ಯಕ್ಷ ಸಾಧಕರು 269
"ಯಕ್ಷ ಸಾತ್ವಿಕ"
ವಜ್ರದಂತೆ ಪ್ರತಿಭೆಯೊಂದು ಯಕ್ಷಲೋಕದಲ್ಲಿ ತನ್ನ ಛಾಪು ಮೂಡಿಸುತ್ತಾ ಹಲವಾರು ವೇದಿಕೆ ಏರಿ ಕಲಾ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತಿರುವ ಅಪ್ರತಿಮ ಪ್ರತಿಭಾನ್ವಿತ ಸಾತ್ವಿಕ್ ನೆಲ್ಲಿತೀರ್ಥ.
ರಂಗಭೂಮಿ ಕಲಾವಿದ ದಿ.ಭಾಸ್ಕರ ನೆಲ್ಲಿತೀರ್ಥ ಹಾಗೂ ವಿಶಾಲ ಇವರ ಮಗನಾಗಿ 26.12.1999ರಂದು ಜನನ. Bachelor of visual arts ಇವರ ವಿದ್ಯಾಭ್ಯಾಸ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಇವರ ತಂದೆಯೇ ಪ್ರೇರಣೆ ಹಾಗೂ ತಂದೆಯೇ ಯಕ್ಷಗಾನ ಗುರುಗಳು.
ದೇವಿ ಮಹಾತ್ಮೆ, ದುಶ್ಯಾಸನ ವಧೆ, ರಕ್ತರಾತ್ರಿ, ಅಗ್ರ ಪೂಜೆ, ಕಲ್ಯಾಣ ಪ್ರಸಂಗಗಳು, ಸುದರ್ಶನ ವಿಜಯ, ತರಣಿಸೇನ ಕಾಳಗ, ಪಾಂಚಜನ್ಯ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ಬಣ್ಣದ ವೇಷ ಹಾಗೂ ಎದುರು ವೇಷಗಳು ಇವರ ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು ರಂಗ ಮಾಹಿತಿ ಇರುವ ಹಿರಿಯ ಕಲಾವಿದರಲ್ಲಿ ಕೇಳಿ ಹಾಗೂ ಪೂರಕ ಮಾಹಿತಿ ಇರುವ ಪುಸ್ತಕಗಳನ್ನು ಓದಿ ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಸಾತ್ವಿಕ್ ನೆಲ್ಲಿತೀರ್ಥ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದಿನ ಸ್ಥಿತಿ ಗತಿ ಬಗ್ಗೆ ಹೇಳುವುದಾದರೆ ಪರಂಪರೆ ಹೊಸತನ ಎರಡೂ ಸಮ್ಮಿಶ್ರವಾದಂತೆ ಕಂಡರೂ, ಹೊಸತನ ಹುಡುಕಾಟದಲ್ಲಿ ಪರಂಪರೆ ಮರೆಯಾಗುತ್ತಿದೆ ಅಥವಾ ಕಡೆಗಣಿಸಲ್ಪಡುತ್ತಿದೆ ಎಂಬುದು ನನ್ನ ಅಭಿಪ್ರಾಯ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಈಗಿನ ಕಾಲಕ್ಕೆ ಪ್ರೇಕ್ಷಕರ ವರ್ಗ ಎರಡು ರೀತಿಯಲ್ಲಿ ಬೇರ್ಪಟ್ಟು ಆನ್ಲೈನ್ ಹಾಗೂ ಆಫ್ಲೈನ್ ಪ್ರೇಕ್ಷಕರೆಂಬಂತಾಗಿದೆ. ಅದರಲ್ಲೂ ಆನ್ಲೈನ್ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿರುವುದು ಖುಷಿಯ ವಿಚಾರ ಹೌದಾದರೂ, ಆಟವನ್ನು ರಂಗಸ್ಥಳದ ಎದುರು ಕುಳಿತು ನೋಡುವ ಪ್ರೇಕ್ಷಕರ ಸಂಖ್ಯೆ ತುಸು ಕಮ್ಮಿ ಆದುದರಿಂದ ಕಲಾವಿದರ ಪ್ರದರ್ಶನಕ್ಕೆ ಅಥವಾ ಬೆಳವಣಿಗೆಯ ಮೇಲೆ ಪರಿಣಾಮ ಬೀರಲೂಬಹುದು ಎಂದು ಭಾಸವಾಗುತ್ತಿದೆ.
ಯಕ್ಷಗಾನದ ಮೂಲ ಸ್ವರೂಪಕ್ಕೆ ಯಾವುದೇ ಚ್ಯುತಿ ಬಾರದಂತೆ ವಿಭಿನ್ನ ರೀತಿಯಲ್ಲಿ ಪ್ರಯೋಗಾತ್ಮಕವಾಗಿ ಪ್ರಸ್ತುತಪಡಿಸುವ ಯೋಜನೆ ಇದೆ ಎಂದು ಹೇಳುತ್ತಾರೆ ಸಾತ್ವಿಕ್ ನೆಲ್ಲಿತೀರ್ಥ.
ಸನ್ಮಾನ ಹಾಗೂ ಪ್ರಶಸ್ತಿಗಳು:-
♦ ಜವನೆರ್ ಬೆದ್ರ ವತಿಯಿಂದ 2020ರ ಸಾಲಿನ ವಿವೇಕ ಪುರಸ್ಕಾರ.
♦ 2020ರಲ್ಲಿ ಶೇಣಿ ಪ್ರತಿಷ್ಠಾನದ ವತಿಯಿಂದ ಜರಗಿದ ಬಣ್ಣಗಾರಿಕೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
♦ 2019ರಲ್ಲಿ ಗೋವಿಂದದಾಸ ಕಾಲೇಜಿನಲ್ಲಿ ನಡೆದ ಯಕ್ಷಯಾನದಲ್ಲಿ ಬಣ್ಣದ ವೇಷ ವಿಭಾಗದಲ್ಲಿ ಪ್ರಥಮ ಬಹುಮಾನ.
♦ ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನದಿಂದ ಯಕ್ಷ ಕುಸುಮ ಯುವ ಪುರಸ್ಕಾರ - 2024
ಹವ್ಯಾಸಿ ಕಲಾವಿದರಾಗಿ ಸಸಿಹಿತ್ಲು, ಬೆಂಕಿನಾಥೇಶ್ವೇರ, ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ ಮಾಡಿರುತ್ತಾರೆ ಸಾತ್ವಿಕ್ ನೆಲ್ಲಿತೀರ್ಥ.
ಬಣ್ಣಗಾರಿಕೆ, ವಿವಿಧ ಮಾಧ್ಯಮಗಳಲ್ಲಿ ಕಲಾಕೃತಿ ರಚನೆ, ನಾಟಕಗಳಿಗೆ ರಂಗ ವಿನ್ಯಾಸ ಹಾಗೂ ಡಿಜಿಟಲ್ ಕಲಾಕೃತಿಗಳ ರಚನೆ ಇವರ ಹವ್ಯಾಸಗಳು.
ತಂದೆ, ತಾಯಿ, ಅಣ್ಣನ ಪ್ರೋತ್ಸಾಹ, ಪ್ರೇರಣೆ, ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಸಾತ್ವಿಕ್ ನೆಲ್ಲಿತೀರ್ಥ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705
Comments
Post a Comment