ಯಕ್ಷ ಸಾಧಕರು 253

"ಪುತ್ತೂರಿನ ಯಕ್ಷ ಮುತ್ತು"

ಬಡಗುತಿಟ್ಟು ಯಕ್ಷಗಾನ ರಂಗಭೂಮಿಯಲ್ಲಿ ಪ್ರಬುದ್ಧ ಕಲಾವಿದರಾಗಿ ಗುರುತಿಸಿಕೊಂಡವರು ರತ್ನಾಕರ ಆಚಾರ್ಯ ಪುತ್ತೂರು. ಎಳವೆಯಿಂದಲೇ ಯಕ್ಷಗಾನ ಕಲಾಸಕ್ತಿಯನ್ನು ಮೈಗೂಡಿಸಿಕೊಂಡು ನಿರಂತರ ಅಧ್ಯಯನ ಕಲಿಕೆಯಿಂದ ಯಕ್ಷಗಾನ ರಂಗದಲ್ಲಿ ಸಾಧಕರಾಗಿ ಗುರುತಿಸಿಕೊಂಡವರು ರತ್ನಾಕರ ಆಚಾರ್ಯ ಪುತ್ತೂರು.

ಉಡುಪಿ ಜಿಲ್ಲೆಯ ಕಲ್ಯಾಣಪುರದಲ್ಲಿ ಜನಾರ್ದನ ಆಚಾರ್ಯ ಹಾಗೂ ರುಕ್ಮಿಣಿ ದಂಪತಿಗಳ ಸುಪುತ್ರರಾಗಿ ಜನವರಿ 8 ರಂದು ಜನನ. 1978ರಲ್ಲಿ ತೋನ್ಸೆ ಕಾಂತಪ್ಪ ಮಾಸ್ತರರ ಶಿಷ್ಯನಾಗಿ ಯಕ್ಷಗಾನ ಕಲಾವಿದ್ಯೆಯನ್ನು ಬೋಧಿಸಿಕೊಂಡ ಇವರು ಮುಂದೆ ಕೀರ್ತಿಶೇಷ ತೋನ್ಸೆ ಜಯಂತ ಕುಮಾರರ ಗರಡಿಯಲ್ಲಿ ಪಳಗಿ ಯಕ್ಷಗಾನದ ಸರ್ವಾಂಗವನ್ನು ಅಭ್ಯಸಿಸಿದರು. ಚೆಂಡೆ ವಾದನದ ಮೇರು ಕಲಾ ಪ್ರತಿಭೆ ಕೆಮಣ್ಣು ಆನಂದರ ಶಿಷ್ಯರಾಗಿ ಚೆಂಡೆಗಾರಿಕೆಯನ್ನು ಕಲಿತ ಇವರು ಹಿರಿಯ ಮದ್ದಳೆವಾದಕರಾದ ತೀರ್ಥಹಳ್ಳಿ ಸೀತಾರಾಮ ಆಚಾರ್ಯರ ಶಿಷ್ಯರಾಗಿ ಮದ್ದಳೆಗಾರಿಕೆ ಅಭ್ಯಾಸ ಮಾಡಿದರು. ಹಿರಿಯ ಭಾಗವತರಾದ ಗೋರ್ಪಾಡಿ ವಿಠಲ ಪಾಟೀಲರಿಂದ ಭಾಗವತಿಕೆ, ಪ್ರಸಂಗ ನಡೆಯ ಬೋಧನೆಯೂ ಇವರಿಗೆ ದೊರೆತಿರುತ್ತದೆ.





ಯಕ್ಷಗಾನ ಹಿಮ್ಮೇಳದ ಅನುಭವಿ ಕಲಾವಿದರಾದ ಇವರು ಮುಮ್ಮೇಳದಲ್ಲಿ ಪ್ರಸಿದ್ಧಿ ಪಡೆದವರು. ಪುರುಷ ಹಾಗೂ ಸ್ತ್ರೀ ಪಾತ್ರದ ನಿರ್ವಹಣೆಯಲ್ಲೂ ಇವರಿಗೆ ಪ್ರಾವೀಣ್ಯತೆಯಿದೆ. ಸುಧನ್ವ, ಕಂಸ, ಶಶಿಪ್ರಭೆ, ಮೀನಾಕ್ಷಿಯಂತಹ ಪಾತ್ರಗಳು ಇವರಿಗೆ ವಿಶೇಷ ಕೀರ್ತಿ ನೀಡಿವೆ. ಯಕ್ಷಗಾನ ಸ್ಪರ್ಧೆಗಳಲ್ಲಿ ಇವರು ನಿರ್ವಹಿಸಿದ ಸುಧನ್ವ ಪಾತ್ರಕ್ಕೆ ಮೊದಲ ಪ್ರಶಸ್ತಿ ದೊರಕಿದೆ. ತೆಂಕುತಿಟ್ಟಿನಲ್ಲಿಯೂ ವೇಷ ಮಾಡಿದ ಅನುಭವ ಇವರಿಗಿದೆ.

ಚಿಕ್ಕಂದಿನಿಂದಲೂ ಯಕ್ಷಗಾನ ಕಲೆಯ ಬಗ್ಗೆ ವಿಶೇಷ ಆಸಕ್ತಿಯಿತ್ತು. ಹವ್ಯಾಸಿ ಕಲಾವಿದರಾದ ಮಂಜುನಾಥ ನಾಯಕ್ ಇವರ ಪ್ರೇರಣೆಯಿಂದ ಯಕ್ಷಗಾನ ಕಲಿಕೆಗೆ ಮುಂದಾದೆ. ತೋನ್ಸೆ ಕಾಂತಪ್ಪ ಮಾಸ್ತರರ ಶಿಷ್ಯನಾಗಿ ಜಯಂತ ಕುಮಾರರಲ್ಲಿ ಅನುಭವ ಪಡೆದೆ. ಕೆಮ್ಮಣ್ಣು ಆನಂದ, ಸೀತಾರಾಮ ಆಚಾರ್ಯ, ಗೊರ್ಪಡಿ ವಿಠಲ್ ಪಟೇಲ್ ರ ಬಳಿ ವಿವಿಧ ಯಕ್ಷಗಾನದ ಅಂಗೋಪಾಂಗಗಳ ಬಗ್ಗೆ ಬೋಧನೆ ಪಡೆದೆ.
ಕೆಮ್ಮಣ್ಣು ಆನಂದರವರಲ್ಲಿ ಶಿಷ್ಯತ್ವ ಮರೆಯಲಾಗದ್ದು. ಬಗ್ವಾಡಿ ಮೇಳದಲ್ಲಿ ಹಿರಿಯ ಮದ್ದಳೆಗಾರ ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯರ ಸಹ ಮದ್ದಳೆಗಾರರಾಗಿ ದುಡಿದಿರುವುದು, ಹಿರಿಯ ಭಾಗವತ ಪೋಳ್ಯ ಲಕ್ಷ್ಮಿನಾರಾಯಣ ಶೆಟ್ಟರ ಪದ್ಯಕ್ಕೆ ಮದ್ದಳೆ ನುಡಿಸಿರುವುದು ಮರೆಯಲಾಗದ ಅನುಭವ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಎರಡು ಮೂರು ದಶಕಗಳ ಹಿಂದೆ ಯಕ್ಷಗಾನದಲ್ಲಿ ಕಲಾವಿದರಲ್ಲಿ ಅತ್ಯಂತ ಅಧ್ಯಯನಶೀಲತೆಯಿತ್ತು. ಈಗ ಇದು ಮಾಯವಾಗುತ್ತಿದೆ. ಹಿರಿಯ ಕಲಾವಿದರ ಅನುಭವ - ಮಾರ್ಗದರ್ಶನವನ್ನು ಕಿರಿಯ ಕಲಾವಿದರು ಪಡೆಯಲೇಬೇಕು. ಸಂಜೆ 6 ಗಂಟೆಗೆ ಪ್ರದರ್ಶನವಾದರೆ ವೇಷಧಾರಿಗಳು ಸಾಕಷ್ಟು ಮುಂಚಿತವಾಗಿ ಚೌಕಿಗೆ ಬಂದು ಸಹ ಕಲಾವಿದರ ಜೊತೆಗೆ ಚರ್ಚಿಸಿ, ಭಾಗವತರೊಂದಿಗೆ ಸಮಾಲೋಚಿಸಿ, ಹಿರಿಯರ ಮಾರ್ಗದರ್ಶನ ಪಡೆಯಬೇಕು. ಇದರಿಂದ ಯಾವ ಗೊಂದಲ ಇರುವುದಿಲ್ಲ. ಇಂದಿನ ಯುವ ಕಲಾವಿದರು ಮೊಬೈಲ್ ಗೀಳಿನಿಂದ ಹೊರಬಂದು ಹೆಚ್ಚು ಹೆಚ್ಚು ತಾಳಮದ್ದಳೆ ನೋಡಿ ಜ್ಞಾನ ಸಂಪಾದಿಸಬೇಕು. ಪುರಾಣ ಪುಸ್ತಕಗಳನ್ನು ಓದಿ ಅರ್ಥ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು.



1992ರಿಂದ ಯಕ್ಷಗಾನ ಗುರುವಾಗಿ ಕಲಾ ಮಾಧ್ಯಮಕ್ಕೆ ತೊಡಗಿದ ಇವರು ಹಲವಾರು ಸಂಘ ಸಂಸ್ಥೆಗಳ ಗುರುಗಳಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಪ್ರಸ್ತುತ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿ ಉದ್ಯಾವರ, ಮಹಾಗಣಪತಿ ಯಕ್ಷಗಾನ ಮಂಡಳಿ ತೊಟ್ಟಲ, ಧೂಮಾವತಿ ಯಕ್ಷಗಾನ ಸಂಘ ಕಿದಿಯೂರು, ಮಹಾಗಣಪತಿ ಯಕ್ಷ ಮಂಡಳಿ ಸೇರಿದಂತೆ ಹಲವಾರು ಕಲಾ ಸಂಘ ಸಂಸ್ಥೆಗಳಲ್ಲಿ ಇವರ  ಸಾರ್ಥಕ ಗುರುತನವಿದೆ. ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್  ಗುರುವಾಗಿಯೂ ಇವರ ಸೇವೆ ನಡೆದಿದೆ. ಹವ್ಯಾಸಿ ಯಕ್ಷಗಾನ ರಂಗದ ಸಮರ್ಥ ಚೆಂಡೆ, ಮದ್ದಳೆ, ಭಾಗವತಿಕೆಯ ಸಾಧಕರಾದ ಇವರು ವೃತ್ತಿ ಮೇಳಗಳಾದ ಹಾಲಾಡಿ, ಬಗ್ವಾಡಿ, ಸೀತೂರು, ಮೇಗರವಳ್ಳಿ, ಗೋಳಿಗರಡಿ, ಹಿರಿಯಡ್ಕ, ಹಟ್ಟಿಯಂಗಡಿ, ನೀಲಾವರ, ಅಮೃತೇಶ್ವರಿ ಮೇಳಗಳಲ್ಲಿ ಕಲಾ ಸೇವೆ ಮಾಡಿರುತ್ತಾರೆ.

ಯಕ್ಷಗಾನ ಮೇರು ಕಲೆ. ನಮ್ಮ ಹಿರಿಯರು ಸಮರ್ಪಣಾ ಭಾವದಿಂದ ದುಡಿದು ಆರಾಧಿಸುವ ರಂಗ ಕಲೆ. ಇಲ್ಲಿ ಶ್ರದ್ಧೆ, ಭಕ್ತಿಯಿಂದ ದುಡಿಮೆ ಮಾಡಬೇಕು. ಯಕ್ಷಗಾನ ಕಲಿಯುವವರು ಕಲಿಸುವ ಗುರುಗಳ ಬಗ್ಗೆ ಭಕ್ತಿ ಹೊಂದಿರಬೇಕು. ಕಲಾವಿದರು ಪ್ರಸಂಗ ಪಾತ್ರಗಳ ನಿರಂತರ ಅಧ್ಯಯನದಿಂದ ರಂಗ ಪ್ರವೇಶಿಸಬೇಕು.
ಹಿರಿಯ ಕಲಾವಿದರು, ಯಕ್ಷ ಲೋಕದ ಮೇರು ತಾರೆಗಳಾದ ಕೋಟ ವೈಕುಂಠ, ನಗರ ಜಗನ್ನಾಥ ಶೆಟ್ಟಿ, ಕುಂಜಾಲು ರಾಮಕೃಷ್ಣ, ರಾಮ ನಾಯರಿ ಮೊದಲಾದವರ ಜೊತೆಯಲ್ಲಿ ವೇಷ ಮಾಡಿರುವುದು ಅವಿಸ್ಮರಣೀಯ ಸಂತೋಷ ಕ್ಷಣಗಳಾಗಿದೆ ಎಂದು ಹೇಳುತ್ತಾರೆ ರತ್ನಾಕರ ಆಚಾರ್ಯ ಪುತ್ತೂರು. ಸುಸಮರ್ಥ ಯಕ್ಷಗಾನ ಗುರುವಾಗಿ ಹಲವಾರು ಶಿಷ್ಯರನ್ನು ರೂಪಿಸಿದ ಹಿರಿಮೆ ಇವರದು. ತನ್ನ ನಿರ್ದೇಶನದ ಕಲಾ ಸಂಸ್ಥೆಗಳಲ್ಲಿ ಹಿಮ್ಮೇಳದ ಕಲಾವಿದರಾಗಿ ಭಾಗವಹಿಸುತ್ತ ತುಂಬಾ ಒಳ್ಳೆಯ ಕಾರ್ಯಕ್ರಮ ನೀಡುವುದರ ಮೂಲಕ ಗುರುತನವನ್ನು ಕಲಾ ಸೇವೆಗೆ ಶರಣಾಗಿ ಹಲವಾರು ಸಂಘ ಸಂಸ್ಥೆಗಳು ಗುರುವಂದನೆ, ಸನ್ಮಾನದ ಮೂಲಕ ಗೌರವಿಸಿವೆ.

ಸಹಧರ್ಮಿಣಿ ಶ್ರೀಮತಿ ಜಯಶ್ರೀಯವರ ಬಾಳ ಸಾಂಗತ್ಯದಲ್ಲಿ ಉಭಯ ಪುತ್ರ ರತ್ನರನ್ನು ಪಡೆದಿದ್ದಾರೆ. ಹಿರಿಯ ಸುಪುತ್ರ ಅರ್ಜುನ್ ಉದ್ಯೋಗಿ, ಕಿರಿಯ ಸುಪುತ್ರ ಆದರ್ಶ ತೃತೀಯ ವರ್ಷ B.COM ಓದುತ್ತಿದ್ದಾರೆ. ಕಿರಿಯ ಮಗ ಚೆಂಡೆ ವಾದಕನಾಗಿಯೂ, ವೇಷಧಾರಿಯಾಗಿಯೂ ಗುರುತಿಸಿಕೊಂಡಿರುತ್ತಾರೆ. ಯಕ್ಷಗಾನ ಕಲೆಯಲ್ಲಿ ಕ್ರಿಯಾಶೀಲ, ಸಮರ್ಪಣಾಭಾವದ ಸಹೃದಯಿ, ಸ್ನೇಹಮಯಿ, ಕಲಾ ಸಾಧಕರಾಗಿ ಗುರುತಿಸಿಕೊಂಡ ರತ್ನಾಕರ ಆಚಾರ್ಯ ಪುತ್ತೂರು ಇವರನ್ನು ಕಲಾಮಾತೆ ನಿರಂತರ ಅನುಗ್ರಹಿಸಲಿ.





ತಂದೆ, ತಾಯಿ, ಹೆಂಡತಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ರತ್ನಾಕರ ಆಚಾರ್ಯ ಪುತ್ತೂರು.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395