ಯಕ್ಷ ಸಾಧಕರು ೧೫೯

ಯಕ್ಷಕಲೆಯ ಮಧುರ ಬಂಧುತ್ವದ ಕಲಾಕುಟುಂಬ.

ಕರಾವಳಿ ತೀರದ ಜನರು ತಮ್ಮ ದೈನಂದಿನ ಬದುಕಲ್ಲಿ ಹಾಸು ಹೊಕ್ಕಾಗಿಸಿ ಬೆಳೆಸಿ ಉಳಿಸಿದ ಕಲೆಯೇ ಯಕ್ಷಗಾನ ಕಲೆ. ಅದು ಯಾವ ಪೂರ್ವ ವಾಸನೆ ಇಲ್ಲದವರನ್ನು ಕೂಡ ತನ್ನೊಳಗೆ ಸೆಳೆದುಕೊಂಡು ಹೇಗೆ ಬೆಳೆಸುತ್ತದೆ ಅನ್ನೋದೇ ಯಕ್ಷ ಪ್ರಶ್ನೆ. ಹಾಗೇ ಬೆಳೆದು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ತಂದೆ, ಮಗ ಹಾಗೂ ಸೊಸೆಯನ್ನು ಇಂದು ನಮ್ಮ ಲೇಖನದಲ್ಲಿ ಪರಿಚಯ ಮಾಡುತ್ತೇವೆ.

ವೆಂಕಟೇಶ್ ಕ್ರಮಧಾರಿ:-
೦೧.೦೯.೧೯೬೬ ರಂದು ಲೀಲಾವತಿ ಕ್ರಮಧಾರಿ ಹಾಗೂ ಲಕ್ಷ್ಮೀನಾರಾಯಣ ಕ್ರಮಧಾರಿ ಇವರ ಮಗನಾಗಿ ಜನನ. ನ್ಯಾಶನಲ್ ITI ಕಾಲೇಜ್ ಹೇರಾಡಿ ಬಾರ್ಕೂರಿನಲ್ಲಿ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ೧೯೮೩ ರಲ್ಲಿ ದಿ.ಸದಾನಂದ ಹೆಬ್ಬಾರ್ ಐರೋಡಿ ಇವರ ಬಳಿ ಪ್ರಾರಂಭಿಕ ಅಭ್ಯಾಸ ನಂತರ ಶ್ರೀಧರ್ ಹೆಬ್ಬಾರ್ ಕರ್ಜೆ ಇವರ ಬಳಿ ಯಕ್ಷಗಾನ ಅಭ್ಯಾಸ ಮುಂದುವರಿಕೆ. ೧೯೮೯ ರಿಂದ ಬಾರ್ಕೂರು ನ್ಯಾಶನಲ್ ITI ಕಾಲೇಜ್ ನಲ್ಲಿ ಉಪನ್ಯಾಸಕನಾಗಿ ವೃತ್ತಿ ಆರಂಭ.

ತಂದೆ ಲಕ್ಷ್ಮೀನಾರಾಯಣ ಕ್ರಮಧಾರಿ ಹಾಗೂ ಸೋದರ ಮಾವ ಶ್ರೀ ಶಿವರಾಮ ಕಲ್ಕೂರ ಉಪ್ಪೂರರು ,  ವೆಂಕಟೇಶ್ ಕ್ರಮಧಾರಿಯವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.
ಕೃಷ್ಣ ಪಾರಿಜಾತ, ಭಸ್ಮಾಸುರ ಮೋಹಿನಿ, ಸುಧನ್ವಾರ್ಜುನ, ಸುದರ್ಶನ ವಿಜಯ, ಭೀಷ್ಮ ವಿಜಯ, ಶನೀಶ್ವರ ಮಹಾತ್ಮೆ ಇವರ ನೆಚ್ಚಿನ ಪ್ರಸಂಗಗಳು. ಕೃಷ್ಣ, ಭಸ್ಮಾಸುರ, ಸುಧನ್ವ, ಸುದರ್ಶನ, ಸಾಲ್ವ, ವಿಕ್ರಮಾದಿತ್ಯ ಇತ್ಯಾದಿ ಇವರ ನೆಚ್ಚಿನ ವೇಷಗಳು.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಕಥೆಯನ್ನು ತಿಳಿದುಕೊಳ್ಳುವುದು, ಪದ್ಯಗಳನ್ನು ಬಾಯಿಪಾಠ ಮಾಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಕ್ರಮಧಾರಿ ಅವರು ಹೇಳುತ್ತಾರೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಪೌರಾಣಿಕ ಪ್ರಸಂಗಗಳು ಆಗಾಗ ಪ್ರದರ್ಶನ ಆಗ್ತಾ ಇದ್ದರೆ ಪ್ರಸಂಗಗಳ ಪರಿಚಯ ಆಗುತ್ತದೆ, ಯಕ್ಷಗಾನಕ್ಕೆ ಅಳಿವಿಲ್ಲ ಹಾಗೂ ಯಕ್ಷಗಾನಕ್ಕೆ ಪ್ರೇಕ್ಷಕರು ಎಂದೂ ಕಡಿಮೆ ಆಗುವುದಿಲ್ಲ.

ವಿನಾಯಕ ಯಕ್ಷಗಾನ ಸಂಘ ಉಪ್ಪೂರು ತೆಂಕಬೆಟ್ಟು, ಈ ಸಂಸ್ಥೆಯ ಸ್ಥಾಪಕ ಸದಸ್ಯ. ಈ ಸಂಘ ೪೦ನೇ ವರ್ಷದ ಸಂಭ್ರಮದಲ್ಲಿದೆ.


ವೇದಾಂತ್ ಕ್ರಮಧಾರಿ ಕರ್ಜೆ:-
೦೭.೦೨.೧೯೯೮ ರಂದು ಗೀತಾ ಕ್ರಮಧಾರಿ ಹಾಗೂ ವೆಂಕಟೇಶ್ ಕ್ರಮಧಾರಿ ಇವರ ಮಗನಾಗಿ ಜನನ. ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ. ಪ್ರಸ್ತುತ ಕುಂದಾಪುರದಲ್ಲಿ ವಿ - ಟೆಕ್ ಕಂಪ್ಯೂಟರ್ ತರಬೇತಿ ಹಾಗೂ ಕಂಪ್ಯೂಟರ್ ಸೇಲ್ಸ್‌ ಸರ್ವೀಸ್ ಎಂಬ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ.

ತಂದೆ ಯಕ್ಷಗಾನ ಮಾಡುವುದು ನೋಡಿ ಹಾಗೂ ಕಣ್ಣಿಮನೆ ಅವರ ಯಕ್ಷಗಾನ ನೋಡಿ ಯಕ್ಷಗಾನ ರಂಗೆಕ್ಕೆ ಬರಲು ಪ್ರೇರಣೆಯಾಯಿತು ಎಂದು ವೇದಾಂತ್ ಹೇಳುತ್ತಾರೆ.
ಕಣ್ಣಿಮನೆ ಗಣಪತಿ ಭಟ್ ಇವರ ನಾಟ್ಯದ ವಿಡಿಯೋಗಳನ್ನು ನೋಡಿ ಕಲಿತ ಕ್ರಮಧಾರಿ, ನಂತರ ಕೆಲವು ಕುಣಿತವನ್ನು ರಮೇಶ್ ನಾಯ್ಕ ಹಾಗೂ ಶ್ರೀಧರ್ ಹೆಬ್ಬಾರ್ ಇವರ ಬಳಿ ಅಭ್ಯಾಸ ಮಾಡಿದ್ದಾರೆ.

ರಂಗಕ್ಕೆ ಹೋಗುವ ಮೊದಲು ಪದ್ಯಗಳನ್ನು ನೋಡಿಕೊಂಡು ಅದಕ್ಕೆ ಬೇಕಾದ ಅರ್ಥವನ್ನು ತಂದೆಯ ಬಳಿ ಅಥವಾ ಹಿರಿಯ ಕಲಾವಿದರ ವಿಡಿಯೋಗಳನ್ನು ನೋಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ವೇದಾಂತ್ ಕ್ರಮಧಾರಿ.

ಚಂದ್ರಹಾಸ ಚರಿತ್ರೆ, ಕುಶ ಲವ, ಕಾಳಿದಾಸ, ಹೀಗೆ ಎಲ್ಲಾ ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಕುಶ, ಚಂದ್ರಹಾಸ, ವಿಷ್ಣು, ಕೃಷ್ಣ, ಬಲರಾಮ ಹೀಗೆ ಎಲ್ಲಾ ಪುಂಡು ವೇಷಗಳು ಇವರ ನೆಚ್ಚಿನ ವೇಷಗಳು.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಪಡೆದುಕೊಂಡು ಮುಂದೆ ಹೋಗುತ್ತಿದೆ. ಇವತ್ತಿನ ಯಕ್ಷಗಾನ ಪ್ರೇಕ್ಷಕರಿಗೆ ಎಲ್ಲಾ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ. ಹಾಗೆಯೇ ಯಕ್ಷಗಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯಕ ವಿಮರ್ಶೆಯನ್ನು ಕಡಿಮೆ ಮಾಡಿದರೆ ಯಕ್ಷಗಾನ ಇನ್ನೂ ಬೆಳೆಯಬಹುದು.  ಕಲಾವಿದ ಏನೇ ತಪ್ಪು ಮಾಡಿದರೂ ಅವರ ಬಳಿ ನೇರವಾಗಿ ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಬೇಡ;  ಎಲ್ಲಾ ಕಲಾವಿದರನ್ನು ಪ್ರೋತ್ಸಾಹಿಸಬೇಕು ಹಾಗೆ ಬೆಳೆಸಬೇಕು ಎಂದು ಇವರ ಅನಿಸಿಕೆ.

ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಇವರ ಊರಿನಲ್ಲಿ ಇವರು ಹಾಗೂ ದಿನೇಶ್ ಕನ್ನಾರು ಜತೆಗೂಡಿ ಯಕ್ಷ ಕಿರೀಟಿ ಹವ್ಯಾಸಿ ಬಳಗದ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.  ಅದರಲ್ಲಿ ಈಗಾಗಲೆ ಹಲವಾರು ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಯಲ್ಲಿ ಇದ್ದಾರೆ. ಈ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಯಕ್ಷಗಾನ ಕಲಿಯಬೇಕು ಎನ್ನುವ ಆಶಯ.

ಹಟ್ಟಿಯಂಗಡಿ ಮೇಳಕ್ಕೆ ಅತಿಥಿ ಕಲಾವಿದನಾಗಿ ಹೋಗಿದ್ದೇನೆ. ಹಾಗೆಯೇ ರಾಘವೇಂದ್ರ ಮಯ್ಯರ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಲಾಡಿ ಇದರಲ್ಲಿ ವೇಷ ಮಾಡಿದ್ದೇನೆ ಎಂದು ವೇದಾಂತ್ ಕ್ರಮಧಾರಿ ಹೇಳುತ್ತಾರೆ.

೪ನೇ ತರಗತಿಯಲ್ಲಿ ಇದ್ದಾಗ “ಈ ಟಿವಿ“ ಇದರ ಒಂದು Reality ಶೋನಲ್ಲಿ ಸೆಮಿಫೈನಲ್ ಹಂತಕ್ಕೆ ತಲುಪಿದ್ದು, ಆ ಸಂದರ್ಭದಲ್ಲಿ ಕೆಲವರು ನನ್ನ ಪ್ರತಿಭೆಯನ್ನು ಗುರುತಿಸಿದ್ದಾರೆ ಎಂದು ಹೇಳುತ್ತಾರೆ ವೇದಾಂತ್ ಕ್ರಮಧಾರಿ.


ವೇದಾಂತ್ ಕ್ರಮಧಾರಿ ಕರ್ಜೆ ಅವರು ಶ್ರೀರಕ್ಷಾ ಇವರನ್ನು ೦೨.೧೨.೨೦೨೨ ರಂದು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಶ್ರೀರಕ್ಷಾ ಕ್ರಮಧಾರಿ:-
ರಾಮನಾಥ ಹಾಗೂ ಸುಜಾತಾ ಹೆಬ್ಬಾರ್ ಇವರ ಮಗಳಾಗಿ ೨೯.೦೫.೧೯೯೮ ರಂದು ಶ್ರೀರಕ್ಷಾ ಅವರ ಜನನ. ಎಂ.ಬಿ.ಎ ಇವರ ವಿದ್ಯಾಭ್ಯಾಸ. ಚಿಟ್ಟಾಣಿಯವರ ವೇಷ ಹಾಗೂ ಕುಣಿತ ನೋಡಿ ಆಕರ್ಷಿತರಾಗಿ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಶಂಕರ್ ಭಟ್ ಸಾಗರ ಇವರ ಯಕ್ಷಗಾನ ಗುರುಗಳು.

ರಂಗಕ್ಕೆ ಹೋಗುವ ಮೊದಲು ಪದ್ಯದ ಅರ್ಥವನ್ನು ನೋಡಿಕೊಂಡು ಆ ವೇಷವನ್ನು ಹಿರಿಯ ಕಲಾವಿದರು ಹೇಗೆ ನಿರ್ವಹಿಸಿದ್ದಾರೆ ಎಂದು ನೋಡಿಕೊಂಡು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಶ್ರೀರಕ್ಷಾ ಅವರು ಹೇಳುತ್ತಾರೆ.
ಎಲ್ಲ ಪೌರಾಣಿಕ ಪ್ರಸಂಗಗಳು ಹಾಗೂ ಕಂಸ ವಧೆಯ ಕೃಷ್ಣ, ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ ಇವರ ನೆಚ್ಚಿನ ವೇಷಗಳು.


ಯಕ್ಷಗಾನ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಕೇಳಿದಾಗ:-
ಯಕ್ಷಗಾನ ಬಹಳ ದೊಡ್ಡ ಮಟ್ಟದಲ್ಲಿ ಸಾಗುತ್ತಿದೆ. ಹೀಗೆ ಶ್ರೀಮಂತ ಕಲೆಯಾಗಿ ವಿಜ್ರಂಭಿಸಲಿ ಹಾಗೂ ಯಕ್ಷಗಾನ ರಂಗಕ್ಕೆ ಪ್ರೇಕ್ಷಕರ ಕೊರತೆ ಇಲ್ಲ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರೇಕ್ಷಕರು ಬರಬೇಕು ಎಂಬುದು ಇವರ ಅನಿಸಿಕೆ.

ಯಕ್ಷಗಾನ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಕೆ ಇವರ ಹವ್ಯಾಸಗಳು.
ಶ್ರೀರಕ್ಷಾ ಅವರು ವೇದಾಂತ್ ಕ್ರಮಧಾರಿ ಕರ್ಜೆ ಇವರನ್ನು ೦೨.೧೨.೨೦೨೨ ರಂದು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ವೆಂಕಟೇಶ್ ಕ್ರಮಧಾರಿ, ವೇದಾಂತ್ ಕ್ರಮಧಾರಿ ಹಾಗೂ ಶ್ರೀರಕ್ಷಾ ಕ್ರಮಧಾರಿ ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395