ಯಕ್ಷ ಸಾಧಕರು ೧೪೯
ಪ್ರೌಢ ಹಾಸ್ಯಪಟು
ನೃತ್ಯ, ಸಂಗೀತ, ಸಂಭಾಷಣೆ, ವೇಷ-ಭೂಷಣ, ಗಾನ ಮತ್ತು ವೇದಿಕೆ ಬಳಕೆ ಎಲ್ಲದರಲ್ಲೂ ತನ್ನದೇ ಆದ ಅನನ್ಯ ಶೈಲಿ ಮತ್ತು ರೂಪದೊಂದಿಗೆ ಸಂಯೋಜಿಸಲ್ಪಟ್ಟಿರುವ ಸಾಂಪ್ರದಾಯಿಕ ರಂಗಭೂಮಿ ಕಲೆಯೇ 'ಯಕ್ಷಗಾನ'. ಯಕ್ಷಗಾನವು ಕರ್ನಾಟಕದ ಜನಪ್ರಿಯ ಜಾನಪದ ರಂಗಭೂಮಿ ರೂಪವಾಗಿದ್ದು ಸುಮಾರು ನಾಲ್ಕು ನೂರು ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಮುಖ್ಯವಾಗಿ ಕರ್ನಾಟಕದ ತುಳುನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಕಂಡು ಬರುತ್ತದೆ. ಇಂತಹ ಶ್ರೇಷ್ಠವಾದ ಕಲೆಯಲ್ಲಿ ಮಿಂಚುತ್ತಿರುವ ಕಲಾವಿದರು ಶ್ರೀಯುತ ರವಿಶಂಕರ್ ವಳಕ್ಕುಂಜ.
ಕಾಸರಗೋಡು ತಾಲೂಕಿನ ಬದಿಯಡ್ಕ ಗ್ರಾಮದ ವಳಕ್ಕುಂಜದ ಶ್ರೀಯುತ ವಿ. ಸುಬ್ರಹ್ಮಣ್ಯ ಭಟ್ (ನಿವೃತ್ತ ಶಾಲಾ ಮುಖ್ಯೋಪಾಧ್ಯಾಯರು ಹವ್ಯಾಸಿ ವೇಷಧಾರಿ ಮತ್ತು ತಾಳಮದ್ದಳೆ ಅರ್ಥಧಾರಿ) ಹಾಗೂ ಶ್ರೀಮತಿ ಲಕ್ಷ್ಮಿ ಅಮ್ಮ ಇವರ ಮಗನಾಗಿ ಜನನ. ಪದವಿವರೆಗೆ ವಿದ್ಯಾಭ್ಯಾಸ. ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಶಿಕ್ಷಣವನ್ನು ಪಡೆದು, ಪದವಿ ಶಿಕ್ಷಣವನ್ನು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪಡೆದರು. ಪ್ರಸ್ತುತ ಪುತ್ತೂರು ಸಮೀಪ ಮಾಡಾವುನಲ್ಲಿ ವಾಸ.
ಯಕ್ಷಗಾನ ನಾಟ್ಯವನ್ನು ಅಣ್ಣ ಉಂಡೆಮನೆ ಶ್ರೀ ಕೃಷ್ಣ ಭಟ್ಟರಿಂದ ಕಲಿತು ಸೋದರಮಾವ ಹಾಸ್ಯರತ್ನ ನಯನಕುಮರ್ ಇವರಿಂದ ಹಾಸ್ಯದ ಬಗ್ಗೆ ಅಭ್ಯಾಸ ಮಾಡಿ ಯಕ್ಷಗಾನ ರಂಗ ಪ್ರವೇಶ ಮಾಡಿದ್ದರು. ೧೯೯೮ ರಲ್ಲಿ ಕಟೀಲು ಮೇಳ ಸೇರಿ ೧ನೇ ಮೇಳದಲ್ಲಿ ಒತ್ತು ಹಾಸ್ಯಗಾರನಾಗಿ 3 ವರ್ಷ ಸೇವೆ ಮಾಡಿದ ಬಳಿಕ ಪ್ರಧಾನ ಹಾಸ್ಯಗಾರನಾಗಿ ಭಡ್ತಿ ಪಡೆದು ಕಳೆದ ಇಪ್ಪತ್ತೆರಡು ವರ್ಷಗಳಿಂದ ಕಟೀಲು ೪ನೇ ಮೇಳದ ಪ್ರಧಾನ ಹಾಸ್ಯಗಾರನಾಗಿ ವ್ಯವಸಾಯ.
ಎಲ್ಲಾ ಪಾತ್ರಗಳೂ ನಮಗೆ ಉತ್ತಮ ಸಂದೇಶವನ್ನು ನೀಡುತ್ತವೆ. ಆದ ಕಾರಣ ಪ್ರಸಂಗದಲ್ಲಿ ಬರುವ ಎಲ್ಲಾ ಪಾತ್ರಗಳೂ ಇಷ್ಟ ಎಂದು ವಳಕ್ಕುಂಜ ಹೇಳುತ್ತಾರೆ.
ಯಕ್ಷಗಾನ ಕಲಾವಿದರನ್ನು ಸಂದರ್ಶಿಸಿ ಲೇಖನ ಬರೆಯುವುದು ಇವರ ಹವ್ಯಾಸ. ಯಕ್ಷಗಾನಕ್ಕೆ ಮೂರು ಪುಸ್ತಕಗಳನ್ನು ಬರೆದಿದ್ದಾರೆ:
೧. ಯಕ್ಷಗಾನ ವಾಚಿಕ ಸಮಾರಾಧನೆ.
೨. ಯಕ್ಷಗಾನ ಪ್ರಸಂಗ ದೃಶ್ಯಾವಳಿ.
೩. ಯಕ್ಷ ಪಾತ್ರ ದೀಪಿಕಾ.
ಇದು ಕಲಾವಿದರಿಗೆ ಉಪಯೋಗೀ ಪುಸ್ತಕಗಳು.
ಯಕ್ಷಗಾನಕ್ಕೆ ಹಿತಮಿತವಾದ ಮಾತು ಕುಣಿತ ಸಾಕು. ಇರುವುದಷ್ಟು ಸ್ವಚ್ಚವಾಗಿರಬೇಕು. ಕಲಾವಿದರು ಯಾವಾಗಲೂ ಸತತ ಅಭ್ಯಾಸಗಳಾಗಬೇಕು ಎಂದು ಹೇಳುತ್ತಾರೆ ವಳಕ್ಕುಂಜ.
ಸಾಧ್ಯವಾದಷ್ಟು ಸಮಯ ತಿರುಗಾಟ ನಡೆಸುವುದು ಮತ್ತು ಸಾಹಿತ್ಯ ಸೇವೆ ಮಾಡುವ ಗುರಿ ಮುಂದಿನ ಯೋಜನೆ.
ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಮೇಳದ ಸಹ ಕಲಾವಿದರ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ವಳಕ್ಕುಂಜ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment