ಯಕ್ಷ ಸಾಧಕರು ೧೪೫

ರಂಗ ಮೇನಕೆ ರವೀಂದ್ರ ಶೆಟ್ಟಿ ಹಕ್ಲಾಡಿ

ಯಕ್ಷಗಾನ ಅಂದರೆ ಬರಿಯ ನರ್ತನವಲ್ಲ, ಬರಿಯ ಗಾಯನವಲ್ಲ, ಸಂಭಾಷಣೆ ಭರಿತ ಬರಿಯ ಅಭಿನಯವೂ ಅಲ್ಲ. ಗಾಯನ, ವಾದನ, ನರ್ತನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ರಂಗಭೂಮಿಯ ಕಲಾಪ್ರಕಾರ. ಇಂತಹ ಕಲೆಯಲ್ಲಿ ಮಿಂಚುತ್ತಿರುವ ಪ್ರತಿಭೆ ರವೀಂದ್ರ ಶೆಟ್ಟಿ ಹಕ್ಲಾಡಿ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಕ್ಲಾಡಿಯ ಮಹಾಬಲ ಶೆಟ್ಟಿ ಹಾಗೂ ಸುದಮ್ಮ ಶೆಡ್ತಿ ಇವರ ಮಗನಾಗಿ ೦೭.೦೭.೧೯೭೯ ರಂದು ಜನನ. ೭ನೇ ತರಗತಿ ವರೆಗೆ ವಿದ್ಯಾಭ್ಯಾಸ. ಸ್ವಇಚ್ಚೆಯಿಂದ ಯಕ್ಷಗಾನ ರಂಗ ಪ್ರವೇಶ ಮಾಡಿದ ಇವರು ಯಲಗುಪ್ಪ ಸುಬ್ರಮಣ್ಯ ಹೆಗಡೆ ಹಾಗೂ ಕೊಳಲಿ ಕೃಷ್ಣ ಶೆಟ್ಟಿ ಇವರ ಬಳಿ ನಾಟ್ಯವನ್ನು ಕಲಿತು ಯಕ್ಷಗಾನ ರಂಗಕ್ಕೆ ಪ್ರವೇಶ ಮಾಡಿದರು.




ರಂಗಕ್ಕೆ ಹೋಗುವ ಮುನ್ನ ಅರ್ಧ ಗಂಟೆ ಮೊದಲೇ ವೇಷ ಮಾಡಿಕೊಂಡು ಆ ದಿನದ ಪ್ರಸಂಗದ ವೇಷಕ್ಕೆ ನಾನು ಹೇಗೆ ಮಾತನಾಡಬೇಕು, ಹೇಗೆ ಕುಣಿಯಬೇಕು, ಎದುರು ಇರುವ ವೇಷದವರ ಹತ್ತಿರ ಏನು ಸಂಭಾಷಣೆ ಮಾಡಬೇಕು ಎಂದು ಯೋಚನೆ ಮಾಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹಕ್ಲಾಡಿ ಹೇಳುತ್ತಾರೆ.

ಪೌರಾಣಿಕ ನೆಚ್ಚಿನ ಪ್ರಸಂಗ:-
ಶಶಿಪ್ರಭೆ, ಮೀನಾಕ್ಷಿ ಕಲ್ಯಾಣ, ದ್ರೌಪದಿ ಪ್ರತಾಪ, ರತಿ ಕಲ್ಯಾಣ, ಸುಧನ್ವ ಕಾಳಗ, ರತ್ನಾವತಿ ಕಲ್ಯಾಣ, ರುದ್ರಕೋಪ, ಮಾರುತಿ ಪ್ರತಾಪ, ಕಾಳಿದಾಸ, ಚಂದ್ರಾವಳಿ ವಿಲಾಸ ಇತ್ಯಾದಿ.

ಹೊಸ ಪ್ರಸಂಗ:-
ಈಶ್ವರಿ ಪರಮೇಶ್ವರಿ, ಶಂಕರಿ ಶಿವ, ಸಂಧ್ಯಾ ಸಾವೇರಿ, ಅಗ್ನಿ ನಕ್ಷತ್ರ, ಚಂದ್ರಲೇಖ, ಮಾಂಗಲ್ಯ ಮೋಹಿನಿ, ಪುಷ್ಪ ಚಂದನ, ದೀಪ ದರ್ಪಣ.

ನೆಚ್ಚಿನ ವೇಷ:-
ಪ್ರಭಾವತಿ, ಭ್ರಮರಕುಂತಲೆ, ಮೀನಾಕ್ಷಿ, ರತ್ನಾವತಿ, ಚಿತ್ರಾಕ್ಷಿ, ವಿದ್ಯಾಧರೆ, ಸತ್ಯಭಾಮೆ, ಚಂದ್ರಲೇಖ, ಪರಮೇಶ್ವರಿ, ಕಲ್ಪನಾ, ಮೋಹಿನಿ ಇತ್ಯಾದಿ.

ಯಕ್ಷಗಾನ ರಂಗದ ಇಂದಿನ ಸ್ಥಿತಿ ಗತಿ:-
ಯಕ್ಷಗಾನವನ್ನು ಬಂದು ನೋಡುವ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಕಾರಣ ಈಗ ಮೊಬೈಲ್ ನಲ್ಲಿ ಯಾವ ಯಕ್ಷಗಾನ ಬೇಕಾದರೂ ಸಿಗುತ್ತದೆ ಎಂದು ಹಕ್ಲಾಡಿ ಹೇಳುತ್ತಾರೆ.

ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ:-
ಈಗಿನ ಪ್ರೇಕ್ಷಕರು ರಾತ್ರಿಯಿಂದ ಬೆಳಗಿನವರೆಗೆ ನೋಡುವರು ಬಹಳ ಕಡಿಮೆ ಎಂದು ಹಕ್ಲಾಡಿ ಹೇಳುತ್ತಾರೆ.

ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ :-
ಇದೇ ರೀತಿ ಮುಂದೆ ದೇವರು ಆರೋಗ್ಯವನ್ನು ನನಗೆ ಕೊಟ್ಟಿದ್ದರೆ ಯಕ್ಷಗಾನದಲ್ಲಿ ಮುಂದುವರೆಯುತ್ತೇನೆ. ಇದಕ್ಕೆ ನಾನು ಯಾವತ್ತು ನನ್ನ ಅಭಿಮಾನಿಗಳಿಗೆ ಚಿರ ಋಣಿ ಎಂದು ಹೇಳುತ್ತಾರೆ ಹಕ್ಲಾಡಿ.

ಪ್ರಥಮವಾಗಿ ಗೆಜ್ಜೆ ಕಟ್ಟಿದ ಮೇಳ ಮಾರಣಕಟ್ಟೆ (೬ ವರ್ಷ), ಆಮೇಲೆ ಸಾಲಿಗ್ರಾಮ (೬ ವರ್ಷ), ಪ್ರಸ್ತುತ ಪಿ.ಕಿಶನ್ ಹೆಗ್ಡೆಯವರ ದಕ್ಷ ಯಜಮಾನಿಕೆಯ ಸೌಕೂರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ಮಳೆಗಾಲದಲ್ಲಿ ಮುಂಬೈ, ಹೈದರಾಬಾದ್, ಬೆಂಗಳೂರು, ಉತ್ತರ ಕರ್ನಾಟಕ ಹೀಗೆ ಹಲವು ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿದ್ದೇನೆ ಎಂದು ಹಕ್ಲಾಡಿ ಅವರು ಹೇಳುತ್ತಾರೆ.




ಇವರ ಯಕ್ಷಗಾನದ ಸಾಧನೆಯನ್ನು ನೋಡಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನ ಹಾಗೂ ಪುರಸ್ಕಾರ ನೀಡಿ ಗೌರವಿಸಿದ್ದಾರೆ.
ಯಕ್ಷ ಕನ್ಯೆ, ನಾಟ್ಯ ರಾಣಿ, ಯಕ್ಷ ಚಂದ್ರಿಕೆ, ರಂಗ ಮೇನಕೆ ಹೀಗೆ ಅನೇಕ ಬಿರುದುಗಳು ಹಕ್ಲಾಡಿ ಅವರಿಗೆ ಸಿಕ್ಕಿರುತ್ತದೆ.

ರವೀಂದ್ರ ಶೆಟ್ಟಿ ಹಕ್ಲಾಡಿ ಅವರು ೨೩.೦೫.೨೦೧೧ ರಂದು ವಾಸಂತಿ ಶೆಟ್ಟಿ ಅವರನ್ನು ವಿವಾಹವಾಗಿ ಮಕ್ಕಳಾದ ಅರ್ಯನ ಶೆಟ್ಟಿ ಹಾಗೂ ಅಘನ್ಯ ಶೆಟ್ಟಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395