ಯಕ್ಷ ಸಾಧಕರು ೧೬೫

" ಸಾಮಗ ಮನೆತನದ ಯಕ್ಷದೀಪ "

ಯಕ್ಷಗಾನ ಎಂಬುದು ಒಂದು ಗಂಡುಕಲೆ. ಮೇರುಕಲೆ. ಎಲ್ಲಾ ಕಲಾಪ್ರಕಾರಗಳ ಮೇಲೂ ನಮಗೆ ಗೌರವವಿದೆ. ಪ್ರೀತಿಯಿದೆ. ನೋಡಿ ನಾವು ಆನಂದಿಸುತ್ತೇವೆ. ಆದರೂ ಆಕಾಶಕ್ಕೆ ಆಕಾಶವೇ ಸಾಟಿ. ಸಾಗರಕ್ಕೆ ಸಾಗರವೇ ಸಾಟಿ ಎಂಬಂತೆ ಯಕ್ಷಗಾನವು ರಂಜಿಸುತ್ತಿದೆ. ಗಗನಸದೃಶವಾದ ಯಕ್ಷಗಾನವೆಂಬ ಕಲೆಯಲ್ಲಿ ಕಲಾವಿದರುಗಳೆಂಬ ಅದೆಷ್ಟೋ ನಕ್ಷತ್ರಗಳು ನಮಗೆ ಕಾಣಬಹುದು. ಕಲಾವಿದರೊಬ್ಬರ ಬಗ್ಗೆ ಬರೆಯಲು ಇದೊಂದು ಕಿರುಪ್ರಯತ್ನ ಅಷ್ಟೆ.





ಡಾ.ಪ್ರದೀಪ ವಿ.ಸಾಮಗ ಅವರು ೨೧.೦೬.೧೯೮೩ ರಂದು ಎಂ.ಆರ್.ವಾಸುದೇವ ಸಾಮಗ ಮತ್ತು ಮೀರಾ ವಿ ಸಾಮಗ ಇವರ ಮಗನಾಗಿ ಜನನ. M.Sc.Microbiology, Ph.D. in Microbiology ಇವರ ವಿದ್ಯಾಭ್ಯಾಸ. ಪ್ರಸ್ತುತ ಉಡುಪಿಯ ಆಕಾಶ್ ಬೈಜುಸ್ ನಲ್ಲಿ ಪ್ರಾಣಿಶಾಸ್ತ್ರದ ಸೀನಿಯರ್ ಫ್ಯಾಕಲ್ಟಿಯಾಗಿ ಉದ್ಯೋಗಿ. ಕೋಟದ ಅಧ್ಯಾಪಕರಾದ ಎಂ.ಎನ್. ಮಧ್ಯಸ್ಥರು ಇವರ ಯಕ್ಷಗಾನದ ಗುರುಗಳು. ತಂದೆ, ಅಜ್ಜ, ಅಮ್ಮ ಅವರೆಲ್ಲಾ ಪ್ರದೀಪ ಸಾಮಗರು ರಂಗಕ್ಕೆ ಬರುವುದಕ್ಕೆ ಮೂಲ ಕಾರಣ,ಪ್ರೇರಣಾ ಶಕ್ತಿಗಳು.

೧೧ನೇ ವಯಸ್ಸಿಗೆ ಶಿರಸಿ ಮೇಳದ ಮಧು ಮಾಲತಿ ಪ್ರಸಂಗದಲ್ಲಿ ಎರಡು ಪಾತ್ರಗಳನ್ನು ತಂದೆಯ ಒತ್ತಾಸೆಯಲ್ಲಿ ಶೃಂಗೇರಿಯಲ್ಲಿ ಪ್ರಥಮ ರಂಗ ಪ್ರವೇಶ. ಆಮೇಲೆ ನಾಟಕರಂಗದಲ್ಲಿ ತೊಡಗಿಸಿಕೊಂಡರು. ತೀರ್ಥಹಳ್ಳಿಯ ಕಟ್ಟೆಹಕ್ಕಲಿನಲ್ಲಿ ಸಮಾನ ಮನಸ್ಕ ಯುವಕರ ಆರ್ಕೇಶ್ಟ್ರಾ ತಂಡದಲ್ಲಿ ಹಾಡು, ನಿರೂಪಣೆ, ಡೋಲಕ್ ಮತ್ತು ಕಾಂಗೋ‌ಪ್ಲೇಯರ್ ಇತ್ಯಾದಿಯಾಗಿ ತೊಡಗಿಸಿಕೊಂಡರು.

ಸುಪ್ರಸಿದ್ಧ ಕಲಾವಿದರೂ,ಅರ್ಥಧಾರಿಗಳೂ ಆದ ತಂದೆ ವಾಸುದೇವ ಸಾಮಗರೊಂದಿಗೆ ಕಾಟಿಪಳ್ಳ, ಬಗ್ವಾಡಿ ಹೀಗೆ ಬೇರೆ, ಬೇರೆ ಮೇಳಗಳೊಂದಿಗೆ ಪಾತ್ರನಿರ್ವಹಿಸಿದರು‌. ಮಳೆಗಾಲದ ಹಲವಾರು ಆಟಗಳಲ್ಲಿ ಭಾಗಿಯಾದರು. ದ್ವಿತೀಯ‌ ಬಿ.ಎಸ್ಸಿ‌ ವ್ಯಾಸಂಗದ ರಜಾವಧಿಯಲ್ಲಿ ಕೊಂಡದಕುಳಿಯವರ ' ಪೂರ್ಣಚಂದ್ರ' ಕಾಲಮಿತಿ ಮೇಳದಲ್ಲಿಯೂ ವಿವಿಧ ಪಾತ್ರಗಳಾಗಿ ಕಾಣಿಸಿಕೊಂಡರು. ಕೊಂಡದಕುಳಿಯವರಲ್ಲಿ, ತೋಟಿಮನೆ ಗಣಪತಿ ಹೆಗಡೆಯವರಲ್ಲಿ, ಸುಜಯೀಂದ್ರ ಹಂದೆಯವರಲ್ಲಿ ಪಾತ್ರಕ್ಕೆ ಬೇಕಾದಷ್ಟೇ ನಾಟ್ಯವನ್ನು ಕಲಿತು ಪಾತ್ರವನ್ನು ಮಾಡುತ್ತಿದ್ದರು. ಆದರೆ ವಿಭಿನ್ನ ಪಾತ್ರಗಳನ್ನು ಮಾಡುವ ಅವಕಾಶ ದೊರೆಯಿತು. ಹಾಗಾಗಿ, ಎಂ.ಎನ್ ಮಧ್ಯಸ್ಥರು ಗಿಳಿಯಾರು ಶಾಂಭವಿ ವಿದ್ಯಾದಾಯಿನಿ ಶಾಲೆಯಲ್ಲಿ ನಡೆಸುತ್ತಿದ್ದ ಯಕ್ಷಗಾನ ತರಗತಿಗೆ ಸೇರಿ ಬಡಗಿನ ನಾಟ್ಯಾಭ್ಯಾಸ ಮಾಡಿ, ಹಂದಟ್ಟು ಗೋವಿಂದ ಉರಾಳರಿಂದ ಪ್ರಸಾದನ ಕಲಿತು, ಸ್ವಲ್ಪಕಾಲ ಕೆ.ಪಿ.ಹೆಗಡೆ, ಸದಾನಂದ ಐತಾಳರಲ್ಲಿ ಭಾಗವತಿಕೆಯನ್ನೂ ಕಲಿತು. ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯರಲ್ಲಿ ಮದ್ದಲೆಯ ಪ್ರಾಥಮಿಕ ಪಾಠ, ಗುಂಡ್ಮಿ ಪದ್ಮನಾಭ ಐತಾಳರಿಂದ ಕರ್ನಾಟಕೀ ಸಂಗೀತ (ಜೂನಿಯರ್). ಆಮೇಲೆ ಸಾಲಿಗ್ರಾಮ, ಪೆರ್ಡೂರು, ಸೌಕೂರು ಇತ್ಯಾದಿ ಮೇಳಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಹವ್ಯಾಸಿಯಾಗಿ ಅನೇಕ ಕಡೆಗಳಲ್ಲಿ ಬಡಗು - ತೆಂಕುಗಳೆರಡರಲ್ಲೂ ಸ್ತ್ರೀ, ಪುರುಷ ಹಾಸ್ಯ ಮೊದಲಾದ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂಯಮಂನಿಂದಾಗಿ ತಾಳಮದ್ದಳೆಯಲ್ಲಿಯೂ ತೊಡಗಿಸಿಕೊಳ್ಳುವಂತಾಯ್ತು ಎಂದು ಹೇಳುತ್ತಾರೆ ಸಾಮಗರು.






ಅಭಿನಯಕ್ಕೆ ಮತ್ತು ಮಾತಿಗೆ ಅವಕಾಶವಿರುವ ಎಲ್ಲಾ ಪಾತ್ರಗಳು (ಸ್ತ್ರೀ, ಪುರುಷ, ಹಾಸ್ಯ ಇತ್ಯಾದಿ) ಹಾಗೂ
ಒಳ್ಳೆಯ ಕಥೆ ಮತ್ತು ಸಂಘರ್ಷವಿರುವ ಎಲ್ಲಾ ಪೌರಾಣಿಕ ಹಾಗೂ ಕಾಲ್ಪನಿಕ ಪ್ರಸಂಗಗಳು ನನ್ನ ನೆಚ್ಚಿನವು ಎಂದು ಹೇಳುತ್ತಾರೆ ಸಾಮಗರು.

ಡಾ.ಪ್ರದೀಪ ವಿ.ಸಾಮಗ ಅವರು ಮಾಡಿರುವ ಪಾತ್ರಗಳು:-
ಭೀಷ್ಮ ವಿಜಯದಲ್ಲಿ ಅಂಬೆ, ಪರಶುರಾಮ, ಸಾಲ್ವ. ಸಂಧಾನದ ಕೃಷ್ಣ, ವಿದುರ, ದ್ರೌಪದಿ. ಜ್ವಾಲಾ ಪ್ರತಾಪದಲ್ಲಿ ಜ್ವಾಲೆ, ನೀಲಧ್ವಜ. ಪಟ್ಟಾಭಿಷೇಕದ ರಾಮ, ಕೈಕೇಯಿ, ಮಂಥರೆ. ವಾಲಿ ವಧೆಯಲ್ಲಿ ಸುಗ್ರೀವ, ರಾಮ. ಬೇಡರ ಕಣ್ಣಪ್ಪದ ಕಾಶಿಮಾಣಿ. ಕವಿರತ್ನ ಕಾಳಿದಾಸದ ಕಾಳ. ದಕ್ಷಯಜ್ಞದ ದಾಕ್ಷಾಯಿಣಿ, ವೀರಭದ್ರ, ಬ್ರಾಹ್ಮಣ, ಈಶ್ವರ. ಹರಿಶ್ಚಂದ್ರದ ವಿಶ್ವಾಮಿತ್ರ, ನಕ್ಷತ್ರಿಕ, ಚಂದ್ರಮತಿ. ರಾವಣ ವಧೆಯ ರಾಮ, ಮಂಡೋದರಿ. ಅಂಗದ ಸಂಧಾನದ ರಾವಣ, ಅಂಗದ, ಪ್ರಹಸ್ತ. ಲಂಕಾದಹನದ ರಾಮ, ಸರಮೆ, ಸೀತೆ, ಇಂದ್ರಜಿತು. ಸೌಭರೀ ಚರಿತೆಯ ಸೌಭರೀ ಮುನಿ. ಮಧ್ವ ವಿಜಯದಲ್ಲಿ ಮಧ್ವಾಚಾರ್ಯ.
ಗದಾಯುದ್ಧದ ಕೃಷ್ಣ. ದ್ರೌಪದೀ ಪ್ರತಾಪದ ದ್ರೌಪದಿ. ಜಾಬಾಲಿ ನಂದಿನಿಯ ನಂದಿನಿ.
ಪಂಚವಟಿಯ ಮಾಯಾ ಶೂರ್ಪನಖಿ, ಸೀತೆ, ರಾಮ. ರುಕ್ಮಾಂಗದ  ಚರಿತ್ರೆಯಲ್ಲಿ ವಿಂಧ್ಯಾವಳಿ, ಧರ್ಮಾಂಗದ, ಮೋಹಿನಿ. ಜಾಂಬವತಿ ಕಲ್ಯಾಣದ ಕೃಷ್ಣ.  ಕರ್ಣ ಬೇಧನದ ಕರ್ಣ, ಕೃಷ್ಣ, ಕುಂತಿ, ಸೂರ್ಯ. ವಿಶ್ವಾಮಿತ್ರ ಮೇನಕೆಯಲ್ಲಿ ಮೇನಕೆ, ವಿರಾಟ ಪರ್ವದ ಸೈರಂದ್ರಿ, ಸುದೇಷ್ಣೆ, ಉತ್ತರ.
ಇನ್ನೂ ಮುಂತಾದುವು.




ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನವು ಪ್ರೇಕ್ಷಕರಿಗೆ ಅತೀ ಸಮೀಪವರ್ತಿ ಕಲಾಮಾಧ್ಯಮ. ಹಾಗಾಗಿ ಜನರ ಜೀವನ ವಿಧಾನ, ಚಿಂತನೆಗಳು ಬದಲಾದಂತೆ ಯಕ್ಷಗಾನದ ಕಲಾವಂತಿಕೆಯೂ ಬದಲಾಗುತ್ತ ಸಾಗುತ್ತದೆ. ಬದಲಾವಣೆಗಳು ಸದಾ ಇರುತ್ತದೆ. ಆದರೆ ಬದಲಾವಣೆಗಳು ಕೇವಲ ಕಾಲೋಚಿತವಾಗದೆ, ಕಲೋಚಿತವಾಗಬೇಕು. ಹೊಟ್ಟೆಪಾಡಿಗೆ ಯಕ್ಷಗಾನದ ಅನಿವಾರ್ಯತೆಯಿಲ್ಲದ ಹವ್ಯಾಸಿಗಳು ಕಲೆಯ ವ್ಯಾಕರಣಕ್ಕೆ ಪೂರಕವಾದ ಬದಲಾವಣೆಗಳನ್ನು ಮಾಡುವ ಅಥವಾ ಪೂರ್ವ ಕ್ರಮಗಳನ್ನು ಉಳಿಸಿಕೊಳ್ಳುವ ಕಡೆ ಮನಸ್ಸು ಮಾಡಬೇಕು. ಪ್ರೇಕ್ಷಕ ಗಡಣ ಯಾವತ್ತೂ ವೈವಿಧ್ಯಮಯ ಮನಸ್ಥಿತಿಯಲ್ಲಿರುತ್ತದೆ. ಪ್ರಜ್ಞಾವಂತ ಪ್ರೇಕ್ಷಕರು ಹೆಚ್ಚಿದಷ್ಟೂ, ಯಕ್ಷಗಾನದ ಸತ್ವ ಸಮೃದ್ಧಿ ಸಾಧ್ಯವಾಗುತ್ತದೆ. ವಿಮರ್ಶಿಸದ ಪ್ರೇಕ್ಷಕರು, ವಿಮರ್ಶೆಗೆ ತೆರೆದುಕೊಳ್ಳದ ಕಲಾವಿದರು ಇಬ್ಬರೂ ಕಲೆಗೆ ಪೂರಕವಲ್ಲ. ಔಚಿತ್ಯ ಪ್ರಜ್ಞೆಯ ಸಮಾನ ಮನಸ್ಕರ ತಂಡವನ್ನು ಕಟ್ಟಿ, ನಿರ್ದೇಶಿತವಾದ ರಸಪೋಷಕ ಪ್ರದರ್ಶನಗಳನ್ನು ನೀಡಿ, ಯಕ್ಷಗಾನಕ್ಕೆ ರಸಗ್ರಾಹಿ ಪ್ರೇಕ್ಷಕರನ್ನು ಆಕರ್ಷಿಸುವುದು ಮುಂದಿನ ಯೋಜನೆ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಅಧ್ಯಯನ ಇಲ್ಲ. ಹಾಗಾಗಿ ಕನಿಷ್ಠ ಪ್ರಸಂಗದ ಪದ್ಯಗಳಾದರೂ ಗೊತ್ತಿರಲಿ ಎಂದು ಪ್ರಸಂಗ ಪುಸ್ತಕ ಓದುತ್ತೇನೆ. ಜೊತೆಗೆ ರಾಮಾಯಣ, ಮಹಾಭಾರತ ಭಾಗವತದ ಪ್ರಸಂಗಗಳಾದರೆ ಉಪಯೋಗಕ್ಕಿರಲಿ ಎಂದು ಮೂಲದಲ್ಲಿ ಕಥೆ ಹೇಗಿದೆ ಎಂದು ಒಮ್ಮೆ ಓದುತ್ತೇನೆ. ಮತ್ತೆ ನಾನೇ ಆ ಪಾತ್ರದ ಸ್ಥಿತಿಯಲ್ಲಿದ್ದಿದ್ದರೆ ಹೇಗಿರುತ್ತಿದ್ದೆ ಎಂದು ಸ್ವಲ್ಪ ಆಲೋಚಿಸುತ್ತೇನೆ.




ಯಕ್ಷಗಾನವೇ ಹವ್ಯಾಸ. ಜೊತೆಗೆ ಕೀಬೋರ್ಡ್, ಹಾಡುವುದು, ಟೇಬಲ್ ಟೆನಿಸ್, ಶಟಲ್, ಬ್ಯಾಡ್ಮಿಂಟನ್ ಮೊದಲಾದ ಆಟಗಳು, ಕವನ ರಚನೆ ಇವರ ಹವ್ಯಾಸಗಳು.

ಸಮ್ಮಾನ ಯೋಗ್ಯ ಎತ್ತರವನ್ನು ಇನ್ನೂ ಏರಿಲ್ಲ. ಹಾಗಾಗಿ ಯಾವುದೇ ಪ್ರಶಸ್ತಿ ಸಮ್ಮಾನಗಳಿಲ್ಲ. ಮೈಸೂರಿನ ಕರಾವಳಿ ಯಕ್ಷಗಾನ ಕೇಂದ್ರದಲ್ಲಿ ಐದು ವರ್ಷ ಬಡಗುತಿಟ್ಟಿನ ಗುರುವಾಗಿದ್ದೆ ಹಾಗಾಗಿ ಗುರುವಂದನಾದ ನಿಟ್ಟಿನಲ್ಲಿ ಒಂದು ಸಮ್ಮಾನವಾಗಿದೆ ಎಂದು ಸಾಮಗ ಅವರು ಹೇಳುತ್ತಾರೆ.

ಡಾ.ಪ್ರದೀಪ ವಿ.ಸಾಮಗ ಅವರು ದೀಪಿಕಾ ಇವರನ್ನು ೨೬.೧೦.೨೦೧೫ ರಂದು ಮದುವೆಯಾಗಿ ಮಗಳು ಆರಭಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photos by:- Subrahmanya Vattelsu, Sudarshan Mandarthi, Shanmukha Photography, Sharavoor Subramanay Bhat.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395