ಯಕ್ಷ ಸಾಧಕರು 242

"ಯಕ್ಷ ಪ್ರತಿಭಾವಳಿ"

ಉತ್ತರ ಕೇರಳದ ಕಾಸರಗೋಡಿಂದ, ಉತ್ತರ ಕನ್ನಡದ ಗೋಕರ್ಣ, ಅತ್ತ ಕನ್ನಡದ ಮಲೆನಾಡಲ್ಲೂ ಪಸರಿಸಿರುವ ಸರ್ವಾಂಗ ಸುಂದರ ಕಲೆಯೇ "ಯಕ್ಷಗಾನ". ಯಕ್ಷರಂಗದಲ್ಲಿ ತಮ್ಮದೇ ಆದ ಕೈಚಳಕದಿಂದ ಹಿಮ್ಮೇಳದಲ್ಲಿ ಮಿಂಚುತ್ತಿರುವ ಯುವ ಕಲಾವಿದರು ಸವಿನಯ ನೆಲ್ಲಿತೀರ್ಥ.

12.11.1998 ರಂದು ದಿ।ಭಾಸ್ಕರ ನೆಲ್ಲಿತೀರ್ಥ (ರಂಗಭೂಮಿ ನಿರ್ದೇಶಕ, ಕಲಾವಿದ ಹಾಗೂ ಯಕ್ಷಗಾನ ವೇಷಧಾರಿ & ಅರ್ಥಧಾರಿ) ಹಾಗೂ ವಿಶಾಲ ಇವರ ಮಗನಾಗಿ ಚಿಕ್ಕಮಗಳೂರಿನ ಕುದುರೆಮುಖದಲ್ಲಿ ಜನನ. ಪ್ರಾಥಮಿಕ ಹಾಗೂ ಪದವಿ ಶಿಕ್ಷಣವನ್ನು ಮಹಾತ್ಮ ಗಾಂಧಿ centenary ಶಾಲೆಯಲ್ಲಿ ಪೂರ್ಣಗೊಳಿಸಿ, ಪಿ.ಯು.ಸಿ, ಪದವಿ & ಸ್ನಾತಕೋತ್ತರ ಪದವಿ (M.Com) - (ಸಾಂಸೃತಿಕ ದತ್ತು ಸ್ವೀಕಾರ ಯೋಜನೆಯ ಅಡಿಯಲ್ಲಿ) ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆಯಲ್ಲಿ ಪೂರ್ಣಗೊಳಿಸುತ್ತಾರೆ. ಬಾಲ್ಯದಲ್ಲಿ ನೋಡುತ್ತಿದ್ದ ಯಕ್ಷಗಾನ ಪ್ರದರ್ಶನ, ಸಿ.ಡಿಗಳನ್ನು ನೋಡಿ ಮುಖ್ಯವಾಗಿ  ಮನೆಯ ಕಲಾ ವಾತಾವರಣ ಹಾಗೂ ಪ್ರೋತ್ಸಾಹ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.
ತಂದೆಯ ಬಳಿ ಯಕ್ಷಗಾನದ ಪ್ರಾಥಮಿಕ ನಾಟ್ಯವನ್ನು ಕಲಿತು ನಂತರ ಶ್ರೀ ಪದ್ಮನಾಭ ಉಪಾಧ್ಯಾಯ ಹಾಗೂ ಶ್ರೀ ಗಣೇಶ ಕೊಲೆಕಾಡಿಯವರ ಬಳಿ ಹಿಮ್ಮೇಳವನ್ನು ಕಲಿತು ಯಕ್ಷಗಾನ ರಂಗದಲ್ಲಿ ಒಬ್ಬ ಭರವಸೆಯ ಯುವ ಕಲಾವಿದನಾಗಿ ಹೊರಹೊಮ್ಮಿದರು. ಯಕ್ಷರಂಗದಲ್ಲಿ ಒಟ್ಟು 18 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ.




ಶ್ರೀ ಶಂಕರನಾರಾಯಣ ಪದ್ಯಾಣ, ದಿ। ಗಣೇಶ ಅಡೂರು, ಶ್ರೀ ಸುಬ್ರಹ್ಮಣ್ಯ ಭಟ್ ದೇಲಂತಮಜಲು, ಶ್ರೀ ಮುರಾರಿ ಕಡಂಬಳಿತ್ತಾಯ, ಶ್ರೀ ಮುರಳೀಧರ ಭಟ್ ಕಟೀಲು, ಶ್ರೀ ಪದ್ಮನಾಭ ಉಪಾಧ್ಯಾಯ, ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ, ದಿ। ವಿನಯ ಅಚಾರ್ಯ ಕಡಬ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು.
ದಿ।ಬಲಿಪ ನಾರಾಯಣ ಭಾಗವತರು, ದಿ।ಪದ್ಯಾಣ ಗಣಪತಿ ಭಟ್ಟರು, ಶ್ರೀ ಪಟ್ಲ ಸತೀಶ ಶೆಟ್ಟಿ ನೆಚ್ಚಿನ ಭಾಗವತರು. ಅದರಲ್ಲೂ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರ ಪದ್ಯಗಳನ್ನು ನೆಚ್ಚಿಕೊಳ್ಳುತ್ತೇನೆ ಹಾಗೂ ಆಸ್ವಾದಿಸುತ್ತೇನೆ ಎಂದು ಹೇಳುತ್ತಾರೆ ಸವಿನಯ.


ಆಡುವ ಎಲ್ಲಾ ಪ್ರಸಂಗಗಳೂ ಇಷ್ಟ, ಅದರಲ್ಲೂ ಕಾಳಗ ಪ್ರಸಂಗಗಳ ಮೇಲೆ ಒಲವು ಜಾಸ್ತಿ.

ಯಕ್ಷಗಾನದಲ್ಲಿ ವೇಷ ಮಾಡುವ ಅಥವಾ ಭಾಗವತಿಕೆ ಮಾಡುವ ಆಸಕ್ತಿ ಇದೆಯಾ:-
1ನೇ ತರಗತಿಯಿಂದಲೇ ವೇಷಧಾರಿಯಾಗಿ ಯಕ್ಷರಂಗಕ್ಕೆ ಪಾದಾರ್ಪಣೆ.
ದೇವೇಂದ್ರ ಬಲ, ಭೃಂಗಿ, ಬಬ್ರುವಾಹನ, ಪ್ರಹ್ಲಾದ, ಷಣ್ಮುಖ, ಪ್ರಸೇನ, ರುಕ್ಮಾಂಗ - ಶುಭಾಂಗ ಇತ್ಯಾದಿ ವೇಷವನ್ನು ನಿರ್ವಹಿಸಿರುತ್ತೇನೆ. ಹಿಮ್ಮೇಳ ಕರಗತವಾದ ಮೇಲೆ ವೇಷ ಮಾಡುವುದು ಕಡಿಮೆಯಾದರೂ ನಾಟ್ಯದ ಬಗೆಗಿನ ಒಲವು, ಹಿಡಿತ ಹಾಗೆಯೇ ಇದೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಸದ್ಯಕ್ಕೆ ಸುಸ್ಥಿತಿಯಲ್ಲಿ ಇದ್ದಂತೆ ಕಾಣುತ್ತಿದೆ. ಅತ್ತ ಪರಂಪರೆಯನ್ನೂ ಬಿಡದೆ ಹೊಸತನದ ಆವಿಷ್ಕಾರಗಳೊಂದಿಗೆ ಸಾಗುತ್ತಿದೆ.



ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಬಹುತೇಕ ಯಕ್ಷಗಾನ ಪ್ರೇಕ್ಷಕರು ಸಹೃದಯರು. ಪ್ರೇಕ್ಷಕರು, ಕಲಾವಿದನನ್ನು ಪ್ರೋತ್ಸಾಹಿಸುವುದರ ಜೊತೆಗೆ ಸಾಧ್ಯವಾದರೆ ಅವರ ತಪ್ಪುಗಳನ್ನೂ ಕಲಾವಿದನಲ್ಲಿಯೇ ಬಂದು ತಿಳಿಸಿದರೆ ಒಳಿತು.

ಯಕ್ಷರಂಗದಲ್ಲಿ ಮುಂದಿನ ಯೋಜನೆಗಳು:-
ನಿರ್ಧಿಷ್ಟ ಯೋಜನೆಗಳೇನು ಇಲ್ಲ. ಸದ್ಯಕ್ಕೆ ದುಬೈ ಯಕ್ಷಗಾನ ಅಭ್ಯಾಸ ಕೇಂದ್ರಕ್ಕೆ ಆನ್ ಲೈನ್ ಮೂಲಕ ಚೆಂಡೆ - ಮದ್ದಳೆ ತರಗತಿ ನಡೆಸುತ್ತಾ ಇದ್ದೇನೆ. ಅಂತೂ ಇರುವಷ್ಟು ದಿನ ಯಕ್ಷಗಾನ ಕಲಾ ಸೇವೆ ಮಾಡುವ ಬಯಕೆ.

ಸನ್ಮಾನ ಹಾಗೂ ಪ್ರಶಸ್ತಿ:-
2019ರಲ್ಲಿ ಛಂದಪದ್ಮ ಯಕ್ಷಟ್ರಸ್ಟ್ (ರಿ.) ಕೊಲೆಕಾಡಿ ಇದರ ವತಿಯಿಂದ ನಡೆದ  ''ಕೊಲೆಕಾಡಿ ಯಕ್ಷವೈಭವ''ದಲ್ಲಿ ಯುವಪ್ರತಿಭೆ ಪುರಸ್ಕಾರ.
2022ರಲ್ಲಿ ನಡೆದ ''ದುಬೈ ಯಕ್ಷೋತ್ಸವ'' ದಲ್ಲಿ
ಭಾಗಿ ಹಾಗೂ ಗಣ್ಯರ ಸಮ್ಮುಖದಲ್ಲಿ ಸನ್ಮಾನ.

ಜಾನಪದ ಮತ್ತು ಭಾವಗೀತೆ ಕೇಳುವುದು, ಚಿತ್ರ ಬಿಡಿಸುವಿಕೆ, ಕಥೆ - ಕಾದಂಬರಿಗಳನ್ನು ಓದುವುದು, ಯಕ್ಷಗಾನದ ಧ್ವನಿಮುದ್ರಣ ಸಂಗ್ರಹಿಸುವಿಕೆ ಇವರ ಹವ್ಯಾಸಗಳು.



ಕಟೀಲು, ಪಾವಂಜೆ, ಸುಂಕದಕಟ್ಟೆ, ಇರುವೈಲು, ಗೆಜ್ಜೆಗಿರಿ, ಸಸಿಹಿತ್ಲು, ಬಪ್ಪನಾಡು, ನಾಳ, ಬೆಂಕಿನಾಥೇಶ್ವರ ಹೀಗೆ ಉಳಿದ ಮೇಳಗಳಲ್ಲಿ ಬದಲಿ ಕಲಾವಿದನಾಗಿ; ಮಕ್ಕಳ ಮೇಳಗಳಾದ ಯಕ್ಷನಿಧಿ ಮಕ್ಕಳ ಮೇಳ (ರಿ.) ಮೂಡುಬಿದಿರೆ ಹಾಗೂ ಕಟೀಲು ದುರ್ಗಾ ಮಕ್ಕಳ ಮೇಳ (ರಿ.) ಕಟೀಲು ಸೇವೆಯನ್ನು ಮಾಡಿರುತ್ತಾರೆ ಸವಿನಯ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದರ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಯಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 500ಕ್ಕೂ ಮಿಕ್ಕಿ ಕಾರ್ಯಕ್ರಮಗಳಲ್ಲಿ ಭಾಗಿ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395