಧರ ರಾವ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಅಡೂರು ಗಣೇಶ ರಾವ್, ಮೊದಲಾದವರ ನಿರ್ದೇಶನವೂ ಸಿಕ್ಕಿತ್ತು. ಉಬರಡ್ಕ ಉಮೇಶ್ ಶೆಟ್ಟಿ ಅವರ ನಿರ್ದೇಶನ ಸಹಕಾರವೂ ಇತ್ತು. ಶ್ರೀ ರಾಮಕೃಷ್ಣ ಮಯ್ಯ, ಸದಾಶಿವ ಶೆಟ್ಟಿಗಾರ್, ಬೇಗಾರು ಶಿವಕುಮಾರ್, ನಿಡ್ಲೆ ಗೋವಿಂದ ಭಟ್, ತಾರಾನಾಥ ವರ್ಕಾಡಿ, ಉದ್ಯಾವರ ಜಯಕುಮಾರ್, ಕೆದಿಲ ಜಯರಾಮ ಭಟ್, ಗಂಗಾಧರ ಪುತ್ತೂರು, ಈಶ್ವರ ಪ್ರಸಾದ್, ಚಂದ್ರಶೇಖರ ಧರ್ಮಸ್ಥಳ, ಪದ್ಮನಾಭ ಉಪಾಧ್ಯಾಯ, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಮುರಾರಿ ಕಡಂಬಳಿತ್ತಾಯ, ಅಡೂರು ಲಕ್ಷ್ಮೀನಾರಾಯಣ ರಾವ್, ಶಶಿಧರ ಕುಲಾಲ್, ಸುಬ್ರಾಯ ಹೊಳ್ಳ, ಶಂಭಯ್ಯ ಕಂಜರ್ಪಣೆ, ಹರೀಶ್ ಮಣ್ಣಾಪು, ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ, ಮೊದಲಾದವರ ಒಡನಾಟವೂ ಸಹಕಾರವೂ ತಿರುಗಾಟದುದ್ದಕ್ಕೂ ದೊರಕಿತ್ತು.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಹೀಗೆ ಹೇಳುತ್ತಾರೆ:-
ಬಹುತೇಕ ಪ್ರೇಕ್ಷಕರು ಇಡೀ ರಾತ್ರಿ ಆಟ ನೋಡುವ ಮನಸ್ಥಿತಿ ಇಲ್ಲದಿರುವುದರಿಂದ ಸಮಯ ಮಿತಿ ಪ್ರದರ್ಶನಗಳು ನಡೆಯುತ್ತಿದೆ ಹಾಗೂ ಇತ್ತೀಚೆಗೆ ಮಕ್ಕಳು, ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ.






ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಹೀಗೆ ಹೇಳುತ್ತಾರೆ:-
ಕೆಲವರು ಯಕ್ಷಗಾನ ಕಲೆಯ ಪ್ರೇಕ್ಷಕರು ಆಗಿದ್ದು, ಕೆಲವರು ನಿರ್ದಿಷ್ಟ ಕಲಾವಿದನ ಅಭಿಮಾನಿಗಳಾಗಿ ವ್ಯಕ್ತಿನಿಷ್ಠ ಅಭಿಮಾನಿಗಳಾಗುತ್ತಾರೆ. ಇದು ಯಕ್ಷಗಾನಕ್ಕೆ ಮಾರಕ. ಹಾಗಾಗಿ ಒಬ್ಬ ಕಲಾವಿದನ ಅಭಿಮಾನಿ ಆಗದೆ ಯಕ್ಷಗಾನದ ಅಭಿಮಾನಿಯಾಗಿ ವಸ್ತುನಿಷ್ಠ ಅಭಿಮಾನ ತೋರುವುದು ಯಕ್ಷಗಾನಕ್ಕೆ ಪೂರಕ ಅನ್ನುವುದು ಇವರ ಅಭಿಪ್ರಾಯ.

ಶ್ರೀ ಮಹೇಶ್ ಮಣಿಯಾಣಿ ಅವರು ಮಳೆಗಾಲದಲ್ಲಿ 9 ವರ್ಷ ನಿಡ್ಲೆ ಗೋವಿಂದ ಭಟ್ ಸಾರಥ್ಯದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇದರ ಸದಸ್ಯನಾಗಿ  ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ರಾಜ್ಯಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದರು. ಶ್ರೀಮತಿ ವಿದ್ಯಾ ಕೊಳ್ಯೂರು ನೇತೃತ್ವದ ‘ಯಕ್ಷಮಂಜೂಷ’ ತಂಡದ ಸದಸ್ಯನಾಗಿ 1 ವರ್ಷ ಉತ್ತರ ಭಾರತ ಮತ್ತು 2 ವರ್ಷ ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ಶ್ರೀ ದೇವಾನಂದ ಭಟ್ ಬೆಳುವಾಯಿ ನೇತೃತ್ವದ ತಂಡದಲ್ಲಿ 1 ವರ್ಷ ಅಮೆರಿಕಾ ಪ್ರವಾಸ ಮತ್ತು ಯಕ್ಷಧ್ರುವ ಪಟ್ಲ ಸತೀಶ ಶೆಟ್ರ ತಂಡದ ಸದಸ್ಯನಾಗಿಯೂ ಅಮೇರಿಕಾದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.


ಕಳೆದ ೩೩ ವರ್ಷಗಳಿಂದ ಮಹೇಶ್ ಮಣಿಯಾಣಿ ಅವರು ಕಲಾವ್ಯವಸಾಯ ಮಾಡುತ್ತಿದ್ದಾರೆ. ಕಲಾಮಾತೆಯ ಅನುಗ್ರಹ, ಪೂಜ್ಯ ಖಾವಂದರ ಆಶೀರ್ವಾದ, ಮೇಳದ ಯಜಮಾನರಾದ ಶ್ರೀ ಹರ್ಷೇ೦ದ್ರ ಕುಮಾರರ ಪ್ರೋತ್ಸಾಹ, ಹಿಮ್ಮೇಳ ಮುಮ್ಮೇಳದ ಎಲ್ಲಾ ಕಲಾವಿದರ ಸಹಕಾರದಿಂದ ಇದು ಸಾಧ್ಯವಾಯಿತು ಎಂಬ ವಿಚಾರವನ್ನು ಹೇಳಿ ಮಹೇಶ್ ಅವರು ಇವರೆಲ್ಲರಿಗೂ ಕೃತಜ್ಞತೆಗಳನ್ನು ತಿಳಿಸುತ್ತಾರೆ.

ಮಹೇಶ ಮಣಿಯಾಣಿ ಅವರು ಮೀನಾಕ್ಷಿ ಇವರನ್ನು ಮದುವೆಯಾಗಿ ಮಕ್ಕಳಾದ ಮನೀಶ್ ಹಾಗೂ ಚರಿತ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395