ಯಕ್ಷ ಸಾಧಕರು 263
"ಯಕ್ಷಗಾಯನಲೋಕ ವಿಹಾರಿ"
ಯಕ್ಷಗಾನ ಒಂದು ವಿಶ್ವವಿಖ್ಯಾತ ಕಲೆ. ಗಾನ - ನೃತ್ಯ - ಮಾತುಗಾರಿಕೆ - ವೇಷ ಭೂಷಣಗಳ ಮೇಳೈಕೆ ಈ ಯಕ್ಷಗಾನ. ಇದರಲ್ಲಿ ಪದ್ಯ ಹೇಳುವ ಭಾಗವತರದ್ದು ನಿರ್ದೇಶಕರ ಕೆಲಸ. ನಿರ್ದೇಶನ - ಸಮಯಪ್ರಜ್ಞೆ - ಸೃಜನಶೀಲತೆ ಮುಂತಾದ ಗುಣಗಳು ಇದ್ದಲ್ಲಿ ಮಾತ್ರ ಒಬ್ಬ ಯಶಸ್ವೀ ಭಾಗವತರಾಗುವುದಕ್ಕೆ ಸಾಧ್ಯ. ನಮ್ಮ ನಡುವೆ ಇಂತಹ ನೂರಾರು ಭಾಗವತರಿದ್ದಾರೆ. ಅವರಲ್ಲಿ ಕೆಲವರು ಪ್ರಸಿದ್ಧಿಯನ್ನು ಪಡೆದರೆ, ಇನ್ನೂ ಕೆಲವರು ಎಲೆ ಮರೆಯ ಕಾಯಿಯಂತೆ ಯಕ್ಷಕಲಾ ಸೇವೆಯಲ್ಲಿ ತೊಡಗಿದ್ದಾರೆ. ಅಂತವರಲ್ಲಿ ಒಬ್ಬರು ಶ್ರೀ ರಮಾನಂದ ಓ ಕೆ.
ಹೊಸನಗರ ತಾಲೂಕು ಅರಮನೆ ಕೊಪ್ಪ ಗ್ರಾಮದ ಓತ್ನಾಡಿ ಮತ್ತಿಮನೆಯ ಕೃಷ್ಣಯ್ಯ ಹಾಗೂ ಗಂಗಮ್ಮ ಇವರ ಮಗನಾಗಿ 10.03.1968ರಂದು ಜನನ. ಯಕ್ಷಗಾನ ರಂಗ ಶ್ರೇಷ್ಠ ಭಾಗವತರಾದ ಶ್ರೀಯುತ ಜಿ.ಆರ್ ಕಾಳಿಂಗ ನಾವಡರ ಕಂಠಕ್ಕೆ ಮಾರುಹೋಗಿ ಯಕ್ಷಗಾನ ರಂಗಕ್ಕೆ ಬಂದ ಇವರು ಯಕ್ಷಗಾನದ ಗುರುಗಳಾದ ಸುಧಾಕರ ರಾವ್ ಹೆಗ್ಗೋಡು ಅವರ ಬಳಿ ತಾಳಾಭ್ಯಾಸ ಮಾಡಿ ಕಮಲಶಿಲೆ, ಗೋಳಿಗರಡಿ, ಸೀತುರು, ಸಿಗಂದೂರು, ಗುಂಡಬಾಳ ಮೇಳದಲ್ಲಿ ತಿರುಗಾಟ ಮಾಡಿ 35 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಕಾಳಿಂಗ ನಾವಡರ ನಾಗಶ್ರೀ, ವಿಜಯಶ್ರೀ, ಪೌರಾಣಿಕದಲ್ಲಿ ಭೀಷ್ಮ ವಿಜಯ ಇವರ ನೆಚ್ಚಿನ ಪ್ರಸಂಗಗಳು.
ಭೀಮ್ ಫಲಾಸ್, ತೋಡಿ ಇವರ ನೆಚ್ಚಿನ ರಾಗಗಳು.
ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ ಹಾಗೂ ಚಂಡೆಯಲ್ಲಿ ರಾಮಕೃಷ್ಣ ಮಂದಾರ್ತಿ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
50 ವರ್ಷ ಹಿಂದಿನ ಉತ್ತಮ ಸ್ಥಿತಿ ಈಗಿಲ್ಲ, ಸಾಧಾರಣ ಇದೆ. ಪ್ರೇಕ್ಷಕರೆಲ್ಲರು ಪ್ರಜ್ಞಾವಂತರು, ಆದರೆ ಈ ಹಿಂದೆ ನಡೆಯುತ್ತಿದ್ದ ಯಕ್ಷಗಾನದ ಸವಿ ಖುಷಿ ಈವಾಗ ಸಿಗುತ್ತಿಲ್ಲ.
ಯಕ್ಷಗಾನವನ್ನು ತುಂಬಾ ಮೇಲ್ಮಟ್ಟಕ್ಕೆ ತರಬೇಕೆಂಬ ಯೋಚನೆ ಹಾಗೆ ಯೋಜನೆ ಇದೆ ಎಂದು ಹೇಳುತ್ತಾರೆ ರಮಾನಂದ.
ನಾವಡರ ಪದ್ಯಗಳನ್ನು ಕೇಳುವುದು ಹಾಗೂ ಯಕ್ಷಗಾನ ಆಟ ನೋಡುವುದು ಮತ್ತು ಹವ್ಯಾಸಿ ಭಾಗವತರಾಗಿ ಕರೆದರೆ ಹೋಗುವುದು ಇವರ ಹವ್ಯಾಸಗಳು.
ರಾಮಾರ್ಪಣ ವೇದಿಕೆ ಮಾರುತಿಪೂರ, ವೀರಾಂಜನೇಯ ಯಕ್ಷಗಾನ ಮಂಡಳಿ ಮಾರುತಿಪುರ ನಾರಾಯಣ ಆಚಾರಿ ದೊಗ್ರೆ, ಕಿಮ್ಮನೆ ಬಳಗ ಸಂಪೇಕಟ್ಟೆ ಹೀಗೆ ಹಲವು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ನೋಡಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ರಮಾನಂದ ಓ ಕೆ ಅವರು 07.05.1990ರಂದು ಸವಿತ ಓ.ಆರ್ ಅವರನ್ನು ಮದುವೆಯಾಗಿ ಮಕ್ಕಳಾದ ಶ್ರೀಕಾಂತ್ ಓ ಕೆ ಹಾಗೂ ಸುಮಂತ್ ಓ ಕೆ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ, ಹೆಂಡತಿಯ ಪ್ರೋತ್ಸಾಹ ಹಾಗೂ ಪ್ರೇರಣೆ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ರಮಾನಂದ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705
ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈
Comments
Post a Comment