ಯಕ್ಷ ಸಾಧಕರು ೧೫೮

ಚಂಡೆವಾದನದ ನಾದಾಮೃತ

ಯಕ್ಷಗಾನವು ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುವ ನಮ್ಮ ಹೆಮ್ಮೆಯ ಕಲೆ. ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ಪ್ರಸ್ತುತ ದೇಶ ವಿದೇಶಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಅನೇಕ ಕಲಾವಿದರು ಇಂದು ಕಲಾಸೇವೆಯನ್ನು ಮಾಡುತ್ತಿದ್ದಾರೆ. ವೃತ್ತಿಕಲಾವಿದರಾಗಿ, ಹವ್ಯಾಸಿಗಳಾಗಿ ಅನೇಕ ಕಲಾವಿದರಿಂದು ಯಕ್ಷಗಾನದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಧನೆಯ ಮೂಲಕ ಹಲವರು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಹೀಗೆ ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಪ್ರತಿಭೆ ಗಣೇಶ್ ವೆಂಕಟ್ರಮಣ ಗಾಂವ್ಕರ್ ಧೂಪದ ಮನೆ.





೨೬.೦೫.೧೯೮೭ ರಂದು ವೆಂಕಟ್ರಮಣ ಗಾಂವ್ಕರ್ ಹಾಗೂ ಕಮಲಾಕ್ಷಿ ಗಾಂವ್ಕರ್ ಇವರ ಮಗನಾಗಿ ಜನನ. ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ. ಅನುವಂಶೀಯವಾಗಿ ಬಂದುದರಿಂದ ಹಾಗೂ ಅಜ್ಜ ರಾಮಚಂದ್ರ ವೆಂಕಟರಮಣ ಗಾಂವ್ಕರ್ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದರು. ಮೂಲವಾಗಿ ಸ್ವ ಪ್ರೇರಣೆಯಿಂದ ಕಲಿತು, ನಂತರದಲ್ಲಿ ಕೆ.ಪಿ.ಹೆಗಡೆ, ಗೋಳಗೋಡ ಭಾಗವತರು, ಎನ್.ಜಿ ಹೆಗಡೆ ಯಲ್ಲಾಪುರ, ರಾಮಕೃಷ್ಣ ಮಂದಾರ್ತಿ, ಕಣ್ಣಿಮನೆ ಗಣಪತಿ ಭಟ್, ವಿಜಯ್ ದಾಸ್ ಇವರಿಂದ ಕಲಿತರು.
ರಾಮಕೃಷ್ಣ ಮಂದಾರ್ತಿ ಅವರ ಚೆಂಡೆ ವಾದನದ ಶೈಲಿಯಿಂದ  ಪ್ರಭಾವಿತಗೊಂಡು ಅವರ ಶೈಲಿಯಲ್ಲಿಯನ್ನು ರಂಗದಲ್ಲಿ ಅನುಸರಿಸಿಕೊಂಡು ಬಂದಿರುತ್ತಾರೆ.
ಯಕ್ಷರಂಗದಲ್ಲಿ ಒಟ್ಟು ೨೦ ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ.

ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಕೆ.ಪಿ ಹೆಗಡೆ ಗೋಳಗೋಡ, ಹೇರಂಜಾಲು ಗೋಪಾಲ ಗಾಣಿಗರು, ವಿದ್ವಾನ್ ಗಣಪತಿ ಭಟ್, ರವೀಂದ್ರ ಭಟ್ ಅಚವೆ ಇವರ ನೆಚ್ಚಿನ ಭಾಗವತರು.
ರಾಮಕೃಷ್ಣ ಮಂದಾರ್ತಿ, ಶಂಕರ್ ಭಾಗ್ವತ್ ಯಲ್ಲಾಪುರ, ಎನ್.ಜಿ ಹೆಗಡೆ ಯಲ್ಲಾಪುರ, ಸುನಿಲ್ ಭಂಡಾರಿ ಕಡತೋಕ ನೆಚ್ಚಿನ ಚೆಂಡೆ ಮದ್ದಳೆ ವಾದಕರು. ಯಕ್ಷಗಾನ ಭಾಗವತಿಕೆಯಲ್ಲಿ ಆಸಕ್ತಿ ಇದೆ ಎಂದು ಹೇಳುತ್ತಾರೆ ಗಣೇಶ್ ವೆಂಕಟ್ರಮಣ ಗಾಂವ್ಕರ್.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದಲ್ಲಿ ಮೂಲಭೂತವಾಗಿ ಇರುವ ಕೆಲವು ಅಂಶಗಳನ್ನು ಇಂದಿಗೆ ಕಾಣಲಾಗುವುದಿಲ್ಲ. ಇದರಿಂದಾಗಿ ಇಂದಿಗೆ ಯಕ್ಷಗಾನದ ಗುಣಮಟ್ಟವು ಸ್ವಲ್ಪ ಕಡಿಮೆಯಾದಂತಿದೆ. ಯಕ್ಷಗಾನದಲ್ಲಿ ಹೊಸತೇನನ್ನೋ ತರುವ ಭರದಲ್ಲಿ ಯಕ್ಷಗಾನದ ಮೂಲಭೂತವಾದ ಅಂಶಗಳಿಗೆ ಧಕ್ಕೆಯಾಗುತ್ತಿರುವುದನ್ನ ಕಾಣಬಹುದಾಗಿದೆ. ಹಿಂದಿನ ದಿನಗಳಿಗೆ ಹೋಲಿಸಿದಲ್ಲಿ ಇಂದಿನ ದಿನಮಾನಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಿರುವುದು ಸಂತಸದ ವಿಷಯವಾಗಿದೆ ಎಂದು ಗಾಂವ್ಕರ್ ಹೇಳುತ್ತಾರೆ.




ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ  ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನಕ್ಕೆ ಇವತ್ತಿನ ಪ್ರೇಕ್ಷಕರ ಪ್ರೋತ್ಸಾಹ ಸಹಕಾರ ಹೆಚ್ಚಿನ ಪ್ರಮಾಣದಲ್ಲಿ ಇರುವುದು ತುಂಬಾ ಶ್ಲಾಘನೀಯ. ಯಕ್ಷಗಾನದ ಪ್ರೇಕ್ಷಕರು ಯಕ್ಷಗಾನದ ಮೂಲತತ್ವ ಕಥೆ ಇವುಗಳ ಹೊರತಾಗಿ ಮನೋರಂಜನೆಗೆ ಹೆಚ್ಚಿನ ಆಸಕ್ತಿ ತೋರುವುದು ಕಂಡುಬರುತ್ತಿದೆ.

ಒಟ್ಟಿನಲ್ಲಿ ಹೇಳುವುದಾದರೆ ಯಕ್ಷಗಾನ ಕಲೆ, ಕಲಾವಿದರು ಮತ್ತು ಪ್ರೇಕ್ಷಕರು ಎಲ್ಲರೂ ಸೇರಿ ಕಲೆಯ ಗುಣಮಟ್ಟವನ್ನು ಕಾಪಾಡಿಕೊಂಡು ಹೋಗಬೇಕಾದದ್ದು ಬಹಳ ಪ್ರಮುಖವಾದ ವಿಷಯವಾಗಿದೆ ಎಂಬುದು ಇವರ ಅಭಿಪ್ರಾಯ.

ಯಕ್ಷಗಾನದಲ್ಲಿ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ವಾದನಗಳ ಬಗ್ಗೆ ಹೆಚ್ಚಿನ ಅಭ್ಯಾಸ ಮಾಡಿ ಸರಿಯಾದ ಕ್ರಮದಲ್ಲಿ ಅದನ್ನ ರಂಗಕ್ಕೆ ತರುವುದು. ಚೆಂಡೆ ವಾದನವನ್ನ ಸ್ವತಂತ್ರವಾದನವಾಗಿ ಪ್ರಯೋಗಿಸುವ ಪ್ರಯತ್ನ.

ಮಂದಾರ್ತಿ ಮೇಳದಲ್ಲಿ ಆರು ವರ್ಷ ತಿರುಗಾಟ, ಜಲವಳ್ಳಿ ಮೇಳದಲ್ಲಿ ಒಂದು ವರ್ಷ ತಿರುಗಾಟ, ಬೇರೆ ಬೇರೆ ರಿಜಿಸ್ಟರ್ ಮಂಡಳಿಯಲ್ಲಿ ತಿರುಗಾಟ ಮಾಡಿದ ಅನುಭವ ಗಣೇಶ್ ವೆಂಕಟ್ರಮಣ ಗಾಂವ್ಕರ್ ರವರಿಗೆ ಇದೆ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ತಬಲಾ ಮತ್ತು ಬೇರೆ ಬೇರೆ ವಾದನಗಳನ್ನು ಆಲಿಸುವುದು ಕೇಳುವುದು ಇವರ ಹವ್ಯಾಸಗಳು. ಇವರ ಪ್ರತಿಭೆಯನ್ನು ನೋಡಿ ಕೆಲವು ಕಡೆಗಳಲ್ಲಿ ಪ್ರತಿಭಾ ಪುರಸ್ಕಾರ ಗಾಂವ್ಕರ್ ಅವರಿಗೆ ದೊರೆತಿರುತ್ತದೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395