ಯಕ್ಷ ಸಾಧಕರು 290
"ಯಕ್ಷ ಮಾನಿನಿ"
ಯಕ್ಷಗಾನ ರಂಗದಲ್ಲಿ ರೂಪ, ಸ್ವರಬಾರ, ಆಳಂಗ, ಅಭಿನಯಗಳು ಒಂದಕ್ಕೊಂದು ಪೂರಕವಾಗಿದ್ದರೆ ಒಬ್ಬ ಕಲಾವಿದನ ಸ್ತ್ರೀವೇಷ ಎಷ್ಟು ಯಶಸ್ಸು ಗಳಿಸಬಹುದು ಎನ್ನುವುದಕ್ಕೆ ನೇರ ದ್ರಷ್ಟಾಂತ ಸದ್ಯ ಬಡಗುತಿಟ್ಟಿನ ಅಗ್ರಶ್ರೇಣಿಯ ಸ್ತ್ರೀವೇಷಧಾರಿಯಾಗಿ ಮೆರೆಯುತ್ತಿರುವ ಸಂಜೀವ ಶೆಟ್ಟಿ ಹೆನ್ನಾಬೈಲು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ಧಾಪುರ ಗ್ರಾಮದ ಹೊಸಂಗಡಿಯ ಹೆನ್ನಾಬೈಲಿನ ಅಂತಯ್ಯ ಶೆಟ್ಟಿ ಹಾಗೂ ಪಾರ್ವತಿ ಶೆಟ್ಟಿ ಇವರ ಮಗನಾಗಿ 1.6.1972ರಂದು ಸಂಜೀವ ಶೆಟ್ಟಿ ಹೆನ್ನಾಬೈಲು ಅವರ ಜನನ. ಚಿಕ್ಕವನಿದ್ದಾಗ ಮನೆಯ ಅಕ್ಕಪಕ್ಕದಲ್ಲಿ ಯಕ್ಷಗಾನ ಬಯಲಾಟಗಳು ಆಗುತ್ತಿತ್ತು. ರಾತ್ರಿ ಯಕ್ಷಗಾನ ನೋಡಿ ಬೆಳಿಗ್ಗೆ ಗದ್ದೆಯಲ್ಲಿ ಸುಟ್ಟುಮಣ್ಣು ಹಚ್ಚಿಕೊಂಡು ಹುಡುಗರನ್ನು ಸೇರಿಸಿ ಕುಣಿವುದು. ಒಂದು ದಿನ ಹಾಲಾಡಿ ಮೇಳದ ಯಕ್ಷಗಾನವಿತ್ತು. ಮೇಳದವರು ರಂಗಸ್ಥಳ ಹಾಕಿದಾಗ ನಾನು ಹೋಗಿ ಯಕ್ಷಗಾನ ಶುರುವಾಗುವ ಮೊದಲು ರಂಗಸ್ಥಳದಲ್ಲಿ ಕುಣಿಯುತ್ತಿದ್ದ ನನ್ನನ್ನು ನೋಡಿ ಮೇಳದ ಮ್ಯಾನೇಜರ್ ಶಿವರಾಂ ಭಟ್ ಮೇಳಕ್ಕೆ ಬಾ ಎಂದು ಹೇಳಿದರು. ಅಲ್ಲಿಂದ ಯಕ್ಷಗಾನ ರಂಗದ ಪಯಣ ಪ್ರಾರಂಭವಾಯಿತು. ಆರ್ಗೋಡು ಮೋಹನದಾಸ್ ಶೆಣೈ ಅರ್ಥಗಾರಿಕೆ ಗುರುಗಳು ಹಾಗೂ ಹೆಜ್ಜೆಗಾರಿಕೆಯನ್ನು ಯಕ್ಷಗಾನ ನೋಡಿ ಹಾಗೂ ಕೇಳಿ ಅಭ್ಯಾಸ ಮಾಡಿರುತ್ತಾರೆ ಸಂಜೀವ ಶೆಟ್ಟಿ ಹೆನ್ನಾಬೈಲು.
ಹರಿಶ್ಚಂದ್ರ, ದಮಯಂತಿ, ಭೀಷ್ಮ ವಿಜಯ, ಕರ್ಣ ಅರ್ಜುನ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ದೇವಿ ಮಹಾತ್ಮೆಯ ಶ್ರೀ ದೇವಿ, ದ್ರೌಪದಿ, ಚಂದ್ರಮತಿ, ಗುಣಸುಂದರಿ, ಕೈಕೆಯಿ, ಅಂಬೆ, ಶಶಿಪ್ರಭೆ, ಮೀನಾಕ್ಷಿ ಇತ್ಯಾದಿ ಇವರ ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು ಒಮ್ಮೆ ಪ್ರಸಂಗದ ಪ್ರತಿಯನ್ನು ನೋಡಿ ಎದುರು ಪಾತ್ರಧಾರಿಯಲ್ಲಿ ಸಮಾಲೋಚನೆ ಮಾಡಿ ಮನನ ಮಾಡಿಕೊಂಡು ಹೋಗುತ್ತೇನೆ ಎಂದು ಹೇಳುತ್ತಾರೆ ಸಂಜೀವ ಶೆಟ್ಟಿ ಹೆನ್ನಾಬೈಲು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಇಂದಿನ ಸ್ಥಿತಿ ಕೆಟ್ಟಿಲ್ಲ..ಕಾಲಮಿತಿ ಯಕ್ಷಗಾನ.
ಪ್ರೇಕ್ಷಕರ ಕೊರತೆ ಮತ್ತು ಕಲಾವಿದರಲ್ಲಿ ಅಧ್ಯಯನ ಅಭ್ಯಾಸದ ಕೊರತೆ ಸ್ವಲ್ಪ ಇದೆ.
ಪ್ರೇಕ್ಷಕರು ಹಲವು ರೀತಿಯ ಪ್ರೇಕ್ಷಕರು ಇದ್ದಾರೆ. ಹಳೆಯ ಪ್ರಸಂಗವನ್ನು ಬಯಸುವವರು ಇದ್ದಾರೆ. ಹಾಗೆ ಹೊಸ ಪ್ರಸಂಗವನ್ನು ಬಯಸುವವರು ಇದ್ದಾರೆ. ಎಲ್ಲಾವು ಹಿತಮಿತಿ ಇದ್ದರೆ ಯಾವತ್ತು ಪ್ರೇಕ್ಷಕರು ಯಕ್ಷಗಾನವನ್ನು ನೋಡುತ್ತಾರೆ ಖಂಡಿತ.
ಈಗ ಸ್ತ್ರೀ ವೇಷ ಮಾಡುತ್ತಿದ್ದೇನೆ. ಮುಂದೆ ಪುರುಷ ಪಾತ್ರವನ್ನು ಮಾಡಬೇಕು ಹಾಗೂ ವೇಷಕ್ಕೆ ಬಳಸುವ ಡ್ರೆಸ್ ಮಾಡಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ ಸಂಜೀವ ಶೆಟ್ಟಿ ಹೆನ್ನಾಬೈಲು.
ಸನ್ಮಾನ ಹಾಗೂ ಪ್ರಶಸ್ತಿಗಳು:-
♦️ ಕರ್ನಾಟಕ ಕರಾವಳಿ ಮೈತ್ರಿ ಸಂಘ ಹೈದರಾಬಾದ್.
♦️ ಡಾ. ಹೆಚ್ ಶಾಂತರಾಮ್ ಪ್ರಶಸ್ತಿ.
♦️ ಕಲ್ಕೂರ ಪ್ರಶಸ್ತಿ.
♦️ ಬ್ರಹ್ಮಾವರ ಬಂಟರ ಸಂಘ ಪ್ರಶಸ್ತಿ.
♦️ ಕುಂದಾಪುರ ಬಂಟರ ಸಂಘ ಪ್ರಶಸ್ತಿ.
♦️ ಕೋಳ್ಯೂರು ಪ್ರಶಸ್ತಿ ಹೀಗೆ ಅನೇಕ ಸನ್ಮಾನ ಹಾಗೂ ಪ್ರಶಸ್ತಿ ದೊರೆತಿರುತ್ತದೆ.
ಹಾಲಾಡಿ, ಕಮಲಶಿಲೆ, ಮಂದಾರ್ತಿ, ಸೌಕೂರು, ಪೆರ್ಡೂರು, ಮಾರಣಕಟ್ಟೆ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ.
ಸಂಜೀವ ಶೆಟ್ಟಿ ಹೆನ್ನಾಬೈಲು ಅವರು 19.4.1999ರಂದು ಕುಸುಮ ಅವರನ್ನು ಮದುವೆಯಾಗಿ ಮಕ್ಕಳಾದ ಪ್ರಶಾಂತ್, ಪ್ರದೀಪ ಹಾಗೂ ಪೃಥ್ವಿರಾಜ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705
Comments
Post a Comment