ಯಕ್ಷ ಸಾಧಕರು ೧೬೯
"ಸತ್ವಭರಿತ ಪ್ರತಿಭೆ"
ಯಕ್ಷಗಾನ ಸರ್ವಾಂಗೀಣ ಕಲೆ. ಕುಣಿತ, ಅಭಿನಯ, ಮಾತು, ಹಾವಭಾವ, ಪ್ರತ್ಯುತ್ಪನ್ನಮತಿತ್ವ ಸೇರಿ ಆಗುವ ಪರಿಪೂರ್ಣ ಕಲೆ ಯಕ್ಷಗಾನ. ಇಂತಹ ಶ್ರೀಮಂತ ಕಲೆಯಲ್ಲಿ ಯಕ್ಷಗಾನ ಗುರುವಾಗಿ, ಸಿನಿಮಾ ನಟನಾಗಿ, ನಿರ್ದೇಶಕನಾಗಿ, ಕಥೆಗಾರನಾಗಿ ಯಕ್ಷಗಾನ ರಂಗದಲ್ಲಿ ಅನೇಕ ಶಿಷ್ಯರನ್ನು ತಯಾರು ಮಾಡುತ್ತಿರುವ ಕಲಾವಿದ ಪ್ರಸಾದ್ ಚೇರ್ಕಾಡಿ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿಯ ಜಯಕರ್ ಹಾಗೂ ಸುಶೀಲ ದಂಪತಿಯ ಮಗನಾಗಿ ಜನನ. ಸರ್ಕಾರಿ ಪ್ರಾಥಮಿಕ ಶಾಲೆ ಪೇತ್ರಿಯಲ್ಲಿ ೭ನೇ ತರಗತಿವರೆಗೆ ವಿದ್ಯಾಭ್ಯಾಸ, ಶಾರದ ಪ್ರೌಡ ಶಾಲೆ ಚೇರ್ಕಾಡಿಯಲ್ಲಿ ೧೦ನೇ ವರೆಗೆ ವಿದ್ಯಾಭ್ಯಾಸ ಮುಗಿಸಿ, ಪಿ.ಯು.ಸಿ ಹಾಗೂ ಡಿಗ್ರಿ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಮೂಡಬಿದ್ರಿಯಲ್ಲಿ, ಮಂಗಳೂರು ವಿಶ್ವ ವಿದ್ಯಾಲಯದಲ್ಲಿ msc in material science ಪದವಿ, ಬೆಂಗಳೂರಿನಲ್ಲಿ indian institute of science ನಲ್ಲಿ ಪ್ರೊಜೆಕ್ಟ್ asst ಆಗಿ ಕೆಲಸ ಮಾಡಿ ಪ್ರಸ್ತುತ ಚಲನಚಿತ್ರ ಹಾಗೂ ‘ಕಥೆಗಾರರು' ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅನೇಕ ಯುವ ಪ್ರತಿಭೆಗಳನ್ನು ಯಕ್ಷಗಾನ ರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಯಕ್ಷಗಾನವನ್ನು ಇವರ ಅಜ್ಜ ಕೇಳಿಸಿ ಯಕ್ಷಗಾನ ನಾಟ್ಯ ಮಾಡು ಕುಣಿ ಎಂದು ಹುರಿದುಬಿಸುತಿದ್ದರು ಇದು ಚೇರ್ಕಾಡಿಯವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.
ಯಕ್ಷಗಾನದ ಇವರ ಮೊದಲು ಗುರು ಮಂಜುನಾಥ್, ಬಡಗುತಿಟ್ಟು ಯಕ್ಷಗಾನವನ್ನು ಪೂರ್ಣ ಪ್ರಮಾಣದಲ್ಲಿ ಅಭ್ಯಾಸ ಮಾಡಿದ್ದು ಚೇರ್ಕಾಡಿ ಮಂಜುನಾಥ್ ಪ್ರಭು ಹಾಗೂ ಶಶಿಕಲಾ ಪ್ರಭು ಅವರ ಬಳಿ; ನಂತರ ಮೂಡಬಿದ್ರಿಯ ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ತೆಂಕುತಿಟ್ಟು ಯಕ್ಷಗಾನವನ್ನು ಗುರುಗಳಾದ ಶೇಖರ್ ಡಿ ಶೆಟ್ಟಿಗಾರ್ ಅವರ ಬಳಿ ಕಲಿತರು.
ಶೇಖರ್ ಡಿ ಶೆಟ್ಟಿಗಾರ್ ಅವರು ಕಟೀಲು ಮೇಳದಲ್ಲಿ ತಿರುಗಾಟ ಮಾಡುತಿದ್ದರು, ಆ ಸಮಯದಲ್ಲಿ ಅವರು ಚೇರ್ಕಾಡಿ ಹಾಗೂ ಒಂದಷ್ಟು ಆಸಕ್ತರನ್ನು ಅವರು ಕಟೀಲು ಮೇಳಕ್ಕೆ ಸೇರಿಸಿದ್ದರು. ಕುರಿಯ ಗಣಪತಿ ಶಾಸ್ತ್ರಿಗಳು ಇದ್ದ ಸಮಯ ಶಾಸ್ತ್ರಿಗಳು ತುಂಬಾ ಮಾರ್ಗದರ್ಶನ ನೀಡುತ್ತಿದ್ದರು ಹಾಗೂ ಕಟೀಲು ೩ನೇ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದರು. ಕಟೀಲು ಮೇಳದಲ್ಲಿ ಅಮ್ಮುಂಜೆ ಮೋಹನ್ ಕುಮಾರ್, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಅರುಣ್ ಕುಮಾರ್ ಜಾರ್ಕಳ, ಬಾಲಕೃಷ್ಣ ಮಿಜಾರು, ಚಂದ್ರಶೇಖರ ಬನಾರಿ ಹಾಗೂ ಮೇಳದಲ್ಲಿ ಇದ್ದ ಎಲ್ಲಾ ಕಲಾವಿದರೂ ತುಂಬಾ ಸಹಾಯ ಹಾಗೂ ಮಾರ್ಗದರ್ಶನ ನೀಡಿರುತ್ತಾರೆ.
ಹೆಚ್ಚಿನ ತೆಂಕುತಿಟ್ಟು ನಾಟ್ಯ ಅಭ್ಯಾಸವನ್ನು ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಬಡಗುತಿಟ್ಟು ಹೆಚ್ಚಿನ ಯಕ್ಷಗಾನವನ್ನು ಬನ್ನಂಜೆ ಸಂಜೀವ ಸುವರ್ಣ ಬಳಿ ಕಲಿತರು. ಜೊತೆಗೆ ತೆಂಕು ಬಡಗಿನ ಯಕ್ಷಗಾನ ಛಂದಸ್ಸನ್ನು ಗಣೇಶ್ ಕೊಲೆಕಾಡಿ ಬಳಿ ಅಭ್ಯಾಸ. ಇವರ ಎಲ್ಲರ ಮಾರ್ಗದರ್ಶನ ನನಗೆ ಜೀವನದಲ್ಲಿ ಸ್ಫೂರ್ತಿಯಾಗಿದೆ ಎಂದು ಹೇಳುತ್ತಾರೆ ಚೇರ್ಕಾಡಿ.
ಪುಂಡು ಹಾಗೂ ಸ್ತ್ರೀ ವೇಷ ಇವರ ನೆಚ್ಚಿನ ವೇಷ, ಗಣೇಶ್ ಕೊಲೆಕಾಡಿ ಅವರು ಬರೆದಿರುವ ಎಲ್ಲಾ ಪ್ರಸಂಗಗಳು ನೆಚ್ಚಿನ ಪ್ರಸಂಗಗಳು. ಅದರಲ್ಲೂ ಶಬರ ಕುಮಾರ ತುಂಬಾ ನೆಚ್ಚಿನ ಪ್ರಸಂಗ. ರಂಗದಲ್ಲಿ ಇರುವ ಎಲ್ಲಾ ರಾಗಗಳು ಇವರ ನೆಚ್ಚಿನ ರಾಗಗಳು.
ಕುರಿಯ ಗಣಪತಿ ಶಾಸ್ತ್ರಿ ಇವರ ನೆಚ್ಚಿನ ಭಾಗವತರು ಹಾಗೂ ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ಎಲ್ಲಾ ಹಿರಿಯ ಭಾಗವತರು ಇವರ ನೆಚ್ಚಿನ ಭಾಗವತರು. ಅಡೂರು ಲಕ್ಷ್ಮಿ ನಾರಾಯಣ, ಚಿಪ್ಪಾರು ಬಲ್ಲಾಳ್ ಹಾಗೂ ಇವಾಗಿನ ಕಿರಿಯ ಎಲ್ಲಾ ಕಲಾವಿದರು ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು.
ನೀವು ನಟಿಸಿದ "ಒಂದು ಶಿಕಾರಿಯ ಕಥೆಯ" ಚಿತ್ರಕ್ಕೆ ನಿಮ್ಮ ಆಯ್ಕೆ ಹೇಗೆ ಆಯಿತು:-
ಸಿನಿಮಾ ಆಡಿಷನ್ ಹೋದೆ ಅಲ್ಲಿ ನನ್ನ ಹೆಸರು, ಯಕ್ಷಗಾನದಲ್ಲಿ ನಾನು ಮಾಡಿದ ಸಾಧನೆ, ಸಿನಿಮಾ ನಟನೆ ಬಗ್ಗೆ ಹೇಳಿದೆ. ಪಾತ್ರಕ್ಕೆ ಯಕ್ಷಗಾನ ಕಲಾವಿದರು ಹಾಗೂ ನಟನೆಯ ಅನುಭವ ಇರುವ ಕಲಾವಿದರು ಬೇಕಿದ್ದ ಕಾರಣ ನನ್ನ ಆಯ್ಕೆಯಾಯಿತು. ಸಿನಿಮಾದಲ್ಲಿ ಯಕ್ಷಗಾನ ಚಿತ್ರೀಕರಣ ಆಗಿದ್ದ ಒಂದು ರಾತ್ರಿ ಮಾತ್ರ. ಆದ್ರೆ ಸಿನಿಮಾದ ಒಟ್ಟು ನಟನೆಯ ಅನುಭವ ತುಂಬಾ ಕಲಿಯಲು ಒಂದು ವೇದಿಕೆಯಾಯಿತು.
ನನಗೆ ತೋಚಿದ ಕತೆಯನ್ನು ಹೇಳಲು ಒಂದಿಷ್ಟು ಕಿರುಚಿತ್ರವನ್ನು ನಿರ್ದೇಶನ ಮಾಡುತ್ತಿದ್ದೇನೆ. ಬೇರೆಯವರ ಕತೆ, ನಿರ್ದೇಶನ ಇದ್ದರೆ ನಾನು ನಟನೆ ಮಾತ್ರ ಮಾಡ್ತೇನೆ, ಅದೇ ನನ್ನದೇ ಕತೆ ಇದ್ರೆ- ನಟನೆಯ ಜೊತೆಗೇ ನಿರ್ದೇಶನವೂ ಮಾಡ್ತೇನೆ. ಯಕ್ಷಗಾನವನ್ನು ಪೂರ್ಣ ಪ್ರಮಾಣದಲ್ಲಿ ಇಟ್ಟುಕೊಂಡು ಒಂದು ಕಥೆಯನ್ನು ತಯಾರು ಮಾಡುತ್ತಿದ್ದೇನೆ. ಆದಷ್ಟು ಶೀಘ್ರದಲ್ಲಿ ಕಥೆಯನ್ನು ಜನರ ಮುಂದೆ ತರುತ್ತೇನೆ.
ಯಕ್ಷಗಾನ ಕಲಿಕೆಯನ್ನು ಕಲಿಸಲು ಕಥೆಗಾರರು ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ, ಆ ಸಂಸ್ಥೆಯಲ್ಲಿ ಒಟ್ಟು ಕೊರೋನ ಸಂಧರ್ಭದಲ್ಲಿ ಆನ್ಲೈನ್ ತರಗತಿಯನ್ನು ಮಾಡಿ ಪ್ರಸ್ತುತ ಆನ್ಲೈನ್ ಹಾಗೂ offline ಎರಡು ತರಗತಿಯನ್ನು ನಡೆಸುತ್ತಿದ್ದಾರೆ. ಸಂಸ್ಥೆಯಲ್ಲಿ ಒಟ್ಟು ೧೦೦ ವಿದ್ಯಾರ್ಥಿಗಳು ಯಕ್ಷಗಾನ ಕಲಿಯುತ್ತಿದ್ದು ವಿದ್ಯಾರ್ಥಿಗಳ ಮೂಲಕ ಬೇರೆ ಬೇರೆ ರೀತಿಯ ಕಲಿಕೆಯನ್ನು ಕಲಿಯಲು ತುಂಬಾ ಅನುಕಲವಾಗಿದೆ ಎಂದು ಹೇಳುತ್ತಾರೆ ಚೇರ್ಕಾಡಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಯಾವ ರೀತಿಯಲ್ಲಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಪುಸ್ತಕ ಓದಿ, ಛಂದಸ್ಸು ಬಗ್ಗೆ ಗೊತ್ತಿರುವ ಕಾರಣ ಪ್ರಸಂಗದಲ್ಲಿ ಬರುವ ಪದ್ಯ ಹೇಗೆ ಇರುತ್ತದೆ ಎಂದು ಗೊತ್ತಿರುವ ಕಾರಣ ತುಂಬಾ ಸಹಾಯ ಆಗುತ್ತದೆ ಹಾಗೂ ಇವಾಗ ಯೂಟ್ಯೂಬ್ ನಲ್ಲಿ ಪ್ರಸಂಗದ ವಿಡಿಯೋ ನೋಡಿ, ಹಿರಿಯ ಕಲಾವಿದರ ಜೊತೆಗೆ ಕೇಳಿ ತಯಾರಿ ಮಾಡಿಕೊಳ್ಳುತ್ತೇನೆ.
ಯಕ್ಷಗಾನ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಕಲಿಸಲು ಅನೇಕ ಸಂಸ್ಥೆಗಳು ಇದೆ, ಹೊಸ ಗುರುಗಳು ಬರುತ್ತಿದ್ದಾರೆ, ಹೊಸ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮೇಳಗಳು ಕಾಲಮಿತಿ ಪ್ರದರ್ಶನ ನೀಡುವುದರಿಂದ ಅನೇಕ ಯುವ ಕಲಾವಿದರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ, ಯಕ್ಷಗಾನ ರಂಗದಲ್ಲಿ ತುಂಬಾ ಮಹಿಳಾ ಕಲಾವಿದರು ತಯಾರು ಆಗುತ್ತಿದ್ದಾರೆ.
ಯಕ್ಷಗಾನ ಕಾಲಮಿತಿ ಆದ ಕಾರಣ ಯಕ್ಷಗಾನ ಪೂರ್ವ ರಂಗ, ಕಲಾವಿದರಿಗೆ ಅವಕಾಶ ಸಿಗುವುದು ಸ್ವಲ್ಪ ಕಡಿಮೆ ಆಗಿದೆ. ಕಾಲಕ್ಕೆ ತಕ್ಕ ಹಾಗೆ ಬದಲಾವಣೆ ಆಗಬೇಕು ಈ ರೀತಿಯ ಅನೇಕ ಬದಲಾವಣೆ ಮುಂಚೆಯಿಂದಲು ಆಗುತ್ತಿದೆ. ಕೊರೋನ ಸಮಯದಲ್ಲಿ ಯಕ್ಷಗಾನ ಸ್ವಲ್ಪ ಮಟ್ಟಿಗೆ ಸಪ್ಪೆಯಾಯಿತು ಆದರೆ ಇವಾಗ ಮತ್ತೆ ಯಕ್ಷಗಾನ ಪುಟಿದೇಳುತ್ತಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ:-
ಕಾಲಮಿತಿಯ ಕಾರಣ ಯಕ್ಷಗಾನ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ. ಇನ್ನು ಬೆಂಗಳೂರಿಗೆ ಹೋಲಿಸಿದರೆ ನಮ್ಮ ಕರಾವಳಿ ಭಾಗದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಪ್ರೇಕ್ಷಕರು ಯಾವತ್ತೂ ಜೊತೆಗೆ ಇದ್ದೇ ಇರುತ್ತಾರೆ ಹಾಗೂ ತುಂಬಾ ಹೊಸ ಪ್ರೇಕ್ಷಕರು ಯಕ್ಷಗಾನ ರಂಗಕ್ಕೆ ಬರುತ್ತಿದ್ದಾರೆ ಹಾಗೂ ಬೇರೆ ಬೇರೆ ಜಿಲ್ಲೆಯವರು ಯಕ್ಷಗಾನ ಕಲಿಯಲು ಬರುತ್ತಿದ್ದಾರೆ. ಕಲಾವಿದರು ಹಾಗೂ ಪ್ರೇಕ್ಷಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ.
ಯಕ್ಷಗಾನ ರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಸಿನಿಮಾದಲ್ಲಿ ಯಕ್ಷಗಾನದ ಬಗ್ಗೆ ಒಂದಿಷ್ಟು ಕಥೆಯನ್ನು ಮಾಡಬೇಕು ಎಂಬ ಯೋಜನೆ ಇದೆ ಹಾಗೂ ಅದರ ಕುರಿತು ತಯಾರಿ ಮಾಡಿಕೊಳ್ಳುತ್ತಿದ್ದೇನೆ ಹಾಗೂ ಯಕ್ಷಗಾನ ಅಲ್ಲದ ಕಥೆಯನ್ನು ಮಾಡಬೇಕು ಎಂಬ ಹಂಬಲ ಇದೆ.
ಯಕ್ಷಗಾನದಲ್ಲಿ ಒಂದಿಷ್ಟು ವಿದ್ಯಾರ್ಥಿಗಳನ್ನು ತಯಾರಿ ಮಾಡಿಕೊಳ್ಳಬೇಕು; ಯಕ್ಷಗಾನ ಕಲಾವಿದರನ್ನಾಗಿ ಸಂಪೂರ್ಣವಾಗಿ ತಯಾರು ಮಾಡಬೇಕು ಎಂಬ ಯೋಜನೆ ಇದೆ ಹಾಗೂ ಕಥೆಗಾರರು ಸಂಸ್ಥೆಯ ಮೂಲಕ ಆ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನವನ್ನು ನೀಡಬೇಕು ಹಾಗೂ ನನ್ನ ಒಂದಿಷ್ಟು ನೆಚ್ಚಿನ ಪ್ರಸಂಗಗಳನ್ನು ವಿದ್ಯಾರ್ಥಿಗಳಿಂದ ನೀಡಬೇಕು ಎಂಬ ಯೋಜನೆ ಇದೆ.
ಪ್ರಶಸ್ತಿ ಹಾಗೂ ಸನ್ಮಾನಗಳು:-
♦ ಅಕ್ಷಯಾಂಬರ ನಾಟಕಕ್ಕೆ Mahendra Excellence For Theatre Award ಅತ್ಯುತ್ತಮ ನಟ ಪ್ರಶಸ್ತಿ.
♦ ನಟಿಸಿದ ಭಾರತ ಸ್ಟೋರ್ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ.
♦ ಯಕ್ಷಗಾನ ಯಕ್ಷೋತ್ಸವದಲ್ಲಿ ೨ ವರ್ಷ ಅತ್ಯುತ್ತಮ ವೇಷಧಾರಿ.
♦ ಉಡುಪಿ ರಂಗಭೂಮಿ ನಡೆಸುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ.
♦ Minister Of Culture Delhi ಇವರು ಜೂನಿಯರ್ ಯಂಗ್ ಆರ್ಟಿಸ್ಟ್ Scholarship.
ನಟಿಸಿದ ಒಂದು ಶಿಕಾರಿ ಕಥೆಗೆ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ೨ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಸಿಕ್ಕಿರುತ್ತದೆ.
ಕಟೀಲು ಮೇಳ, ಎಡನೀರು ಮೇಳ, ಮುಂಡ್ಕೂರು ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಇರುವ ಚೇರ್ಕಾಡಿಯವರು ಯಕ್ಷಗಾನ ರಂಗದಲ್ಲಿ ಒಟ್ಟು ೨೪ ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಸಂಗೀತ, ಪುಸ್ತಕ ಓದುವುದು, ಸಿನಿಮಾ ನೋಡುವುದು ಇತ್ಯಾದಿ ಇವರ ಹವ್ಯಾಸಗಳು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment