ಯಕ್ಷ ಸಾಧಕರು 254

"ಮಧುರ ಶಾರೀರದ ಭಾಗವತ"

ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು ಭಾಗವತರು ಎಂದು ಕರೆಯುತ್ತಾರೆ. ಸಮಸ್ತ ಪ್ರಸಂಗ ಇವರ ನೇತೃತ್ವದಲ್ಲೇ ನಡೆಯುವುದು. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಂತಹ ಯಕ್ಷಗಾನ ರಂಗದಲ್ಲಿ ಕಿರಿಯ ವಯಸ್ಸಿನಲ್ಲಿ ತಮ್ಮ ಸುಮಧುರ ಕಂಠದಿಂದ ರಂಗದಲ್ಲಿ ಮಿಂಚುತ್ತಿರುವವರು ರಾಮ್ ಪ್ರಸಾದ್ ಮಯ್ಯ ಕೂಡ್ಲು.

09.10.1989ರಂದು ದಿ|ಕೃಷ್ಣ ಮಯ್ಯ ಮತ್ತು ಗಂಗಮ್ಮ ಇವರ ಮಗನಾಗಿ ಜನನ. MA economics ಇವರ ವಿದ್ಯಾಭ್ಯಾಸ. ಕೂಡ್ಲು ಪರಿಸರದ ಯಕ್ಷಗಾನದ ಕಂಪು; ಹೊಳ್ಳ, ಪದ್ಯಾಣ, ಬಲಿಪ ಭಾಗವತರ ಹಾಡುಗಳ ಆಕರ್ಷಣೆ ಮಯ್ಯರು ಯಕ್ಷಗಾನಕ್ಕೆ ಬರಲು ಪ್ರೇರಣೆ. ಮಾಂಬಾಡಿ ಸುಬ್ರಮಣ್ಯ ಭಟ್ ಇವರ ಯಕ್ಷಗಾನ ಗುರುಗಳು ಹಾಗೂ ಶಾಸ್ತ್ರೀಯ ಸಂಗೀತವನ್ನು ಗುರುಗಳಾದ ಕಲ್ಮಾಡಿ ಸದಾಶಿವ ಆಚಾರ್ಯರಿಂದ ಅಭ್ಯಾಸ ಮಾಡುತ್ತಿದ್ದಾರೆ. ಬಾಲಕೃಷ್ಣ ಆಚೆಗೋಳಿ (ಮದ್ಲೆಗಾರ್, ಮಾಂಬಾಡಿ ಶಿಷ್ಯವೃಂದ ಯಕ್ಷಗಾನ ಹಿಮ್ಮೇಳ ತರಬೇತಿ ಕೇಂದ್ರದ ಸಂಚಾಲಕರು)ಯವರ ಪೂರ್ಣ ಸಹಕಾರ ಇಂದು ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ರಾಮ್ ಪ್ರಸಾದ್ ಮಯ್ಯ ಕೂಡ್ಲು. ಕೂಡ್ಲು ಮೇಳದಲ್ಲಿ ತಿರುಗಾಟ ಮಾಡಿದ ಅನುಭವ, ಸದ್ಯ ಹವ್ಯಾಸಿ ಭಾಗವತರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.




ಕರ್ಣಾರ್ಜುನ, ಶ್ರೀರಾಮ ನಿರ್ಯಾಣ, ಸುಧನ್ವಾರ್ಜುನ ಹಾಗೂ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಶುದ್ಧ ಸಾವೇರಿ, ಸಾವೇರಿ, ಶಿವರಂಜಿನಿ, ತೋಡಿ, ರೀತಿಗೌಳ ನೆಚ್ಚಿನ ರಾಗಗಳು.
ಹೊಳ್ಳ, ಪದ್ಯಾಣ, ಬಲಿಪ ಭಾಗವತರು ನೆಚ್ಚಿನ ಭಾಗವತರು.
ಅಡೂರು ಗಣೇಶ್ ರಾವ್, ದೇಲಂತಮಜಲು, ಹೊಸ ತಲೆಮಾರಲ್ಲಿ ಅಕ್ಷಯ್ ರಾವ್ ವಿಟ್ಲ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನಕ್ಕೆ ಉತ್ತಮ ವೇದಿಕೆಯಿದೆ ಹಾಗೂ ಸಾಕಷ್ಟು ಜನರು ಆಕರ್ಷಿತರಾಗುತ್ತಿರುವುದು ಉತ್ತಮ ಭವಿಷ್ಯದ ಮುನ್ಸೂಚನೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ರಸಾಸ್ವಾದ ಮಾಡುವಂತಹ ಪ್ರೇಕ್ಷಕರಿದ್ದಾರೆ. ಜೊತೆಗೆ ಯಕ್ಷಗಾನೀಯವಲ್ಲದ್ದನ್ನೂ ಯಕ್ಷಗಾನದಲ್ಲಿ ಬಯಸುವವರೂ ಇದ್ದಾರೆ. ಯಕ್ಷಗಾನವನ್ನು ಯಕ್ಷಗಾನೀಯವಾಗಿ ಆಸ್ವಾದಿಸಿದರೆ ಉತ್ತಮ.

ರಂಗದಲ್ಲಿ ಇರುವ ಸಾಕಷ್ಟು ಪ್ರಸಂಗಗಳ ಬಗ್ಗೆ ಅಧ್ಯಯನ ಮಾಡಬೇಕು ಹಾಗೂ ಚೆಂಡೆ ಮದ್ದಳೆ ಅಭ್ಯಾಸ ಮಾಡಬೇಕು ಎಂಬ ಆಸೆ ಇದೆ ಎಂದು ಹೇಳುತ್ತಾರೆ ರಾಮ್ ಪ್ರಸಾದ್ ಮಯ್ಯ ಕೂಡ್ಲು. ಚಿತ್ರರಚನೆ, ಶಾಸ್ತ್ರೀಯ ಸಂಗೀತ ಕೇಳುವುದು ಇವರ ಹವ್ಯಾಸಗಳು.



15.06.2020ರಂದು ರಾಮ್ ಪ್ರಸಾದ್ ಮಯ್ಯ ಕೂಡ್ಲು ಅವರು ಶ್ರೀ ಲಕ್ಷ್ಮೀ ಅವರನ್ನು ಮದುವೆಯಾಗಿ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.

ತಂದೆ, ತಾಯಿ, ಹೆಂಡತಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ರಾಮ್ ಪ್ರಸಾದ್ ಮಯ್ಯ ಕೂಡ್ಲು.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395