ಯಕ್ಷ ಸಾಧಕರು 291
"ಸತ್ವಭರಿತ ಪ್ರತಿಭಾನ್ವಿತೆ"
ತುಳು - ಕನ್ನಡ ಎರಡು ಭಾಷೆಯಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆಯಲ್ಲಿ ಗುರುತಿಸಿಕೊಂಡಿರುವ ಕಲಾವಿದೆ ಶೃತಿ ವಿಸ್ಮಿತ್ ಗೌಡ ಬಲ್ನಾಡು. ದಕ್ಷಿಣ ಕನ್ನಡ ಜಿಲ್ಲೆಯ
ಪುತ್ತೂರಿನ ನೆಕ್ಕಿಲಾಡಿಯ ಕೃಷ್ಣಪ್ಪ ಹಾಗೂ ರೂಪಾ ಇವರ ಮಗಳಾಗಿ 1-10-1991 ರಂದು ಜನನ.
ವಿದ್ಯಾಭ್ಯಾಸ:-
1 ರಿಂದ 8 ದ.ಕ.ಜಿ.ಪ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿ, 9-10 ಸರ್ವೋದಯ ಪ್ರೌಢಶಾಲೆ ಪೆರಿಯಡ್ಕ (B.G.S), ಪಿಯುಸಿಯನ್ನು ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಪುತ್ತೂರು ಹಾಗೂ ಐಟಿಐಯನ್ನು ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ನರಿಮೊಗರು ಪುತ್ತೂರಿನಲ್ಲಿ ಕಲಿತು ಪ್ರಸ್ತುತ ಪುತ್ತೂರಿನ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನಲ್ಲಿ ಪ್ರೇರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಂಬಾಪ್ರಸಾದ್ ಪಾತಾಳ (5 ವರ್ಷ), ಗಣರಾಜ್ ಕುಂಬ್ಳೆ, ಲಕ್ಷ್ಮಣ ಆಚಾರ್ಯ ಎಡಮಂಗಿಲ, ಪ್ರಕಾಶ್ ರೈ ಯಕ್ಷಗಾನದ ಗುರುಗಳು.
ಪ್ರಸ್ತುತ 3 ವರ್ಷದಿಂದ ಪುತ್ತೂರು ಮಹಿಳಾ ತಂಡದ ಸದಸ್ಯೆಯಾಗಿ, ಈಗ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು ಇವರ ಮಾರ್ಗದರ್ಶನದಲ್ಲಿ ‘ಸಾಯಿಕಲಾ ಯಕ್ಷ ಬಳಗ ಬಾಲವನ ಪುತ್ತೂರು' ಇದರ ಸದಸ್ಯೆಯಾಗಿ ಹಾಗೂ ಗುರುಗಳಾದ ಪದ್ಮ ಕೆ.ಆರ್ ಆಚಾರ್ಯ ಇವರಲ್ಲಿ ಮಾರ್ಗದರ್ಶನವನ್ನು ಪಡೆಯುತ್ತಾ ಧೀ ಶಕ್ತಿ ಮಹಿಳಾ ತಾಳಮದ್ದಲೆ ತಂಡದ ಸದಸ್ಯೆಯಾಗಿ ಈಗ ಕಾಳಿಕಾಂಬ ಯಕ್ಷಗಾನ ಮಂಡಳಿ ಉಪ್ಪಿನಂಗಡಿ ಹಾಗೂ ಯಕ್ಷನಂದನ ಕಲಾ ಸಂಘದ ಸದಸ್ಯೆಯಾಗಿದ್ದಾರೆ.
ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ:-
5ನೇ ತರಗತಿಯಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆ. ಮೊದಲು ವೇಷ ಮಾಡಿದ್ದು ದಕ್ಷಯಜ್ಞದ ದಕ್ಷನಾಗಿ. ಬಾಲ್ಯದಲ್ಲಿ ಬಹಳ ಬಡತನವಿದ್ದು, ನಮ್ಮ ಊರಿನ ಜಾತ್ರಾ ಸಂದರ್ಭ ಟೆಂಟ್ ಆಟಗಳು ಆಗುತ್ತಿತ್ತು. ಆಗ ಹೆಚ್ಚಿನ ಮೇಳಗಳು ಇದ್ದವು. ನಾನು ಆಗ ಹೆಚ್ಚಾಗಿ ತುಳು ಯಕ್ಷಗಾನವನ್ನು ನೋಡುತ್ತಾ ಇದ್ದೆ. ಆಗ ಟಿಕೆಟ್ 5 ರೂಪಾಯಿ ನೆಲದ ಮೇಲೆ ಕುಳಿತು ನೋಡುವ ಅವಕಾಶ ಇತ್ತು. ಆಗ ನನ್ನ ತಂದೆಯ ಜೊತೆಗೆ ಉಪ್ಪಿನಂಗಡಿ ಮಖೆ ಜಾತ್ರೆಗೆ ಹೋಗೋದೇ ಒಂದು ಗಮ್ಮತ್ತು ಆಗಿತ್ತು. ಬೆಳಗ್ಗೆ ತನಕ ಯಕ್ಷಗಾನವನ್ನು ನೋಡದೇ ಮನೆಗೆ ಹೋಗುತ್ತಿರಲಿಲ್ಲ.
ನನ್ನ ಕಲಾ ಆಸಕ್ತಿಗೆ ದೇವರ ದಯೆಯೋ ನಾನು ಮಾಡಿದ ಪುಣ್ಯವೋ ಗೊತ್ತಿಲ್ಲ. ಆಗ ನಮ್ಮ ಶಾಲೆಗೆ ಮುಖ್ಯ ಗುರುಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತರಾದ ಬಿ. ಐತಪ್ಪ ನಾಯ್ಕ ಇವರು ನಮ್ಮ ಶಾಲೆಗೆ ಬಂದರು. ಅದೇ ಸಂದರ್ಭ ಅಂಬಾಪ್ರಸಾದರು ನಮ್ಮ ಶಾಲೆಗೆ ಅವರ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತಿದ್ದರು. ಅದೇನು ಪುಣ್ಯವು. ಅವರು ನಮಗೆ ಒಟ್ಟು 30 ಮಕ್ಕಳಿಗೆ ಯಕ್ಷಗಾನ ನಾಟ್ಯ ತರಬೇತಿಯನ್ನು ಉಚಿತವಾಗಿ ಆರಂಭಿಸಿದರು, ನಾನು ಕೂಡ ಸೇರಿಕೊಂಡೆ. ಇದೊಂದು ದೇವರು ಕೊಟ್ಟ ವರ ನನ್ನ ಪಾಲಿಗೆ. ಅವರು ಕೊಟ್ಟ ವಿದ್ಯೆ ಇಂದು ಕೂಡ ಮುಂದುವರೆಸಿಕೊಂಡು ಬಂದಿದ್ದು. ಅವರೇ ನನಗೆ ಪ್ರೇರಣೆ.
ITI ಸಂದರ್ಭ ಲಕ್ಷ್ಮಣ ಆಚಾರ್ಯ ಎಡಮಂಗಿಲ ಇವರು ಗಣರಾಜ್ ಕುಂಬ್ಳೆ ಇವರು ಅಧ್ಯಕ್ಷರಾಗಿರುವ ಯಕ್ಷ ನಂದನ ಕಲಾ ಸಂಘ ಗೋಕುಲ ನಗರ ಇಲ್ಲಿ ಯಕ್ಷಗಾನ ತರಬೇತಿಯನ್ನು ಕೊಡಲು ಬರುತ್ತಿದ್ದರು. ಇವರ ಜೊತೆ ಕಳೆದ 12 ವರ್ಷಗಳಿಂದ ಯಕ್ಷ ನಂದನದ ತರಗತಿಯ ವಿದ್ಯಾರ್ಥಿಗಳಿಗೆ ಸಹ ತರಬೇತುದಾರಳಾಗಿ ವಿದ್ಯಾರ್ಥಿಗಳ ಜೊತೆಗೆ ನಾಟ್ಯವನ್ನು ಅಭ್ಯಾಸ ಮಾಡುತ್ತಾ ಕಲಿಸುತ್ತಾ ಮುಂದುವರೆಯುತ್ತ ಇದ್ದೇನೆ. ಅಲ್ಲಿಯ ಸದಸ್ಯೆಯಾಗಿದ್ದು ಹಲವಾರು ಯಕ್ಷಗಾನ ವೇಷಗಳನ್ನು ಮಾಡಿರುತ್ತೇನೆ.
ನೆಚ್ಚಿನ ಪ್ರಸಂಗಗಳು:-
ದಕ್ಷ ಯಜ್ಞ, ಲವ ಕುಶ, ರಾಮಾಶ್ವಮೇಧ, ಮಹಿಷ ವಧೆ, ಪುಣ್ಯಕೋಟಿ, ದೇವಿ ಮಹಾತ್ಮೆ, ಕೊಲ್ಲೂರು ಕ್ಷೇತ್ರ ಮಹಾತ್ಮೆ, ಜಾಂಬವತಿ ಕಲ್ಯಾಣ, ಸುದರ್ಶನ ಗರ್ವಭಂಗ, ಶಶಿಪ್ರಭೆ ಪರಿಣಯ, ವೀರವರ್ಮ ಕಾಳಗ, ಶಾಂಭವಿ ವಿಲಾಸ.ವೀರಮಣಿ ಕಾಳಗ.
ಕೋಟಿ ಚೆನ್ನಯ ತುಳು ಪ್ರಸಂಗ ಹಾಗೂ ಶನಿ ಮಹಾತ್ಮೆ.
ನೆಚ್ಚಿನ ವೇಷಗಳು:-
ದಕ್ಷ, ಶತ್ರುಘ್ನ, ಮಹಿಷಾಸುರ,ಶೂರ್ಪನಖ. ಶಾಂಭವಿ, ಕೃಷ್ಣ, ಸುದರ್ಶನ, ಕಂಹಾಸೂರ,ಚಂಡ ಮುಂಡ, ಮಧು ಕೈಟಭ,ರುಕ್ಮ0ಗ ಶುಭಂಗ, ದೇವೇಂದ್ರ, ಶತ್ರುಘ್ನ, ದೇವೇಂದ್ರ ಬಲ, ಭ್ರಮರಕುಂತಳೆ, ಹುಂಡ ಪುಂಡರಾಗಿ ಇತ್ಯಾದಿ.
ಹಾಸ್ಯ:- ವನಪಾಲಕ.
ರಂಗಕ್ಕೆ ಹೋಗುವ ಮೊದಲು ಸಂಘಟಕರಲ್ಲಿ ನನ್ನ ವೇಷದ ಬಗ್ಗೆ ತಿಳಿದುಕೊಂಡು, ನಂತರ ಭಾಗವತರಲ್ಲಿ ನನಗೆ ಇರುವ ಪದ್ಯದ ಬಗ್ಗೆ ಕೇಳಿಕೊಂಡು, ಯಾವ ರೀತಿ ಕಥೆ ಇರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಂಡು, ಅದಕ್ಕಾಗಿ ಸ್ವಲ್ಪ ಹೊತ್ತು ನನ್ನಲ್ಲಿ ತಯಾರಿ ಮಾಡಿಕೊಂಡು ಎದುರು ವೇಷದವರು ಇದ್ದರೆ ಅವರಲ್ಲಿ ಕೇಳಿಕೊಂಡು ನನ್ನ ಪಾತ್ರಕ್ಕೆ ಯಾವುದೇ ತೊಂದರೆ ಆಗದಂತೆ ವೇಷವನ್ನು ಮಾಡುತ್ತೇನೆ ಎಂದು ಹೇಳುತ್ತಾರೆ ಶೃತಿ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದಲ್ಲಿ ಈಗ ತುಂಬಾ ಬದಲಾವಣೆ ಆಗಿದೆ. ನಾನು ತುಂಬಾ ಕಷ್ಟ ಹಾಗೂ ಅನೇಕ ಏಳು ಬೀಳುಗಳನ್ನು ಕಂಡಿದ್ದೇನೆ. ಇಂದಿಗೆ ನಾನು 20 ವರ್ಷಗಳ ಅನುಭವವನ್ನು ನೋಡಿದವಳಿದ್ದೇನೆ. ಅಂದು ನಮಗೆ ಬೆಂಬಲ ಇರಲಿಲ್ಲ. ಆದರೆ ಈಗ ತುಂಬಾ ಪ್ರೋತ್ಸಾಹ ಇದೆ. ಕಲಾವಿದರನ್ನು ಗೌರವಿಸುತ್ತಾರೆ. ಇನ್ನು ಕೂಡ ಯಕ್ಷಗಾನಕ್ಕೆ ಬೆಂಬಲ, ಪ್ರೋತ್ಸಾಹ ಸಿಗಬೇಕು ಎಂಬ ಆಶಯ ನನ್ನದು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ನಿಮ್ಮ ಅಭಿಪ್ರಾಯ:-
ಈಗ ಯಕ್ಷಗಾನದತ್ತ ಹೆಚ್ಚಿನ ಒಲವು ಇದ್ದ ಕಾರಣ ಹಾಗೂ ಆಧುನಿಕ ತಂತ್ರಜ್ಞಾನದಿಂದ ಹೆಚ್ಚಿನವರು ಟಿವಿ, ಮೊಬೈಲ್ ನೋಡುತ್ತಾರೆ. ಇದರಿಂದ ಪ್ರೇಕ್ಷಕರು ಕಮ್ಮಿ ಆಗಿ ಬಿಟ್ಟಿದೆ. ಆದರೆ ಕೆಲವು ಕಡೆಗಳಲ್ಲಿ ಯಕ್ಷಗಾನದ ಮೇಲಿನ ಅತೀವ ಗೌರವ ನಂಬಿಕೆ ಇದ್ದು ಹೆಚ್ಚಿನ ಪ್ರೇಕ್ಷಕರು ಇರುತ್ತಾರೆ. ಆದರೂ ಪ್ರೇಕ್ಷಕರು ಪ್ರೇರಣೆ ಕೊಟ್ಟರೆ ಮಾತ್ರ ಕಲಾವಿದರು ಬೆಳೆಯಲು ಸುಲಭವಾಗುತ್ತದೆ. ಆದಷ್ಟು ಪ್ರೇಕ್ಷಕರು ಯಕ್ಷಗಾನವನ್ನು ನೋಡಿ ಪ್ರೇರಣೆಯನ್ನು ಕೊಟ್ಟು ಕಲೆಯನ್ನು ಕಲಾವಿದರನ್ನು ಬೆಳೆಸಬೇಕು ಎಂಬ ಅಭಿಲಾಷೆ.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ:-
ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಸಿಗಬೇಕು ಎಂಬ ಆಸೆ ಇದ್ದು ಒಳ್ಳೆಯ ವೇಷಗಳನ್ನು ಮಾಡಬೇಕು, ಕಲೆಯನ್ನು ಬೆಳಸಬೇಕು, ಇನ್ನಷ್ಟು ವಿದ್ಯಾರ್ಥಿಗಳಿಗೆ ಕಲಿಸಬೇಕು, ನಾನು ಕಲಿಯಬೇಕು. ನನ್ನಲ್ಲಿರುವ ಕಲೆಯನ್ನು ನನ್ನ ಕೊನೆ ಉಸಿರು ತನಕ ಉಳಿಸಬೇಕೆನ್ನುವ ಆಸೆ. ಒಳ್ಳೆಯ ಹೆಸರನ್ನು ನನ್ನ ತಾಯಿ, ಪತಿಗೆ, ನನ್ನ ಊರಿಗೆ, ಗುರುಗಳಿಗೆ ತರಬೇಕೆನ್ನುವ ದೊಡ್ಡ ಮನದ ಹಂಬಲವಿದ್ದು ಅದಕ್ಕಾಗಿ ಇನ್ನಷ್ಟು ಪ್ರಯತ್ನವನ್ನು ಪಡಬೇಕೆಂದು ಇದ್ದೇನೆ.
ಕೊಲ್ಲಂಗಾನ ಮೇಳದಲ್ಲಿ ಸಣ್ಣ ಪುಟ್ಟ ವೇಷಕ್ಕೆ ಅವಕಾಶ, ಯಕ್ಷನಂದನ ಕಲಾ ಸಂಘದಲ್ಲಿ ಹಾಗೂ ಗೋಪಾಲಕೃಷ್ಣ ಮೇಳ ಎಡಮಂಗಿಲ ಮೇಳದಲ್ಲಿ ವೇಷ ಮಾಡಿದ ಅನುಭವ.
ಕಾಂಚನ ಕಲಾ ಪೋಷಕರಿಂದ ಸನ್ಮಾನ, ಸರ್ವೋದಯ ಪ್ರೌಢಶಾಲೆಯಲ್ಲಿ ಸನ್ಮಾನ, ಹಿರೇಬಂಡಾಡಿಯ ಜನತೆಯಿಂದ ಕಟ್ಟೆ ಫ್ರೆಂಡ್ಸ್ ಬಲ್ನಾಡು ವತಿಯಿಂದ, ವಿನಾಯಕ ಫ್ರೆಂಡ್ಸ್, ಒಕ್ಕಲಿಗ ಗ್ರಾಮ ಸಮಿತಿ ಬೆಳ್ಳಿಪಾಡಿ.. ಹಾಗೂ ಒಕ್ಕಲಿಗ ಗೌಡ ಸಂಘ ಪುತ್ತೂರು ವತಿಯಿಂದ ಸನ್ಮಾನ.
2022-2023ನೇ ಸಾಲಿನ ರೋಟರಿ ಸುವರ್ಣ ಪ್ರಶಸ್ತಿ ದೊರೆತಿರುತ್ತದೆ.
ಶೃತಿ ಅವರು 10.07.2016 ರಂದು ವಿಸ್ಮಿತ್ ಗೌಡ ಅವರನ್ನು ಮದುವೆಯಾಗಿ ಮಗಳು ಪೃಥ್ವಿ ಹಾಗೂ ಮಗ ಗಗನ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ, ಪತಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಶೃತಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705
Comments
Post a Comment