ಯಕ್ಷ ಸಾಧಕರು 285

"ಯಕ್ಷ ಕಲೆಯಲ್ಲಿ ಶೋಭಿಸುವ ಶೋಭಿತ"

ಯಕ್ಷಗಾನ ಕರಾವಳಿ ಭಾಗದ ಸಾಂಸ್ಕೃತಿಕ ರಾಯಭಾರಿ ಮಾತ್ರವಲ್ಲದೇ ಇಲ್ಲಿನ ಜನರ ನಾಡಿಮಿಡಿತ. ಕನ್ನಡ ಭಾಷೆಯ ಗಟ್ಟಿತನ ಯಕ್ಷಗಾನದಲ್ಲಿ ನಾವು ನೋಡಬಹುದು. ಇಂತಹ ಶ್ರೀಮಂತ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸುತ್ತಿರುವ ಕಲಾವಿದ ಶೋಭಿತ್ ಐರೋಡಿ.



ಶೋಭಿತ್ ಐರೋಡಿ ಉದಯೋನ್ಮುಖ ಪ್ರತಿಭೆ. ಸಾಧನೆಯ ಶಿಖರವೇರುವ ಹಂಬಲ ಹೊತ್ತ ಇವರದ್ದು ಉತ್ಸಾಹೀ ವ್ಯಕ್ತಿತ್ವ. ಗುರುಮುಖೇನ ಶೃದ್ಧೆಯಿಂದ ಅಭ್ಯಾಸ ಮಾಡುವ ಇವರು ಅಧ್ಯಯನಶೀಲ ಕಲಾವಿದ. ಮನಮೋಹಕ ಸ್ತ್ರೀವೇಷದಲ್ಲೂ, ಸರ್ವ ಸಮರ್ಥ ಪುರುಷ, ಪುಂಡುವೇಷದಲ್ಲೂ ಇವರ ಪ್ರಭುತ್ವ ಗಮನಾರ್ಹ. ವೇಷ, ನೃತ್ಯ,ಅಭಿನಯ, ಮಾತುಗಾರಿಕೆ ಎಲ್ಲದರಲ್ಲೂ ಪಾತ್ರೋಚಿತವಾಗಿ ಕಾಣಿಸಿಕೊಳ್ಳುವ ಯುವ ಪ್ರತಿಭೆ. ಹಳೆಯ ಮತ್ತು ಹೊಸ ಪ್ರಸಂಗಗಳೆರಡರಲ್ಲೂ ಪಾತ್ರ ನಿರ್ವಹಿಸಿ ಶೋಭಿತ್ ಗೆಲ್ಲುತ್ತಾರೆ. ಹವ್ಯಾಸೀ ಜೋಡಾಟಗಳಲ್ಲೂ ಪಾತ್ರಧರಿಸಿ ಸೈ ಅನ್ನಿಸಿಕೊಂಡ ಶೋಭಿತ್ ಹೆಸರಾಂತ ವೃತ್ತಿಕಲಾವಿದರೊಂದಿಗೂ ರಂಗ ಹಂಚಿಕೊಂಡಿರುತ್ತಾರೆ ತಾನು ಧರಿಸುವ ಪಾತ್ರಗಳಿಗೆ ನ್ಯಾಯ ಒದಗಿಸುವಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಉತ್ಸಾಹೀ ವೇಷಧಾರಿಯಾದ ಶೋಭಿತ್ ಇತ್ತೀಚೆಗೆ ಯಕ್ಷಮಂಜೀರ ಪಾಂಡೇಶ್ವರದಲ್ಲಿ ಮೊಗೆಬೆಟ್ಟು ಅವರಲ್ಲಿ ಭಾಗವತಿಕೆ ಅಭ್ಯಾಸವನ್ನೂ ಮಾಡುತ್ತಿದ್ದಾರೆ.

ಉಡುಪಿ ಜಿಲ್ಲೆಯ ಸಾಸ್ತಾನದ ಐರೋಡಿಯ ರಘುರಾಮ್ ಪೂಜಾರಿ ಮತ್ತು ಜಯಂತಿ ಪೂಜಾರ್ತಿ ಇವರ ಮಗನಾಗಿ 28.09.2001ರಂದು ಶೋಭಿತ್ ಐರೋಡಿ ಜನನ. ದ್ವಿತೀಯ ಪಿಯುಸಿ ಇವರ ವಿದ್ಯಾಭ್ಯಾಸ. ಶ್ರೀ ಪ್ರಸಾದ ಕುಮಾರ್ ಮೊಗೆಬೆಟ್ಟು, ಕೃಷ್ಣಮೂರ್ತಿ ಉರಾಳ ಚಿತ್ರಪಾಡಿ, ನೀಲಾವರ ಕೇಶವ ಆಚಾರ್ ಇವರ ಯಕ್ಷಗಾನ ಗುರುಗಳು.

ನೆಚ್ಚಿನ ಪ್ರಸಂಗಗಳು:-
ಸುದರ್ಶನ, ಭಾರ್ಗವ ರಾಮ, ಅಭಿಮನ್ಯು, ಬರ್ಭರಿಕ, ದೇವಿ ಮಹಾತ್ಮೆ, ಚಂದ್ರಹಾಸ ಚರಿತೆ, ಮೀನಾಕ್ಷಿ ಕಲ್ಯಾಣ, ವೀರಮಣಿ, ಸುಧನ್ವ ಕಾಳಗ, ತರಣಿಸೇನ ಕಾಳಗ.

ನೆಚ್ಚಿನ ವೇಷಗಳು:-
ವಿಷ್ಣು, ಕೃಷ್ಣ, ಅಭಿಮನ್ಯು, ಬರ್ಭರಿಕ, ಅರ್ಜುನ, ಚಂಡ ಮುಂಡ, ಪದ್ಮಗಂಧಿನಿ, ಮೀನಾಕ್ಷಿ, ಬನಶಂಕರಿ.




ಗುರುಗಳು ಮಾಡಿದ ನಿರ್ದೇಶನದಂತೆ, ಹಿರಿಯ ಕಲಾವಿದರಾದ ಗೋವಿಂದಪ್ಪನವರ ಮಾರ್ಗದರ್ಶನದಂತೆ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಶೋಭಿತ್ ಐರೋಡಿ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಹಾಗೂ ಮುಂದಿನ ಯೋಜನೆ:-
ಪೌರಾಣಿಕ ಪ್ರಸಂಗ ಬಿಟ್ಟು ಹೊಸ ಪ್ರಸಂಗದ ಒಲವು ಹೆಚ್ಚಾಗಿದೆ. ಅದು ಆದಷ್ಟು ಕಡಿಮೆ ಆಗಬೇಕು ಅನ್ನುವುದು ಇವರ ಅಭಿಪ್ರಾಯ.
ಹವ್ಯಾಸಿ ಕಲಾವಿದನಾಗಿ ಮುಂದುವರಿಯುವ ಪ್ರಯತ್ನ ಮಾಡುತ್ತೇನೆ ಎಂದು ಹೇಳುತ್ತಾರೆ ಶೋಭಿತ್ ಐರೋಡಿ.

ಗೋಳಿಗರಡಿ, ಸಿಗಂದೂರು, ಹಟ್ಟಿಯಂಗಡಿ ಮೇಳದ ರಂಗದಲ್ಲಿ ವೇಷ ಮಾಡಿದ ಅನುಭವ ಇವರದು.


ತಂದೆ, ತಾಯಿಯ ಅಕ್ಕ ರಂಜಿತಾ ಹಾಗೂ ಸ್ನೇಹಿತರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಶೋಭಿತ್ ಐರೋಡಿ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395