ಯಕ್ಷ ಸಾಧಕರು 255
"ತೆಂಕಿನ ಪ್ರತಿಭಾಸಿರಿ"
ಗಂಡು ಕಲೆ ಎಂದು ಕರೆಸಿಕೊಳ್ಳುವ ಯಕ್ಷಗಾನದಲ್ಲಿ ಇತ್ತೀಚಿನ ದಿನಗಳಲ್ಲಿ ನಮಗೆ ಅನೇಕ ಮಹಿಳಾ ಕಲಾವಿದೆಯರು ಕಾಣಲು ಸಿಗುತ್ತಾರೆ. ಇಂತಹ ಮಹಿಳಾ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಯುವ ಮಹಿಳಾ ಕಲಾವಿದೆ ಮಹಿಮಾ ಎಸ್ ರಾವ್.
ಸತ್ಯಸಾಯಿ ರಾವ್ ಹಾಗೂ ಶ್ರೀದೇವಿ ಎಸ್.ರಾವ್ ಇವರ ಮಗಳಾಗಿ 05.05.1998ರಂದು ಜನನ. ಮಂಗಳೂರಿನ ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಮಂಗಳೂರಿನ ಸುರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ ಮಾಸ್ಟರ್ಸ್ ಇನ್ ಸಿವಿಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿ ಪ್ರಸ್ತುತ 2022ರಿಂದ ಚೆನ್ನೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ ಪಿ.ಎಚ್.ಡಿ ಇನ್ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ತಂದೆ, ತಾಯಿ ಹಾಗು ಚಿಕ್ಕಂದಿನಿಂದ ನೋಡಿ ಬಂದ ಯಕ್ಷಗಾನ ಪ್ರಸಂಗಗಳು ಇವರು ಯಕ್ಷಗಾನ ಕಲಿಯಲು ಪ್ರೇರಣೆ. ಯಕ್ಷ ಗುರು ರಾಕೇಶ್ ರೈ ಅಡ್ಕ ಇವರ ಯಕ್ಷಗಾನ ಗುರುಗಳು ಹಾಗೂ ಮಂಜೇಶ್ವರದ ನಾಟ್ಯನಿಲಯಂನ ಶ್ರೀ ಬಾಲಕೃಷ್ಣ ಮಂಜೇಶ್ವರ ಭರತನಾಟ್ಯ ಗುರುಗಳು.
ಗುರುಗಳ ಮಾರ್ಗದರ್ಶನದಂತೆ, ಮುಂದುವರಿದು ನುರಿತ ಕಲಾವಿದರ ವೀಡಿಯೋಗಳ ವೀಕ್ಷಣೆ ಮಾಡಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಮಹಿಮಾ.
ಮಾನಿಷಾದ, ದೇವಿ ಮಹಾತ್ಮೆ, ಗದಾಯುದ್ಧ, ಶ್ರೀನಿವಾಸ ಕಲ್ಯಾಣ, ಬ್ರಹ್ಮಕಪಾಲ ಇತ್ಯಾದಿ ನೆಚ್ಚಿನ ಪ್ರಸಂಗಗಳು.
ಮಾನಿಷಾದದ ಸೀತೆ, ಗಜೇಂದ್ರ ಮೋಕ್ಷದ ಹೂ ಹೂ ಗಂಧರ್ವ, ಮಹಿಷವಧೆಯಲ್ಲಿ ಮಾಲಿನಿ, ನರಕಾಸುರ ವಧೆಯ ಕೃಷ್ಣ ಹಾಗೂ ಸತ್ಯಭಾಮೆ ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದಿನ ದಿನಗಳಲ್ಲಿ ಈ ಕಲೆಗೆ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಸಂತೋಷದ ಸಂಗತಿ. ಆಬಾಲವೃದ್ಧರನ್ನೆಲ್ಲಾ ಆಕರ್ಷಿಸುವ ಗುಣ ಹೊಂದಿದ್ದು, ಪ್ರಪಂಚದಾದ್ಯಂತ ವಿಸ್ತರಿಸಿದೆ. ಕಾಲಕ್ಕೆ ತಕ್ಕಂತೆ ಕಲಾಬದಲಾವಣೆ ಹೊಂದಿ ಉಪ ಪ್ರಕಾರಗಳನ್ನು ಕಾಣಬಹುದು. ಮಹಿಳಾ ಯಕ್ಷಗಾನ ವಿಸ್ತೃತ ರೂಪದಲ್ಲಿ ಸ್ವೀಕರಿಸಲ್ಪಟ್ಟಿದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಸಮಯ ಹಾಗೂ ಅವಕಾಶ ಎರಡೂ ಪೂರಕವಾಗಿ ಬಂದಾಗ ಸಾಧ್ಯವಾದಷ್ಟು ಪ್ರಸಂಗಗಳಲ್ಲಿ ಪಾತ್ರಗಳನ್ನು ನಿರ್ವಹಿಸುವ ಬಯಕೆ ಇದೆ ಎಂದು ಹೇಳುತ್ತಾರೆ ಮಹಿಮಾ ಎಸ್ ರಾವ್.
ಮಹಿಮಾ ಎಸ್ ರಾವ್ ಅವರ ಸಾಧನೆಗಳು:-
♦2023 ಜನವರಿಯಲ್ಲಿ ಪ್ರೈಮ್ ಮಿನಿಸ್ಟರ್ ರಿಸರ್ಚ್ ಫೆಲೋಶಿಪ್ (PMRF)ಗೆ ಆಯ್ಕೆ.
♦ 2019 ನೇ ಸಾಲಿನ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ಘಟಿಕೋತ್ಸವದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ರಾಂಕ್ ನೊಂದಿಗೆ 13 ಚಿನ್ನದ ಪದಕಗಳನ್ನು ಪಡೆದಿರುತ್ತಾರೆ.
♦ ಭರತನಾಟ್ಯದಲ್ಲಿ ವಿದ್ವತ್ ಪದವಿ. (ಸದ್ಯ ಮಕ್ಕಳಿಗೆ ಭರತನಾಟ್ಯದ ತರಗತಿಯನ್ನು ಮಾಡುತ್ತಿದ್ದಾರೆ).
ಭರತನಾಟ್ಯ ಹಾಗೂ ಇತರ ಶಾಸ್ತ್ರೀಯ ನೃತ್ಯಗಳ ಅಭ್ಯಾಸ, ಬಟ್ಟೆ ಹೊಲಿಗೆ, ಯೋಗಾಭ್ಯಾಸ, ಭಜನೆ ಹಾಡುವುದು , ಸಮಯವಿದ್ದಾಗ ಬ್ಯಾಡ್ಮಿಂಟನ್ ಆಡುವುದು ಹವ್ಯಾಸಗಳು.
ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಮಹಿಮಾ ಎಸ್ ರಾವ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment