ಯಕ್ಷ ಸಾಧಕರು ೧೪೮

ಯಕ್ಷಕಲಾಧರ್ಮಿ

ಯಕ್ಷಗಾನ ಕರ್ನಾಟಕ ಕರಾವಳಿಯ ಗಂಡು ಕಲೆ. ಒಂದು ಕಾಲದಲ್ಲಿ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಈ ಕಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸ್ತ್ರೀಯರೂ ಮಿಂಚುತ್ತಿದ್ದಾರೆ. ಇನ್ನೊಂದು ಸಂತೋಷದ ವಿಚಾರವೆಂದರೆ ಈ ಕ್ಷೇತ್ರಕ್ಕೆ ಅನ್ಯ ಧರ್ಮೀಯರೂ ಪ್ರವೇಶಿಸಿ ಸೈ ಎನಿಸಿಕೊಳುತ್ತಿದ್ದಾರೆ.

ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಹೆನ್ನಾಬೈಲಿನ ಶ್ರೀಮತಿ ರಹಿಮುನ್ನಿಸಾ ಹಾಗೂ ಶ್ರೀಯುತ ಅಬ್ದುಲ್ ಹಮೀದ್ ಇವರ ಮಗನಾಗಿ ೨೬.೧೦.೧೯೭೮ ರಂದು ಮುಷ್ತಾಕ್ ಹೆನ್ನಾಬೈಲ್ ಅವರ ಜನನ. ಮುಷ್ತಾಕ್ ಅವರು ಯಕ್ಷಗಾನ ಹವ್ಯಾಸಿ ತಾಳಮದ್ದಳೆಯ ಅರ್ಥಧಾರಿ, ವೇಷಧಾರಿ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕಲಾ ಪದವಿ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ.




ಹೆನ್ನಾಬೈಲ್ ಅವರು ಯಕ್ಷಗಾನಕ್ಕೆ ಬರಲು ಪ್ರೇರಣೆ ಡಾ. ಜಗದೀಶ್ ಶೆಟ್ಟಿ. ಯಕ್ಷಗಾನಕ್ಕೆ ಪರಿಚಯಿಸಿದ್ದು ಮಾರ್ಗದರ್ಶನ, ವೇದಿಕೆಗಳನ್ನು ನೀಡಿದ್ದು  ಹವ್ಯಾಸಿ ಯಕ್ಷಗಾನ ತಾಳಮದ್ದಲೆ ಕಲಾವಿದರಾದ ಡಾ.ಜಗದೀಶ್ ಶೆಟ್ಟಿ ಸಿದ್ಧಾಪುರ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಕುರಿತು ಡಾ.ಜಗದೀಶ್ ಶೆಟ್ಟಿಯವರಿಂದ ಮಾರ್ಗದರ್ಶನ ಪಡೆದುಕೊಂಡು, ಧನಂಜಯ ಚಾತ್ರರಿಂದ ಪಾತ್ರದ ಚೌಕಟ್ಟನ್ನು ತಿಳಿದುಕೊಂಡು ರಂಗಕ್ಕೆ ಹೋಗುತ್ತೇನೆ ಎಂದು ಹೇಳುತ್ತಾರೆ ಮುಷ್ತಾಕ್ ಹೆನ್ನಾಬೈಲ್.

ಗದಾಯುದ್ಧ, ಭೀಷ್ಮ ವಿಜಯ, ಪಾದುಕ ಪ್ರದಾನ, ಕೃಷ್ಣ ಪರಂಧಾಮ, ಮಾರಣಾಧ್ವರ, ಕರ್ಣ ಪರ್ವ, ಕೃಷ್ಣ ಸಂಧಾನ ಇವರ ನೆಚ್ಚಿನ ಪ್ರಸಂಗಗಳು.

ತಾಳಮದ್ದಳೆಯಲ್ಲಿ ಇವರ ನೆಚ್ಚಿನ ಪಾತ್ರಗಳು:- ಗದಾಯುದ್ಧದ ಸಂಜಯ, ಸತ್ಯ ಹರಿಶ್ಚಂದ್ರದ ವಿಶ್ವಾಮಿತ್ರ, ಕರ್ಣಪರ್ವದ ಕೃಷ್ಣ, ಸಂಧಾನದ ವಿದುರ, ಪಾದುಕ ಪ್ರದಾನದ ಲಕ್ಷ್ಮಣ, ಸುದರ್ಶನ ವಿಜಯದ ಶತ್ರುಪ್ರಸೂದನ, ಭೀಷ್ಮ ವಿಜಯದ ಸಾಲ್ವ.

ಯಕ್ಷಗಾನ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದ ಇಂದಿನ ಸ್ಥಿತಿ ಶೋಚನೀಯವಾಗಿದೆ. ಯಕ್ಷಗಾನ ನೋಡುವ ಮತ್ತು ಆಡುವ ಕಟ್ಟಕಡೆಯ ಪೀಳಿಗೆ ನಾವಾಗುವ ಅಪಾಯವಿದೆ. ಯಕ್ಷಗಾನದ ಗದ್ಯ ಪದ್ಯ ನಡೆ ನಾಟ್ಯವೆಲ್ಲವೂ ವಿಪರೀತ ಅನುಕರಣೆಗೆ ಒಳಗಾಗಿ ಮೌಲ್ಯ ಕಳೆದುಕೊಂಡಿದೆ. ನವ ಪ್ರೇಕ್ಷಕರು ತಯಾರಾಗುತ್ತಿಲ್ಲ. ಜಾತಿಧರ್ಮಗಳ ಅವಹೇಳನ, ರಾಜಕೀಯ ವ್ಯಕ್ತಿಗಳ ವೈಭವೀಕರಣ ಅತಿಯಾಗಿದೆ. ಯಕ್ಷಸಾಹಿತಿಗಳ ಕೊರತೆಯಿಂದಾಗಿ ಸೃಜನಶೀಲ ಯಕ್ಷ ಸಾಹಿತ್ಯ ಇಲ್ಲವಾಗಿದೆ.

ಯಕ್ಷಗಾನ ರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಹವ್ಯಾಸಿಯಾಗಿ ಮುಂದುವರಿಯುವುದು, ವಿಮರ್ಶೆ ಬರೆಯುವುದು, ಪಾತ್ರಗಳ ಅಧ್ಯಯನ ಮಾಡುವುದು.





ಯಕ್ಷಗಾನ ರಂಗದಲ್ಲಿ ಬೆಳೆಯಲು ಸಹಕಾರ ನೀಡಿದ್ದ ಧನಂಜಯ ಚಾತ್ರ ಹಳ್ಳಿಹೊಳೆ, ಸತೀಶ್ ಕುಮಾರ್ ಶೆಟ್ಟಿ ಮೂಡುಬಗೆ, ಪ್ರಸಾದ್ ಪೂಜಾರಿ ಭಟ್ಕಳ, ಪವನ್ ಕಿರಣ್ಕೆರೆ, ಹೆಬ್ರಿ ಗಣೇಶ್ ಕುಮಾರ್ ಮತ್ತು ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಇವರಿಗೆ ಯಾವತ್ತೂ ಚಿರಋಣಿ ಎಂದು ಹೇಳುತ್ತಾರೆ ಹೆನ್ನಾಬೈಲ್.

ಪೆರ್ಡೂರು ಮೇಳದ ವೇದಿಕೆಯಲ್ಲಿ ಮತ್ತು ಕಮಲಶಿಲೆ ಮೇಳದ ವೇದಿಕೆಯಲ್ಲಿ ಇವರಿಗೆ ಸನ್ಮಾನ ಲಭಿಸಿರುತ್ತದೆ.

೦೭.೦೧.೨೦೦೭ ರಂದು ಮುಷ್ತಾಕ್ ಹೆನ್ನಾಬೈಲ್
ಅವರು ಶಾಹಿನಾ ಬಾನು ಇವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395